ಬೆಂಗಳೂರು: 2013–2018ರ ಅವಧಿಯಲ್ಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದನ ಸಮಿತಿಗಳು, ನ್ಯಾಯಾಂಗ ಆಯೋಗಗಳ ಮೂಲಕ ಎದುರಾಳಿಗಳ ವಿರುದ್ಧ ‘ತನಿಖೆ’ಯ ಅಸ್ತ್ರ ಝಳಪಿಸಿತ್ತು. ಏಳೆಂಟು ವರ್ಷ ಕಳೆದು ಪುನಃ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ತನಿಖಾ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳುವುದು ‘ಕನ್ನಡಿಯೊಳಗಿನ ಗಂಟು’ ಎಂಬಂತಹ ಸ್ಥಿತಿಯೇ ಇದೆ.

ಇದನ್ನೂ ಓದಿ: ಒಳನೋಟ| ವಿಚಾರಣಾ ವರದಿಗಳು ಏನಾದವು?

ಆಗಲೂ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ರಾಜಕೀಯವಾಗಿ ಕಟ್ಟಿಹಾಕಲು ಬಲವಾದ ಪಟ್ಟು ಹಾಕತೊಡಗಿದ್ದವು. ಆಗ, 2008–2013ರ ಅವಧಿಯ ಬಿಜೆಪಿ ಸರ್ಕಾರ ಮತ್ತು ಅದಕ್ಕೂ ಹಿಂದಿನ ಸರ್ಕಾರಗಳ ವಿರುದ್ಧದ ಆರೋಪಗಳ ದಾಖಲೆಗಳನ್ನು ತಿರುವಿ ಹಾಕುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ನೈಸ್ ಅಕ್ರಮ, ವಿದ್ಯುತ್ ಖರೀದಿಯಲ್ಲಿನ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಕೆರೆಗಳ ಜಮೀನು ಒತ್ತುವರಿ ಕುರಿತ ವಿಚಾರಣೆಗೆ ಸರ್ಕಾರವೇ ಆಸಕ್ತಿ ವಹಿಸಿ ಸದನ ಸಮಿತಿಗಳನ್ನು ನೇಮಿಸಿತ್ತು.

‘ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳನ್ನು ‘ರೀಡೂ’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ’ ಎಂದು 2014ರಲ್ಲಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದ ವಿರೋಧ ಪಕ್ಷಗಳು, ಅವರನ್ನು ಡಿನೋಟಿಫಿಕೇಷನ್ ಹಗರಣದ ಬಲೆಗೆ ಬೀಳಿಸುವ ದಾಳ ಉರುಳಿಸಿದ್ದವು. ತಮ್ಮ ಅವಧಿಯೂ ಸೇರಿದಂತೆ ಅರ್ಕಾವತಿ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಆರಂಭದ ಹಂತದಿಂದ ಸಮಗ್ರ ತನಿಖೆಗೆ ಆದೇಶಿಸುವ ಮೂಲಕ ವಿಪಕ್ಷಗಳನ್ನೂ ಇಕ್ಕಟ್ಟಿಗೆ ಸಿಲುಕಿಸಲು ಸಿದ್ದರಾಮಯ್ಯ ಯತ್ನಿಸಿದ್ದರು.

ಪ್ರತಿಯೊಂದು ಸದನ ಸಮಿತಿಯ ಕಾರ್ಯನಿರ್ವಹಣೆಗೆ ಹತ್ತಾರು ಕೋಟಿ ರೂಪಾಯಿ ವೆಚ್ಚವಾಗಿದೆ. ನ್ಯಾಯಾಂಗ ವಿಚಾರಣೆಗೂ ಹಲವು ಕೋಟಿಗಳು ವ್ಯಯವಾಗಿವೆ. ನೂರಾರು ಸರ್ಕಾರಿ ಅಧಿಕಾರಿಗಳು, ನೌಕರರು ವರ್ಷಗಟ್ಟಲೆ ಕಡತಗಳನ್ನು ಹುಡುಕಿ ಸತ್ಯಕ್ಕಾಗಿ ‘ಶೋಧ’ ನಡೆಸಿದ್ದಾರೆ. ಆದರೆ, ಹೆಚ್ಚಿನ ವರದಿಗಳ ಮಂಡನೆಯೇ ಆಗಿಲ್ಲ. ಬೆರಳೆಣಿಕೆಯಷ್ಟು ವರದಿಗಳು ಸದನದಲ್ಲಿ ಮಂಡನೆಯಾದರೂ ಚರ್ಚೆ ಇಲ್ಲದೇ ನೇಪಥ್ಯಕ್ಕೆ ಸರಿದಿವೆ.

ರಾಜಿ ರಾಜಕಾರಣದ ಅಸ್ತ್ರ: ಬಹುತೇಕ ಸಂದರ್ಭಗಳಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವ ಪಕ್ಷಗಳು ಸದನ ಸಮಿತಿಗಳು, ಆಯೋಗಗಳ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತವೆ. ಆದರೆ, ಅಧಿಕಾರದ ಗದ್ದುಗೆಗೇರಿದ ಬಳಿಕ ಈ ವಿಚಾರದಲ್ಲಿ ವರಸೆಯೇ ಬದಲಾಗುತ್ತದೆ. ಇದಕ್ಕೆಲ್ಲ ಅಪವಾದ ಎಂಬಂತೆ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ವರದಿ ಆಧಾರದಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನಿನ ಒತ್ತುವರಿ ತೆರವಾಗಿದ್ದೂ ಇದೆ.

‘ಅರ್ಕಾವತಿ ಬಡಾವಣೆ ರೀಡೂ ಹಗರಣ ಕುರಿತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಆಧಾರದಲ್ಲಿ ತನಿಖೆ ನಡೆಸುವಂತೆ ನಾವು ಹಲವು ಬಾರಿ ಒತ್ತಾಯಿಸಿದ್ದೆವು. ಸೌರಶಕ್ತಿ ಯೋಜನೆಗಳ ಅಕ್ರಮದ ಬಗ್ಗೆಯೂ ತನಿಖೆಗೆ ಆಗ್ರಹಿಸಿದ್ದೆವು. ಯಾವುದೂ ಆಗಲಿಲ್ಲ. ನಮ್ಮ ಸರ್ಕಾರದಲ್ಲೂ ಕೆಲವರ ರಾಜಿ ರಾಜಕಾರಣದಿಂದ ಚುನಾವಣೆಯಲ್ಲಿ ಹಿನ್ನಡೆಯಾಯಿತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇತ್ತೀಚೆಗೆ ಹೇಳಿದ್ದರು. ಇದು ಸದನ ಸಮಿತಿಗಳು, ನ್ಯಾಯಾಂಗ ಆಯೋಗಗಳು ರಾಜಕೀಯ ದಾಳವಾಗಿ ಬಳಕೆಯಾಗುತ್ತಿರುವುದನ್ನು ದೃಢಪಡಿಸುವಂತಿದೆ.

ರಾಜಕೀಯದ ಆಟ

ಸದನ ಸಮಿತಿಗಳ ರಚನೆ, ತನಿಖೆ, ವಿಚಾರಣೆ, ವರದಿ ಸಲ್ಲಿಕೆ, ಮಂಡನೆ ಎಲ್ಲವೂ ರಾಜಕೀಯ ಆಟಕ್ಕೆ ಬಳಕೆಯಾಗುತ್ತಿರುವುದೇ ಹೆಚ್ಚು. ‘ನೈಸ್’ ಪ್ರಕರಣದ ಸದನ ಸಮಿತಿಯೇ ಇದಕ್ಕೆ ದೊಡ್ಡ ಸಾಕ್ಷಿ. 2013-2018ರ ಅವಧಿಯಲ್ಲಿ ಅಶೋಕ್ ಖೇಣಿ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಕಾಂಗ್ರೆಸ್ ಸರ್ಕಾರ ಅವರ ಕಂಪನಿಯ ಅಕ್ರಮಗಳ ವಿರುದ್ಧ ಸದನ ಸಮಿತಿ ರಚಿಸಿ ತನಿಖೆ ನಡೆಸಿತ್ತು. ನಂತರ ಕಾಂಗ್ರೆಸ್ ಸೇರಿದ್ದರು. 2023ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತ ಸಂಪುಟ ಉಪ ಸಮಿತಿ ವರದಿಯ ಕತೆಯೂ ಹೀಗೆಯೇ ಇದೆ. ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಹಲವು ಅಧಿಕಾರಿಗಳು ಈಗಲೂ ಆಯಕಟ್ಟಿನ ಸ್ಥಾನಗಳಲ್ಲಿದ್ದಾರೆ. ನೂರಾರು ಮಂದಿ ನಿವೃತ್ತರಾಗಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದಡಿ ಬಂಧಿತರಾಗಿದ್ದ ಬಿ. ನಾಗೇಂದ್ರ ನಂತರ ಕಾಂಗ್ರೆಸ್ ಸೇರಿ ಈಗ ಸಿದ್ದರಾಮಯ್ಯ ಸಂಪುಟದಲ್ಲೇ ಸಚಿವರಾಗಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಿನಲ್ಲಿದ್ದ ಜಿ. ಜನಾರ್ದನ ರೆಡ್ಡಿ ಗಂಗಾವತಿ ಶಾಸಕರಾಗಿ ಈಗ ಸಿದ್ದರಾಮಯ್ಯ ಸರ್ಕಾರಕ್ಕೆ ಬೆಂಬಲವನ್ನೂ ಘೋಷಿಸಿದ್ದಾರೆ.

ಅರ್ಕಾವತಿ ಬಡಾಣೆ ಭೂಸ್ವಾಧೀನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗ ಸಲ್ಲಿಸಿದ್ದ ವರದಿಯನ್ನು ಯಾವ ಪಕ್ಷದ ಸರ್ಕಾರವೂ ಸದನದ ಮುಂದೆ ತರಲಿಲ್ಲ.

ಸಮಿತಿಯಲ್ಲಿದ್ದವರೂ ಮೌನಕ್ಕೆ ಶರಣು

ಸದನ ಸಮಿತಿಗಳ ಮುಖ್ಯಸ್ಥರು, ಸದಸ್ಯರಾಗಿದ್ದವರೂ ವರದಿಗಳ ಕುರಿತು ಚಕಾರ ಎತ್ತುವುದಿಲ್ಲ. ವರದಿ ತಯಾರಿಸುವ ಅವಧಿಯಲ್ಲಿ ರೋಷಾವೇಶ ಪ್ರದರ್ಶಿಸುವವರು, ಸಮಿತಿಯ ಅವಧಿ ಮುಗಿದ ಬಳಿಕ ಆಶ್ಚರ್ಯಕರ ಎಂಬಂತೆ ಮೌನಿಗಳಾಗುತ್ತಿದ್ದಾರೆ.

ನಾಟಕೀಯ ಎಂಬಂತಾಗಿದೆ: ಟಿ.ಬಿ.ಜಯಚಂದ್ರ

‘ಸದನ ಸಮಿತಿಗಳು, ವಿಚಾರಣಾ ಆಯೋಗಗಳನ್ನು ರಚಿಸುವುದು, ವರದಿ ಪಡೆದು ಮೌನಕ್ಕೆ ಶರಣಾಗುವುದು ಇವೆಲ್ಲವೂ ಒಂದರ್ಥದಲ್ಲಿ ನಾಟಕೀಯ ಎನಿಸುತ್ತಿದೆ. ಶಾಸನಸಭೆಗಳು ಮಹತ್ವ ಕಳೆದುಕೊಳ್ಳುತ್ತಿರುವುದರ ಲಕ್ಷಣ ಇದು. ವರ್ಷಗಟ್ಟಲೆ ತನಿಖೆ, ವಿಚಾರಣೆ ನಡೆಸಿ ವರದಿ ಸಲ್ಲಿಸಿದರೂ ಏನೂ ಪ್ರಯೋಜನ ಆಗುತ್ತಿಲ್ಲ’ ಎಂದು ನೈಸ್ ಅಕ್ರಮದ ಕುರಿತ ವಿಚಾರಣೆ ನಡೆಸಿದ್ದ ಸದನ ಸಮಿತಿಯ ಅಧ್ಯಕ್ಷರಾಗಿದ್ದ ಹಾಲಿ ಶಾಸಕ ಟಿ.ಬಿ. ಜಯಚಂದ್ರ ಪ್ರತಿಕ್ರಿಯಿಸಿದರು.

‘ನೈಸ್ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಆಧರಿಸಿ ಏಕೆ ಕ್ರಮ ಆಗಲಿಲ್ಲ ಎಂಬುದನ್ನು ಈಗ ನಾನು ಹೇಳುವುದು ಕಷ್ಟ. ವರದಿ ಸದನದ ಮುಂದಿದೆ’ ಎಂದರು.

ತೆರಿಗೆ ಹಣ ಪೋಲು: ಎ.ಟಿ.ರಾಮಸ್ವಾಮಿ

‘ವಿವಿಧ ಪ್ರಕರಣಗಳ ಕುರಿತು ತೀವ್ರ ಚರ್ಚೆ ಆದಾಗ ಸರ್ಕಾರಗಳು ಅನೇಕ ಸಮಿತಿ, ಆಯೋಗಗಳನ್ನು ರಚಿಸಿ ವಿಚಾರಣೆ, ತನಿಖೆ ನಡೆಸುತ್ತವೆ. ಸದನ ಸಮಿತಿಗಳನ್ನೂ ನೇಮಿಸಲಾಗುತ್ತದೆ. ಆದರೆ, ಅವುಗಳ ವರದಿಗಳನ್ನು ಆಧರಿಸಿ ಕ್ರಮ ಕೈಗೊಳ್ಳುವುದು ಮರೀಚಿಕೆಯಾಗುತ್ತಿದೆ. ಯಾವ ಪಕ್ಷದ ಸರ್ಕಾರವೂ ಅಂತಹ ಬದ್ಧತೆ ಪ್ರದರ್ಶಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ತೆರಿಗೆಯ ಹಣದ ಪೋಲಾಗುತ್ತಿದೆ’ ಎನ್ನುತ್ತಾರೆ ಬೆಂಗಳೂರು ನಗರದಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ತನಿಖೆ ನಡೆಸಿದ್ದ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ.

‘ಮಹಾಲೇಖಪಾಲರಂತಹ (ಸಿಎಜಿ) ಸಾಂವಿಧಾನಿಕ ಸಂಸ್ಥೆಗಳು ಸಲ್ಲಿಸುವ ವರದಿಗಳನ್ನೇ ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಎಲ್ಲವೂ ಆ ಕ್ಷಣದ ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿವೆ’
ಎಂದರು.

ಸದನ ಸಮಿತಿ: ಏನು? ಎತ್ತ?

ಯಾವುದೇ ವಿಷಯದ ಕುರಿತು ವಿಧಾನಸಭೆ ಅಥವಾ ವಿಧಾನ ಪರಿಷತ್ನಲ್ಲಿ ಹೆಚ್ಚು ಚರ್ಚೆ ನಡೆದು ಆಳವಾದ ಅಧ್ಯಯನ ಅಥವಾ ತನಿಖೆ, ವಿಚಾರಣೆಗಾಗಿ ಸದನ ಸಮಿತಿ ರಚಿಸುವಂತೆ ಸದಸ್ಯರು ಪಟ್ಟು ಹಿಡಿದಾಗ ಸರ್ಕಾರದ ಅಭಿಪ್ರಾಯವನ್ನೂ ಪಡೆದು ವಿಧಾನಸಭೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿ ಸದನ ಸಮಿತಿ ರಚಿಸುವ ನಿರ್ಧಾರ ಕೈಗೊಳ್ಳುತ್ತಾರೆ.

ಸದನ ಸಮಿತಿಗಳು ಸಲ್ಲಿಸುವ ವರದಿಯನ್ನು ಸದನದ ಮುಂದೆ ಮಂಡಿಸುವ ಅಧಿಕಾರವು ಸರ್ಕಾರಕ್ಕೆ ಸೇರಿದ್ದಾಗಿರುತ್ತದೆ. ಮಂಡನೆ, ಚರ್ಚೆ ಮತ್ತು ಅಂಗೀಕಾರ ಎಲ್ಲವೂ ಸರ್ಕಾರದ ನಿಲುವನ್ನು ಆಧರಿಸಿಯೇ ತೀರ್ಮಾನವಾಗುತ್ತದೆ.

ನೈಸ್ ಅಕ್ರಮ ಕುರಿತ ಸದನ ಸಮಿತಿ

ಅಧ್ಯಕ್ಷ : ಟಿ.ಬಿ. ಜಯಚಂದ್ರ

ವರದಿ ಸಲ್ಲಿಕೆ : ನವೆಂಬರ್ 24, 2016

ಪುಟಗಳು : 350

ವಿದ್ಯುತ್ ಖರೀದಿ ಕುರಿತ ಸದನ ಸಮಿತಿ

ಅಧ್ಯಕ್ಷ– ಡಿ.ಕೆ. ಶಿವಕುಮಾರ್

ವರದಿ ಸಲ್ಲಿಕೆ– ನವೆಂಬರ್, 2016

ಕೆರೆ ಒತ್ತುವರಿ ತನಿಖೆಗೆ ಸದನ ಸಮಿತಿ

ಅಧ್ಯಕ್ಷ– ಕೆ.ಬಿ.ಕೋಳಿವಾಡ

ವರದಿ ಸಲ್ಲಿಕೆ– ಆಗಸ್ಟ್, 2017

ಪುಟಗಳು– 8,000

ಗಣಿ ಅಕ್ರಮ ಕುರಿತ ಸಂಪುಟ ಉಪ ಸಮಿತಿ

ಅಧ್ಯಕ್ಷ– ಎಚ್.ಕೆ. ಪಾಟೀಲ

ವರದಿ ಸಲ್ಲಿಕೆ– ಹಲವು ಕಂತುಗಳಲ್ಲಿ

ಪುಟಗಳು– ಹಲವು ಸಂಪುಟಗಳಲ್ಲಿ

ಅರ್ಕಾವತಿ ಬಡಾವಣೆ ಪ್ರಕರಣ:
ನ್ಯಾಯಾಂಗ ತನಿಖೆ

ಮುಖ್ಯಸ್ಥ– ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ

ವರದಿ ಸಲ್ಲಿಕೆ– ಆಗಸ್ಟ್ 2017

ಪುಟಗಳು– 1,861

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.