ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ | ಕೋಚಿಂಗ್‌ ಕೇಂದ್ರ: ಸೌಲಭ್ಯಗಳೇ ಇಲ್ಲ!

ವಿದ್ಯಾಕಾಶಿ ಧಾರವಾಡದಲ್ಲಿ ವ್ಯಾಪಕ ಅವ್ಯವಸ್ಥೆ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
ಅಕ್ಷರ ಗಾತ್ರ

ದೆಹಲಿಯ ಓಲ್ಡ್‌ ರಾಜಿಂದರ್‌ ನಗರದಲ್ಲಿರುವ ‘ರಾವ್ಸ್ ಐಎಎಸ್‌ ಸ್ಟಡಿ ಸರ್ಕಲ್‌’ನ ನೆಲಮಹಡಿಗೆ ಈಚೆಗೆ ಮಳೆನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟಿದ್ದರು.

ದೆಹಲಿಯ ಕೋಚಿಂಗ್ ಕೇಂದ್ರದಲ್ಲಿ ನಡೆದಿರುವ ಅನಾಹುತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ದೆಹಲಿಯಲ್ಲಿ ಇದು ಮೊದಲ ಘಟನೆಯೇನಲ್ಲ. ಹಲವು ವರ್ಷಗಳಿಂದ ಇಂಥವು ನಡೆಯುತ್ತಲೇ ಇವೆ.

ದೆಹಲಿಯಂತೆ ಬೆಂಗಳೂರೂ ಸಹ ಐಎಎಸ್‌, ಕೆಎಎಸ್‌ ಕೋಚಿಂಗ್‌ ಕೇಂದ್ರಗಳ ಹಬ್‌ ಆಗಿ ಬೆಳೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಧಾರವಾಡ ಸಹ ಇದೇ ರೀತಿ ಬೆಳವಣಿಗೆ ಕಾಣುತ್ತಿದೆ. ರಾಜ್ಯದ ರಾಜಧಾನಿಯ ಬಹುತೇಕ ಕೋಚಿಂಗ್‌ ಕೇಂದ್ರಗಳು ನೆಲ ಮಹಡಿಯಲ್ಲಿ ನೆಲೆಸಿವೆ. ಮಳೆ ನೀರು ನಗುಗ್ಗಿದರೆ, ಅಗ್ನಿ ಅವಘಡ ಸಂಭವಿಸಿದರೆ ಅಗತ್ಯ ಸುರಕ್ಷತಾ ಕ್ರಮಗಳಿಗೆ ಬಹುತೇಕ ಕಡೆ ಆದ್ಯತೆಯನ್ನೇ ನೀಡಿಲ್ಲ.

ಉಜ್ವಲ ಭವಿಷ್ಯದ ಕನಸು ಹೊತ್ತ ಯುವಕ ಯುವತಿಯರು, ತರಬೇತಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿಯೂ ಮೂರನೇ ದರ್ಜೆಯ ಮನುಷ್ಯರಂತೆ ಬದುಕಬೇಕಾಗಿ ಬಂದಿರುವುದು, ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳ ಅವ್ಯವಸ್ಥೆಗೆ ಬಲಿಪಶುಗಳಾಗುತ್ತಿರುವುದು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತಿದೆ.

ಇಂತಹ ಅವ್ಯವಸ್ಥೆಯ ಸುತ್ತ ‘ಪ್ರಜಾವಾಣಿ’ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ

****

ಧಾರವಾಡ: ‘ವಿದ್ಯಾಕಾಶಿ’ ಎಂದು ಕರೆಯುವ ಧಾರವಾಡದಲ್ಲಿ ಕೋಚಿಂಗ್‌ ಕೇಂದ್ರಗಳು ಸಾಕಷ್ಟು ಇವೆ. ಅವುಗಳ ಮಧ್ಯೆ ಪೈಪೋಟಿಯಿದ್ದು, ವಿದ್ಯಾರ್ಥಿಗಳನ್ನು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ಸೆಳೆಯಲು ನಿರಂತರವಾಗಿ ಬೇರೆ ಬೇರೆ ಸ್ವರೂಪದಲ್ಲಿ ಪ್ರಯತ್ನಿಸುತ್ತವೆ. ಆದರೆ, ಬಹುತೇಕ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಲಭ್ಯಗಳಿಲ್ಲ. ದನಿಯೆತ್ತುವ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆಯೂ ಸಿಗುತ್ತಿಲ್ಲ.

ಧಾರವಾಡದ ಸಪ್ತಾಪುರ, ಜಯನಗರ, ಶ್ರೀನಗರದಲ್ಲಿ ಹೆಚ್ಚು ಕೇಂದ್ರಗಳು ಇವೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ), ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ಮೊದಲಾದವು ನಡೆಸುವ ಸ್ಪರ್ಧಾ ಪರೀಕ್ಷೆಗಳಿಗೆ ಈ ಕೇಂದ್ರಗಳಲ್ಲಿ ತರಬೇತಿ ಸಿಗುತ್ತದೆ. ಶೇ  99ರಷ್ಟು ಕೇಂದ್ರದವರು ಅಧ್ಯಯನಕ್ಕೆ ಪೂರಕ ವಾತಾವರಣ ಕಲ್ಲಿಸಿಲ್ಲ. ವಿದ್ಯಾರ್ಥಿಗಳ ಸಂಕಷ್ಟಗಳನ್ನು ಪರಿಹರಿಸಿಲ್ಲ.

ಬಹಳಷ್ಟು ಕೇಂದ್ರಗಳು ಸರ್ಕಾರದಲ್ಲಿ ನೋಂದಣಿಯನ್ನೂ ಮಾಡಿಸಿಲ್ಲ. ನೋಂದಣಿ ಪ್ರಕ್ರಿಯೆ ಜವಾಬ್ದಾರಿಯನ್ನು ಕಾಲೇಜು ಶಿಕ್ಷಣ ಇಲಾಖೆ ವಹಿಸಲಾಗಿದೆ. ಈ ಇಲಾಖೆಯು ನೋಂದಣಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.

ಧಾರವಾಡದ ಕೋಚಿಂಗ್ ಕೇಂದ್ರವೊಂದರ ಹೊರ ಆವರಣ

ಧಾರವಾಡದ ಕೋಚಿಂಗ್ ಕೇಂದ್ರವೊಂದರ ಹೊರ ಆವರಣ

ನಗರದಲ್ಲಿ ಸ್ಪರ್ಧಾ ಪರೀಕ್ಷೆ ತರಬೇತಿ ಕೇಂದ್ರಗಳು 180 ಕ್ಕೂ ಹೆಚ್ಚು ಇವೆ. ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದ ಕಟ್ಟಡ, ಮನೆ, ತಗಡಿನ ಶೆಡ್‌ಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಹಲವು ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕಿಟಕಿಗಳು ಇಲ್ಲ. ರಭಸವಾಗಿ ಗಾಳಿ ಬೀಸಿದರೆ ಬೀಳುವಂಥ ಸ್ಥಿತಿಯಲ್ಲಿರುವ ಶೆಡ್‌ಗಳಲ್ಲೂ ಕೇಂದ್ರಗಳಿವೆ. ಕೆಲ ಕೇಂದ್ರಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಶೌಚಾಲಯದ ವ್ಯವಸ್ಥೆ ಇದೆ!

ಮಳೆ ಸುರಿದಾಗ ತಗಡಿನ ಚಾವಣಿಯ ಶೆಡ್‌ಗಳಲ್ಲಿ ‘ಟಪ್... ಟಪ್...’ ಶಬ್ದದ ಕಿರಿಕಿರಿ ಉಂಟಾಗುತ್ತದೆ. ಕೆಲ ಕಟ್ಟಡಗಳು ಸೋರುತ್ತವೆ. ನೆಲದ ಪೂರ್ತಿ ನೀರು ಆವರಿಸಿಕೊಳ್ಳುತ್ತದೆ. ತರಗತಿ ಕೊಠಡಿಯಲ್ಲಿನ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಬೆಳಿಗ್ಗೆಯಿಂದ ರಾತ್ರಿವರೆಗೆ (ಸುಮಾರು 10 ಗಂಟೆ) ಅಭ್ಯರ್ಥಿಗಳು ಇಂಥ ಅವ್ಯವಸ್ಥೆಯಲ್ಲೇ ಪಾಠ ಆಲಿಸಬೇಕು.

ಒಂದು ಅಂದಾಜಿನ ಪ್ರಕಾರ, ಧಾರವಾಡದಲ್ಲಿ ಸುಮಾರು 25 ಸಾವಿರ ಸ್ಪರ್ಧಾರ್ಥಿಗಳು ಇದ್ದಾರೆ. ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ರಾಯಚೂರು ಜಿಲ್ಲೆಯವರು ಇದ್ದಾರೆ. ಈ ಪೈಕಿ ಗ್ರಾಮೀಣ ಪ್ರದೇಶದವರೇ ಹೆಚ್ಚು. ಐಎಎಸ್‌, ಐಪಿಎಸ್‌, ಐಆರ್‌ಎಸ್‌, ಐಎಫ್‌ಎಸ್‌ಗೆ ದಾರಿ ತೋರುವ ಯುಪಿಎಸ್‌ಸಿ ಮತ್ತು ಕೆಎಎಸ್‌, ಪಿಎಸ್‌ಐ ಮೊದಲಾದ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವ ಕನಸು ಕಟ್ಟಿ, ತಯಾರಿಯಲ್ಲಿ ತೊಡಗಿದ್ದಾರೆ.

‘ಯದ್ವಾತದ್ವಾ’ ಶುಲ್ಕ ವಸೂಲಿ:

ಕೇಂದ್ರಗಳು ಯದ್ವತದ್ವಾ ಶುಲ್ಕ ವಸೂಲಿ ಮಾಡುತ್ತಿವೆ. ಸ್ಪರ್ಧಾ ಪರೀಕ್ಷೆ (ಯಪಿಎಸ್‌ಸಿ, ಕೆಪಿಎಸ್‌ಸಿ...) ಆಧರಿಸಿ ಶುಲ್ಕದಲ್ಲಿ ವ್ಯತ್ಯಾಸ ಇರುತ್ತದೆ.

‘ಲೋಕಸೇವಾ ಪರೀಕ್ಷೆಗೆ ಕೆಲವು ಕೇಂದ್ರಗಳು ತಿಂಗಳಿಗೆ ₹50ಸಾವಿರ, ಕೆಲ ಕೇಂದ್ರಗಳು ಇನ್ನೂ ಹೆಚ್ಚು ವಸೂಲಿ ಮಾಡುತ್ತಿವೆ. ಪಿಎಸ್‌ಐ, ಪಿಡಿಒ ಮೊದಲಾದ ಪರೀಕ್ಷೆಗಳಿಗೆ ₹15ಸಾವಿರದಿಂದ ₹35 ಸಾವಿರ ವರೆಗೆ ವಸೂಲು ಮಾಡುತ್ತವೆ. ಮೂರು ತಿಂಗಳು ತರಬೇತಿ ನೀಡುತ್ತವೆ’ ಎಂದು ಕೋಚಿಂಗ್ ಕೇಂದ್ರವೊಂದರ ಬೋಧಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಧಾರವಾಡದ ಕೋಚಿಂಗ್ ಕೇಂದ್ರವೊಂದರಲ್ಲಿ ತರಗತಿ ನಡೆದಿರುವುದು

ಧಾರವಾಡದ ಕೋಚಿಂಗ್ ಕೇಂದ್ರವೊಂದರಲ್ಲಿ ತರಗತಿ ನಡೆದಿರುವುದು

ಏಜೆಂಟ್‌– ಕಮಿಷನ್‌ ದಂಧೆ:

ಸ್ಪರ್ಧಾರ್ಥಿಗಳನ್ನು ಕೇಂದ್ರಗಳಿಗೆ ದಾಖಲು ಮಾಡಿಸಲು ಏಜೆಂಟ್‌ಗಳು ಇದ್ದಾರೆ. ಈ ಏಜೆಂಟ್‌ಗಳಿಗೆ ಕೇಂದ್ರಗಳಿಗೆ ಕಮಿಷನ್‌ (ಶುಲ್ಕದಲ್ಲಿ ಶೇ 10 ಪಾಲು) ನೀಡುತ್ತವೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಈ ಏಜೆಂಟ್‌ಗಳು ಇದ್ಧಾರೆ. ಇಂತಹದ್ದೊಂದು ವ್ಯವಸ್ಥಿತ ಜಾಲವೇ (ರಾಕೆಟ್‌) ಇದೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಆರೋಪಿಸಿದರು.

ಕೇಂದ್ರಗಳಲ್ಲಿ ಬೋಧಿಸುವವರಲ್ಲಿ ಹಲವರು ಅನರ್ಹರು ಇದ್ದಾರೆ. ಐಎಎಸ್‌, ಕೆಎಎಸ್‌ ಪ‍ರೀಕ್ಷೆ ಎದುರಿಸಿ ವಿಫಲರಾದವರು ಬೋಧನೆಯಲ್ಲಿ ತೊಡಗಿದ್ದಾರೆ. ಕೆಲವರು ಬೇರೆ ಬೇರೆ ಊರುಗಳಿಂದ ಬಂದು ಹೋಗುತ್ತಾರೆ.

‘ಸ್ನಾತಕೋತ್ತರ ಪದವಿ, ಸಂಶೋಧನಾ ವಿದ್ಯಾರ್ಥಿಗಳು ಬೋಧಿಸುತ್ತಾರೆ. ಕೆಲವರಿಗೆ ವಿಷಯದ ಬಗ್ಗೆ ಆಳ ಜ್ಞಾನ ಇರುವುದಿಲ್ಲ. ಹೊಸ ಪಠ್ಯಕ್ರಮಕ್ಕೆ ತಕ್ಕಂತೆ ಮಾಹಿತಿ ಪಡೆದಿರುವುದಿ‌ಲ್ಲ.  ಒಂದೇ ರೀತಿಯಲ್ಲಿ ಬಾಯಿಪಾಠದಂತೆ ಪಾಠ ಮಾಡುತ್ತಾರೆ. ಮೂರು ತಿಂಗಳಲ್ಲಿ ಎಲ್ಲ ಪಾಠ ಮುಗಿಸಲ್ಲ. ಅನರ್ಹರಿಂದಲೂ ಪಾಠ ಕೇಳಬೇಕಾದ ಸ್ಥಿತಿ ಇದೆ’ ಎಂದು ಸ್ಪರ್ಧಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಧಾರವಾಡದ ಕೋಚಿಂಗ್ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು

ಧಾರವಾಡದ ಕೋಚಿಂಗ್ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು

ಕೋಚಿಂಗ್‌ ಕೇಂದ್ರ ನಡೆಸುವುದು ಹಣ ಗಳಿಕೆ ದಂಧೆಯಾಗಿದೆ. ಶೌಚಾಲಯವೂ ಇಲ್ಲದ ಕೇಂದ್ರಗಳು ಇವೆ. ಈ ಕೇಂದ್ರಗಳ ಮೇಲೆ ಯಾರ ಹಿಡಿತವೂ ಇಲ್ಲ
ಈರೇಶ ಅಂಚಟಗೇರಿ, ಸದಸ್ಯ, ಹುಬ್ಭಳ್ಳಿ–ಧಾರವಾಡ ಮಹಾನಗರ ಪಾಲಿಕೆ
ಒಳಗಿನ ಗಾಳಿ ಹೊರಗೆ, ಹೊರಗಿನ ಗಾಳಿ ಒಳಕ್ಕೆ ಬಾರದಂತಹ ಸ್ಥಿತಿ ಇರುವ ಕೊಠಡಿಗಳು ಇವೆ. ಕೊಠಡಿಗಳಲ್ಲಿ ಕಿಟಕಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ
ದೇವರಾಜ್‌ ದೊರೆ, ಸ್ಪರ್ಧಾರ್ಥಿ, ಧಾರವಾಡ
ಕಟ್ಟಡ ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಅಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತದೆ. ಕೇಂದ್ರ ತೆರೆಯಲು ಸ್ಪಷ್ಟ ಮಾರ್ಗಸೂಚಿ ಇಲ್ಲ. ಸರ್ಕಾರ ನಿಗಾ ವಹಿಸಬೇಕು
ಪ್ರಭಾಕರ ಕಾಂಬ್ಳೆ, ಬೋಧಕ, ಕರ್ನಾಟಕ ಕಾಲೇಜು, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT