‘ಬಸ್ ಆಗಷ್ಟೇ ದೇವದುರ್ಗಕ್ಕೆ ತಲುಪಿತ್ತು. ಇನ್ನೇನು ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಬೇಕೆಂದು ಎದ್ದು ನಿಂತೆ. ಅಷ್ಟರಲ್ಲಿ ಪ್ರಯಾಣಿಕರೊಬ್ಬರು ‘ಮೇಡಂ ನಿಮ್ಮ ಡ್ರೆಸ್ ಹಿಂದೆ ನೋಡಿಕೊಳ್ಳಿ’ ಎಂದರು. ಸೆಕೆಗೆ ಒದ್ದೆಯಾಗಿರಬೇಕೆಂದುಕೊಂಡಿದ್ದೆ. ಹಿಂತಿರುಗಿ ನೋಡಿಕೊಂಡರೆ ಯೂನಿಫಾರಂ ಪೂರ್ತಿ ರಕ್ತಮಯವಾಗಿತ್ತು. ಆಘಾತವಾಗಿ ತಕ್ಷಣವೇ ಸೀಟ್ ಮೇಲೆ ಹಾಗೇ ಕುಳಿತುಬಿಟ್ಟೆ. ಪ್ರಯಾಣಿಕರೆಲ್ಲರೂ ಇಳಿದು ಹೋದ ಮೇಲೆ ಡ್ರೈವರ್ ಅಣ್ಣನಿಗೆ ಫೋನ್ ಮಾಡಿ, ಬಸ್ ಅನ್ನು ಪಕ್ಕಕ್ಕೆ ಹಾಕಿಸಿಕೊಂಡು, ಎರಡು ಬಾಟಲಿ ನೀರು ತರಿಸಿಕೊಂಡೆ. ಬಸ್‌ನ ಬಾಗಿಲಲ್ಲೇ ಮರೆಯಾಗಿ ಯೂನಿಫಾರಂ ಒಗೆದುಕೊಂಡು, ಅದು ಆರಿದ ಮೇಲೆ ಶೌಚಾಲಯಕ್ಕೆ ಓಡಿದೆ’...

–ಹೀಗೆ ಹೇಳುವಷ್ಟರಲ್ಲೇ ಬಸ್ ಕಂಡಕ್ಟರ್ ನಿರ್ಮಲಾ (ಹೆಸರು ಬದಲಿಸಿದೆ) ಅವರ ಗಂಟಲ ಸೆರೆ ಉಬ್ಬಿ ಬಂದಾಂಗಿತ್ತು.

ಮುಟ್ಟಾಗಲು ಇನ್ನೂ ಒಂದು ವಾರವಿದೆ ಎಂದು ಸ್ಯಾನಿಟರ್ ಪ್ಯಾಡ್ ಒಯ್ಯದೇ ಕೆಲಸಕ್ಕೆ ತೆರಳಿದ್ದ ನಿರ್ಮಲಾ ಅವರು ದಿಢೀರ್ ಎದುರಾಗಿದ್ದ ಮುಟ್ಟಿನಿಂದ ತೀವ್ರವಾಗಿ ಮುಜುಗರಕ್ಕೊಳಗಾಗಿದ್ದರು.

ಮಹಿಳಾ ಕಂಡಕ್ಟರ್/ ಚಾಲಕಿ ಇರುವ ಬಸ್‌ಗಳಲ್ಲಿ ಅಥವಾ ಅವರು ಕೆಲಸ ಮಾಡುವ ಮಾರ್ಗಗಳ ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷೀನ್ ಮತ್ತು ಸ್ವಚ್ಛ ಶೌಚಾಲಯ ಇದ್ದಿದ್ದರೆ ನಿರ್ಮಲಾ ಅಂಥವರು ಈ ಮುಜುಗರದ ಸಂದರ್ಭದಿಂದ ಪಾರಾಗಬಹುದಿತ್ತೇನೋ?

ಬದಲಾದ ಕಾಲಘಟ್ಟದಲ್ಲಿ ಮುಟ್ಟು ಈಗ ಗುಟ್ಟಿನ ವಿಷಯವಾಗಿ ಉಳಿದಿಲ್ಲ. ಈ ಹಿಂದೆ ಮನೆಯ ಗಂಡಸರಿಗೆ ತಿಳಿಯದಂತೆ ಹೆಣ್ಣುಮಕ್ಕಳಷ್ಟೇ ಸದ್ದಿಲ್ಲದೇ ನಿರ್ವಹಿಸುತ್ತಿದ್ದ ಮುಟ್ಟು, ಕೆಲ ಗಂಡಸರು ಮನೆಯ ಹೆಂಗಸರಿಗೆ ಸ್ಯಾನಿಟರಿ ಪ್ಯಾಡ್ ತಂದುಕೊಡುವಷ್ಟರ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಆದರೆ, ಮುಟ್ಟಿನ ದಿನಗಳಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಂಕಷ್ಟಗಳಿಗಿನ್ನೂ ಮುಕ್ತಿ ದೊರೆತಿಲ್ಲ.

ವಿದ್ಯಾರ್ಥಿನಿಯಾಗಲಿ, ಗೃಹಿಣಿಯಾಗಲಿ ಅಥವಾ ಉದ್ಯೋಗಸ್ಥೆಯಾಗಿರಲಿ ಆ ದಿನಗಳಲ್ಲಿ ಅವಳು ಅನುಭವಿಸುವ ದೈಹಿಕ– ಮಾನಸಿಕ ಏರುಪೇರುಗಳಿಗೆ ಸೂಕ್ತವಾಗಿ ಸ್ಪಂದಿಸುವ ಪರಿಸರ ನಮ್ಮಲ್ಲಿನ್ನೂ ನಿರ್ಮಾಣವಾಗಿಲ್ಲ. ಈ ನಡುವೆ ಕೇರಳ ಸರ್ಕಾರ ತನ್ನ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಿ ದೇಶದ ಹೆಣ್ಣುಮಕ್ಕಳ ಗಮನ ಸೆಳೆದಿದೆ. ಇಂಥ ರಜೆ ತಮಗೂ ಬೇಕೆಂಬ ಬೇಡಿಕೆ ಅನೇಕ ಕ್ಷೇತ್ರಗಳಲ್ಲಿನ ಮಹಿಳೆಯರ ಮನದಲ್ಲೂ ಚಿಗುರೊಡೆದಿತ್ತು. ಆದರೆ, ಇದೇ ಫೆ. 24ರಂದು ಸುಪ್ರೀಂ ಕೋರ್ಟ್ ಮುಟ್ಟಿನ ರಜೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದಾಗ ಈ ಆಸೆ ಕಮರಿಹೋಗಿತ್ತು.

ಮುಟ್ಟಿನ ರಜೆಯ ಪ್ರಸ್ತಾಪ ಇಂದು ನಿನ್ನೆಯದಲ್ಲ. ಇತಿಹಾಸದ ಪುಟಗಳನ್ನು ತಿರುವಿದರೆ ಮೊದಲನೇ ಮಹಾಯುದ್ಧದ ಸಂದರ್ಭದಲ್ಲೇ ರಷ್ಯಾದಲ್ಲಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಮುಟ್ಟಿನ ದಿನ ಕೆಲಸಕ್ಕೆ ವಿನಾಯ್ತಿ ನೀಡಲಾಗುತ್ತಿತ್ತು. ಅಂತೆಯೇ 2ನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಕೂಡಾ ಇದನ್ನೇ ಅನುಸರಿಸಿತ್ತು.

ಇತಿಹಾಸವನ್ನು ಅವಲೋಕಿಸಿದರೆ ಮುಟ್ಟಿನ ರಜೆಯ ಕಲ್ಪನೆ ಭಾರತಕ್ಕೆ ಹೊಸದೇನಲ್ಲ. ಕೇರಳದಲ್ಲೇ ಶತಮಾನದ ಹಿಂದೆ ಶಾಲೆಯೊಂದರ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಣೆಯಾಗಿತ್ತು ಎನ್ನುತ್ತವೆ ಇತಿಹಾಸದ ಪುಟಗಳು. ಇತಿಹಾಸಕಾರ ಪಿ. ಭಾಸ್ಕರನ್ ಉಣ್ಣಿ ರಚನೆಯ ‘ಕೇರಳ ಇನ್ ದ ನೈಂಟೀನ್ತ್ ಸೆಂಚುರಿ’ ಕೃತಿಯಲ್ಲಿ, ಈಗಿನ ಎರ್ನಾಕುಲಂ ಜಿಲ್ಲೆಯ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ 1912ರಲ್ಲಿಯೇ ವಿದ್ಯಾರ್ಥಿನಿಯರಿಗೆ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲೂ ಮುಟ್ಟಿನ ರಜೆ ನೀಡಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ನಂತರ ದಶಕಗಳಲ್ಲಿ ಬಿಹಾರ ರಾಜ್ಯವು ಅಭಿವೃದ್ದಿ ಮಿಷನ್ ಭಾಗವಾಗಿ ಎರಡು ದಶಕಗಳ ಹಿಂದೆಯೇ ಅಂದರೆ 1992ರಲ್ಲಿ ಮುಟ್ಟಿನ ರಜೆಯ ನೀತಿಯನ್ನು ಅಳವಡಿಸಿಕೊಂಡಿತ್ತು.

ಅಂದಿನ ಮುಖ್ಯಮಂತ್ರಿ ಲಾಲೂ ಪ್ರಸಾದ್ ನೇತೃತ್ವದ ಸರ್ಕಾರವು ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಎರಡು ದಿನ ರಜೆ ಪಡೆದುಕೊಳ್ಳುವ ಸೌಲಭ್ಯವನ್ನು ಕಲ್ಪಿಸಿತ್ತು.

ಇದಕ್ಕೆ ಇಂಬುಗೊಡುವಂತೆ 2017ರಲ್ಲಿ ಲೋಕಸಭೆಯಲ್ಲಿ ಅರುಣಾಚಲ ಪ್ರದೇಶದ ಸಂಸದ ನಿನೊಂಗ್ ಎರಿಂಗ್ ಅವರು ಸಂಸತ್ತಿನಲ್ಲಿ ‘ದಿ ಮೆನ್ಸ್ಟ್ರುಯೇಷನ್ ಬೆನಿಫಿಟ್ಸ್ ಬಿಲ್ 2017’ ಎಂಬ ಖಾಸಗಿ ಮಸೂದೆ ಮಂಡಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೋಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ಎರಡು ದಿನಗಳ ಋತುಚಕ್ರದ ರಜೆಗೆ ನೀಡಬೇಕೆಂಬ ಅಂಶ ಮಸೂದೆಯಲ್ಲಿತ್ತು. ಅದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲವಾದರೂ, ದೇಶದ ಕೆಲ ಖಾಸಗಿ ಕಂಪನಿಗಳ ತಮ್ಮ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ನೀಡುವಷ್ಟು ಪರಿಣಾಮ ಬೀರಿತ್ತು.

2017ರ ಜೂನ್‌ನಲ್ಲಿ ‘ಕಲ್ಚರ್ ಮಷೀನ್’ ಎನ್ನುವ ಖಾಸಗಿ ಮಾಧ್ಯಮ ಸಂಸ್ಥೆ, ಅದರ ಮಹಿಳಾ ಸಿಬ್ಬಂದಿಗೆ ‘ಮುಟ್ಟಿನ ಮೊದಲ ದಿನ’ ಎಂಬ ಸಂಬಳಸಹಿತ ರಜೆಯನ್ನು ಘೋಷಿಸಿತ್ತು. ಅಂತೆಯೇ, ಚೆನ್ನೈನ ‘ಮ್ಯಾಗ್ಸ್ಟರ್’ ಎನ್ನುವ ಕಂಪೆನಿ ಮತ್ತು ಕೇರಳದ ‘ಮಾತೃಭೂಮಿ ಟಿವಿ ಚಾನೆಲ್’ ಕೂಡ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆಗಳನ್ನು ಪ್ರಕಟಿಸಿದ್ದವು. ನಂತರ ದಿನಗಳಲ್ಲಿ ಜೊಮ್ಯಾಟೊ, ಸ್ವಿಗ್ಗಿ, ಬೈಜೂಸ್ ಸಂಸ್ಥೆಗಳು ಹೆಣ್ಣುಮಕ್ಕಳಿಗೆ ವರ್ಷಕ್ಕೆ 10 ದಿನಗಳ ಕಾಲ ಮುಟ್ಟಿನ ರಜೆ ಪಡೆದುಕೊಳ್ಳುವ ನೀತಿ ರೂಪಿಸಿವೆ. ಈ ಬಗ್ಗೆ ಆನ್‌ಲೈನ್ ಅಭಿಯಾನವೂ ನಡೆದಿತ್ತು.

‘ಪ್ರತಿ ತಿಂಗಳೂ ಇಂಥ ರಜೆ ಕೊಟ್ಟರೆ ಕಚೇರಿಯ ಕೆಲಸಗಳು ಬಾಕಿ ಉಳಿಯುವುದಿಲ್ಲವೇ? ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸಿಕೊಂಡರೆ ಇಂಥ ರಜೆಗಳನ್ನು ಕೊಡಲೇಬೇಕಾಗುತ್ತದೆ. ಈಗಾಗಲೇ ಹೆರಿಗೆ ರಜೆಯ ಕಾರಣ ಮುಂದಿಟ್ಟುಕೊಂಡು ಹಲವು ಕಂಪನಿಗಳು ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಅದರ ನಡುವೆ ಮುಟ್ಟಿನ ರಜೆಯ ಕೊಡಲೇಬೇಕೆಂಬ ಕಾನೂನು ಬಂದಲ್ಲಿ, ಇದು ಔದ್ಯೋಗಿಕ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಬಹುದಲ್ಲವೇ’ ಎನ್ನುವುದು ಬೆಂಗಳೂರಿನ ಖಾಸಗಿ ಕಂಪನಿಯೊಂದರ ಎಚ್.ಆರ್. ವಿಭಾಗದ ವ್ಯವಸ್ಥಾಪಕಿ ಸುಕನ್ಯಾ ಅವರ ಪ್ರಶ್ನೆ.

‘ನಮ್ಮ ಕಂಪನಿಯಲ್ಲಿ ಮುಟ್ಟಿನ ರಜೆ ಎಂದು ಪ್ರತ್ಯೇಕ ರಜೆಗಳಿಲ್ಲ. ಆದರೆ, ಮಹಿಳಾ ಉದ್ಯೋಗಿಗಳಿಗೆ ಆ ಸಮಯದಲ್ಲಿ ತುರ್ತು ರಜೆ ಬೇಕಿದ್ದರೆ ಅವರು ತೆಗೆದುಕೊಳ್ಳಬಹುದು. ಅದಕ್ಕೆ ಯಾವುದೇ ನಿಬಂಧನೆಗಳಿಲ್ಲ. ನಮ್ಮ ಉದ್ಯೋಗಿಗಳು ಬಳಸದೇ ಇರುವ ರಜೆಗಳನ್ನು ಮತ್ತೊಬ್ಬ ಉದ್ಯೋಗಿಗೆ ನೀಡುವ ಪದ್ಧತಿ ನಮ್ಮಲ್ಲಿದೆ. ತೀವ್ರತರ ಆರೋಗ್ಯ ಸಮಸ್ಯೆ ಇದ್ದ ಯಾರೇ ಆಗಲಿ ಅಂಥ ರಜೆಗಳನ್ನು ಬಳಸಬಹುದು’ ಎನ್ನುತ್ತಾರೆ ಖಾಸಗಿ ಐ.ಟಿ ಕಂಪೆನಿಯೊಂದರ ಎಚ್.ಆರ್. ವಿಭಾಗದ ಉಪ ವ್ಯವಸ್ಥಾಪಕ (ಸಿಬ್ಬಂದಿ ನೇಮಕ) ಸಮರ್ಥ್.

‘ಈ ಹಿಂದೆ ಮಹಿಳೆಯರಿಗೆ ಹೆರಿಗೆ ರಜೆ ಸೌಲಭ್ಯ ಕಲ್ಪಿಸಿದಾಗಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ, ತಾಯಿ–ಮಗುವಿನ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಸರ್ಕಾರವೇ ಆರು ತಿಂಗಳ ಕಾಲ ವೇತನ ಸಹಿತ ರಜೆ ಸೌಕರ್ಯ ಕಲ್ಪಿಸಿದೆ. ಮುಟ್ಟು ಮತ್ತು ಹೆರಿಗೆಯಂತಹ ಜೈವಿಕ ಕ್ರಿಯೆಗಳು ಹೆಣ್ಣಿನ ಜೀವನದಲ್ಲಿ ಸಹಜವಾಗಿರುವುದರಿಂದ ಅದರಿಂದ ಆಕೆಯನ್ನು ಹೊರಗಿಟ್ಟು ನೋಡಲಾಗದು. ಅವುಗಳ ನೆಪದಲ್ಲಿ ಆಕೆಯನ್ನು ಉದ್ಯೋಗ ವಂಚಿತಳನ್ನಾಗಿಸುವುದು ಇಲ್ಲವೇ ಸಾಮರ್ಥ್ಯವನ್ನು ಹೀಗಳೆಯುವುದು ಸರಿಯಲ್ಲ’ ಎಂಬುದು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಶಿಲ್ಪಾ ಅವರ ಪ್ರತಿಪಾದನೆ.

ಪ್ರತಿ ಮಹಿಳೆಗೂ ಭಿನ್ನ

ಮುಟ್ಟಿನ ರಜೆ ಪ್ರತಿ ಮಹಿಳೆಗೂ ಅಗತ್ಯವೇ ಎನ್ನುವ ಪ್ರಶ್ನೆ ಇಟ್ಟುಕೊಂಡು, ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಅರಿತಾಗ ಪ್ರತಿ ಹೆಣ್ಣಿನಲ್ಲಾಗುವ ಮನೋ –ದೈಹಿಕ ಬದಲಾವಣೆಗಳು ಭಿನ್ನ ಎಂಬುದಾಗಿ ಮನಗಾಣಬಹುದು. ಹೇಗೆ ಬೆರಳಚ್ಚು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆಯೋ, ಮುಟ್ಟಿನ ಪ್ರಕ್ರಿಯೆ ಕೂಡಾ ಒಂದು ಹೆಣ್ಣಿನಿಂದ ಮತ್ತೊಬ್ಬ ಹೆಣ್ಣಿಗೆ ಭಿನ್ನವಾಗಿರುತ್ತದೆ ಎನ್ನುತ್ತಾರೆ ತಜ್ಞವೈದ್ಯರು.

‘ಮುಟ್ಟಿನ ಸಂದರ್ಭದಲ್ಲಿ ಕೆಲವರಲ್ಲಿ ನೋವು ಕಾಣಿಸಿಕೊಂಡರೆ, ಕೆಲವರಿಗೆ ಸಹಜ ರೀತಿಯಲ್ಲಿರಬಹುದು. ಕೆಲವರಿಗೆ ಮುಟ್ಟಾಗುವ ಎರಡು ದಿನಗಳ ಮುನ್ನ ಎದೆಭಾರ, ಹೊಟ್ಟೆ ಊದಿಕೊಂಡಂತಾಗುವುದು, ಹೊಟ್ಟೆನೋವು ಕಾಣಿಸಿಕೊಳ್ಳಬಹುದು.ಇನ್ನು ಕೆಲವರಿಗೆ ಮುಟ್ಟು ಆರಂಭವಾದಾಗ ಹೊಟ್ಟೆನೋವು, ವಾಂತಿ ಕಾಣಿಸಿಕೊಳ್ಳುತ್ತದೆ. ಅಂಡಾಣು ಬಿಡುಗಡೆಯಾಗುವಾಗ ಗರ್ಭಕೋಶದ ಸುತ್ತಮುತ್ತ ಒತ್ತಡವಾದಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಹೆಣ್ಣುಮಕ್ಕಳಿಗೆ ಇದನ್ನು ತಡೆದುಕೊಳ್ಳುವ ಸಾಮರ್ಥ್ಯವಿರುತ್ತದೆ. ಕೆಲವರಿಗೆ ಇರುವುದಿಲ್ಲ. ಅಂಥವರಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ’ ಎನ್ನುತ್ತಾರೆ ಬೆಂಗಳೂರಿನ ಮದರ್‌ಹುಡ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ರಶ್ಮಿ ಪಾಟೀಲ್.

‘ಶೇ 60ರಿಂದ 70ರ ತನಕ ಮಹಿಳೆಯರು ನೋವು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಶೇ 30ರಿಂದ 40ರಷ್ಟು ಜನರಿಗೆ ನೋವು ತಡೆದುಕೊಳ್ಳಲಾಗದು. ಮೆನೋಪಾಸ್ ಅಂದರೆ ಮುಟ್ಟುನಿಲ್ಲುವ ಸಮಯದಲ್ಲೂ ಕೆಲ ಮಹಿಳೆಯರಿಗೆ ಹಾರ್ಮೋನ್‌ಗಳ ಏರುಪೇರಿನಿಂದಾಗಿ ಮಾನಸಿಕವಾಗಿ– ದೈಹಿಕವಾಗಿ ಬದಲಾವಣೆ ಆಗುತ್ತದೆ. ಅತಿಕೋಪ, ಭಾವನೆಗಳ ಏರುಪೇರು, ತೀವ್ರ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಇಂಥ ಸಮಯದಲ್ಲಿ ಕಚೇರಿಯಲ್ಲಾಗಲೀ, ಮನೆಯಲ್ಲಾಗಲೀ ಮಹಿಳೆಯರು ಸಣ್ಣಪುಟ್ಟಕ್ಕೂ ಸಿಡಿಮಿಡಿಗೊಳ್ಳುತ್ತಾರೆ. ಅಗತ್ಯವಿದ್ದವರಿಗೆ ಮುಟ್ಟಿನ ರಜೆಯನ್ನು ಐಚ್ಛಿಕವಾಗಿರಿಸಿದರೆ ಒಳ್ಳೆಯದು’ ಎನ್ನುವುದು ಅವರ ಅಭಿಮತ.

ಏನಂತಾರೆ ಮನೋವೈದ್ಯರು?

ನಿಮ್ಹಾನ್ಸ್‌ನಲ್ಲಿ ಮನೋರೋಗ ತಜ್ಞೆಯಾಗಿರುವ ಡಾ. ಗೀತಾ ದೇಸಾಯಿ ಅವರ ಪ್ರಕಾರ, ‘ಪ್ರಿ ಮೆನ್‌ಸ್ಟ್ರುಯೆಲ್ ಡಿಸ್ಪೊರಿಕ್ ಡಿಸಾರ್ಡರ್’ (ಪಿಎಂಡಿಡಿ) ಮುಟ್ಟಿನ ತೀವ್ರತರದ ತೊಂದರೆ. ಇದು ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಅಂಥವರಿಗೆ ಸಾಮಾನ್ಯವಾಗಿ ಅತಿಯಾಗಿ ದುಃಖವಾಗುವುದು, ಸಿಟ್ಟು ಬರುವುದು, ಮೂಡ್‌ನಲ್ಲಿ ಏರುಪೇರಾಗುವುದು ಅಥವಾ ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಮುಟ್ಟಾಗುವ ಒಂದು ವಾರ ಮುಂಚೆ ಕಾಣಿಸಿಕೊಳ್ಳುತ್ತವೆ. ಮುಟ್ಟಾದ ಬಳಿಕ ಕ್ರಮೇಣ ಇವು ಕಡಿಮೆಯಾಗುತ್ತವೆ. ಇದು ತೀವ್ರತರವಾಗಿದ್ದಾಗ ಚಿಕಿತ್ಸೆ ಅಗತ್ಯ. ಅದು ಸೈಕೊ ಥೆರಪಿ ಆಗಿರಬಹುದು ಇಲ್ಲವೇ ಮಾತ್ರೆಗಳಿಂದ ಗುಣಪಡಿಸಬಹುದು. ಕೆಲವು ತೊಂದರೆಗಳನ್ನು ಜೀವನಶೈಲಿಯ ಬದಲಾವಣೆಯಿಂದ ಕಡಿಮೆ ಮಾಡಿಕೊಳ್ಳಬಹುದು’.

‘ಮುಟ್ಟಿನ ಸಮಯದಲ್ಲಾಗುವ ಹಾರ್ಮೋನ್‌ಗಳ ಬದಲಾವಣೆಗೆ ಕೆಲ ಮಹಿಳೆಯರ ಮಿದುಳು ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಆಗ ಎದುರಾಗುವ ತೊಂದರೆಗಳನ್ನು ಅವರಿಗೆ ನಿಭಾಯಿಸಲಾಗದು. ಉದ್ಯೋಗಸ್ಥ ಮಹಿಳೆಯರಾದರೆ ವೃತ್ತಿಯಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ. ನೋವು ತೀವ್ರವಾಗಿದ್ದಾಗ ಕೆಲವರಿಗೆ ತಕ್ಷಣವೇ ಅಳು ಬರಬಹುದು. ಇದರ ಪರಿಣಾಮ ಸಂಬಂಧಗಳ ಮೇಲೆ ಆಗುವ ಸಾಧ್ಯತೆ ಇದೆ. ಶಾಲಾ– ಕಾಲೇಜು, ಉದ್ಯೋಗದ ಸ್ಥಳದಲ್ಲಿ ಮಹಿಳೆಯರಿಗೆ ಮೂಲಸೌಕರ್ಯ ಕಲ್ಪಿಸುವಂಥ ಒಂದು ವಿಶ್ರಾಂತಿ ಕೊಠಡಿ ಕಡ್ಡಾಯವಾಗಿದ್ದರೆ ಒಳಿತು. ಕೆಲವರಿಗೆ ಇಡೀ ದಿನದ ರಜೆ ಅಗತ್ಯವಿರುವುದಿಲ್ಲ. ಒಂದೆರಡು ತಾಸು ವಿಶ್ರಾಂತಿ ಪಡೆದು, ಸುಧಾರಿಸಿಕೊಂಡು ಮತ್ತೆ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬಹುದು. ಕೆಲವರಿಗೆ ತುಂಬಾ ತೊಂದರೆ ಇದ್ದರೆ ಮಾತ್ರ ಅಂಥವರು ರಜೆ ಪಡೆಯಲು ಅಡ್ಡಿಯಿಲ್ಲ’ ಅನ್ನುವುದು ಅವರ ಅಭಿಪ್ರಾಯ.

ಪ್ರಸ್ತಾಪವೂ ಇಲ್ಲ, ಕಾಯ್ದೆಯೂ ಇಲ್ಲ

‘ಕರ್ನಾಟಕದಲ್ಲಿ ಇಂಥ ರಜೆ ಸೇರ್ಪಡೆ ಬಗ್ಗೆಯ ಚರ್ಚೆಗಳಾಗಲೀ, ರಜೆ ಬೇಕೆಂಬ ಮನವಿಗಳಾಗಲೀ ಕಾರ್ಮಿಕ ಇಲಾಖೆಗೆ ಸಲ್ಲಿಕೆಯೇ ಆಗಿಲ್ಲ. ಗಾರ್ಮೆಂಟ್ಸ್, ಸಾರಿಗೆ ಸಂಸ್ಥೆ ಹಾಗೂ ಅಸಂಘಟಿತ ವಲಯದಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಅಲ್ಲಿಯೂ ಈ ಬಗ್ಗೆ ಪ್ರಸ್ತಾಪವಾಗಿಲ್ಲ’ ಎನ್ನುತ್ತಾರೆ ಕಾರ್ಮಿಕ ಮುಖಂಡರು.

‘ಕೆಲವರಿಗೆ ಆ ದಿನಗಳಲ್ಲಿ ಹಾರ್ಮೋನ್‌ಗಳ ಏರುಪೇರಿನಿಂದಾಗಿ ಸುಸ್ತು, ತೀವ್ರ ರಕ್ತಸ್ರಾವ ಆಗಬಹುದು, ಇದರಿಂದ ಶಕ್ತಿಹೀನತೆಯೂ ಕಾಣಿಸಿಕೊಳ್ಳಬಹುದು. ಅಂಥವರಿಗೆ ರಜೆ ಪಡೆಯಲು ಅವಕಾಶವಿದ್ದರೆ ಒಳಿತು. ಸಾರ್ವತ್ರಿಕವಲ್ಲದಿದ್ದರೂ ಅಗತ್ಯ ಇದ್ದವರು ರಜೆ ಪಡೆದುಕೊಳ್ಳಲು ಅವಕಾಶ ಇರಬೇಕು’ ಎನ್ನುವುದು ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ಸ್ ಸಂಘಟನೆಯ ಅಧ್ಯಕ್ಷೆ ಆರ್. ಪ್ರತಿಭಾ ಅವರ ಅಭಿಪ್ರಾಯ.

‘ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು ನಾಲ್ಕೈದು ಸಾವಿರ ಮಹಿಳಾ ಕಂಡಕ್ಟರ್‌ಗಳಿರಬಹುದು. ನಮ್ಮಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಬೇಕಾದಾಗ ರಜೆ ಸಿಗದು. ಗುಳಿಗೆ ತಗೊಂಡು ಡ್ಯೂಟಿ ಮಾಡಿ ಅಂತಾರೆ. ಶಿವಮೊಗ್ಗ ಮತ್ತು ಚಿತ್ರದುರ್ಗದ ಬಸ್ ನಿಲ್ದಾಣಗಳಲ್ಲಿ ಪ್ಯಾಡ್ ಮಷೀನ್ ಇಟ್ಟಿದ್ದರು. ಅದೀಗ ಕೆಟ್ಟು ಕುಳಿತಿದೆ. ಬೆಂಗಳೂರು ಬಸ್ ನಿಲ್ದಾಣದ ಶೌಚಾಲಯ ಬಿಟ್ಟರೆ, ರಾಜ್ಯದ ಇತರ ಬಸ್ ನಿಲ್ದಾಣಗಳ ಶೌಚಾಲಯದಲ್ಲಿ ಸ್ವಚ್ಛತೆ ಎಂಬುದೇ ಇಲ್ಲ. ಮುಟ್ಟಿನ ಸಮಯದಲ್ಲಿ ರಜೆ ಸಿಕ್ಕರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಹೊಸಪೇಟೆ ಡಿಪೊದ ಮಹಿಳಾ ಕಂಡಕ್ಟರ್ ನಳಿನಿ ಡಿ.

ಕಾನೂನಿನ ಕೊರತೆ

ಮುಟ್ಟಿನ ರಜೆ ಕಾರ್ಯರೂಪಕ್ಕೆ ಬರಲು ಕಾನೂನಿನ ಕೊರತೆಯೇ ಕಾರಣ ಎನ್ನುತ್ತಾರೆ ಕಾನೂನು ತಜ್ಞರು. 2023ರ ಫೆ. 24ರಂದು ಮುಟ್ಟಿನ ರಜೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಆದರೆ, ಆಯಾ ರಾಜ್ಯಗಳು ಇದನ್ನು ತೀರ್ಮಾನಿಸಬಹುದು ಎಂಬ ಸಲಹೆಯನ್ನೂ ನೀಡಿತ್ತು. ಸದ್ಯಕ್ಕೆ ಯಾವುದೇ ರಾಜ್ಯ ಈ ಬಗ್ಗೆ ಕಾನೂನು ರೂಪಿಸಲು ಮುಂದಾಗಿಲ್ಲ.

ಈ ನಡುವೆ, ಇದೇ ಮಾರ್ಚ್‌ನಲ್ಲಿ ಬಿಜೆಪಿಯ ಹಿರಿಯ ಸಂಸದ ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಂಸದೀಯ ಸಮಿತಿಯು ಮುಟ್ಟಿನ ರಜೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ, ‘ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಇಲ್ಲದೆಯೇ ಮಹಿಳೆಯರಿಗೆ ನಿರ್ದಿಷ್ಟ ಸಂಖ್ಯೆಯ ಮುಟ್ಟಿನ ರಜೆ ಅಥವಾ ಅನಾರೋಗ್ಯ ರಜೆ ಅಥವಾ ಅರ್ಧ ವೇತನದ ರಜೆ ನೀಡುವುದನ್ನು ಪರಿಗಣಿಸಬೇಕು’ ಎಂದು ಶಿಫಾರಸು ಮಾಡಿತ್ತು. ನಂತರದ ದಿನಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯಲಿಲ್ಲ.

ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಹೆಣ್ಣಿಗೆ ನೀಡುವ ಹೆರಿಗೆ ರಜೆಯನ್ನಾಗಲೀ, ಮುಟ್ಟಿನ ರಜೆಯನ್ನಾಗಲೀ ಸಮಾಜದ ಅಭಿವೃದ್ಧಿಯ ಭಾಗವನ್ನಾಗಿ ಪರಿಗಣಿಸಬೇಕಾಗುತ್ತದೆ. ಸಂತಾನೋತ್ಪತ್ತಿ ಪ್ರಕ್ರಿಯೆಯು ಸುಸೂತ್ರವಾಗಿ ನಡೆಯಬೇಕಾದಲ್ಲಿ ಮುಟ್ಟಿನ ಚಕ್ರವೂ ಸುಸ್ಥಿತಿಯಲ್ಲಿರುವುದು ಅಗತ್ಯ. ಹಾಗಾಗಿ, ಅಂಥ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ನೆಮ್ಮದಿ ನೀಡುವ ಪರಿಸರ ಕಲ್ಪಿಸಿಕೊಡುವುದು ಅತ್ಯಗತ್ಯ. ಹಾಗಾಗಿ, ಮುಟ್ಟಿನ ರಜೆಯನ್ನು ಹಕ್ಕು ಎಂದು ಪ್ರತಿಪಾದಿಸುವುದಕ್ಕಿಂತ ಐಚ್ಛಿಕವಾಗಿರುವುದೇ ಒಳಿತು ಎನ್ನುವುದೂ ಕೆಲವರ ಪ್ರತಿಪಾದನೆ.

ಚರ್ಚೆ–ವಾದಗಳೇನೇ ಇರಲಿ. ಮುಟ್ಟು, ತಾಯ್ತನ ಅನ್ನುವುದು ಹೆಣ್ಣಿನ ಜೈವಿಕ ಹಕ್ಕು. ಪ್ರಕೃತಿದತ್ತವಾಗಿ ಲಭ್ಯವಾಗಿರುವ ಈ ಹಕ್ಕಿಗೆ ಧಕ್ಕೆ ಬಾರದಂತೆ ಕಾನೂನು ರೂಪುಗೊಳ್ಳಬೇಕಿದೆ. ಮುಖ್ಯವಾಗಿ ಅಗತ್ಯವಿದ್ದವರು ಮುಟ್ಟಿನ ರಜೆಯನ್ನು ಯಾವುದೇ ಮುಜುಗರವಿಲ್ಲದೇ ತೆಗೆದುಕೊಳ್ಳುವಂಥ ವಾತಾವರಣ ನಿರ್ಮಾಣವಾಗಬೇಕಿದೆ.

(ಪೂರಕ ಮಾಹಿತಿ: ಬಿ.ಎಸ್. ಷಣ್ಮುಖಪ್ಪ, ವಿಜಯಕುಮಾರ್ ಎಸ್.ಕೆ.)

ಮುಟ್ಟಿನ ರಜೆ ಬಗ್ಗೆ ರಾಜ್ಯದಲ್ಲಿ ಯಾವುದೇ ಕಾಯ್ದೆ ಇಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯ ಕಾಯ್ದೆ ರೂಪಿಸುವ ಬಗ್ಗೆಯೂ ಈವರೆಗೆ ಯಾರಿಂದಲೂ ಪ್ರಸ್ತಾಪವಾಗಿಲ್ಲ.

–ಅಕ್ರಂ ಪಾಷ ಕಾರ್ಮಿಕ ಇಲಾಖೆ ಆಯುಕ್ತ

ಮುಟ್ಟು ನಿಲ್ಲುವ ಆಸುಪಾಸಿನ ದಿನಗಳು ಹೆಂಗಸರಿಗೆ ಬಹಳ ಯಾತನಾಮಯವಾಗಿರುತ್ತವೆ. ಆಗ ದೈಹಿಕ– ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ. ಇನ್ನು ಕೆಲವರಿಗೆ ಮುಟ್ಟಿನ ಮುನ್ನಾದಿನಗಳು ಕಷ್ಟಕರವಾಗಿರುತ್ತದೆ. ಇಂಥ ಸಂದರ್ಭಗಳಲ್ಲಿ ರಜೆ ಇದ್ದರೆ ಅನುಕೂಲ.

–ಪಲ್ಲವಿ ಇಡೂರು ಲೇಖಕಿ ಆಹಾರ ತಜ್ಞೆ

ಋತುಚಕ್ರದ ರಜೆ ಕುರಿತು ಸರ್ಕಾರಗಳು ಸಮರ್ಪಕವಾದ ಕಾನೂನು ರೂಪಿಸಿ ಮಹಿಳಾ ಸ್ನೇಹಿ ವಾತಾವರಣಕ್ಕೆ ಸಾಕ್ಷಿ ಆಗಬೇಕಿದೆ.

–ಲಕ್ಷ್ಮಿ ಅಯ್ಯಂಗಾರ್ ಹಿರಿಯ ವಕೀಲರು ಹೈಕೋರ್ಟ್

ರಜೆ ಕೊಡಲೇಬೇಕು ಎಂಬುದನ್ನು ಕಡ್ಡಾಯ ಮಾಡುವುದಕ್ಕಿಂತ ಮಹಿಳೆಯರಿಗೆ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಅಗತ್ಯ. ಈ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ

–ಶ್ವೇತಾ ಶ್ರೀವಾತ್ಸವ ನಟಿ

ಮುಟ್ಟಾದ ಸಮಯದಲ್ಲಿ ಹೆಣ್ಣುಮಕ್ಕಳು ಶುಚಿತ್ವದ ಕಡೆಗೆ ಗಮನಹರಿಸದೇ ಇದ್ದರೆ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಸೋಂಕು ಗರ್ಭಕೋಶದ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ರಜೆ ಇದ್ದರೆ ಮನೆಯಲ್ಲೇ ಇದ್ದು ಆರೈಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ

-ಡಾ.ಸ್ವಾತಿ ಶಿವಮೊಗ್ಗ

ರಜೆಗಿಲ್ಲ ಸಹಮತ: ಸ್ಮೃತಿ ಇರಾನಿ

ಮುಟ್ಟಿನ ರಜೆ ಜಾರಿಯ ಕುರಿತು ಸಹಮತ ವ್ಯಕ್ತಪಡಿಸದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ‘ವಾರಾಂತ್ಯದ ರಜೆಗಳು, ಆಯ್ಕೆಯ ರಜೆಗಳು, ಹಬ್ಬದ ರಜೆಗಳನ್ನು ಕಳೆದರೆ ತಿಂಗಳಿಗೆ 17 ದಿನಗಳು ಮಾತ್ರ ಕೆಲಸ ಮಾಡುತ್ತೇವೆ. ಮಹಿಳೆಯರಿಗೆ 26 ವಾರಗಳು ಹೆರಿಗೆ ರಜೆ, ಶಿಶುಪಾಲನಾ ರಜೆಗಳಿವೆ. ಇದರ ಜತೆಗೆ ಮುಟ್ಟಿನ ರಜೆ ಘೋಷಣೆ ಮಾಡಿದರೆ ಸಂಸ್ಥೆಯು ಮಹಿಳೆಯರನ್ನು ಹೇಗೆ ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇಂತಹ ನೀತಿಗಳು ಮಹಿಳೆಯರ ಉದ್ಯೋಗವನ್ನು ಕಿತ್ತುಕೊಳ್ಳಬಹುದು. ಸಮಾನ ಕೆಲಸ, ಸಮಾನ ಅವಕಾಶಗಳಿಗೆ ಇಂತಹ ರಜೆಗಳು ಅಡ್ಡಿಯಾಗುತ್ತವೆ’ ಎಂದು ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಅಗತ್ಯವಿದ್ದವರಿಗೆ ರಜೆ ಕೊಡಿ

ಸಿನಿಮಾ ಕ್ಷೇತ್ರದಲ್ಲಿರುವ ನನ್ನ ಕೆಲಸ ಕಚೇರಿ ಕೆಲಸಗಳಂಥಲ್ಲ. ನಿರ್ದೇಶನ ಅಂದರೆ ಓಡಾಟ ಇದ್ದಿದ್ದೇ. ಈ ಹಿಂದೆ ನನ್ನ ಗರ್ಭಕೋಶದಲ್ಲಿ ‘ಸಿಸ್ಟ್’ ಇತ್ತು ಹಾಗಾಗಿ ಮುಟ್ಟಾದಾಗ ತೀವ್ರ ರಕ್ತಸ್ರಾವ ಆಗುತ್ತಿತ್ತು. ಆದರೂ ಶೂಟಿಂಗ್ ಸಮಯದಲ್ಲಿ ರಜೆ ಹಾಕಲು ಆಗುತ್ತಿರಲಿಲ್ಲ. ಪ್ಯಾಡ್ ಮೇಲೆ ಪ್ಯಾಡ್ ಹಾಕಿಕೊಂಡು ಶೂಟಿಂಗ್ ಮಾಡಿದ್ದೇನೆ. ಡಬ್ಬಿಂಗ್ ಅಥವಾ ಇತರ ಕೆಲಸದವರಿಗೆ ರಜೆ ಪಡೆಯಲು ಸಾಧ್ಯವಾಗಬಹುದು. ಆದರೆ, ನಿರ್ದೇಶಕಿಯಾಗಿ ನನಗೆ ಆ ರೀತಿ ರಜೆ ಪಡೆಯಲು ಆಗಿಲ್ಲ. ಶೂಟಿಂಗ್ ಸ್ಥಳಗಳಲ್ಲಿ ಪ್ಯಾಡ್ ಬದಲಾಯಿಸಲು ಪರ್ಯಾಯ ಮಾರ್ಗ ಕಂಡು ಕೊಂಡಿದ್ದೇನೆ. ನನಗೆ ಅದು ಸಾಧ್ಯವಿದೆಯೆಂದು ಬೇರೆಯವರಿಗೂ ಸಾಧ್ಯವಾಗಬೇಕೆಂದೇನಿಲ್ಲ. ಅಗತ್ಯವಿದ್ದವರಿಗೆ ರಜೆ ಕೊಡುವುದು ಸೂಕ್ತ.

ಡಿ. ಸುಮನ್ ಕಿತ್ತೂರು, ಸಿನಿಮಾ ನಿರ್ದೇಶಕಿ, ಮೈಸೂರು

ಶಾಲಾ ಮಕ್ಕಳಿಗೆ ರಜೆ ಬೇಕು

ಮುಟ್ಟಿನ ಕುರಿತು ಸಂಶೋಧನೆ ಕೈಗೊಂಡಾಗ ಮುಟ್ಟಿನ ರಜೆ ಕುರಿತು ಹಲವರನ್ನು ಪ್ರಶ್ನಿಸಿದ್ದೇನೆ. ಗ್ರಾಮೀಣ ಹಾಗೂ ಬುಡಕಟ್ಟು ಜನವಸತಿ ಇರುವ ಪ್ರದೇಶಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಇಂಥ ಸ್ಥಳಗಳಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡುವ, ಉದ್ಯೋಗ ಮಾಡುವ ಮಹಿಳೆಯರಿಗೆ ಖಂಡಿತಾ ರಜೆಯ ಅವಶ್ಯಕತೆ ಇದೆ ಅನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

ಗಂಡಸರು ಆಡಿಕೊಳ್ತಾರೆ ಎನ್ನುವ ಕಾರಣಕ್ಕೆ ಕೆಲವರು ರಜೆ ಬೇಡವೆಂದು ಹಿಂಜರಿದುಕೊಂಡೇ ಹೇಳಿದರು. ಆದರೆ, ಗ್ರಾಮೀಣ ಭಾಗಗಳಲ್ಲಿನ ಶಾಲಾ ಮಕ್ಕಳು ಕನಿಷ್ಠ ಎರಡ್ಮೂರು ಕಿ.ಮೀ ನಡೆದುಕೊಂಡೇ ಶಾಲೆಗೆ ಬರಬೇಕು. ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ. ಇದ್ದರೂ ಅಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆ. ಕನಿಷ್ಠ ಒಂದು ಪ್ಯಾಡ್ ಬದಲಾಯಿಸುವಷ್ಟು ಸುಸ್ಥಿತಿಯಲ್ಲಿರುವ ಶೌಚಾಲಯಗಳೂ ಅಲ್ಲಿಲ್ಲ. ತೀವ್ರ ಹೊಟ್ಟೆನೋವು, ರಕ್ತಸ್ರಾವವಾದಾಗ ಮಕ್ಕಳಿಗೆ ಕಷ್ಟ
ವಾಗುತ್ತದೆ. ಅಂಥ ಸಂದರ್ಭಗಳಲ್ಲಿ ರಜೆ ಕೊಟ್ಟರೆ ಒಳ್ಳೆಯದು. ದೇಹಕ್ಕೆ, ಮನಸಿಗೆ ವಿಶ್ರಾಂತಿಗೆ ಬೇಕು ಅಂತ ಅನಿಸಿದರೆ ರಜೆ ತೆಗೆದುಕೊಳ್ಳುವುದು ತಪ್ಪಲ್ಲ. ಅಂತೆಯೇ ನಮಗೆ ಸಾಮರ್ಥ್ಯವಿದೆ ಅಂತ ಸಾಬೀತುಪಡಿಸಲು ಆ ದಿನಗಳಲ್ಲಿ ಕೆಲಸ ಮಾಡಿ ತೋರಿಸಬೇಕೆಂದಿಲ್ಲ.

ಜ್ಯೋತಿ ಹಿಟ್ನಾಳ್, ಸಂಶೋಧಕಿ, ಕನ್ನಡ ವಿಶ್ವವಿದ್ಯಾಲಯ ಹಂಪಿ.

ಇತರ ದೇಶಗಳಲ್ಲಿ ಎಲ್ಲೆಲ್ಲಿದೆ ರಜೆ?

ಜಾಗತಿಕ ಮಟ್ಟದಲ್ಲಿ ಗಮನಿಸುವುದಾದರೆ ಕೆಲವು ರಾಷ್ಟ್ರಗಳು ಮುಟ್ಟಿನ ರಜೆಯ ಕುರಿತಾಗಿ ಕಾನೂನುಗಳನ್ನು ರೂಪಿಸಿವೆ. ಅಂಥ ಕಾನೂನನ್ನು ಜಾರಿಗೆ ತಂದದ್ದು ಜಪಾನ್. 1947ರಲ್ಲಿ ಜಪಾನ್ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆ ಘೋಷಿಸಿತು. ಬಳಿಕ 1950ರಲ್ಲಿ ಇಂಡೊನೇಷ್ಯಾ ದಕ್ಷಿಣ ಕೊರಿಯಾ ತೈವಾನ್‌ನಲ್ಲೂ ಇದು ಜಾರಿಗೆ ಬಂದಿತು. 2007ರಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಉತ್ಪನ್ನಗಳ ಸಂಸ್ಥೆ ‘ನೈಕಿ’ ತನ್ನ ಎಲ್ಲಾ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡುವುದಾಗಿ ಘೋಷಿಸಿತು. ಅಂತೆಯೇ ಕಲ್ಚರ್‌ಮಷೀನ್ ಗೊಜೂಪ್ ಫ್ಲೈಮೈಬಿಜ್ ಕಂಪನಿಗಳು ಮುಟ್ಟಿನ ಸಂದರ್ಭದಲ್ಲಿ ಮನೆಯಿಂದಲೇ ಕೆಲಸಮಾಡುವ ಅಥವಾ ರಜೆ ನೀಡುವ ನೀತಿಯನ್ನು 2017ರಿಂದಲೇ ಜಾರಿ ಮಾಡಿವೆ. ಕೆಲವು ರಾಷ್ಟ್ರಗಳಲ್ಲಿ ರಜೆ ಇಲ್ಲದಿದ್ದರೂ ಮುಟ್ಟಿನ ಸಂದರ್ಭದಲ್ಲಿ ಕೆಲಸದ ಮಧ್ಯೆ ಇತರರಿಗಿಂತ ಅರ್ಧಗಂಟೆ ಹೆಚ್ಚು ವಿಶ್ರಾಂತಿ ಪಡೆಯಲು ಅವಕಾಶ ನೀಡಿವೆ. ಆಫ್ರಿಕಾದ ಜಾಂಬಿಯಾದಲ್ಲಿ ಪ್ರತಿತಿಂಗಳು ಒಂದು ದಿನ ಮಹಿಳೆಯರಿಗೆ ರಜೆ ನೀಡಲಾಗುತ್ತಿದೆ. ಒಂದು ವೇಳೆ ಈ ರಜೆ ಕೊಡಲು ಉದ್ಯೋಗದಾತರು ನಿರಾಕರಿಸಿದರೆ ಅವರ ವಿರುದ್ಧ ಉದ್ಯೋಗಿಗಳು ಕಾನೂನುಕ್ರಮ ಜರುಗಿಸುವಂತೆ ಆಗ್ರಹಿಸಬಹುದಾಗಿದೆ. ಸ್ಪೇನ್‌ನಲ್ಲೂ ಮುಟ್ಟಿನ ರಜೆ ಕುರಿತು ಕಾನೂನು ರಚಿಸಲು ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗಿದೆ. ಆದರೆ ಇನ್ನೂ ಅನುಮೋದನೆ ದೊರೆತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.