ಬೆಂಗಳೂರು: ಸೂಟು–ಬೂಟು ತೊಟ್ಟು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೆಲ್ಲನೆ ಹೊರಬರುತ್ತಿದ್ದ ಪ್ರಯಾಣಿಕರಿಬ್ಬರ ನಡಿಗೆ ವಿಚಿತ್ರವಾಗಿತ್ತು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಇಬ್ಬರನ್ನೂ ವಿಶೇಷ ಕೊಠಡಿಗೆ ಕರೆದೊಯ್ದು ವೈದ್ಯರಿಂದ ತಪಾಸಣೆ ಮಾಡಿಸಿದರು. ನಂತರ, ಆಶ್ವರ್ಯ ಕಾದಿತ್ತು. ಇಬ್ಬರು ಪ್ರಯಾಣಿಕರ ಗುದದ್ವಾರದಲ್ಲಿ ಒಟ್ಟಾರೆ 1 ಕೆ.ಜಿ 334 ಗ್ರಾಂ ಚಿನ್ನವಿತ್ತು.

ಥಾಯ್ಲೆಂಡ್ನಿಂದ ವಿಮಾನದಲ್ಲಿ ಬಂದಿಳಿದಿದ್ದ ಪ್ರಯಾಣಿಕನೊಬ್ಬ ಪದೇ ಪದೇ ಒಳ ಉಡುಪು ಸರಿಪಡಿಸಿಕೊಳ್ಳುತ್ತಿದ್ದ. ಆತನ ವರ್ತನೆಯಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ, ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲೇ 1 ಕೆ.ಜಿ 70 ಗ್ರಾಂ ಚಿನ್ನ ಸಿಕ್ಕಿತ್ತು.

ಇದು ಒಂದೆರಡು ಉದಾಹರಣೆ ಮಾತ್ರ. ಬೆಂಗಳೂರು, ಮಂಗಳೂರು ಹಾಗೂ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿತ್ಯವೂ ಚಿನ್ನ ಅಕ್ರಮ ಸಾಗಣೆ ಪ್ರಕರಣಗಳು ವರದಿಯಾಗುತ್ತಿವೆ. ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಹಾಗೂ ಕಸ್ಟಮ್ಸ್ ಗುಪ್ತದಳದ ಅಧಿಕಾರಿಗಳು, ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಿ ಕಳ್ಳ ಸಾಗಣೆದಾರರನ್ನು ಪತ್ತೆ ಮಾಡುತ್ತಿದ್ದಾರೆ. ಆದರೂ ಕೆಲವರು ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ, ನಾನಾ ಕಳ್ಳ ಮಾರ್ಗಗಳ ಮೂಲಕ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾಫಿಯಾಗಳು ಚಿನ್ನ ಅಕ್ರಮ ಸಾಗಣೆಯಲ್ಲಿ ಸಕ್ರಿಯವಾಗಿದ್ದು, ಪ್ರತಿ ವರ್ಷವೂ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹಳದಿ ಲೋಹವನ್ನು ಕಳ್ಳಮಾರ್ಗದಲ್ಲಿ ಸಾಗಾಣೆ ಮಾಡುತ್ತಿವೆ. ಅಕ್ರಮ ಹಣ ವರ್ಗಾವಣೆ ದಂಧೆಗೂ ಚಿನ್ನವನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ, ಚಿನ್ನ ಅಕ್ರಮ ಸಾಗಣೆಯಿಂದ ಬರುವ ಹಣದಲ್ಲಿ ಭಯೋತ್ಪಾದನಾ ಸಂಘಟನೆಗಳಿಗೂ ಪಾಲು ಹೋಗುತ್ತಿರುವ ಮಾಹಿತಿಯೂ ಇದೆ.

ಮುಂಬೈ ನಿಲ್ದಾಣದಲ್ಲೇ ಹೆಚ್ಚು:

ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಚಿನ್ನ ಜಪ್ತಿ ಮಾಡಲಾಗಿದೆ. ಚಿನ್ನ ಕಳ್ಳಸಾಗಣೆಯಲ್ಲಿ ಮುಂಬೈ ನಿಲ್ದಾಣ ಮೊದಲ ಸ್ಥಾನದಲ್ಲಿದೆ. ದೆಹಲಿ, ಚೆನ್ನೈ, ಹೈದರಾಬಾದ್, ಬೆಂಗಳೂರು, ಮಂಗಳೂರು ನಂತರ ಸ್ಥಾನಗಳಲ್ಲಿವೆ ಎಂಬುದು ಅಂಕಿ–ಅಂಶಗಳ ಮೂಲಕ ತಿಳಿಯುತ್ತದೆ.

ಚೀನಾದ ನಂತರ ಭಾರತದಲ್ಲಿ ಚಿನ್ನಕ್ಕೆ ಅತಿ ಹೆಚ್ಚು ಬೇಡಿಕೆ ಇದೆ. ಸಾಂಪ್ರದಾಯಿಕ ಆಚರಣೆ, ಮದುವೆ, ಶುಭ ಸಮಾರಂಭ, ಹಬ್ಬ–ಹರಿದಿನ, ವಿಶೇಷ ದಿನಗಳಲ್ಲಿ ಬಹುತೇಕರು ಚಿನ್ನದ ಆಭರಣ ಧರಿಸಲು ಇಷ್ಟಪಡುತ್ತಾರೆ. ಕೆಲವರಿಗಂತೂ ಚಿನ್ನ ಧರಿಸುವುದೇ ಪ್ರತಿಷ್ಠೆ ಆಗಿದೆ. ರಿಯಲ್ ಎಸ್ಟೇಟ್ ವಹಿವಾಟಿನಲ್ಲಿರುವ ಕೆಲವರು ಚಿನ್ನ ಪ್ರದರ್ಶನ ಇಷ್ಟಪಡುತ್ತಾರೆ. ಈ ಹಲವು ಕಾರಣಕ್ಕೆ, ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಸಿ ಅಕ್ರಮ ಸಾಗಣೆ ಮೂಲಕ ಹೆಚ್ಚು ಹಣ ಸಂಪಾದಿಸಲು ಮಾಫಿಯಾಗಳು ಹುಟ್ಟಿಕೊಂಡಿವೆ ಎಂಬುದು ಡಿಆರ್ಐ ಅಧಿಕಾರಿಗಳ ಅಭಿಪ್ರಾಯ.

ಚಿನ್ನದ ಕಾನೂನುಬದ್ಧ ಆಮದು ಜೊತೆಯಲ್ಲಿ ಅಕ್ರಮ ಸಾಗಣೆಯೂ ಕ್ರಮೇಣ ಹೆಚ್ಚಾಗುತ್ತಿದೆ. ಡಿಆರ್ಐ ಹಾಗೂ ಕಸ್ಟಮ್ಸ್ ಸಿಬ್ಬಂದಿ, ಅಕ್ರಮ ಸಾಗಣೆ ತಡೆಗೆ ಹೆಚ್ಚು ನಿಗಾ ವಹಿಸಿದ್ದಾರೆ. ಆದರೆ, ಕಳ್ಳ ಸಾಗಣೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ.

ಮೂರು ಮಾರ್ಗದಲ್ಲೂ ಕಳ್ಳ ಸಾಗಣೆ:

ಜಲ, ಭೂ ಹಾಗೂ ವಾಯು ಮಾರ್ಗಗಳ ಮೂಲಕ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮೂರು ಮಾರ್ಗಗಳಲ್ಲೂ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದರೂ ಅಕ್ರಮ ಸಾಗಣೆಗೆ ಅಂಕುಶ ಬಿದ್ದಿಲ್ಲ. ಸರ್ಕಾರದ ಕೆಲ ಅಧಿಕಾರಿಗಳು ಹಾಗೂ ಪ್ರಭಾವಿಗಳು, ಮಾಫಿಯಾದವರಿಗೆ ಸಹಕಾರ ನೀಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವೆಂಬ ಮಾತುಗಳಿವೆ.

ಮೂರು ಮಾರ್ಗದಲ್ಲೂ ಭದ್ರತೆ ಬಿಗಿ ಇದೆ. ಇದರ ನಡುವೆಯೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಭದ್ರತೆ ಹೊಣೆ ಹೊತ್ತಿರುವ ಕೆಲ ಸಿಬ್ಬಂದಿ ಸಹ ಅಕ್ರಮ ಚಿನ್ನ ಸಾಗಣೆಗೆ ನೆರವು ನೀಡುತ್ತಿದ್ದಾರೆ. ತಪಾಸಣೆ ಕಾರ್ಯವನ್ನು ಸಮರ್ಪಕವಾಗಿ ನಡೆಸದೆ ಚಿನ್ನ ಕಳ್ಳಸಾಗಣೆಗೆ ಸಹಾಯ ನೀಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಮಾಫಿಯಾ ಜೊತೆ ಕೈ ಜೋಡಿಸುತ್ತಿರುವ ಸಿಬ್ಬಂದಿಗಳಲ್ಲಿ ಕೆಲವರು ಸಿಕ್ಕಿಬೀಳುತ್ತಿದ್ದಾರೆ. ಅವರನ್ನು ಅಮಾನತು ಮಾತ್ರ ಮಾಡಲಾಗುತ್ತಿದ್ದು, ಆದರೆ ಕಾನೂನಿನಲ್ಲಿರುವ ಲೋಪದಿಂದ ಕ್ರಿಮಿನಲ್ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ. ಇಂಥ ಸಿಬ್ಬಂದಿ, ಪುನಃ ಮಾಫಿಯಾದವರಿಗೆ ನೆರವಾಗುತ್ತಿರುವ ಬಗ್ಗೆ ದೂರುಗಳೂ ಕೇಳಿಬಂದಿವೆ. ಇದಕ್ಕೆ ಪುರಾವೆ ಎಂಬಂತೆ, ಚಿನ್ನ ಸಾಗಣೆ ಮಾಫಿಯಾ ಜೊತೆ ಭಾಗಿಯಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ಆರೋಪದಡಿ ಕಸ್ಟಮ್ಸ್ ಇಲಾಖೆಯ ಆರು ಅಧಿಕಾರಿಗಳ ವಿರುದ್ಧ ಸಿಬಿಐ ಇದೇ ಆಗಸ್ಟ್ನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

ರಾಯಗಡದ ಜವಾಹರಲಾಲ್ ನೆಹರೂ ಕಸ್ಟಮ್ಸ್ ಹೌಸ್ನಲ್ಲಿ (ಜೆಎನ್ಸಿಎಚ್) ಉದ್ಯೋಗಿಯಾಗಿದ್ದ ಅಧೀಕ್ಷಕ ಮಯಾಂಕ್ ಸಿಂಗ್ ಸೇರಿದಂತೆ ಆರು ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆದಿತ್ತು. ದಾಳಿ ಬೆನ್ನಲ್ಲೇ ಮಯಾಂಕ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಹಲವು ಮಾಹಿತಿಗಳು ಇನ್ನೂ ನಿಗೂಢವಾಗಿವೆ.

ಚಿನ್ನ ಕಳ್ಳಸಾಗಣೆ ಮಾಡುವವರು ಮಾತ್ರ ತಪಾಸಣೆ ವೇಳೆ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಆದರೆ, ಮಾಫಿಯಾದ ಪ್ರಮುಖರು ಯಾರು ? ಅವರು ಹೇಗೆ ಕೆಲಸ ಮಾಡುತ್ತಾರೆ ? ಎಂಬುದನ್ನು ನಿರ್ದಿಷ್ಟವಾಗಿ ಪತ್ತೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.

ಕಳ್ಳ ಸಾಗಣೆ ಹೇಗೆ ?:

ಕೆಲ ದೇಶಗಳಲ್ಲಿ ಭಾರತದ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಲಭ್ಯವಾಗುತ್ತದೆ. ಅಂತಹ ಕಡೆಗಳಲ್ಲಿ ಚಿನ್ನವನ್ನು ಖರೀದಿಸುವ ಮಾಫಿಯಾದ ಸದಸ್ಯರು, ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದಾರೆ. ಇಂಥ ಚಿನ್ನವನ್ನು ಭಾರತದ ಮಾರುಕಟ್ಟೆ ಮೌಲ್ಯಕ್ಕಿಂತ ಕೊಂಚ ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ವ್ಯಕ್ತಿಗಳನ್ನು ಬಳಸಿ ಹಾಗೂ ಅಂಚೆ ಮೂಲಕ ನಡೆಯುತ್ತಿದ್ದ ಕಳ್ಳ ಸಾಗಣೆ, ಇದೀಗ ನಾನಾ ಸ್ವರೂಪ ಪಡೆದುಕೊಂಡಿದೆ.

ಗುದದ್ವಾರ, ಮಹಿಳೆಯರ ಗುಪ್ತಾಂಗ ಹಾಗೂ ಚಿನ್ನದ ಬಿಸ್ಕತ್–ಉಂಡೆಗಳನ್ನು ನುಂಗಿ ಕರುಳಿನಲ್ಲಿ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಗೊಂಬೆಗಳು, ಆಟಿಕೆ ವಸ್ತುಗಳು, ಯಂತ್ರಗಳು, ಪಾತ್ರೆಗಳು, ಉಪಕರಣ, ಸೂಟ್ಕೇಸ್ ಒಳಗೆ ಹಾಳೆಗಳ ರೀತಿಯಲ್ಲೋ, ಲೋಹದ ಕೈಹಿಡಿಕೆ ಬದಲು ಚಿನ್ನದ ಹಿಡಿಕೆ ಹಾಕಿ ಮತ್ತು ಗುಜರಿ ವಸ್ತುಗಳಲ್ಲೂ ಚಿನ್ನವನ್ನು ಅಕ್ರಮವಾಗಿ ಬಚ್ಚಿಟ್ಟು ಕೋರಿಯರ್ ಮೂಲಕ ರವಾನಿಸಲಾಗುತ್ತಿದೆ.

ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮಾಫಿಯಾದ ಅತೀ ಹೆಚ್ಚು ಮಂದಿ, ಕೋರಿಯರ್ ಹಾಗೂ ಸರಕು ಸಾಗಣೆಯ (ಕಾರ್ಗೊ) ಕಳ್ಳದಾರಿಯ ಮೊರೆ ಹೋಗುತ್ತಿದ್ದಾರೆ. ಇಂಥ ಪ್ರಕರಣಗಳನ್ನೂ ಭೇದಿಸುತ್ತಿರುವ ಭದ್ರತಾ ಸಿಬ್ಬಂದಿ, ದಾಳಿಗಳನ್ನು ನಡೆಸಿ ಚಿನ್ನವನ್ನು ಜಪ್ತಿ ಮಾಡುತ್ತಿದ್ದಾರೆ.

ವಿಮಾನ ನಿಲ್ದಾಣ, ಬಂದರು ಹಾಗೂ ಗಡಿ ಭಾಗಗಳಲ್ಲಿ ಅಕ್ರಮ ಸಾಗಣೆ ಪತ್ತೆಗೆ ಸುಧಾರಿತ ಉಪಕರಣ ಬಳಸಲಾಗುತ್ತಿದೆ. ಅದರಲ್ಲೂ ವಿಮಾನ ನಿಲ್ದಾಣಗಳಲ್ಲಿ ವ್ಯಕ್ತಿಯ ದೇಹವನ್ನು ಸಂಪೂರ್ಣವಾಗಿ ಸ್ಕ್ಯಾನ್ ಮಾಡುವ ಯಂತ್ರಗಳಿವೆ. ಹೀಗಾಗಿ, ಕಳ್ಳಸಾಗಣೆದಾರರು ನಿಲ್ದಾಣಗಳಲ್ಲಿ ಸಿಕ್ಕಿಬೀಳುತ್ತಿದ್ದಾರೆ ಎಂಬುದು ಭದ್ರತಾ ಸಿಬ್ಬಂದಿ ಮಾತು.

ಮಹಿಳೆಯರ ಬಳಕೆ:

ಇತ್ತೀಚಿನ ದಿನಗಳಲ್ಲಿ ಹಣದ ಆಮಿಷವೊಡ್ಡಿ ಚಿನ್ನ ಸಾಗಣೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ. ರಬ್ಬರ್ ಪೊಟ್ಟಣದಲ್ಲಿ ಚಿನ್ನದ ಬಿಸ್ಕತ್ ಹಾಗೂ ಉಂಡೆಯನ್ನು ಹಾಕಿ, ಅಂಥ ಪೊಟ್ಟಣವನ್ನು ಮಹಿಳೆಯರ ಗುಪ್ತಾಂಗಗಳಲ್ಲಿ ಇರಿಸಿ ಸಾಗಿಸಲಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡಲಾಗುತ್ತದೆ. ಅವರನ್ನು ಹೆಚ್ಚು ತಪಾಸಣೆಗೆ ಒಳಪಡಿಸುವುದಿಲ್ಲವೆಂಬುದು ಮಾಫಿಯಾದವರ ಲೆಕ್ಕಾಚಾರ. ಆದರೆ, ಅನುಮಾನ ಬಂದರೆ ಮಹಿಳೆಯರನ್ನೂ ತಪಾಸಣೆ ಮಾಡಲಾಗುತ್ತದೆ. ಇದಕ್ಕಾಗಿ ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಭಾರತೀಯ ಪ್ರಜೆಗಳು, ದೇಶದೊಳಗಿನ ಚಿನ್ನ ಸಾಗಣೆ ಮಾಫಿಯಾದಲ್ಲಿ ಗುರುತಿಸಿಕೊಂಡಿದ್ದರು. ಇದೀಗ, ಆಫ್ರಿಕಾ, ಯುಎಇ, ಮಾಲ್ಡೀವ್ಸ್, ಶ್ರೀಲಂಕಾ ಹಾಗೂ ಇತರ ದೇಶಗಳ ಪ್ರಜೆಗಳು ಮಾಫಿಯಾದಲ್ಲಿದ್ದಾರೆ. ತಮ್ಮದೇ ತಂಡ ಕಟ್ಟಿಕೊಂಡು, ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರವು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಆಮದಿನ ಮೇಲೆ ಶೇ 12.5ರಷ್ಟು ಸುಂಕ ವಿಧಿಸುತ್ತಿದೆ. ಇದರ ಮೇಲೆ ಶೇ 3ರಷ್ಟು ಜಿಎಸ್ಟಿ ಪಾವತಿಸಬೇಕಿದೆ. ಜೊತೆಗೆ, ಮಾರಾಟಗಾರರ ಕಮಿಷನ್ ಸಹ ಇದೆ. ಒಟ್ಟಾರೆಯಾಗಿ ಚಿನ್ನ ಖರೀದಿಸುವ ಗ್ರಾಹಕರು, ಚಿನ್ನದ ಮೂಲ ಬೆಲೆಗಿಂತ ಶೇ 18.45ರಷ್ಟು ದರವನ್ನು ಹೆಚ್ಚವರಿಯಾಗಿ ಪಾವತಿಸಬೇಕಿದೆ. ಇದೇ ಕಾರಣಕ್ಕೆ, ಹಲವರು ಕಾಳಸಂತೆಯಲ್ಲಿ ಚಿನ್ನವನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.

7 ವರ್ಷ ಜೈಲು ಶಿಕ್ಷೆ:

ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಸಿಕ್ಕಿ ಬೀಳುವವರ ವಿರುದ್ಧ ಕಸ್ಟಮ್ಸ್ ಕಾಯ್ದೆ, ಚಿನ್ನ (ನಿಯಂತ್ರಣ) ಕಾಯ್ದೆ ಹಾಗೂ ವಿದೇಶಿ ಪ್ರಜೆಗಳ ಕಾಯ್ದೆಯಡಿ ಕ್ರಮ ಜರುಗಿಸಬಹುದಾಗಿದೆ. ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲೂ ಕಾನೂನಿನಲ್ಲಿ ಅವಕಾಶವಿದೆ ಎಂದು ಕಾನೂನು ತಜ್ಞರು ತಿಳಿಸಿದರು.

ಪುರುಷ ಪ್ರಯಾಣಿಕ ₹ 50 ಸಾವಿರ ಮೌಲ್ಯದ ಚಿನ್ನವನ್ನು ಖರೀದಿಸಿ ತರಬಹುದು. ಮಹಿಳಾ ಪ್ರಯಾಣಿಕರು ₹ 1 ಲಕ್ಷ ಮೌಲ್ಯದ ಚಿನ್ನಾಭರಣ ಖರೀದಿಸಿ ತರಬಹುದು. ಆದರೆ, ರಶೀದಿ ಹೊಂದಿರುವುದು ಕಡ್ಡಾಯ. ಕಾಲ ಕಾಲಕ್ಕೆ ಈ ನಿಯಮದಲ್ಲಿ ಬದಲಾವಣೆಯೂ ಆಗುತ್ತಿರುತ್ತದೆ ಎಂದು ಅವರು ಹೇಳಿದರು.

ಮಂಗಳೂರಿಗೆ ಕೊಲ್ಲಿ ರಾಷ್ಟ್ರಗಳಿಂದ ಕಳ್ಳಸಾಗಣೆ:

ರಾಜ್ಯದ ಕರಾವಳಿ ಪ್ರದೇಶದ ಲಕ್ಷಾಂತರ ಮಂದಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಬಜಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಎಂಐಎ)ದಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಪರ್ಕವೂ ಚೆನ್ನಾಗಿದೆ. ವಿಸಿಟಿಂಗ್ ವೀಸಾ ಪಡೆದು ಸಾಕಷ್ಟು ಮಂದಿ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ಬರುತ್ತಾರೆ. ಪ್ರಯಾಣಿಕರ ಸಂಖ್ಯೆ ಒಂದೇ ಸಮನೆ ಏರುತ್ತಿರುವ ಕಾರಣದಿಂದ ಕಸ್ಟಮ್ಸ್ ಅಧಿಕಾರಿಗಳಿಗೆ ನಿಗಾ ವಹಿಸುವುದು ಸಮಸ್ಯೆಯಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯುವ ಚಿನ್ನ ಕಳ್ಳಸಾಗಣೆ ದಂಧೆಕೋರರು ವಿಮಾನ ನಿಲ್ದಾಣವನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಾರೆ. ಮಂಗಳೂರು ನಿಲ್ದಾಣದಲ್ಲಿ ಈ ವರ್ಷದ ಜನವರಿಯಲ್ಲಿ 13 ಆರೋಪಿಗಳಿಂದ ₹ 2.92 ಕೋಟಿ ಮೌಲ್ಯದ 4,294 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.

ಕರಾವಳಿ ಪ್ರದೇಶದಲ್ಲಿ ಚಿನ್ನದ ಬಳಕೆಯೂ ಜಾಸ್ತಿ. ಹಾಗಾಗಿ ಇಲ್ಲಿ ಚಿನ್ನಾಭರಣ ವಹಿವಾಟು ಜಾಸ್ತಿ. ಕರಾವಳಿಯ ಮಂಗಳೂರು, ಉಡುಪಿ ನಗರಗಳಲ್ಲಿ ಅಕ್ಕಸಾಲಿಗರ ಸಂಖ್ಯೆಯೂ ಹೆಚ್ಚು. ಯಾವುದೇ ರಶೀದಿ ಮತ್ತಿತರ ದಾಖಲೆಗಳಿಲ್ಲದ ಚಿನ್ನವನ್ನು ಖರೀದಿಸುವವರ ಸಂಖ್ಯೆಯೂ ಇಲ್ಲಿ ಹೆಚ್ಚು. ಹಾಗಾಗಿ ಕಳ್ಳಸಾಗಣೆಯಾದ ಚಿನ್ನವನ್ನು ಮಾರಾಟ ಮಾಡುವುದು ಇಲ್ಲಿ ಸುಲಭ. ಹಾಗಾಗಿ ಎಂಐಎ ಮೂಲಕ ಚಿನ್ನ ಕಳ್ಳಸಾಗಣೆಯಾಗುವುದು ಜಾಸ್ತಿ.

ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ಕೆಲವೊಂದು ಪ್ರಕರಣಗಳನ್ನು ಭೇದಿಸಲು ಕಸ್ಟಮ್ಸ್ ಹಾಗೂ ಡಿಆರ್ಐ ಅಧಿಕಾರಿಗಳು ಯಶಸ್ವಿಯಾದರೂ, ಈ ದಂಧೆಯನ್ನು ನಡೆಸುವವರನ್ನು ಪತ್ತೆ ಹಚ್ಚುವುದು ಬಹಳ ಕಷ್ಟ. ಚಿನ್ನ ಕಳ್ಳಸಾಗಣೆ ಮಾಡುವ ಬಹುತೇಕರಿಗೆ ಅದನ್ನು ಕೊಲ್ಲಿ ರಾಷ್ಟ್ರಗಳಿಂದ ಇಲ್ಲಿಗೆ ತಲುಪಿಸುವ ಕೆಲಸವನ್ನಷ್ಟೇ ವಹಿಸಲಾಗಿರುತ್ತದೆ. ಅದನ್ನು ತಮಗೆ ನೀಡಿದವರು ಯಾರು. ಅದು ಯಾರಿಗೆ ತಲುಪುತ್ತದೆ ಎಂಬ ಮಾಹಿತಿಯೇ ಅವರಿಗೆ ಗೊತ್ತಿರುವುದಿಲ್ಲ. ಅವರಿಗೆ ಒಪ್ಪಿಸಿದ ಕೆಲಸಕ್ಕೆ ನಿರ್ದಿಷ್ಟ ಮೊತ್ತದ ಕಮಿಷನ್ ನೀಡಲಾಗುತ್ತದೆ.

ಕಳ್ಳಸಾಗಣೆಯಾಗುವ ಚಿನ್ನವನ್ನು ರೂಪಾಂತರ ಮಾಡುವ ಸಣ್ಣ ಉದ್ದಿಮೆಗಳೂ ಕೊಲ್ಲಿ ರಾಷ್ಟ್ರಗಳಲ್ಲಿವೆ. ಸೂಟ್ಕೇಸ್ ಬ್ಯಾಗ್ನ ಹಿಡಿಕೆ, ಪ್ಯಾಂಟಿನ ಹುಕ್ಸ್, ಪೇಸ್ಟ್, ಫ್ಯಾನ್ನ ಗ್ರಿಲ್, ಪಾದರಕ್ಷೆಯ ಸೋಲ್.. ಇವುಗಳಲ್ಲಿ ಹೀಗೆ ನಾನಾ ಬಗೆಯಲ್ಲಿ ಚಿನ್ನವನ್ನು ರೂಪಾಂತರ ಮಾಡಲಾಗುತ್ತದೆ. ಕಸ್ಟಮ್ಸ್ ಹಾಗೂ ಡಿಆರ್ಐ ಅಧಿಕಾರಿಗಳು ಇಂತಹ ಒಂದು ಪ್ರಕರಣವನ್ನು ಭೇದಿಸಿದರೆ, ಕಳ್ಳಸಾಗಣೆ ದಂಧೆ ನಡೆಸುವವರು ಬೇರೊಂದು ಮಾರ್ಗವನ್ನು ಹುಡುಕುತ್ತಾರೆ. ಹಾಗಾಗಿ ಅಧಿಕಾರಿಗಳೂ ಸದಾ ಕಳ್ಳಸಾಗಣೆಯ ಹೊಸ ಹೊಸ ಮಾರ್ಗೋಪಾಯಗಳ ಬಗ್ಗೆಯೂ ತಿಳಿದುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ.

ಕೊಂಚ ಕಡಿಮೆ ದರದಲ್ಲಿ ಸಿಗುವ ಹಳದಿ ಲೋಹದ ಆಸೆ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಏರುವ ಬೆಲೆ ನಿಯಂತ್ರಣಕ್ಕೆ ಬರುವ ತನಕ ಕಳ್ಳಸಾಗಾಣೆ ಹಾಗೂ ಕಸ್ಟಮ್ಸ್ನ ಕಣ್ಣಾಮುಚ್ಚಾಲೆ ನಡೆಯುತ್ತಲೇ ಇರುತ್ತದೆ.

ವಿಮಾನ ನಿಲ್ದಾಣವಾರು ಚಿನ್ನ ಜಪ್ತಿ ವಿವರ (2022ರ ಏಪ್ರಿಲ್ನಿಂದ 2023ರ ಫೆಬ್ರುವರಿ, ನಿಲ್ದಾಣ; ಜಪ್ತಿ ಮಾಡಲಾದ ಚಿನ್ನ)

ಮುಂಬೈ ನಿಲ್ದಾಣ: 604 ಕೆ.ಜಿ

ದೆಹಲಿ ನಿಲ್ದಾಣ; 374 ಕೆ.ಜಿ

ಚೆನ್ನೈ ನಿಲ್ದಾಣ; 306 ಕೆ.ಜಿ

ಹೈದರಾಬಾದ್; 124 ಕೆ.ಜಿ

ಬೆಂಗಳೂರು; 86 ಕೆ.ಜಿ

ಮಂಗಳೂರು: 54 ಕೆ.ಜಿ

ದೇಶದ ಚಿನ್ನ ಆಮದು ಪ್ರಮಾಣ ವರ್ಷ; ಚಿನ್ನ (ಟನ್ಗಳಲ್ಲಿ)

2017–18; 849.68

2019–19; 797.54

2019–20; 529.85

2020–21; 391.29

2021–22; 525.82

ಯಾವ ಪ್ರಕಾರದಲ್ಲಿ ಎಷ್ಟು ಚಿನ್ನ ಅಕ್ರಮ ಸಾಗಣೆ

ದೇಹ; 5.9 %

ವಾಹನ; 21.37 %

ಕೋರಿಯರ್; 6.11 %

ಬಟ್ಟೆ; 6.11 %

ಮನೆ; 2.3 %

ಏರ್ಪೋರ್ಟ್ ಬ್ಯಾಗೇಜ್; 5.9 %

ಸಾಮಗ್ರಿಗಳು; 6.11 %

ಕ್ಯಾಪ್ ಹಾಗೂ ಇತರೆ ಶಿರಸ್ತ್ರಾಣ; 2.4 %

ಇತರೆ; 3.5 %

ಬೆಂಗಳೂರು ನಿಲ್ದಾಣದ ಪ್ರಮುಖ ಪ್ರಕರಣಗಳು

2023 ಆಗಸ್ಟ್ 18: ಪ್ರಯಾಣಿಕನೊಬ್ಬ ಬ್ಯಾಗ್ನ ನಟ್–ಬೋಲ್ಟ್ ಮಾದರಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 267 ಗ್ರಾಂ ಚಿನ್ನ ಜಪ್ತಿ

2023 ಜುಲೈ 3; ಬ್ಯಾಂಕಾಕ್ನಿಂದ ಬಂದಿದ್ದ ಮೂವರು ಪ್ರಯಾಣಿಕರ ಬಳಿ ₹ 31.47 ಲಕ್ಷ ಮೌಲ್ಯದ 516 ಗ್ರಾಂ ಚಿನ್ನ ಪತ್ತೆ. ಚಿನ್ನಕ್ಕೆ ಕಪ್ಪು ಬಣ್ಣದ ಟೇಪ್ ಸುತ್ತಿ ಜೀನ್ಸ್ ಪ್ಯಾಂಟ್ ಒಳಗೆ ಬಚ್ಚಿಟ್ಟುಕೊಂಡಿದ್ದ ಆರೋಪಿಗಳು

ಏಪ್ರಿಲ್ 15: ದುಬೈನಿಂದ ಬಂದಿದ್ದ ಮಹಿಳಾ ಪ್ರಯಾಣಿಕರೊಬ್ಬರ ಹ್ಯಾಂಡ್ ಬ್ಯಾಗ್ನಲ್ಲಿ ₹24.96 ಲಕ್ಷ ಮೌಲ್ಯದ ಚಿನ್ನ ಪತ್ತೆ 2022

ಡಿಸೆಂಬರ್ 30: ಮಾಲ್ಡೀವ್ಸ್ನಿಂದ ಜಿ8–44 ವಿಮಾನದಲ್ಲಿ ನಗರಕ್ಕೆ ಬಂದಿದ್ದ ಮಹಿಳೆಯ ಗುದದ್ವಾರದಲ್ಲಿ ₹ 28.73 ಲಕ್ಷ ಮೌಲ್ಯದ 532 ಗ್ರಾಂ ಚಿನ್ನ ಪತ್ತೆ

ಆಗಸ್ಟ್ 4: ಶ್ರೀಲಂಕಾ ಏರ್ಲೈನ್ಸ್ ವಿಮಾನದಲ್ಲಿ ನಗರಕ್ಕೆ ಬಂದಿಳಿಸಿದ್ದ ಇಬ್ಬರು ಪ್ರಯಾಣಿಕರ ಗುದದ್ವಾರದಲ್ಲಿ ₹ 69.74 ಲಕ್ಷ ಮೌಲ್ಯದ 1 ಕೆ.ಜಿ 334 ಗ್ರಾಂ ಚಿನ್ನ ಪತ್ತೆ

ಆಗಸ್ಟ್ 31: ಬ್ಯಾಂಕಾಕ್ನಿಂದ ಬಂದಿದ್ದ ಪ್ರಯಾಣಿಕನ ಗುದದ್ವಾರದಲ್ಲಿ ಮಾತ್ರೆ ರೂಪದಲ್ಲಿದ್ದ ಚಿನ್ನದ ಉಂಡೆಗಳು ಪತ್ತೆ

2021 ನವೆಂಬರ್ 21: ಕೊಲಂಬೊದಿಂದ ವಿಮಾನದಲ್ಲಿ ನಗರಕ್ಕೆ ಬಂದಿದ್ದ 10 ಪ್ರಯಾಣಿಕರ ಗುದದ್ವಾರದಲ್ಲಿ ₹ 1.52 ಕೋಟಿ ಮೌಲ್ಯ ಚಿನ್ನ ಪತ್ತೆ

ಮಂಗಳೂರು ವಿಮಾನ ನಿಲ್ದಾಣ

* ತಂದೆಯೊಬ್ಬ ಎರಡು ವರ್ಷದ ಮಗುವಿನ ಜೊತೆ 2023ರ ಮಾರ್ಚ್ನಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ (ಎಂಐಎ) ಬಂದಿಳಿದಿದ್ದ. ತಂದೆಯ ಗುದದ್ವಾರದಲ್ಲಿ ಹಾಗೂ ಮಗುವಿನ ಡೈಪರ್ನಲ್ಲಿ ₹ 90. 67 ಲಕ್ಷ ಮೌಲ್ಯದ 1606 ಗ್ರಾಂ ಚಿನ್ನ ಪತ್ತೆಯಾಗಿತ್ತು.

* ದುಬೈ ಹಾಗೂ ಬಹ್ರೇನ್ನಿಂದ 2023ರ ಫೆಬ್ರುವರಿಯಲ್ಲಿ ಮಂಗಳೂರಿಗೆ ಬಂದಿದ್ದ ಪ್ರಯಾಣಿಕನ ಗುದದ್ವಾರದಲ್ಲಿ ಚಿನ್ನ ಉಂಡೆಗಳು ಪತ್ತೆಯಾಗಿದ್ದವು. ಅದೇ ತಿಂಗಳು ಮತ್ತೊಬ್ಬ ಪ್ರಯಾಣಿಕನ ಸೂಟ್ಕೇಸ್ ಹ್ಯಾಂಡಲ್ನಲ್ಲಿ ಕವಚದ ರೂಪದಲ್ಲಿದ್ದ ಚಿನ್ನ ಪತ್ತೆಯಾಗಿತ್ತು. ಎರಡೂ ಪ್ರಕರಣಗಳಲ್ಲಿ ₹ 91.35 ಲಕ್ಷ ಮೌಲ್ಯದ 1625 ಗ್ರಾಂ ಚಿನ್ನ ಜಪ್ತಿ ಮಾಡಲಾಗಿತ್ತು.

ದೇಶವಾರು ಚಿನ್ನದ ಬೆಲೆ (ಪ್ರತಿ 10 ಗ್ರಾಂ.ಗೆ ₹ಗಳಲ್ಲಿ) (ಸೆ. 29ರ ಮಾಹಿತಿ)

(ದೇಶ; 24 ಕ್ಯಾರೆಟ್ ದರ; 22 ಕ್ಯಾರೆಟ್ ದರ )

ಬಹರೇನ್; 51375; 48509

ಕುವೈತ್; 51344; 48656

ಮಲೇಷಿಯಾ; 51648; 49526

ಒಮನ್; 51446; 49289

ಸೌದಿ ಅರೇಬಿಯಾ; 51593; 48050

ಯುಎಇ; 51263; 47477

ಅಮೆರಿಕ;51489; 47752

ಅಬುದಾಬಿ;51263; 47477

ಅಜ್ಮನ್; 51263; 47477

ದುಬೈ; 51263; 47477

ಶಾರ್ಜಾ;51263; 47477

ಮಸ್ಕತ್; 51446; 49289

ದೋಹಾ; 52391; 49315

ಕತಾರ್; 52391; 49315

ಸಿಂಗಪುರ; 53708; 48282

ಭಾರತ; 58530; 53650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.