ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ
ಆಳ–ಅಗಲ: ಎಂಪಾಕ್ಸ್ ಇರಲಿ ಎಚ್ಚರ
ಫಾಲೋ ಮಾಡಿ
Published 10 ಸೆಪ್ಟೆಂಬರ್ 2024, 23:03 IST
Last Updated 10 ಸೆಪ್ಟೆಂಬರ್ 2024, 23:03 IST
Comments
ಭಾರತದಲ್ಲಿ ಎಂಪಾಕ್ಸ್‌ನ ಒಂದು ಪ್ರಕರಣ ದೃಢಪಟ್ಟಿದೆ. ಇದೇ ಸೋಂಕು ಆಫ್ರಿಕಾ ಖಂಡದ ದೇಶಗಳನ್ನು ಬಸವಳಿಯುವಂತೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದ್ದರೂ ಇದು ಗಂಭೀರ ಕಾಯಿಲೆ ಏನಲ್ಲ. ಆದರೆ, ಸೋಂಕು ಹರಡುವಿಕೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.

ಎಂಪಾಕ್ಸ್, ಒಂದು ಸಾಂಕ್ರಾಮಿಕ ಕಾಯಿಲೆ. ಸಿಡುಬು ಉಂಟುಮಾಡುವ ಆರ್ಥೊಪಾಕ್ಸ್ ವೈರಸ್‌ನ ಕುಟುಂಬಕ್ಕೆ ಸೇರಿದ ಮಂಕಿಪಾಕ್ಸ್ ವೈರಸ್‌ (ಎಂಪಿಎಕ್ಸ್‌ವಿ) ಈ ಕಾಯಿಲೆಗೆ ಕಾರಣ. ಅದರಲ್ಲಿ ಎರಡು ತಳಿಗಳಿವೆ. ಕ್ಲಾಡ್ 1 ಮತ್ತು ಕ್ಲಾಡ್ 2. ಕ್ಲಾಡ್ 1ರಲ್ಲಿ 1ಎ ಮತ್ತು 1ಬಿ ಎಂಬ ರೂಪಾಂತರಗಳಿದ್ದರೆ, ಕ್ಲಾಡ್‌ 2ರಲ್ಲಿ 2ಎ ಮತ್ತು 2ಬಿ ಎಂಬ ರೂಪಾಂತರಗೊಂಡಿರುವ ವೈರಸ್‌ಗಳಿವೆ. 2022–23ರಲ್ಲಿ 2ಬಿ ತಳಿಯಿಂದ ಹಲವು ದೇಶಗಳಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತು.

2022ರ ಜನವರಿಯಿಂದ ಇಲ್ಲಿಯವರೆಗೆ 121 ರಾಷ್ಟ್ರಗಳಲ್ಲಿ ಎಂಪಾಕ್ಸ್‌ ಪ್ರಕರಣಗಳು ದೃಢಪಟ್ಟಿವೆ. ಅಮೆರಿಕ, ಆಫ್ರಿಕಾ ಮತ್ತು ಯರೋಪ್‌ನ 10 ರಾಷ್ಟ್ರಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಜಗತ್ತಿನ ಶೇ 80ರಷ್ಟು ಪ್ರಕರಣಗಳು ಈ ರಾಷ್ಟ್ರಗಳಲ್ಲಿಯೇ ಕಾಣಿಸಿಕೊಂಡಿವೆ.

1970ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು 2022ರಲ್ಲಿ. ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ, ಈಗ ಇತರೆಡೆಗಳಲ್ಲೂ ಕಾಣಿಸಿಕೊಳ್ಳುತ್ತಿದೆ. 1ಎ ಮತ್ತು 1ಬಿ ತಳಿಗಳಿಂದಾಗಿ ಕಾಂಗೊ ಗಣರಾಜ್ಯ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ದಿ ಕಾಂಗೊ) ಸೇರಿದಂತೆ ಹಲವು ದೇಶಗಳಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಸೃಷ್ಟಿಯಾಗಿದೆ. ಆಗಸ್ಟ್‌ನಲ್ಲಿ ಆಫ್ರಿಕಾ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಕ್ಲಾಡ್ 1ಬಿ ತಳಿಯ ವೈರಸ್ ಸೋಂಕಿತರು ಕಂಡುಬಂದಿದ್ದಾರೆ. ಅವರ ಪೈಕಿ ಹೆಚ್ಚಿನವರು ಸೋಂಕಿತರು ಇರುವ ದೇಶಗಳಿಗೆ ಪ್ರಯಾಣಿಸಿದವರು. ಒಂದು ವೇಳೆ, ಪ್ರಯಾಣದ ಹಿನ್ನೆಲೆ ಇಲ್ಲದವರಲ್ಲೂ ಅದು ಕಾಣಿಸಿಕೊಂಡರೆ, ಅದು ಸಮುದಾಯಕ್ಕೆ ಹರಡಿದೆ ಎಂದು ಅರ್ಥ.

ಮನುಷ್ಯ ಮತ್ತು ಪ್ರಾಣಿಗಳ ನಡುವೆ ಹರಡುವ ಈ ರೋಗದ ಮೂಲ ಯಾವುದು ಎನ್ನುವುದು ಇನ್ನೂ ನಿಗೂಢವಾಗಿದೆ. ಅಳಿಲಿನಂತಹ ಸಣ್ಣ ಸಸ್ತನಿಗಳು ಮತ್ತು ಕೋತಿಗಳು ವೈರಸ್‌ಗೆ ತುತ್ತಾಗುತ್ತವೆ ಎನ್ನಲಾಗುತ್ತಿದೆ.

ಹೇಗೆ ಹರಡುತ್ತದೆ?: ಎಂಪಾಕ್ಸ್ ಹೊಂದಿರುವವರೊಂದಿಗೆ ನಿಕಟ ಸಂಪರ್ಕದಲ್ಲಿರುವವರಿಗೆ ಸೋಂಕು ಹರಡುತ್ತದೆ. ಮುಖ್ಯವಾಗಿ, ಸೋಂಕಿತರನ್ನು ಮುಟ್ಟುವುದು, ಅವರೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದು, ಸೋಂಕಿತನ ಬಾಯಿಯೊಂದಿಗೆ ಬಾಯಿ ಮೂಲಕ ಸ್ಪರ್ಶಿಸುವುದು ಅಥವಾ ಬಾಯಿಯಿಂದ ಚರ್ಮವನ್ನು ಸ್ಪರ್ಶಿಸುವುದರಿಂದ ಬರುತ್ತದೆ. ಜತೆಗೆ, ಸೋಂಕಿತನ ಹತ್ತಿರ ನಿಂತಿದ್ದರೆ, ಅವರ ಉಸಿರಿನ ಮೂಲಕವೂ ಬರಬಹುದು.

ಹೆಚ್ಚು ಮಂದಿ ಲೈಂಗಿಕ ಸಂಗಾತಿಗಳನ್ನು ಹೊಂದಿರುವವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಅದರ ಜತೆಗೆ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸೋಂಕಿತರ ಕುಟುಂಬದವರಿಗೆ ಸೋಂಕು ತಗಲುವ ಸಂಭವವಿರುತ್ತದೆ.

ಟ್ಯಾಟೂ ಪಾರ್ಲರ್‌ಗಳು, ಆಸ್ಪತ್ರೆಗಳ ಸೂಜಿಗಳು ಮತ್ತು ಸೋಂಕಿತರ ಬಟ್ಟೆಗಳ ಮೂಲಕವೂ ಇದು ಹರಡಬಹುದು. ಸೋಂಕಿತ ಪ್ರಾಣಿಗಳಿಂದಲೂ ಮನುಷ್ಯರಿಗೆ ಕಾಯಿಲೆ ಬರುವ ಅಪಾಯ ಇದೆ. ಆ ಪ್ರಾಣಿಗಳು ಕಚ್ಚುವುದು, ಪರಚುವುದು ಮಾಡಿದಾಗ, ಅಂಥ ಪ್ರಾಣಿಗಳನ್ನು ಬೇಟೆ ಆಡಿದಾಗ, ಅವುಗಳೊಂದಿಗೆ ಆಟ ಆಡಿದಾಗ, ಚರ್ಮ ಸುಲಿಯುವಾಗ, ಅವುಗಳ ಮಾಂಸದ ಅಡುಗೆ ಮಾಡುವಾಗ, ತಿನ್ನುವಾಗಲೂ ಸೋಂಕು ತಗುಲಬಹುದು. ಗರ್ಭಿಣಿಗೆ ಸೋಂಕು ತಗುಲಿದರೆ, ಅದು ಭ್ರೂಣವನ್ನೂ ಪ್ರವೇಶಿಸಬಹುದು ಇಲ್ಲವೇ ಜನನದ ಸಮಯದಲ್ಲಿ ಅಥವಾ ಜನನದ ನಂತರ ಮಗುವಿಗೆ ಹರಡಬಹುದು.

ರೋಗಲಕ್ಷಣಗಳಿಗೆ ಚಿಕಿತ್ಸೆ: ಎಂಪಾಕ್ಸ್‌ಗೆ ಚಿಕಿತ್ಸೆ ನೀಡುವುದೆಂದರೆ, ಮುಖ್ಯವಾಗಿ ದದ್ದುಗಳನ್ನು ಮತ್ತು ನೋವನ್ನು ಕಡಿಮೆ ಮಾಡುವುದು. ಕಾಯಿಲೆಯ ಆರಂಭದ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚಿದರೆ, ಲಕ್ಷಣಗಳನ್ನು ಬೇಗ ಕಡಿಮೆ ಮಾಡಬಹುದು ಮತ್ತು ಕಾಯಿಲೆ ಉಲ್ಭಣಗೊಂಡು ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ತಡೆಯಬಹುದು ಎಂದು ಹೇಳುತ್ತಾರೆ ವೈದ್ಯರು.

ಎಂಪಾಕ್ಸ್ ಲಸಿಕೆ ಪಡೆಯುವುದರಿಂದ ಸೋಂಕನ್ನು ತಡೆಯಬಹುದು. ಎಂಪಾಕ್ಸ್ ಸಾಂಕ್ರಾಮಿಕ ಹರಡತೊಡಗಿದಾಗ, ಸೋಂಕು ತಗಲುವ ಹೆಚ್ಚಿನ ಅಪಾಯ ಇರುವವರಿಗೆ ಲಸಿಕೆ ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ ಸಾರ್ವಜನಿಕ ಆರೋಗ್ಯ ರಕ್ಷಣೆಯ ಮಾರ್ಗಸೂಚಿಗಳನ್ನು ಪಾಲಿಸುವುದು ಕೂಡ ಮುಖ್ಯ.

ತುರ್ತು ಪರಿಸ್ಥಿತಿಯಲ್ಲಿ ಕೆಲವು ರೀತಿಯ ಆ್ಯಂಟಿ ವೈರಲ್‌ಗಳನ್ನು ಬಳಸುವುದಕ್ಕೆ ಅನುಮತಿ ಇದೆ. ಆದರೆ, ಆ್ಯಂಟಿ ವೈರಲ್‌ಗಳು ಮಂಕಿಪಾಕ್ಸ್ ಚಿಕಿತ್ಸೆಯಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಎನ್ನುವುದನ್ನು ಹೇಳಲು ಇನ್ನೂ ಸಾಧ್ಯವಾಗಿಲ್ಲ.

ರೋಗ ಲಕ್ಷಣಗಳೇನು?

ಸಿಡುಬಿನ (ಸ್ಮಾಲ್‌ಪಾಕ್ಸ್‌) ರೋಗಲಕ್ಷಣಗಳನ್ನೇ ಇದು ಹೊಂದಿದೆ. ಆದರೆ, ಸಿಡುಬಿನಷ್ಟು ತೀವ್ರವಾಗಿ ಕಾಡುವುದಿಲ್ಲ. ಎಂಪಾಕ್ಸ್‌ಗೆ ಒಳಗಾದವರು ಎರಡರಿಂದ ನಾಲ್ಕು ವಾರಗಳಲ್ಲಿ ಗುಣಮುಖ
ರಾಗುತ್ತಾರೆ. ಮಕ್ಕಳನ್ನು ಇದು ತೀವ್ರವಾಗಿ ಕಾಡಬಹುದು.

ರೋಗಿಯ ದೇಹದಲ್ಲಿರುವ ವೈರಾಣುಗಳ ಪ್ರಮಾಣ, ದೇಹದ ಆರೋಗ್ಯ ಸ್ಥಿತಿ, ಇತರೆ ಸಮಸ್ಯೆಗಳಿದ್ದರೆ ಈ ಕಾಯಿಲೆ ಜೀವಕ್ಕೆ ಕುತ್ತು ತರಬಹುದು.

ವೈರಸ್‌ ಸೋಂಕು ತಗುಲಿದ ಬಳಿಕ 5ರಿಂದ 21 ದಿನಗಳ ಒಳಗಾಗಿ ಜನರಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ವೈರಸ್‌ ಸೋಂಕು ತಗುಲಿದ ಆರಂಭದಲ್ಲಿ ಮುಖ, ಕೈ–ಕಾಲುಗಳು ಸೇರಿದಂತೆ ಚರ್ಮದ ಮೇಲೆ ಗುಳ್ಳೆಗಳು ಏಳುತ್ತವೆ, ಜ್ವರ, ತೀವ್ರ ತಲೆನೋವು, ಬೆನ್ನು ನೋವು, ಮಾಂಸಖಂಡಗಳಲ್ಲಿ ಸೆಳೆತ, ಗಂಟಲು ಕೆರೆತ, ಕೆಮ್ಮು, ಸುಸ್ತು ಕಾಣಿಸಿಕೊಳ್ಳುತ್ತವೆ. ನಂತರದ ದಿನಗಳಲ್ಲಿ ಚರ್ಮದಲ್ಲಿ ಎದ್ದ ಗುಳ್ಳೆಗಳಲ್ಲಿ ನೀರು ತುಂಬಿ ಬಳಿಕ ಕೀವಾಗುತ್ತದೆ. ಗುಳ್ಳೆಗಳು ತುರಿಕೆ, ನೋವನ್ನೂ ತರಬಹುದು.

ಮಂಕಿಪಾಕ್ಸ್ ಅಪಾಯಕಾರಿಯೇ?
ಹೆಚ್ಚಿನ ಸಂದರ್ಭಗಳಲ್ಲಿ ಮಂಕಿಪಾಕ್ಸ್ ಗಂಭೀರ ಸ್ವರೂಪ ಪಡೆಯುವುದಿಲ್ಲ. ಕೆಲವೊಮ್ಮೆ ಸೋಂಕಿತರಲ್ಲಿ ಸಿಡುಬಿನ ಸೌಮ್ಯ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೇ ವಾರಗಳಲ್ಲಿ ರೋಗಲಕ್ಷಣಗಳು ವಾಸಿಯಾಗುತ್ತವೆ. ಆದರೆ, ಕೆಲವೊಮ್ಮೆ ಸೋಂಕು ಉಲ್ಬಣವಾಗುವ ಅಪಾಯವೂ ಇರುತ್ತದೆ. ಅಪರೂಪದ ಪ್ರಕರಣಗಳಲ್ಲಿ ಸಾವು ಕೂಡ ಸಂಭವಿಸಬಹುದು.
ಲಸಿಕೆ ಕೊರತೆ, ಪೂರೈಕೆ ವಿಳಂಬ

ಆಫ್ರಿಕಾ ಖಂಡದ ಹಲವು ಭಾಗಗಳಲ್ಲಿ 1970ರಿಂದ ಈ ಸೋಂಕು ಕಾಣಿಸಿಕೊಂಡರೂ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು 2022ರಲ್ಲಿ. ಜಗತ್ತಿನ ಸುಮಾರು 100 ದೇಶಗಳಲ್ಲಿ ಲಸಿಕೆಯ ಮೂಲಕ ಸೋಂಕು ಹರಡುವಿಕೆಯನ್ನು ತಡೆಯಲಾಗಿತ್ತು. ಆದರೆ, ಆಫ್ರಿಕಾದಲ್ಲಿ ಲಸಿಕೆಯ ಕೊರತೆ ಕಂಡುಬಂದಿದೆ.

ಈ ವರ್ಷದ ಜನವರಿಯ ನಂತರ ಆಫ್ರಿಕಾದಲ್ಲಿ ಕಾಂಗೊ ಗಣರಾಜ್ಯ ಹಾಗೂ ಸುತ್ತಲಿನ 12 ರಾಷ್ಟ್ರಗಳಿಗೆ ಕಾಯಿಲೆ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಆಗಸ್ಟ್‌ ಎರಡನೇ ವಾರದಲ್ಲಿ ‘ಎಂ–ಪಾಕ್ಸ್’ ಅನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆ ಮಾಡಿತು. ಹಲವು ದೇಶಗಳು ಲಸಿಕೆಗಳ ಪೂರೈಕೆಗೆ ಮುಂದಾದವು. ಆದರೆ, ಆಫ್ರಿಕಾದ ದೇಶಗಳು ಈಗಲೂ ಲಸಿಕೆಗಾಗಿ ಪರದಾಡುತ್ತಿವೆ. ಲಸಿಕೆಗಳ ಕೊರತೆಗೆ ಕಾರಣ, ಹಣಕಾಸು, ಮೂಲಸೌಕರ್ಯ ಮತ್ತು ಪೂರೈಕೆಯಲ್ಲಿನ ಸವಾಲುಗಳು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೂರು ವಾರಗಳ ಬಳಿಕ ಒಂದು ಲಕ್ಷ ಡೋಸ್‌ಗಳಷ್ಟು ಲಸಿಕೆ ಕಾಂಗೊಗೆ ತಲುಪಿದೆ. ಅಲ್ಲಿ ವೇಗವಾಗಿ ಕಾಯಿಲೆ ಹರಡುತ್ತಿರುವುದರಿಂದ ಇನ್ನಷ್ಟು ಡೋಸ್‌ಗಳ ಅಗತ್ಯವಿದೆ.

ಹಿಂದೆ ಸಿಡುಬಿಗೆ ಲಸಿಕೆ ಹಾಕುತ್ತಿದ್ದುದರಿಂದ, ಅದು ಎಂಪಾಕ್ಸ್ ಅನ್ನೂ ತಡೆಗಟ್ಟುತ್ತಿತ್ತು. ಸಿಡುಬಿಗೆ ಮೂರು ಲಸಿಕೆಗಳನ್ನು ಬಳಸಲಾಗುತ್ತಿದ್ದು, ಅವು ಎಂ ಪಾಕ್ಸ್ ಅನ್ನು ತಡೆಯುವಲ್ಲಿ ಕೂಡ ಯಶಸ್ವಿಯಾಗಿವೆ. ಆದರೆ, ಸಿಡುಬಿನ ಲಸಿಕೆಯನ್ನು ಸ್ಥಗಿತಗೊಳಿಸಿದ ನಂತರ ಎಂಪಾಕ್ಸ್ ಹೆಚ್ಚು ಹರಡುತ್ತಿದೆ. ಸದ್ಯ, ಎಂಪಾಕ್ಸ್‌ ವಿರುದ್ಧ ಮೂರು ಲಸಿಕೆಗಳನ್ನು ಬಳಸಲಾಗುತ್ತಿದೆ. ಆದರೂ ಅವು ಸಂಪೂರ್ಣ ಸುರಕ್ಷಿತ ಎಂದು ತಜ್ಞರು ಖಾತರಿಪಡಿಸಿಲ್ಲ; ಜನ ತಮ್ಮ ವಿವೇಚನೆಯ ಮೇರೆಗೆ ಲಸಿಕೆ ಪಡೆಯಬಹುದು ಎಂದಷ್ಟೇ ಹೇಳಿದ್ದಾರೆ. ಲಸಿಕೆ ಅಭಿವೃದ್ಧಿ ಪಡಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದ್ದು, ವಿವಿಧ ಕಂಪನಿಗಳು ಅಭಿವೃದ್ಧಿಯಲ್ಲಿ ತೊಡಗಿವೆ.

ತಡೆಯುವುದು ಹೇಗೆ?

* ವೈದ್ಯರ ಸಲಹೆಯಂತೆ ಲಸಿಕೆ ಪಡೆಯುವುದು.

* ಸೋಂಕಿತ ವ್ಯಕ್ತಿಯ ಚರ್ಮದೊಂದಿಗೆ ಸಂಪರ್ಕ ಮಾಡದಿರುವುದು.

* ಎಂಪಾಕ್ಸ್‌ಗೆ ಒಳಗಾದವರು ಬಳಸಿದ ವಸ್ತುಗಳನ್ನು (ಊಟದ ತಟ್ಟೆ, ಲೋಟ, ಹಾಸಿಗೆಗಳು, ಬಟ್ಟೆಗಳು, ಸಾಬೂನು ಇತ್ಯಾದಿ) ಸ್ಪರ್ಶಿಸದೇ ಇರುವುದು.

* ಸೋಂಕು ದೃಢಪಟ್ಟರೆ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿದ್ದು, ಇತರರ ಸಂಪರ್ಕದಿಂದ ದೂರ ಇರುವುದು.

* ಪ್ರಾಣಿಗಳ ಸಂಪರ್ಕದಿಂದ ದೂರ ಉಳಿಯುವುದು.

* ಸೋಂಕಿತ ವ್ಯಕ್ತಿ, ಪ್ರಾಣಿಗಳ ಸಂಪರ್ಕಕ್ಕೆ ಬಂದರೆ ಕೈಗಳನ್ನು ತೊಳೆಯುವುದು, ಸ್ಯಾನಿಟೈಸರ್‌ ಬಳಸುವುದು.

* ಸೋಂಕಿತರ ಆರೈಕೆ, ಚಿಕಿತ್ಸೆ ವೇಳೆ ಪಿಪಿಇ ಕಿಟ್‌ ಧರಿಸುವುದು.

ಆಧಾರ: ಪಿಟಿಐ, ಬಿಬಿಸಿ, ಪಿಐಬಿ, ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್, ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್‌ಷನ್ (ಅಮೆರಿಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT