ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ‘ಮುಳುಗುತ್ತಿವೆ’ ಜಲಾಶಯಗಳು

Published 23 ಮಾರ್ಚ್ 2024, 23:38 IST
Last Updated 23 ಮಾರ್ಚ್ 2024, 23:38 IST
ಅಕ್ಷರ ಗಾತ್ರ

ಕೆಲ ವರ್ಷಗಳ ಹಿಂದೆ ಕೇರಳದಲ್ಲಿ ಉಂಟಾದ ‘ಜಲ ಪ್ರಳಯ’ ನೆನಪಿರಬೇಕಲ್ಲ ? ಆ ಭಯಾನಕ ಘಟನೆಗಳ ದೃಶ್ಯಗಳ ಚಿತ್ರಗಳನ್ನಾದರೂ ನೋಡಿದವರ ಮನಸ್ಸಿನಿಂದ ಮಾಸಿ ಹೋಗಲು ಸಾಧ್ಯವೇ ಇಲ್ಲ. ಇದು ಅತಿವೃಷ್ಠಿಯ ಪರಾಕಾಷ್ಠೆ! ಕರ್ನಾಟಕದಲ್ಲೂ ಶತಮಾನ ಕಂಡಯರಿದ ಮಳೆ ಬಂದಿತ್ತು. ಎಲ್ಲ ನದಿಗಳೂ ಉಕ್ಕಿ ಹರಿದು, ಪ್ರವಾಹ ಅಬ್ಬರಿಸಿ ಜನ ಜೀವನವನ್ನೇ ಆಪೋಶನ ತೆಗೆದುಕೊಂಡಿತ್ತು. ಮುಂಬರುವ ವರ್ಷಗಳಲ್ಲಿ ಇಂತಹ ವಿದ್ಯಮಾನಗಳು ಪದೇ ಪದೇ ಸಂಭವಿಸುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೇ, ಮಳೆ ಇಲ್ಲದ ವರ್ಷಗಳಲ್ಲಿ ತೀವ್ರ ಬರಪೀಡಿತ ಪ್ರದೇಶಗಳಿಗೆ ಕುಡಿಯುವುದಕ್ಕೆ ಹನಿ ನೀರು ಸಿಗುವುದೂ ಕಷ್ಟ. ಅತಿವೃಷ್ಠಿ ಮತ್ತು ಅನಾವೃಷ್ಠಿ ನಿಸರ್ಗದ ಆಟವಾದರೂ ಅದರಿಂದ ಉಂಟಾಗುವ ಘೋರ ಸಂಕಷ್ಟಗಳಿಗೆ ಆಧುನಿಕ ಭಾರತದ ‘ದೇಗುಲ’ವೆನಿಸಿರುವ ಜಲಾಶಯಗಳೂ ತಮ್ಮದೇ ಆದ ’ಕಾಣಿಕೆ’ ನೀಡುತ್ತಿವೆ ಎನ್ನುವುದು ತಜ್ಞರ ಆತಂಕ.

‘ಹೂಳು ತುಂಬಿಕೊಂಡು ನಲಗು ತ್ತಿರುವ ಜಲಾಶಯಗಳು ಕ್ರಮೇಣ ಶಾಪವಾಗಿ ಪರಿಣಮಿಸುತ್ತಿವೆಯೇ? ಇಂತಹದ್ದೊಂದು ಸಂಶಯ ಮೂಡ ದಿರದು. ಏಕೆಂದರೆ, ಅಣೆಕಟ್ಟು ಗಳಲ್ಲಿ ನೀರಿನ ಬದಲು ಹೂಳು, ಕೆಸರು ಭರ್ತಿ ಆಗುತ್ತಿವೆ. ಸಂಗ್ರಹ ಪ್ರಮಾಣ ಕುಸಿಯುತ್ತಿದೆ. ಇದರಿಂದ ನಾಗರಿಕರಿಗೆ ಕುಡಿಯುವ ನೀರಿನ ಪೂರೈಕೆಯ ಪ್ರಮಾಣವೂ ಕಡಿಮೆ ಆಗುತ್ತಿದೆ. ಕೃಷಿಗೆ ನೀರು ಕಡಿಮೆ ಆಗಿ ಬೆಳೆಗಳೂ ಒಣಗುತ್ತವೆ. ಇದರಿಂದ ನೀರಾವರಿ ಪ್ರದೇಶದ ವ್ಯಾಪ್ತಿಯೂ ಕುಗ್ಗುವುದೂ ನಿಶ್ಚಿತ. ಆಹಾರ ಭದ್ರತೆಗೇ ಸಂಚಕಾರ ಬರಲಿದೆ. ಜಲಾಶಯಗಳ ಹೂಳಿನ ನಿರ್ವಹಣೆ ಮತ್ತು ನೀರಿನ ಬಳಕೆ ಹಾಗೂ ನಿರ್ವಹಣೆಗೆ ಹೊಸ ಭಾಷ್ಯ ಬರೆಯದೇ ಇದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ! ಕೃಷಿಗೆ ನೀರಿನ ಕೊರತೆಯಾಗಿ ರೈತರ ಆದಾಯವೂ ಕುಸಿತವಾಗಲಿದೆ.

ಪರ್ಯಾಯವೇನು?

ಜಲಾಶಯಗಳಿಂದ ತೆರವು ಮಾಡುವ ಹೂಳನ್ನು ಏನು ಮಾಡಬೇಕು ,ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಬಗ್ಗೆ ತಜ್ಞರ ವಲಯದಲ್ಲಿ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಲೇ ಇದೆ. ಹೂಳು ಫಲವತ್ತಾಗಿರುವುದರಿಂದ ಕೃಷಿ ಭೂಮಿಗೆ ಬಳಸಿಕೊಳ್ಳಬಹುದು. ಆದರೆ, ಭಾರೀ ಪ್ರಮಾಣದ ಹೂಳನ್ನು ಕೃಷಿಗೆ ಬಳಸುವುದು ಕಷ್ಟ ಮತ್ತು ಸವಾಲಿನದು.

ದುಬೈನಲ್ಲಿ ಪಾಮ್‌ ಐಲ್ಯಾಂಡ್‌ ಎಂಬ ಕೃತಕ ದ್ವೀಪವನ್ನು ಸಮುದ್ರದ ಹೂಳಿನಿಂದಲೇ ನಿರ್ಮಿಸಲಾಗಿದೆ. ಈ ದ್ವೀಪಗಳಲ್ಲಿ ಮನೆಗಳು, ಹೊಟೇಲ್‌ಗಳನ್ನು ನಿರ್ಮಿಸಲಾಗಿದ್ದು, ಅತ್ಯಂತ ಆಕರ್ಷಕವಾಗಿವೆ. ಇದರ ನಿರ್ಮಾಣಕ್ಕೆ ದುಬೈನಿಂದ 6 ನಾಟಿಕಲ್‌ ಮೈಲಿಗಳಷ್ಟು 94 ದಶಲಕ್ಷ ಕ್ಯೂಬಿಕ್‌ ಮೀಟರ್‌ ಆಳ ಸಮುದ್ರದ ಮರಳು, 5.5 ದಶಲಕ್ಷ ಕ್ಯೂಬಿಕ್‌ ಮೀಟರ್ ಕಲ್ಲುಗಳು ಮತ್ತು 700 ಟನ್‌ ಸುಣ್ಣದ ಕಲ್ಲುಗಳನ್ನು ಇದಕ್ಕೆ ಬಳಸಲಾಗಿದೆ.

'ಕೃಷಿ ಆಧಾರಿತ ಆರ್ಥಿಕತೆಯೂ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಸರ್ಕಾರ ಗಳಾಗಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ, ರೈತ ಸಂಘಟನೆಗಳ ಮುಖಂಡರಾಗಲಿ, ಕೃಷಿ ತಜ್ಞರಾಗಲಿ ಇತ್ತ ಚಿತ್ತ ಹಾಯಿಸಿಲ್ಲ’ ಎಂದು ಎಚ್ಚರಿಕೆಯ ನೀಡುತ್ತಾರೆ ಕೇಂದ್ರ ಜಲ ಆಯೋಗದ ನಿರ್ದೇಶಕ ಜೆ.ಹರ್ಷ.  

‘ಅಣೆಕಟ್ಟೆಗಳು ಆಧುನಿಕ ಭಾರತದ ದೇವಾಲಯಗಳು’ ಎಂದು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ವ್ಯಾಖ್ಯಾನಿಸಿದ್ದರು. ದೊಡ್ಡ ಅಣೆಕಟ್ಟೆಗಳನ್ನು ನಿರ್ಮಿಸುವುದರಿಂದ ದೇಶದ ಎಲ್ಲ ಸಮಸ್ಯೆಗಳೂ ಪರಿಹಾರ ಆಗುತ್ತವೆ ಎಂದು ಅವರು ದೃಢವಾಗಿ ನಂಬಿದ್ದರು. ಆದರೆ, ಈಗ ಕರ್ನಾಟಕವೂ ಸೇರಿ ದೇಶದ ಬಹಳಷ್ಟು ಅಣೆಕಟ್ಟುಗಳು ‘ಮೃತ್ಯುಶಯ್ಯೆ’ಯತ್ತ ಸಾಗುತ್ತಿವೆ. ಇದಕ್ಕೆ ಕಾರಣ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣಕ್ಕಿಂತ ಹೂಳಿನ ಪ್ರಮಾಣವೇ ಹೆಚ್ಚಾಗಿದೆ. ಇದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕುಸಿದಿದೆ. ತುಂಬಿಕೊಂಡ ಹೂಳು ತೆರವು ಮಾಡುವುದು ಹೇಗೆ? ಜಲಾಶಯಗಳ ನಿರ್ವಹಣೆ ಹೇಗೆ? ಎಂಬುದು ಗೊತ್ತಿಲ್ಲದೇ ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿಗೆ ತಜ್ಞರು ತಲುಪಿದ್ದಾರೆ. ಸರ್ಕಾರಗಳಿಗೆ ಅದರ ಗಂಭೀರತೆ ಅರ್ಥವಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಅಣೆಕಟ್ಟೆಗಳೇ ಹೂಳಿನಿಂದ ಮುಳುಗುವ ದಿನಗಳು ದೂರವಿಲ್ಲ. ಆ ರೀತಿ ಆದಾಗ ಪದೇ ಪದೇ ಪ್ರವಾಹ, ‘ಜಲಪ್ರಳಯ’ ತಪ್ಪಿದ್ದಲ್ಲ ಎನ್ನುತ್ತಾರೆ ಜಲಸಂಪನ್ಮೂಲ ತಜ್ಞರು.

ಹಲವು ರಾಜ್ಯಗಳಲ್ಲಿ ನೀರಾವರಿ ಮತ್ತು ಜಲಾಶಯಗಳ ಹೆಸರಿನಲ್ಲೇ ರಾಜಕೀಯ ನಡೆಯುತ್ತದೆ. ನೀರಾವರಿ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವುದು ದೇಶದ ಉದ್ದಗಲಕ್ಕೂ ಕಾಣಬಹುದು. ಆದರೆ ಜಲಾಶಯಗಳನ್ನು ಸದಾ ಸುಸ್ಥಿತಿಯಲ್ಲಿಡುವುದು ಮತ್ತು ನೀರಿನ ಸದ್ಬಳಕೆಗಾಗಿ ನೀರಾವರಿಯ ಹಿತಕಾಯು ತ್ತೇವೆ ಎಂಬ ಹೊಣೆಗಾರಿಕೆ ಹೊರಲು ಯಾರೂ ತಯಾರಿಲ್ಲ. ಕರ್ನಾಟಕದ ಜಲಾಶಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದ ಪ್ರಮುಖ 16 ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಅವುಗಳ ಮೂಲ ಸಂಗ್ರಹ ಸಾಮರ್ಥ್ಯಕ್ಕಿಂತ ತೀವ್ರ ಪ್ರಮಾಣದಲ್ಲಿ ಕುಸಿದು ಹೋಗಿದೆ. ಕೇಂದ್ರ ಜಲ ಆಯೋಗದ ಇದೇ ಫೆಬ್ರುವರಿ ಮೊದಲ ವಾರ ಬಿಡುಗಡೆ ಮಾಡಿದ ವರದಿಯ ಅನ್ವಯ 16 ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದಾಗ ಶೇ 50 ಕ್ಕಿಂತಲೂ ಕಡಿಮೆ ಆಗಿದೆ. ಬಹುತೇಕ ಜಲಾಶಯಗಳಲ್ಲಿ ಹೂಳು ತುಂಬಿಕೊಂಡು ನೀರಿನ ಧಾರಣಾ ಶಕ್ತಿಯೂ ಕುಸಿದಿದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ ಮತ್ತು ಮಳೆ ಸುರಿಯುವ ವಿಧಾನದಲ್ಲಿ (Rain pattern) ಆಗಿರುವ ವೈಪರೀತ್ಯದಿಂದಾಗಿಯೂ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ಹೂಳು ಬಂದು ಸೇರಿಕೊಳ್ಳುತ್ತಿದೆ. ಸಂಗ್ರಹ ಸಾಮರ್ಥ್ಯವೂ ಕುಸಿಯಲು ಇದೂ ಒಂದು ಮುಖ್ಯ ಕಾರಣ. 

ಹವಾಮಾನ ಬದಲಾವಣೆ ಯಿಂದಾಗಿ ಒಂದು ತಿಂಗಳಿನಲ್ಲಿ ಬೀಳುವ ಮಳೆ ಪ್ರಮಾಣ ಒಂದೇ ದಿನದಲ್ಲಿ ಬೀಳುತ್ತದೆ. ಒಂದು ದಿನದಲ್ಲಿ ಬೀಳುವ ಮಳೆ ಕೇವಲ 15 ನಿಮಿಷಗಳಲ್ಲಿ ಸುರಿಯುತ್ತದೆ. ಇದನ್ನು ‘ವಿಪರೀತ ವಿದ್ಯಮಾನ’ ಎಂದೇ ಕರೆಯಲಾಗುತ್ತದೆ. ಈ ರೀತಿ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವುದು ಅತಿ ಮುಖ್ಯ. ಆದರೆ, ಅಂತಹ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಯೋಚನೆಯೂ ಮಾಡುತ್ತಿಲ್ಲ. ಪರ್ಯಾಯ ಚಿಂತನೆಗಳೂ ಇಲ್ಲದ ಕಾರಣ ಮಳೆ ನೀರು ನೇರವಾಗಿ ಜಲಾಶಯಕ್ಕೆ ಹೋಗುತ್ತದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗುತ್ತಿದೆ. ಮಳೆ ನೀರಿನ ಜತೆ ಬರುವ ಅಪಾರ ಪ್ರಮಾಣದ ಮಣ್ಣು ಮಾತ್ರ ಅಣೆಕಟ್ಟೆಗಳಲ್ಲಿ ಶೇಖರಣೆ ಆಗುತ್ತಿದೆ. ನೀರು ಸಮುದ್ರವನ್ನು ಸೇರುತ್ತದೆ.

2022ರಲ್ಲಿ ವಿಪರೀತ ಮಳೆ ಆದ ಸಂದರ್ಭದಲ್ಲಿ ‘ಕೃಷ್ಣಾ’ದಿಂದ ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ 1,500 ಟಿಎಂಸಿ ಅಡಿ ಮತ್ತು ಕಾವೇರಿಯಿಂದ ತಮಿಳುನಾಡಿಗೆ 400 ಟಿಎಂಸಿ ಅಡಿ ನೀರನ್ನು ಹೊರಗೆ ಬಿಡಲಾಗಿತ್ತು. ಮುಂದಾಲೋಚನೆ ಮತ್ತು ಸೂಕ್ತ ಯೋಜನೆ ಇದ್ದಿದ್ದರೆ ಹೆಚ್ಚುವರಿ ನೀರನ್ನು ಕೆರೆ–ಕಟ್ಟೆಗಳಲ್ಲಿ ನಾವೇ ಸಂಗ್ರಹಿಸಿಟ್ಟುಕೊಳ್ಳಬಹುದಿತ್ತು. ರಾಜ್ಯದಲ್ಲಿ ಪ್ರತಿ ವರ್ಷ ವಾಡಿಕೆಯಷ್ಟು ಮಳೆಯಾದರೆ ಸುಮಾರು 3,500 ಟಿಎಂಸಿ ಅಡಿಗಳಷ್ಟು ನೀರು ಉತ್ಪತ್ತಿ ಆಗುತ್ತದೆ. ಆದರೆ, ರಾಜ್ಯದಲ್ಲಿ ವಿವಿಧ ಜಲಾಶಯಗಳು ಮತ್ತು ಕೆರೆ ಕುಂಟೆಗಳಲ್ಲಿ ಸುಮಾರು 1,200 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹಿಸಬಹುದು. ಉಳಿದ ನೀರು ‘ವ್ಯರ್ಥ’ವಾಗಿ ಹರಿದು ಹೋಗುತ್ತಿದೆ. ಅದನ್ನು ಸಂಗ್ರಹಿಸಿ ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಜಲ ತಜ್ಞರು.

ಆದರೆ, ರಾಜ್ಯದ ವಿವಿಧ ಜಲಾಶಯಗಳಲ್ಲಿ ಹೂಳಿನ ಪ್ರಮಾಣ ಎಷ್ಟು ಇದೆ ಎಂಬ ಕುರಿತು ಗಂಭೀರ ಅಧ್ಯಯನವನ್ನು ಇತ್ತೀಚಿನ ವರ್ಷಗಳಲ್ಲಿ ನಡೆಸಿಯೇ ಇಲ್ಲ. ಹೀಗಾಗಿ ನಿಖರ ಮಾಹಿತಿಗಳು ಲಭ್ಯವಿಲ್ಲ. ಜಲಸಂಪನ್ಮೂಲ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಬಹುಪಾಲು 2009– 2010 ಸಾಲಿಗೂ ಹಿಂದಿನದು. ಜಲಾಶಯಗಳಲ್ಲಿ ಕ್ರಮೇಣ ನೀರಿನ ಜಾಗವನ್ನು ಹೂಳು ಆಕ್ರಮಿಸಿಕೊಳ್ಳುತ್ತಿದೆ ಎನ್ನುವುದು ಕೇಂದ್ರ ಜಲ ಆಯೋಗದ ಮಾಹಿತಿ. ರಾಜ್ಯದ ಜಲಸಂಪನ್ಮೂಲ ಇಲಾಖೆ ಮತ್ತು ನೀರಾವರಿ ನಿಗಮಗಳು ವಿವಿಧ ಯೋಜನೆಗಳಿಗೆ ಟೆಂಡರ್‌ ಕೊಡುವುದು ಮತ್ತು ಬಿಲ್‌ ಪಾವತಿಗಷ್ಟೇ ಸೀಮಿತವಾಗಿವೆ.  ರಾಜ್ಯದಲ್ಲಿ ಲಭ್ಯವಿರುವ ನೀರನ್ನು ಪರಿಣಾಮಕಾರಿಯಾಗಿ ಹೇಗೆ ಸಂಗ್ರಹಿಸಿಡಬೇಕು, ನಾಲೆಯ ಕಟ್ಟ ಕಡೆಯ ರೈತನ ಹೊಲಕ್ಕೆ ಪೂರೈಕೆ ಮಾಡುವುದು ಹೇಗೆ ಎಂಬ ಬಗ್ಗೆ ಜಲಸಂಪನ್ಮೂಲ ಇಲಾಖೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ಸಾವಿರಾರು ಕೋಟಿ ಮೊತ್ತದ ಟೆಂಡರ್‌ ಕೊಡುವುದಕ್ಕೆ ಇರುವ ಆಸಕ್ತಿ, ಜಲಾಶಯಗಳು ಮತ್ತು ಅಣೆಕಟ್ಟೆ ನಿರ್ವಹಣೆ, ಪರ್ಯಾಯ ವಿಧಾನಗಳ ಮೂಲಕ ನೀರಿನ ಸಂಗ್ರಹ, ಹೂಳಿನ  ನಿರ್ವಹಣೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ತಜ್ಞರೊಬ್ಬರು.

‘ಜಲಾಶಯ ನಿರ್ಮಾಣ ಆದ ಮೇಲೆ ಅದರ ನಿರ್ವಹಣೆಯ ಜವಾಬ್ದಾರಿ ಸಂಪೂರ್ಣ ರಾಜ್ಯಗಳಿಗೆ ಸಂಬಂಧಪಟ್ಟಿದ್ದು. ಆದರೆ, ಆ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುವ ಮಾತು ಹಾಗಿರಲಿ, ಕನಿಷ್ಠ ಯೋಚಿಸುವವರೂ ಇಲ್ಲ. ಅಣೆಕಟ್ಟೆ ಸುರಕ್ಷತೆ ಪರಿಶೀಲನೆಗೆ ಕೇಂದ್ರ ತಂಡ ಬರುವಾಗಲಷ್ಟೇ ಆಯಾ ರಾಜ್ಯಗಳ ಅಧಿಕಾರಿಗಳು ‘ಗಡಿಬಿಡಿ’ ತೋರಿಸುತ್ತಾರೆ ಎಂದು ಬೇಸರಿಸುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಜಲತಜ್ಞ ಡಾ.ಜಿ.ಎಸ್‌.ಶ್ರೀನಿವಾಸ ರೆಡ್ಡಿ.

2050 ರ ವೇಳೆಗೆ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಯೋಚಿಸದೇ ಹೂಳಿನ ಪ್ರಮಾಣ ಇನ್ನೂ ಹೆಚ್ಚಾಗಲು ಬಿಟ್ಟರೆ, ಕೃಷಿ ಮತ್ತು ಕುಡಿಯುವ ಉದ್ದೇಶಕ್ಕೆ ಅಗತ್ಯವಿರುವಷ್ಟು ನೀರು ಸಿಗುವುದಿಲ್ಲ. ಬಿತ್ತಿದ ಬೀಜ ನೀರಿಲ್ಲದೇ ಒಣಗಬಹುದು, ಇಲ್ಲವೇ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡಬೇಕಾಗುತ್ತದೆ. ಆಹಾರ ಭದ್ರತೆಗೆ ಖಾತರಿಯೂ ಇಲ್ಲವಾಗುತ್ತದೆ ಎಂದು ಜೆ. ಹರ್ಷ ಅಭಿಪ್ರಾಯಪಡುವರು. 

ಹೂಳೆತ್ತಲು ಸಾಧ್ಯವೇ?

‘ಜಲಾಶಯಗಳಿಂದ ಹೂಳೆತ್ತಲು ಅಪಾರ ಪ್ರಮಾಣದ ಹಣ ಬೇಕು. ಅಷ್ಟೇ ಅಲ್ಲ, ತೆರವು ಮಾಡಿದ ಹೂಳನ್ನು ಎಲ್ಲಿ ಹಾಕಬೇಕು? ಅದರ ಸಾಗಣೆ ಹೇಗೆ? ಕಾಲುವೆಗಳಲ್ಲಿರುವ ಹೂಳನ್ನೂ ತೆಗೆಯಬೇಕು... ಹೀಗೆ ಹಲವು ಸವಾಲುಗಳು ಇವೆ’ ಎಂದು ಶ್ರೀನಿವಾಸ ರೆಡ್ಡಿ ವಿವರಿಸಿದರು.

‘ತುಂಗಭದ್ರಾದಂತಹ ದೊಡ್ಡ ಜಲಾಶಯಗಳಲ್ಲಿ ಹೂಳು ತೆಗೆಯುವುದಕ್ಕಿಂತ ಅವುಗಳಿಗೆ ಸಮತೋಲನ ಜಲಾಶಯಗಳನ್ನು ನಿರ್ಮಿಸುವುದೇ ಸೂಕ್ತ. ಕೆಲವು ದೇಶಗಳಲ್ಲಿ ನೀರು ಜಲಾಶಯಕ್ಕೆ ಬರುವುದಕ್ಕೆ ಮೊದಲೇ ಹೂಳನ್ನು ತಡೆಯುವ ಕೆಲಸ ಮಾಡುತ್ತಾರೆ. ಕೆಸರನ್ನು ತೆಗೆಯುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲ. ನಮ್ಮಲ್ಲೂ ಕೂಡ ಮೂಲದಲ್ಲೇ ಮಣ್ಣು ನದಿಗೆ ಸೇರುವುದನ್ನು (ಸಿಲ್ಟ್‌ ಟ್ರ್ಯಾಪ್‌) ತಡೆಯಬೇಕು. ಪ್ರವಾಹದ ಸಂದರ್ಭದಲ್ಲಿ ನೀರು ಮಣ್ಣನ್ನು ತನ್ನ ಒಡಲಲ್ಲಿ ಹೊತ್ತು ಸಾಗುತ್ತದೆ. ಅದನ್ನು ಅಲ್ಲೇ ತಡೆದು, ಆ ಮಣ್ಣನ್ನು ಬೇರೆ ಉದ್ದೇಶಗಳಿಗೂ ಬಳಸಬಹುದು. ಇಟ್ಟಿಗೆ, ಹೆಂಚು ಸೇರಿದಂತೆ ಮಣ್ಣಿನ ಉತ್ಪನ್ನಗಳನ್ನು ತಯಾರಿಸಲು ಉಪಯೋಗಿಸಬಹುದು’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹೆಚ್ಚು ನೀರು ಸಂಗ್ರಹಕ್ಕೆ ಸಮತೋಲನದಂತಹ ಜಲಾಶಯಗಳು ಮತ್ತು ಹೆಚ್ಚಿನ ಸಂಖ್ಯೆಯ ಸಣ್ಣ ಅಣೆಕಟ್ಟೆಗಳನ್ನೂ ನಿರ್ಮಿಸಬೇಕು. ಜಲಾಶಯಗಳಿಂದ ಕೆಸರು ತುಂಬಿದ ನೀರನ್ನು ಕಡೆಗೋಲಿನಿಂದ ಮಜ್ಜಿಗೆ ಕಡೆಯುವ ಮಾದರಿಯಲ್ಲಿ ಕಡೆದು ಪ್ರತ್ಯೇಕ ತೂಬಿನ ಮೂಲಕ ಹೊರಬಿಡಬಹುದು. ಈ ವಿಧಾನದಿಂದಲೂ ಅಣೆಕಟ್ಟೆಗಳಲ್ಲಿ ಹೂಳು ಕಡಿಮೆ ಮಾಡಬಹುದು ಎನ್ನುತ್ತಾರೆ ಶ್ರೀನಿವಾಸರೆಡ್ಡಿ.

ತುಂಗಭದ್ರೆಯ ಸಂಕಷ್ಟವೇನು?

ರಾಜ್ಯದಲ್ಲಿ ಅತಿ ಹೆಚ್ಚು ಹೂಳು ತುಂಬಿರುವ ಜಲಾಶಯಗಳಲ್ಲಿ ತುಂಗಭದ್ರಾ ಜಲಾಶಯ ಮುಂಚೂಣಿಯಲ್ಲಿದೆ. ಇದು ಅಂತರರಾಜ್ಯ ನೀರು ಹಂಚಿಕೆಗೆ ಒಳಪಟ್ಟಿದ್ದರೂ, ವಿವಾದವೇ ಇಲ್ಲದ ಮಾದರಿ ನೀರಾವರಿ ಯೋಜನೆಯೂ ಹೌದು. ಮುಂಗಾರು, ಹಿಂಗಾರು ಲೆಕ್ಕ ಹಾಕಿದರೆ ಇಲ್ಲಿ ಸರಾಸರಿ 212 ಟಿಎಂಸಿ ಅಡಿ ನೀರು ಸಿಗುತ್ತದೆ. ಲಭ್ಯ ನೀರಿನಲ್ಲಿ ಶೇ 65ರಷ್ಟು (139 ಟಿಎಂಸಿ ಅಡಿ) ಕರ್ನಾಟಕಕ್ಕೆ, ಶೇ 35 ರಷ್ಟು (73 ಟಿಎಂಸಿ ಅಡಿ) ಆಂಧ್ರಕ್ಕೆ ಎಂಬ ಸರಳ ಸಿದ್ಧ ಸೂತ್ರದಲ್ಲಿ ಕಳೆದ 70 ವರ್ಷಗಳಿಂದಲೂ ನೀರು ಹಂಚಿಕೆ ಆಗುತ್ತಿದೆ.

ಈ ಜಲಾಶಯದಲ್ಲಿ ಸದ್ಯ 28 ರಿಂದ 30 ಟಿಎಂಸಿ ಅಡಿಯಷ್ಟು ಹೂಳು ತುಂಬಿದೆ. ಹೀಗಾಗಿ ನೀರು ಸಂಗ್ರಹ ಪ್ರಮಾಣ 133 ಟಿಎಂಸಿ ಅಡಿಯಿಂದ 105 ಟಿಎಂಸಿ ಅಡಿಗೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. 1 ಟಿಎಂಸಿ ಅಡಿ ಹೂಳು ಅಂದರೆ 50 ಲಕ್ಷ ಲಾರಿ ಲೋಡ್‌ನಷ್ಟಾಗುತ್ತದೆ. ಒಂದು ಲೋಡ್‌ ಹೂಳನ್ನು ಸಾಗಿಸಲು ಕನಿಷ್ಠ ₹1 ಸಾವಿರ ಖರ್ಚಿನ ಲೆಕ್ಕ ಇಟ್ಟುಕೊಂಡರೂ, ₹500 ಕೋಟಿ ಹಾಗೂ 28 ಟಿಎಂಸಿ ಅಡಿ ಹೂಳೆತ್ತಲು ₹14,000 ಕೋಟಿ ಹಣ ಬೇಕು. ಪ್ರತಿ ವರ್ಷ 0.45 ಟಿಎಂಸಿ ಅಡಿಯಷ್ಟು ಹೂಳು ಜಲಾಶಯಕ್ಕೆ ಸೇರುತ್ತಲೇ ಇರುತ್ತದೆ. ಹೂಳು ತೆಗೆಯುವುದು ಶಾಶ್ವತ ಪರಿಹಾರ ಆಗುವುದೂ ಇಲ್ಲ.

‘ಮಳೆಗಾಲದಲ್ಲಿ ಎರಡೂ ರಾಜ್ಯಗಳ ಹಕ್ಕಿನ ನೀರು ಜಲಾಶಯದಿಂದ ನದಿಗೆ ಹರಿದು ಹೋಗುವುದನ್ನು ತಪ್ಪಿಸಬೇಕಿರುವುದು ತುರ್ತು ಅಗತ್ಯ. 9 ವರ್ಷ ಬಿಟ್ಟರೆ ಉಳಿದ 61 ವರ್ಷಗಳಲ್ಲಿ ವಾರ್ಷಿಕ ಸರಾಸರಿ 200 ರಿಂದ 300 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿದೆ. ಇದನ್ನು ಬಳಸಿಕೊಳ್ಳಬೇಕಿದ್ದರೆ ಸಮತೋಲಿತ ಜಲಾಶಯ ನಿರ್ಮಾಣ, ಪರ್ಯಾಯ ಪ್ರವಾಹ ಕಾಲುವೆ ನಿರ್ಮಾಣ ಆಗಬೇಕು. ಜತೆಗೆ ಹೂಳನ್ನೂ ತೆಗೆಯಬೇಕು. ಈ ಮೂರೂ ಕೆಲಸ ಭಾರಿ ವೆಚ್ಚದಾಯಕ ನಿಜ. ಆದರೆ ನೀರನ್ನು ಬಳಸಿಕೊಳ್ಳಲು ಇದನ್ನು ಮಾಡುವುದರ ಹೊರತು ಬೇರೆ ದಾರಿಯೇ ಇಲ್ಲ’ ಎನ್ನುತ್ತಾರೆ ತುಂಗಭದ್ರಾ ಮಂಡಳಿಯ ನಿವೃತ್ತ ಅಧೀಕ್ಷಕ ಎಂಜಿನಿಯರ್‌ ಗೋವಿಂದಲು.

ಸದ್ಯದ ಸುಲಭ ಪರಿಹಾರ

ಈ ಮೂರು ಪರಿಹಾರ ಮಾರ್ಗಗಳ ಪೈಕಿ ಕಡಿಮೆ ವೆಚ್ಚದಲ್ಲಿ ಆಗಬಹುದಾದ ಯೋಜನೆ ಎಂದರೆ ಬಲದಂಡೆಯಲ್ಲಿ ಪರ್ಯಾಯ ಪ್ರವಾಹ ಕಾಲುವೆ ನಿರ್ಮಿಸುವುದು. ಆಂಧ್ರದ ಪೆನ್ನಾರ್‌ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ 20 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಇರುವ ಕಾರಣ ಅಲ್ಲಿಗೆ ಪ್ರವಾಹದ ನೀರನ್ನು ಹರಿಸಿದರೆ ಒಟ್ಟು ನೀರಿನ ಪಾಲಿನಂತೆ ರಾಜ್ಯಕ್ಕೂ ಅನುಕೂಲವೇ. ಆಂಧ್ರ ಸರ್ಕಾರ 1985 ರಲ್ಲೇ ಮುಂದಿಟ್ಟ ಪ್ರಸ್ತಾವ ಇದು.

ಏನೂ ಖರ್ಚಿಲ್ಲದ ಸರಳ ಪರಿಹಾರ ಎಂದರೆ ಮುಂಗಾರು ಮಳೆ ಆರಂಭವಾಗುತ್ತಲೇ, ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರು 1,585 ಅಡಿ ತಲುಪಿದಾಗ ಎಡದಂಡೆ ಕಾಲುವೆಗೆ ನೀರು ಹರಿಸುವುದು ಹಾಗೂ 1,600 ಅಡಿಗೆ ತಲುಪಿದಾಗ ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವುದು. ಅಣೆಕಟ್ಟೆಯ ಗರಿಷ್ಠ ಮಟ್ಟ 1,633 ಅಡಿ. ಇದರಿಂದ ಎರಡೂ ರಾಜ್ಯಗಳಿಗೆ ಅಣೆಕಟ್ಟು ತುಂಬುತ್ತಿರುವ ಹಂತದಲ್ಲೇ 6 ರಿಂದ 8 ಟಿಎಂಸಿ ಅಡಿಯಷ್ಟು ನೀರು ಬಳಕೆಯಾದಂತಾಗುತ್ತದೆ, ಕೃಷಿ ಚಟುವಟಿಕೆಗಳೂ ಜುಲೈನಲ್ಲೇ ಆರಂಭವಾಗುವುದಕ್ಕೆ ನೆರವಾಗುತ್ತದೆ ಎಂಬ ಸಲಹೆಯನ್ನೂ ನೀಡುತ್ತಾರೆ ಗೋವಿಂದಲು.

ಬೃಹತ್‌ ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸುತ್ತಿರುವ ಜಲಾಶಯಗಳ ಹೂಳು ನಿರ್ವಹಣೆ ಬಗ್ಗೆ ತಕ್ಷಣದಲ್ಲೇ ವಿಸ್ತೃತ ಕಾರ್ಯಯೋಜನೆ ರೂಪಿಸಬೇಕು. ಮಣ್ಣು ನೀರಿನೊಂದಿಗೆ ಹರಿದುಬರುವುದನ್ನು ಮೂಲದಲ್ಲೇ ತಡೆಬೇಕು. ಈಗ ಜಲಾಶಯಗಳಲ್ಲಿರುವ ಹೂಳು ತೆರವು ಮಾಡಿದರೆ, ಅದರ ಪ್ರಯೋಜನ ಹೇಗೆ ಪಡೆಯಬಹುದು ಎಂಬ ಬಗ್ಗೆಯೂ ಗಮನಹರಿಸಲೇಬೇಕಾಗಿದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ದೊಡ್ಡ ದುರಂತಗಳಿಗೆ ತುತ್ತಾಗಬೇಕಾಗುತ್ತದೆ ಎಂಬ ತಜ್ಞರ ಎಚ್ಚರಿಕೆಯ ಮಾತುಗಳು ಅತಿಶಯೋಕ್ತಿ ಎನಿಸದರು.

ಮಾಹಿತಿ: ಎಂ.ಎನ್‌.ಯೋಗೇಶ್‌, ಇಮಾಮ್‌ ಹುಸೇನ್‌ ಗೂಡನವರ, ಬಿ.ಜಿ. ಪ್ರವೀಣಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT