ಮಂಗಳೂರು: ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಬಾಳ್ಳುಪೇಟೆಯಿಂದ ಸಕಲೇಶಪುರ ದವರೆಗೆ, ಕೊಡಗು ಜಿಲ್ಲೆಯ ಕುಶಾಲನಗರ– ಸುಂಟಿಕೊಪ್ಪ– ಮಡಿಕೇರಿ ರಸ್ತೆ ಅಥವಾ ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳಲ್ಲಿ ಓಡಾಡಿದವರು ವಿಶಾಲ ಕಾಫಿ ತೋಟಗಳ ಸೌಂದರ್ಯಕ್ಕೆ ಮರುಳಾಗದೆ ಇರಲಾರರು. ಶುಭ್ರ ಶ್ವೇತ ವರ್ಣದ ಕಾಫಿ ಹೂವುಗಳು ಅರಳುವ ಸಮಯದಲ್ಲಿ ಗುಡ್ಡ– ಬೆಟ್ಟಗಳ ಮೇಲೆ ಹಿಮ ಸುರಿದಂತೆ ಗೋಚರಿಸುವ ಕಾಫಿ ತೋಟಗಳನ್ನು ನೋಡಿದರೆ ಮನಸ್ಸು ಉಲ್ಲಸಿತವಾಗುತ್ತದೆ. ಬೆಟ್ಟಗಳೊಡನೆ ಸರಸವಾಡುವ ಮೋಡಗಳು, ನದಿ– ಗುಡ್ಡ– ಕಣಿವೆಗಳನ್ನು ಒಂದಾಗಿಸುವಂತೆ ದಟ್ಟನೆ ಸುರಿವ ಮಂಜು, ತೋಟಗಳಲ್ಲಿ ಅರಳಿನಿಂತ ಹೂವುಗಳು, ಚುಮುಚುಮು ಚಳಿ... ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತದೆ.

ಬಾಳ್ಳುಪೇಟೆಗೆ ಹೋಗುತ್ತಾ ಇಂತಹ ಪ್ರಕೃತಿಯನ್ನು ಸವಿಯುವಾಗಲೇ ಕಾಫಿ ತೋಟದ ಅಕ್ಕಪಕ್ಕದಲ್ಲಿ ರೂಪುಗೊಂಡಿರುವ ಮತ್ತು ರೂಪುಗೊಳ್ಳುತ್ತಿರುವ ನಿವೇಶನಗಳು ಹಾಗೂ ಅವುಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಾಕಿದ್ದ ಬೋರ್ಡ್ಗಳು ಗಮನ ಸೆಳೆದವು. ಈಚಿನ ಸುಮಾರು ಒಂದು ದಶಕದಲ್ಲಿ ನಿಧಾನವಾಗಿ ನೂರಾರು ಎಕರೆ ಕಾಫಿ ತೋಟಗಳು ನಿವೇಶನಗಳಾಗಿ ಪರಿವರ್ತನೆಯಾಗಿವೆ. ದಕ್ಷಿಣದ ಕಾಶ್ಮೀರದಂತಿದ್ದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳ ಮಧ್ಯೆ ನಿಧಾನವಾಗಿ ರೆಸಾರ್ಟ್, ಹೋಂ ಸ್ಟೇಗಳು ತಲೆ ಎತ್ತುತ್ತಿವೆ. ಈ ಬದಲಾವಣೆಗೆ ಕಾರಣ ಹಾಗೂ ರೈತರ ಸಂಕಷ್ಟ ತಿಳಿಯುವ ಕುತೂಹಲದಿಂದ ಶಿರಾಡಿ ಘಾಟಿ ಹತ್ತಿ, ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆಗೆ ತಲುಪುವಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು.

ಹಿಂದಿನ ದಿನವಷ್ಟೇ ಮಳೆಯಾಗಿದ್ದರಿಂದ, ಬಾಳ್ಳುಪೇಟೆಯ ವಾತಾವರಣ ಹಿತವಾಗಿತ್ತು. ಸ್ವತಃ ಕಾಫಿ ಬೆಳೆಗಾರ, ಬೆಳೆಗಾರರ ಪರವಾಗಿ ಹಲವು ಹೋರಾಟಗಳನ್ನು ರೂಪಿಸಿ, ಕೆಲವು ಸಂಘ– ಸಂಸ್ಥೆಗಳನ್ನು ಕಟ್ಟುವಲ್ಲಿ ಸಕ್ರಿಯವಾಗಿ ದುಡಿದಿದ್ದ, 67 ವರ್ಷ ವಯಸ್ಸು ದಾಟಿರುವ ಬಿ.ಎ. ಜಗನ್ನಾಥ್ ಅವರ ಮನೆಗೆ ಬಸ್ ಸ್ಟ್ಯಾಂಡ್ನಿಂದ ಕೆಲವೇ ಮೀಟರ್ ಅಂತರ. ಮನೆಯ ಮುಂದಿನ ರಸ್ತೆ ದಾಟಿದರೆ ಅವರದ್ದೇ ಕಾಫಿ ತೋಟ. ಇತ್ತೀಚೆಗಷ್ಟೇ ಬೈಪಾಸ್ ರಸ್ತೆ (ಬೆಂಗಳೂರು– ಮಂಗಳೂರು) ಉದ್ಘಾಟನೆಯಾಗಿದ್ದರಿಂದ ಪಟ್ಟಣದೊಳಗೆ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಆದರೂ ಎಡ–ಬಲ ನೋಡಿಕೊಂಡು ರಸ್ತೆ ದಾಟಿದರೆ, ಜಗನ್ನಾಥ್ ಅವರು ಮನೆ ಬಾಗಿಲಲ್ಲೇ ನಿಂತಿದ್ದರು. ನಿಧಾನವಾಗಿ ಮಾತಿಗೆಳೆದಾಗ; ‘ಕಾಫಿತೋಟ ಈಗ ‘ಭೂಮಾಫಿಯಾ’ ಕೈಸೇರುತ್ತಿದೆ. ತೋಟಗಳು ಬೆಳೆಗಾರರ ಕೈಜಾರುತ್ತಿವೆ. ರೈತರಿಗೆ ನಷ್ಟವಾಗುವುದಲ್ಲ; ನಷ್ಟವಾಗುವಂಥ ಸ್ಥಿತಿ ನಿರ್ಮಿಸಲಾಗುತ್ತಿದೆ. ಯಾವುದೂ ಅಚಾನಕಾಗಿ ನಡೆದಿಲ್ಲ; ಯೋಜನಾ ಬದ್ಧವಾಗಿ ನಡೆಯುತ್ತಿದೆ. ರಿಯಲ್ ಎಸ್ಟೇಟ್ ದಂಧೆ, ಕಪ್ಪು ಹಣ ಬೆಳ್ಳಗಾಗಿಸುವ ಸಂಚು, ಭೂಗತ ಪಾತಕಿಗಳ ಜೊತೆ ಕೈಜೋಡಿಸಿರುವ ಕೆಲ ರಾಜಕಾರಣಿಗಳ ಕೂಟ ಎಲ್ಲದಕ್ಕೂ ಕಾಫಿ ತೋಟಗಳು ಬೆಳೆಗಾರರ ಕೈಬಿಡುತ್ತಿವೆ’ ಎಂದು ಸಮಸ್ಯೆಯ ಎಳೆಗಳನ್ನು ಬಿಡಿಸುತ್ತಾ ಹೋದರು ಜಗನ್ನಾಥ್.

‘ಕಾಫಿಗೆ ಸಮಸ್ಯೆ ಏನು’ ಎಂದು ಕೇಳಿದರೆ, ‘ಗಿಡಗಳಿಗೆ ಬೋರರ್ ಕಾಟ, ಕಾರ್ಮಿಕರ ಸಮಸ್ಯೆ, ಬೆಲೆ ಏರಿಳಿತ, ಕಾಡು ಪ್ರಾಣಿಗಳು, ಹವಾಮಾನ ಏರುಪೇರು... ಹೀಗೆ ಉದ್ದನೆಯ ಪಟ್ಟಿಯನ್ನೇ ಬೆಳೆಗಾರರು ನೀಡಬಹುದು. ಆದರೆ, ಈಚಿನ ಒಂದುವರೆ ದಶಕದಲ್ಲಿ ಕಾಫಿ ತೋಟಗಳೇ ನಾಶವಾಗುವ ಭೀತಿ ಎದುರಾಗಿದೆ. ಕಾಫಿ ತೋಟ ಮತ್ತು ಆದಾಯದ ಬಗ್ಗೆ ವಿಚಿತ್ರ ‘ಫ್ಯಾಂಟಸಿ’, ಭೂಮಾಫಿಯಾಗಳ ಕಾಟ, ಕಾಫಿ ನಾಡಿಗೆ ರಿಯಲ್ ಎಸ್ಟೇಟ್ ಹಿನ್ನೆಲೆಯ ರಾಜಕಾರಣಿಗಳ ಪ್ರವೇಶ... ಇವೆಲ್ಲವೂ ಹೊಸ ಮತ್ತು ಪರಿಹಾರವೇ ಇಲ್ಲದ ಸಮಸ್ಯೆ ಸೃಷ್ಟಿಸಿವೆ’ ಎನ್ನುತ್ತಾರೆ ಜಗನ್ನಾಥ್.

‘ಹಿಂದೆ ಬೆಳೆಗಾರರೆಲ್ಲ ಸೇರಿ, ಕೈಯಿಂದ ಹಣ ಖರ್ಚು ಮಾಡಿ ಬೆಳೆಗಾರರ ಅಭಿವೃದ್ಧಿಗಾಗಿ ಕೆಲವು ಸಂಸ್ಥೆಗಳನ್ನು ಕಟ್ಟಿದರು. ಹಲವು ವರ್ಷಗಳವರೆಗೆ ಅವು ಚೆನ್ನಾಗಿ ನಡೆದವು. ಅವುಗಳು ಶ್ರೀಮಂತವಾಗುತ್ತಿದ್ದಂತೆ ಪಟ್ಟ ಭದ್ರರ ಪ್ರತಿನಿಧಿಗಳು ಬಂದು ಆಯಕಟ್ಟಿನ ಜಾಗದಲ್ಲಿ ಕುಳಿತರು’ ಎಂದು ಜಗನ್ನಾಥ್ ಬೇಸರಿಸಿದರು.

ಕೆಲವು ವರ್ಷಗಳ ಹಿಂದೆ ತೋಟಕ್ಕೆ ಒಳ್ಳೆಯ ಬೆಲೆ ಸಿಕ್ಕಿತೆಂಬ ಖುಷಿಯಲ್ಲಿ. ಬಾಳ್ಳುಪೇಟೆಯ ಹತ್ತು ಬೆಳೆಗಾರರು ತಮ್ಮ ತೋಟಗಳನ್ನು ರಿಯಲ್ಎಸ್ಟೇಟ್ ಉದ್ಯಮಿಯೊಬ್ಬರಿಗೆ ಮಾರಿ, ಪಟ್ಟಣಕ್ಕೆ ಹೋಗಿ ಬೇರೆಬೇರೆ ವ್ಯವಹಾರ ಆರಂಭಿಸಿದ್ದರು. ಆದರೆ ಯಾವುದೂ ಕೈಹತ್ತಲಿಲ್ಲ. ಈಗ ಅವರು ಕೇಟರಿಂಗ್ ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವುದು ನಮ್ಮ ಕಣ್ಣಮುಂದಿದೆ. ಇವರಿಂದ ತೋಟ ಖರೀದಿಸಿದ್ದ ವ್ಯಕ್ತಿ, ಅಲ್ಲಿ 120ಕ್ಕೂ ಹೆಚ್ಚು ನಿವೇಶನಗಳನ್ನು ಮಾಡಿ, ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. ಭೂಮಾಫಿಯ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಜಗನ್ನಾಥ್ ಅವರು ಈ ಉದಾಹರಣೆ ಮುಂದಿಟ್ಟರು. ‘ಎರಡು ದಶಕಗಳ ಹಿಂದೆಯೇ ಈ ಬೆಳವಣಿಗೆ ಆರಂಭವಾಗಿದೆ. ಇದರ ಬೇರು ಎಷ್ಟು ಆಳಕ್ಕೆ ಇಳಿದಿದೆ ಎಂದರೆ, ಇನ್ನು ಹತ್ತು ಹದಿನೈದು ವರ್ಷಗಳಲ್ಲಿ ಈಗಿರುವ ಕಾಫಿ ತೋಟಗಳಲ್ಲಿ ಶೇ 15ರಿಂದ 20ರಷ್ಟು ಮಾತ್ರ ಉಳಿದು, ಮಿಕ್ಕವು ಸೈಟ್ಗಳಾಗಿ, ಹೋಮ್ ಸ್ಟೇ ಅಥವಾ ರೆಸಾರ್ಟ್ಗಳಾಗಿ ಬದಲಾಗಲಿವೆ’ ಎಂದು ಜಗನ್ನಾಥ್ ಅವರ ಧಾಟಿಯಲ್ಲೇ ಮಾತನಾಡುತ್ತಾರೆ ಸಕಲೇಶಪುರದ ಬೆಳೆಗಾರ ವೇದಮೂರ್ತಿ ದಬ್ಬೆಗದ್ದೆ.

‘ಕಾಫಿ ನಾಡಿಗೆ ಮೂರು ರೀತಿಯ ಖರೀದಿದಾರರು ಬರುತ್ತಿದ್ದಾರೆ ಮೊದಲನೆಯವರು ರಿಯಲ್ ಎಸ್ಟೇಟ್ ಉದ್ಯಮಿಗಳು. ಎರಡನೆಯವರು ಸರ್ಕಾರಿ ನೌಕರರು ಹಾಗೂ ಇನ್ನೊಂದು ವರ್ಗದವರೆಂದರೆ ಸಣ್ಣ ಹೂಡಿಕೆದಾರರು. ರಿಯಲ್ ಎಸ್ಟೇಟ್ ಉದ್ಯಮಿಗಳ ಗುರಿ ಸ್ಪಷ್ಟ. ಹಣ ಸಂಪಾದನೆಗಿಂತ ಭಿನ್ನವಾದ ಯೋಚನೆ ಅವರಲ್ಲಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಕಾಫಿ ತೋಟಗಳು ಕಪ್ಪು ಹಣವನ್ನು ಬಿಳಿಯಾಗಿಸುವ ಸರಳ ಮಾರ್ಗವಾಗಿವೆ. ನನ್ನ ಪರಿಚಯದ ಅಧಿಕಾರಿಯೊಬ್ಬರು ಜಿಲ್ಲೆಯಲ್ಲಿ ಕೆಲವು ಎಕರೆ ತೋಟ ಖರೀದಿಸಿದ್ದು, ವರ್ಷಕ್ಕೆ ಎಕರೆಯೊಂದರಿಂದ ₹16.70 ಲಕ್ಷ ಆದಾಯ ತೋರಿಸುತ್ತಿದ್ದಾರೆ. ಒಳ್ಳೆಯ ಬೆಳೆಗಾರನಿಗೂ ಎಕರೆಯಲ್ಲಿ ₹10 ಲಕ್ಷ ದುಡಿಯಲು ಸಾಧ್ಯವಾಗದು. ಇಂಥವರು ಬೇರೆಬೇರೆ ಮೂಲಗಳಿಂದ ಸಂಪಾದಿಸಿದ ಹಣವನ್ನು ಕೃಷಿ ಆದಾಯವಾಗಿ ತೋರಿಸುತ್ತಾರೆ. ಮೂರನೇ ವರ್ಗದವರು ಸಣ್ಣ ಹೂಡಿಕೆದಾರರು. ಇವರು ಮಧ್ಯವರ್ತಿಗಳು ಸೃಷ್ಟಿಸುವ ಫ್ಯಾಂಟಸಿಗೆ ಒಳಗಾಗಿ ತೋಟ ಖರೀದಿಸುತ್ತಿದ್ದಾರೆ’ ಎಂದು ವೇದಮೂರ್ತಿ ಹೇಳುತ್ತಾರೆ.

ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಹಲವೆಡೆ ದೊಡ್ಡ ದೊಡ್ಡ ರಿಯಲ್ಎಸ್ಟೇಟ್ ಕುಳಗಳು ಸಾವಿರಾರು ಎಕರೆ ಕಾಫಿ ತೋಟಗಳನ್ನು ಖರೀದಿಸಿ, ಸಣ್ಣಸಣ್ಣ ಸೈಟ್ಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿವೆ. ಇಂಥ ನಿವೇಶನಗಳ ಖರೀದಿದಾರರು ಹೂಡಿಕೆ ಅಥವಾ ಇನ್ಯಾವುದೋ ಉದ್ದೇಶದಿಂದ ಖರೀದಿಸುತ್ತಾರೆಯೇ ವಿನಾ, ಕೃಷಿ ಮಾಡುವ ಅಥವಾ ತೋಟ ಉಳಿಸುವ ಉದ್ದೇಶದಿಂದ ಅಲ್ಲ.

ತೋಟಗಳನ್ನು ರಿಯಲ್ಎಸ್ಟೇಟ್ ಕುಳಗಳ ಕೈಗೊಪ್ಪಿಸುವ ಸಲುವಾಗಿ ಎಲ್ಲಾ ಊರುಗಳಲ್ಲಿ ಮಾಫಿಯಾ ಹುಟ್ಟಿಕೊಂಡಿವೆ. ಭೂಗತ ಚಟುವಟಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬ ಸಕಲೇಶಪುರದಲ್ಲಿ ಹಿಂದೆ ನೂರಾರು ಎಕರೆ ತೋಟ ಖರೀದಿಸಿದ್ದ. ಅದು ಕೆಲವು ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಗೆ ಮಾರಾಟವಾಗಿದೆ. ಈಗ ಅದರಲ್ಲಿ ಅರ್ಧ ಭಾಗ ನಿವೇಶನವಾಗಿದೆ. ಉಳಿದ ಜಾಗದಲ್ಲಿ ಸ್ಟಾರ್ ಹೋಟೆಲ್, ರೆಸಾರ್ಟ್ ನಿರ್ಮಾಣವಾಗುತ್ತಿದೆ ಎಂದು ಹೆಸರು ಹೇಳಲು ಇಷ್ಟಪಡದ ಸಕಲೇಶಪುರದ ಬೆಳೆಗಾರರೊಬ್ಬರು ಮಾಹಿತಿ ನೀಡಿದರು.

ತಲೆತಲಾಂತರದಿಂದ ಬಂದಿರುವ ಕೆಲವು ತೋಟಗಳ ಭೂ ದಾಖಲೆಗಳು ಸರಿ ಇಲ್ಲ. ದಾಖಲೆಗಳನ್ನು ಸರಿಮಾಡಿಸಲು, ಪೋಡಿ ಮಾಡಲು ಅಥವಾ ಸರ್ವೆ ಮಾಡಿಸಲು ಯಾರಾದರೂ ತಹಶೀಲ್ದಾರ್ ಕಚೇರಿಗೆ ಹೋದರೆ, ಅಲ್ಲಿರುವ ಏಜೆಂಟರು ಅದರ ಮಾಹಿತಿಯನ್ನು ‘ಸಂಬಂಧಪಟ್ಟರಿಗೆ’ ತಲುಪಿಸುತ್ತಾರೆ. ದಾಖಲೆ ಸರಿ ಇಲ್ಲ ಎಂಬುದನ್ನೇ ಕಾರಣವಾಗಿಟ್ಟು ಶೋಷಣೆ, ಬೆದರಿಕೆ ಆರಂಭವಾಗುತ್ತವೆ. ಇಂಥ ವಿವಾದಗಳು ತೋಟ ಮಾರಾಟ ಆಗುವ ಮೂಲಕ ಕೊನೆಗೊಳ್ಳುತ್ತವೆ. ದಾಖಲೆಗಳನ್ನು ಸರಿಮಾಡಿಸಲು ಹೋಗಿ ತೋಟಗಳನ್ನು ಕಳೆದುಕೊಂಡು, ಮಾಲೀಕರು ಬೀದಿಗೆ ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ ಎನ್ನುವರು.

ಕಾಫಿ ತೋಟ ಕೋಟಿಗಳಲ್ಲಿ ಮಾರಾಟ ಆಗಿರುವ ಸುದ್ದಿ ಆಗಾಗ ಕೇಳಿಬರುತ್ತದೆ. ಆದರೆ ವಾಸ್ತವ ಬೇರೆಯೇ ಇರುತ್ತದೆ ಎನ್ನುತ್ತಾರೆ ಸಕಲೇಶಪುರದ ಬೆಳೆಗಾರರು. ‘ಕೋಟಿಗಳಲ್ಲಿ ಮಾತುಕತೆ ನಡೆಯುವುದು ನಿಜ. ಆದರೆ ಅನಂತರ ನಡೆಯುವುದೇ ಬೇರೆ. ಮಾಲೀಕರು ಕೊಟ್ಟ ತೋಟಕ್ಕೆ, ಹಣದ ಬದಲು ಮಾಫಿಯಾದವರು ಬೇರೆಲ್ಲೋ ಒಂದಿಷ್ಟು ಜಾಗ, ಕೊಂಚ ‘ಕಪ್ಪುಹಣ‘ ಮತ್ತೊಂದಿಷ್ಟು ‘ಬಿಳಿಹಣ‘ ಕೊಡುತ್ತಾರೆ. ಆದರೆ ಅಲ್ಲಿ ಇರಲೂ ಆಗದೆ, ಬಿಡಲೂ ಆಗದೆ ಕೊನೆಗೆ ಮೂರುಕಾಸಿನ ಬೆಲೆಗೆ ಇನ್ಯಾರಿಗೋ ಮಾರಾಟ ಮಾಡಿ ಹೋಗಬೇಕಾಗುತ್ತದೆ. ತೋಟದ ಮಾಲೀಕರಿಗೆ ಸಿಕ್ಕುವುದು ಬಿಡಿಗಾಸು. ಆದರೆ, ಖರೀದಿಸಿದ ವ್ಯಕ್ತಿ ಅದನ್ನು ಹಲವು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುತ್ತಾನೆ’ ಎಂದು ತೋಟ ಮಾರಿದ ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡರು. ರಾಜಕೀಯವಾಗಿ ಬಲಿಷ್ಠರಾಗಿದ್ದರೆ ಮಾತ್ರ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅವರು.

‘ಬೆಳೆಗಾರರಿಗೆ ಸರ್ಕಾರದ ರಕ್ಷಣೆ ಯಾಕೆ ಸಿಗುತ್ತಿಲ್ಲ’ ಎಂದು ಪ್ರಶ್ನಿಸಿದರೆ, ಕಾಫಿ ಬೆಳೆಗಾರರ ಪರವಾಗಿ ದುಡಿದ ಹಿರಿಯರೊಬ್ಬರು ಒಂದು ನಿದರ್ಶನವನ್ನು ಮುಂದಿಟ್ಟರು...

‘ಹಿಂದೆ ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾಗ, ಕೇಂದ್ರ ಸರ್ಕಾರದ ಸಚಿವರೊಬ್ಬರನ್ನು ಆಹ್ವಾನಿಸಿ, ಮೂರೂ ಜಿಲ್ಲೆಗಳಲ್ಲಿ ಅವರ ಪ್ರವಾಸ, ಬೆಳೆಗಾರರೊಂದಿಗೆ ಸಂವಾದ ಏರ್ಪಡಿಸಿದ್ದೆವು. ಸಂಕಷ್ಟವನ್ನು ಅರ್ಥ ಮಾಡಿಕೊಂಡ ಸಚಿವರು, ಸಾಲ ಮನ್ನಾ ಸೇರಿದಂತೆ ಕೆಲವು ನೆರವುಗಳ ಭರವಸೆ ಕೊಟ್ಟು ಹೋಗಿದ್ದರು. ಸ್ವಲ್ಪ ಸಮಯದಲ್ಲಿ ಸರ್ಕಾರ ಬದಲಾಯಿತು. ಹೊಸ ಸಚಿವರು ನಮ್ಮ ಯಾವ ಸಮಸ್ಯೆಯನ್ನೂ ಆಲಿಸಲಿಲ್ಲ. ಅಷ್ಟೇ ಅಲ್ಲ, ಹಿಂದಿನ ಸಚಿವರು ಮಾಡಿದ್ದ ಕೆಲಸಕ್ಕೂ ತಡೆ ಒಡ್ಡಿದರು. ಸಮಸ್ಯೆಯ ಆಳಕ್ಕೆ ಇಳಿದಾಗ ಗೊತ್ತಾಗಿದ್ದು, ಹೊಸ ಸಚಿವರೇ ಕಾಫಿ ತೋಟ ಖರೀದಿಯಲ್ಲಿ ಆಸಕ್ತಿ ಹೊಂದಿದ್ದರು ಎಂಬ ವಿಚಾರ. ಸಾಲ ಮನ್ನಾ ಮಾಡಿದರೆ ಮಾಲೀಕರು ತೋಟ ಮಾರುವುದಿಲ್ಲ. ಸಂಕಷ್ಟಕ್ಕೆ ಒಳಗಾದರೆ ಮಾರಾಟ ಅನಿವಾರ್ಯವಾಗುತ್ತದೆ ಎಂಬುದನ್ನು ಸಚಿವರು ಅರಿತಿದ್ದರು’ ಎಂದು ಆರೋಪಿಸಿದರು.

‘ಕೆಲವು ಅಧಿಕಾರಿಗಳು ಸಹ ಇಂಥ ವ್ಯವಹಾರಸ್ಥರಿಗೆ ನೆರವಾಗುತ್ತಾರೆ. ಹಿಂದೆ ಕೇಂದ್ರದ ಸಚಿವ ಪೀಯೂಶ್ ಗೋಯಲ್ ಅವರನ್ನು ನಾವು ಭೇಟಿಯಾಗಿ, ಕಾಫಿ ಬೆಳೆಯನ್ನು ‘ಸರ್ಫೇಸಿ’ (ಬೆಳೆಗಾರರು ಸಾಲ ಮರುಪಾವತಿ ಮಾಡದಿದ್ದರೆ, ಅವರ ಆಸ್ತಿ ಹರಾಜುಹಾಕಲು ಬ್ಯಾಂಕ್ಗಳಿಗೆ ಅನುವು ಮಾಡಿಕೊಡುವ ‘ಸೆಕ್ಯುರಿಟೈಸೇಶನ್ ಅಂಡ್ ರಿಕನ್ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಆ್ಯಂಡ್ ಎನ್ಫೋರ್ಸ್ಮೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್) ಕಾಯ್ದೆಯಿಂದ ಹೊರಗಿಡುವಂತೆ ಒತ್ತಾಯಿಸಿದ್ದೆವು. ನಮ್ಮ ವಾದವನ್ನು ಆಲಿಸಿದ ಅವರು, ಹಿರಿಯ ಅಧಿಕಾರಿಯೊಬ್ಬರಿಗೆ ಸಮಸ್ಯೆ ಬಗೆಹರಿಸಲು ಈ ಬಗ್ಗೆ ಸೂಚನೆ ನೀಡಿದ್ದರು. ಆದರೆ, ಆ ಅಧಿಕಾರಿ, ಇಲ್ಲದ ತಕರಾರು, ಕಾನೂನು ತೊಡಕುಗಳನ್ನು ಮುಂದಿಟ್ಟು ‘ಅದು ಸಾಧ್ಯವಿಲ್ಲ’ ಎಂದು ವಾದಿಸಿದ್ದರು’ ಎಂದು ಜಗನ್ನಾಥ್ ನೆನಪಿಸಿಕೊಂಡರು.

ಮೂರೂ ಜಿಲ್ಲೆಗಳಲ್ಲಿ ಹಲವು ಸಾವಿರ ಎಕರೆ ಕಾಫಿ ತೋಟಗಳು ಕೃಷಿ ಸರಿಯಾಗಿ ಗೊತ್ತಿರದ ಅನ್ಯ ರಾಜ್ಯದವರ ಪಾಲಾಗಿವೆ. ಅವರು ತೋಟಗಳನ್ನು ನೋಡುತ್ತಿಲ್ಲ. ನಿಧಾನಕ್ಕೆ ಕಾಡುಪ್ರಾಣಿಗಳು ತೋಟಗಳನ್ನು ತಮ್ಮ ಆವಾಸವಾಗಿಸುತ್ತವೆ. ಆರೈಕೆ ಇಲ್ಲದಿರುವುದರಿಂದ ಆ ತೋಟಗಳಲ್ಲಿ ರೋಗ ಕಾಣಿಸುತ್ತದೆ. ಅಕ್ಕಪಕ್ಕದ ತೋಟಗಳಿಗೂ ರೋಗ ಹಬ್ಬುತ್ತದೆ, ಕಾಡು ಪ್ರಾಣಿಗಳು ದಾಳಿ ಇಡುತ್ತವೆ. ಹಾಕಿದ ಬಂಡವಾಳವೂ ಬಾರದೆ, ತೋಟಗಳನ್ನು ಮಾರಾಟ ಮಾಡುವುದು ಬೆಳೆಗಾರರಿಗೆ ಅನಿವಾರ್ಯವಾಗುತ್ತಿದೆ.

ಜೊತೆಗೆ ಸರ್ಫೇಸಿ ಕಾಯ್ದೆ ಮುಂದಿಟ್ಟುಕೊಂಡು ಬ್ಯಾಂಕ್ ಅಧಿಕಾರಿಗಳು ಬೆಳೆಗಾರರ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಸಾಲ ಮರುಪಾವತಿಸಲು ಪರದಾಡುತ್ತಿರುವ ಬೆಳೆಗಾರರ ತೋಟಗಳನ್ನು ಹರಾಜು ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಕಾಫಿ ಉದ್ಯಮವನ್ನು ಹೊರಗಿಡಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರು ವಾದಿಸುತ್ತಾರೆ.

‘ಕೆಲ ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ಭೂಮಾಫಿಯಾಗಳು ಬೆದರಿಸಿ ತೋಟ ಖರೀದಿಸಿದರೆ, ರಾಜಕಾರಣಿಗಳು ಮಾರಾಟದ ಅನಿವಾರ್ಯತೆ ಸೃಷ್ಟಿಸಿ ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಪರಿಸರಪ್ರೇಮಿಗಳು.

‘ನಮ್ಮ ಮಕ್ಕಳಿಗೂ ಈ ಸಂಕಷ್ಟ ಬೇಡ’ ಎಂದು ಅನೇಕ ಬೆಳೆಗಾರರು ಮಕ್ಕಳಿಗೆ ಶಿಕ್ಷಣ ಕೊಟ್ಟು ಉದ್ಯೋಗಕ್ಕಾಗಿ ಪೇಟೆಗೆ ಅಟ್ಟಿದ್ದಾರೆ. ಚೆನ್ನಾಗಿ ದುಡಿಯುತ್ತಿರುವ ಕೆಲವರು, ಕೃಷಿ ಮಾಡುತ್ತಿಲ್ಲ, ಆದರೆ ತೋಟವನ್ನು ಮಾರಾಟ ಮಾಡದೆ, ‘ನಿವೃತ್ತಿ ನಂತರದ ಜೀವನಕ್ಕೆ ಇರಲಿ’ ಎಂದು ಹಾಗೆಯೆ ಬಿಟ್ಟಿದ್ದಾರೆ. ಮಿಕ್ಕವರೂ ಈಗ ಅದೇ ಹಾದಿಯಲ್ಲಿದ್ದಾರೆ.

‘ಟೊಳ್ಳಾಗುತ್ತಿದೆ ಕೊಡಗು’: ‘ಮಾಫಿಯಾ ಕೈಗೆ ಸಿಲುಕಿ ಕೊಡಗು ಜಿಲ್ಲೆಯ ಕಾಫಿತೋಟಗಳಿಗೂ ಗೆದ್ದಲು ಹಿಡಿದಿದೆ. ಕೊಡಗು ಜಿಲ್ಲೆಯ ಈಗಿನ ರಮಣೀಯತೆ ಅವಸಾನಹೊಂದುವ ದಿನಗಳು ದೂರ ಇಲ್ಲ. ಪರಿಸರ ಸಂರಕ್ಷಣೆಗೆ ಸರ್ಕಾರ ಕಠಿಣ ನಿಯಮಗಳನ್ನು ವಿಧಿಸಿದರೂ ರಿಯಲ್ ಎಸ್ಟೇಟ್ ಮಾಫಿಯಾ ರಂಗೋಲಿ ಕೆಳಗೆ ನುಸುಳಿ ಪರಿಸರ, ಜಲಮೂಲ ಹಾಗೂ ವನ್ಯಜೀವಿಗಳನ್ನು ಆಪೋಶನ ತೆಗೆದುಕೊಳ್ಳುತ್ತಿವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಾವಿರಾರು ಎಕರೆ ಕಾಫಿ ತೋಟಗಳನ್ನು ಒಮ್ಮೆಗೆ ಭೂಪರಿವರ್ತನೆ ಮಾಡಿದರೆ ಜನ, ಪರಿಸರವಾದಿಗಳ ಗಮನ ಸೆಳೆಯುತ್ತದೆ ಮತ್ತು ಅಧಿಕ ಶುಲ್ಕ ತೆರಬೇಕಾಗುತ್ತದೆ, ಜಿಲ್ಲಾ ಸಮಿತಿಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗುತ್ತದೆ. ಅದಕ್ಕೆ ಬದಲಾಗಿ, ಎಕರೆಗಟ್ಟಲೆ ತೋಟ ಖರೀದಿಸಿ, ತಲಾ 2ರಿಂದ 5 ಎಕರೆಗೆ ವಿಭಾಗ ಮಾಡಿಕೊಳ್ಳಲಾಗುತ್ತದೆ. ಪ್ರತಿ ಸರ್ವೇ ನಂಬರ್ನಲ್ಲೂ 20 ಸೆಂಟ್ ಜಾಗದೊಳಗೆ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೆ ಅರ್ಜಿ ಹಾಕಲಾಗುತ್ತದೆ. ಆಗ ನಿರಾಕ್ಷೇಪಣಾ ಪತ್ರದ ಅವಶ್ಯಕತೆ ಇರುವುದಿಲ್ಲ. ಸುಲಭದಲ್ಲಿ, ಕಡಿಮೆ ಖರ್ಚಿನಲ್ಲಿ ಭೂ ಪರಿವರ್ತನೆಯಾಗುತ್ತದೆ. ತೋಟದ ಮನೆ ನಿರ್ಮಿಸಲು ಭೂ ಪರಿವರ್ತನೆ ಅಗತ್ಯ ಇಲ್ಲದಿದ್ದರೂ ವಾಣಿಜ್ಯ ಉದ್ದೇಶಕ್ಕೆ ಬಳಸುವಾಗ ಕಾನೂನಾತ್ಮಕ ಅಡಚಣೆ ಆಗಬಾರದೆಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತದೆ.

ಕೆಲ ದಿನಗಳಲ್ಲೇ ಅಲ್ಲಿ ಸುಂದರ ಮನೆ ನಿರ್ಮಾಣವಾಗುತ್ತದೆ. ನೆಪಮಾತ್ರಕ್ಕೆ ಕೆಲವು ಕಾಫಿ ಗಿಡಗಳನ್ನು ಉಳಿಸಿಕೊಂಡು, ಸುತ್ತ ತಮಗೆ ಬೇಕಾದಂತೆ ಉದ್ಯಾನವನ್ನಾಗಿ ಪರಿವರ್ತಿಸಲಾಗುತ್ತದೆ. ದಾಖಲೆಗಳ ಪ್ರಕಾರ ಅದು ಕೃಷಿ ಭೂಮಿ ಮಧ್ಯದಲ್ಲಿರುವ ತೋಟದ ಮನೆ. ರಿಯಲ್ ಎಸ್ಟೇಟ್ ಪ್ರಪಂಚದಲ್ಲಿ ಇದು ‘ಎಸ್ಟೇಟ್ ವಿಲ್ಲಾ’.

ಇಂತಹ ವಿಲ್ಲಾಗಳನ್ನು ಖರೀದಿಸುವವರೆಲ್ಲ ಹೊರರಾಜ್ಯಗಳ ಸಿರಿವಂತರು ಮತ್ತು ವಾರಾಂತ್ಯ, ಬೇಸಿಗೆ ರಜೆ ದಿನಗಳನ್ನು ಅಥವಾ ಬಿಡುವಾದಾಗ ಮಾತ್ರ ಇಲ್ಲಿರಲು ಬಯಸುವ ಐಷಾರಾಮಿಗಳು. ವಿಲ್ಲಾಗಳನ್ನು ಮಾರಾಟ ಮಾಡುವ ರಿಯಲ್ ಎಸ್ಟೇಟ್ ಕಂಪನಿಯೇ ಮನೆಯ ಸುತ್ತಲಿನ ತೋಟ ಅಥವಾ ಉದ್ಯಾನವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತುಕೊಳ್ಳುತ್ತದೆ. ಅದಕ್ಕೆ ಶುಲ್ಕ ತೆಗೆದುಕೊಳ್ಳುತ್ತದೆ.

ಹೀಗೆ ತೋಟದ ಮಧ್ಯೆ ಮನೆ ಖರೀದಿಸುವ ಜನರೊಂದಿಗೆ ಕಂಪನಿ ಒಪ್ಪಂದ ಮಾಡಿಕೊಳ್ಳುತ್ತದೆ. ಖರೀದಿಸಿದವರು ತಮಗೆ ಬೇಕಾದಾಗ ಇಲ್ಲಿ ಬಂದು ಉಳಿದುಕೊಳ್ಳಬಹುದು. ಉಳಿಕೆ ದಿನಗಳಲ್ಲಿ ಮನೆಯನ್ನು ಹೋಮ್ ಸ್ಟೇಯಾಗಿ ಪರಿವರ್ತಿಸಲಾಗುತ್ತದೆ. ಅದರಿಂದ ಬರುವ ಆದಾಯ ಕಂಪನಿ ಮತ್ತು ತೋಟದ ಮಾಲೀಕರಿಗೆ ಹಂಚಿಕೆಯಾಗುತ್ತದೆ. ಇವ್ಯಾವುವೂ ಕದ್ದು ಮುಚ್ಚಿ ನಡೆಯುತ್ತಿಲ್ಲ. ಕೆಲವು ಸಂಸ್ಥೆಗಳು ತಮ್ಮ ವೆಬ್ಸೈಟ್ ಮೂಲಕ ಖರೀದಿದಾರರಿಗೆ ಆಹ್ವಾನ ನೀಡುತ್ತಿವೆ. ಮೂರು ಜಿಲ್ಲೆಗಳಲ್ಲಿ ಈಗಾಗಲೇ ಹಲವು ಸಾವಿರ ಎಕರೆಗಳಷ್ಟು ಕಾಫಿ ತೋಟಗಳು ಈ ಉದ್ದೇಶಕ್ಕಾಗಿಯೇ ಮಾರಾಟವಾಗಿವೆ.

‘ಕಾಫಿ ತೋಟಗಳಲ್ಲಿ ಈ ಪರಿಯಲ್ಲಿ ಹೂಡಿಕೆ ಮಾಡುತ್ತಿರುವರಲ್ಲಿ ಆಂಧ್ರಪ್ರದೇಶ ಮತ್ತು ಕೇರಳದವರೇ ಹೆಚ್ಚು. ಇದರಲ್ಲಿ ಸ್ಥಳೀಯರ ಪ್ರಮಾಣ ಶೇ 0.001ರಷ್ಟಿದೆ. ತೋಟದ ದರ ಯಾವ ಪ್ರಮಾಣದಲ್ಲಿದೆ, ಪರಿಣಾಮವೇನು, ಹೂಡಿಕೆದಾರರು ಯಾರು... ಯಾವುದೂ ಸ್ಪಷ್ಟವಿಲ್ಲ. ಅಂದಾಜು ಪ್ರಕಾರ ಸದ್ಯ ಒಂದು ಎಕರೆ ಕಾಫಿ ತೋಟ ₹40 ಲಕ್ಷದಿಂದ ₹60 ಲಕ್ಷಕ್ಕೆ ಮಾರಾಟವಾಗುತ್ತಿದೆ. ಸ್ವಲ್ಪ ಹೆಚ್ಚುಕಮ್ಮಿ ಇರಬಹುದು’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

‘ದೂರದಿಂದ ನೋಡುವವರಿಗೆ ಇವೆಲ್ಲ ಸುಂದರವಾಗಿ ಕಾಣಿಸುತ್ತವೆ. ಆದರೆ, ಈ ಬೆಳವಣಿಗೆಗಳು ಕೊಡಗಿನ ಪರಿಸರ ವ್ಯವಸ್ಥೆಯನ್ನು ಗೆದ್ದಲಿನಂತೆ ಒಳಗಿನಿಂದ ಟೊಳ್ಳಾಗಿಸುತ್ತಿವೆ. ಕಾಡು ಪ್ರಾಣಿಗಳ ಓಡಾಟಕ್ಕೆ ತೊಂದರೆ, ನೀರಿನ ಸಹಜ ಹರಿವಿಗೆ ಅಡ್ಡಿಯಾಗುತ್ತದೆ. ಇಲ್ಲಿಯೇ ಜಲಮೂಲಗಳು ಮಲಿನವಾಗುತ್ತಿವೆ. ಅವು ಬತ್ತಿದರೆ ಅದರ ಬಿಸಿ, ಬೆಂಗಳೂರು, ಮೈಸೂರು, ಮಂಗಳೂರು ಭಾಗದವರು ಸಹ ಅನುಭವಿಸಬೇಕಾಗುತ್ತದೆ’ ಎಂದು ಪರಿಸರಪ್ರೇಮಿಗಳು ಎಚ್ಚರಿಸುತ್ತಾರೆ.

ಚಿಕ್ಕಮಗಳೂರು ಪರಿಸರ ಸೂಕ್ಷ್ಮ ಪ್ರದೇಶ. ಹುಲಿ ಸಂರಕ್ಷಿತ ಪ್ರದೇಶ ಮತ್ತು ಆನೆ ಕಾರಿಡಾರ್ ಸಹ ಇವೆ. ಇವುಗಳ ಬಫರ್ ವಲಯದಲ್ಲೇ 242 ಎಕರೆ ಜಾಗವನ್ನು ತುಂಡು ಭೂಮಿಯಾಗಿ ವಿಭಜನೆ ಮಾಡಿ ಆರು ಕಂಪನಿಗಳು ಲೇಔಟ್ ನಿರ್ಮಿಸಲು ಮುಂದಾಗಿದ್ದವು. ಜಿಲ್ಲಾಡಳಿತ ಈ ಕಂಪನಿಗಳಿಗೆ ನೋಟಿಸ್ ನೀಡಿ ಯೋಜನೆಯನ್ನು ತಡೆದಿದೆ. ಈ ಪ್ರದೇಶದ ಅಪರೂಪದ ಮತ್ತು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು, ಕಡಾನೆ, ಹುಲಿ, ಚಿರತೆ, ಜಿಂಕೆ, ಕಡವೆ, ಔಷಧೀಯ ಗಿಡಗಳ ಆವಾಸ ಸ್ಥಾನವಾಗಿದೆ. ಇಂತಹ ಭೂಮಿಯನ್ನು ವಿಂಗಡಣೆ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಪರಿವರ್ತಿಸಿರುವುದರಿಂದ ವನ್ಯಜೀವಿ ಆವಾಸ ಸ್ಥಾನಕ್ಕೆ ಧಕ್ಕೆಯಾಗಲಿದೆ. ನದಿ ಮೂಲಗಳು ನಶಿಸಿ ಹೋಗುವ ಸಾಧ್ಯತೆ ಇದೆ ಎಂಬುದು ಪರಿಸರವಾದಿಗಳ ಆತಂಕ.
16ನೇ ಶತಮಾನದಲ್ಲಿ ಬಾಬಾ ಬುಡನ್ ಅವರು ಮೆಕ್ಕಾದಿಂದ ವಾಪಸಾಗುತ್ತಿದ್ದಾಗ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನ ಬೆಟ್ಟದಲ್ಲಿ ನೆಟ್ಟು ಬೆಳೆಸಿದರು. ಭಾರತದಲ್ಲಿ ಅಲ್ಲಿಂದ ಆರಂಭವಾದ ಕಾಫಿಯ ಪ್ರಯಾಣ, ಐದು ಶತಮಾನಗಳಲ್ಲಿ, 2.5 ಲಕ್ಷ ಹೆಕ್ಟೇರ್ಗೂ ಅಧಿಕ ವಿಸ್ತಾರಕ್ಕೆ ಹಬ್ಬಿ, 2.5 ಲಕ್ಷ ಟನ್ಗೂ ಅಧಿಕ ಕಾಫಿ ಉತ್ಪಾದನೆಯವರೆಗೆ ತಲುಪಿದೆ. ಲಕ್ಷಾಂತರ ಕುಟುಂಬಗಳನ್ನು ಕಾಫಿ ಶ್ರೀಮಂತಗೊಳಿಸಿದೆ.

ದೇಶದ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 71ಕ್ಕೂ ಹೆಚ್ಚು ಇದೆ. ಜಗತ್ತಿನಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ 7ನೇ ಸ್ಥಾನ. ಇಲ್ಲಿ ಮರಗಳ ನೆರಳಿನಲ್ಲಿ ಕಾಫಿ ಬೆಳೆಯಲಾಗುತ್ತದೆ. ಈ ಕಾರಣಕ್ಕೆ ಕರ್ನಾಟಕದ ಕಾಫಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಪಶ್ಚಿಮ ಘಟ್ಟದ ಪ್ರಾಕೃತಿಕ ಸಮತೋಲನಕ್ಕೂ ಕಾರಣವಾಗಿರುವ ಕಾಫಿ, ಈಚಿನ ಕೆಲವು ವರ್ಷಗಳಲ್ಲಿ ಸಂಕಷ್ಟದಲ್ಲಿದೆ. ಕಳೆದ ಒಂದುವರೆ ದಶಕದಲ್ಲಿ ಕಾಫಿ ತೋಟಗಳಲ್ಲಿ ಬಿರುಗಾಳಿ ಬೀಸುತ್ತಿದೆ. ‘ಕಾಫಿ, ವಾಣಿಜ್ಯ ಬೆಳೆಯಷ್ಟೇ ಅಲ್ಲ, ಒಂದು ಸಂಸ್ಕೃತಿ– ಪರಿಸರದ ಕೊಂಡಿ. ಇದನ್ನು ರಕ್ಷಿಸಲೇಬೇಕು’ ಎಂಬುದು ಬೆಳೆಗಾರರು ಮತ್ತು ಪರಿಸರ ಪ್ರೇಮಿಗಳ ವಾದ.

ಹೊಸ ಬಗೆಯ ಪ್ರವಾಸೋದ್ಯಮ ಎಂದೇ ಪರಿಗಣಿಸಿರುವ ಕಾಫಿ ತೋಟದ ಮನೆ ‘ವ್ಯವಹಾರ‘ ಇದೀಗ ತಮಿಳುನಾಡಿನ ಟೀ ನಾಡಾದ ಊಟಿ, ಕೂನೂರು, ಕೇರಳದ ಮುನ್ನಾರ್ಗೂ ಹಬ್ಬುತ್ತಿದೆ. ಈಗಲೇ ಸರ್ಕಾರ ಎಚ್ಚೆತ್ತುಕೊಂಡು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಮುಂಜಾನೆ ಎಚ್ಚರವಾದಾಗ ಕೊಡಗು, ಸಕಲೇಶಪುರ, ಚಿಕ್ಕಮಗಳೂರು ಕಾಫಿ ಕುಡಿಯಲು ಸಿಗಲಾರದ ಸ್ಥಿತಿ ಬರಬಹುದು. ಇದರ ಜೊತೆಗೆ ನದಿ ಮೂಲಗಳಿಗೆ ಅಪಾಯ ತರಬಹುದು.

ಮೂರು ರಾಜ್ಯದ ಜನರಿಗೆ ಅಪಾಯ...

‘ಮೇಲ್ನೋಟಕ್ಕೆ ಕಾಫಿ ಬೆಳೆಗಾರರ ಈ ಸಮಸ್ಯೆ ಮೂರು ಜಿಲ್ಲೆಗಳಿಗೆ ಸೀಮಿತ ಎಂಬಂತೆ ಕಾಣಿಸುತ್ತಿದೆ. ವಾಸ್ತವದಲ್ಲಿ ಮೂರು ರಾಜ್ಯಗಳ (ಕೇರಳ, ಕರ್ನಾಟಕ ಮತ್ತು ತಮಿಳುನಾಡು) ಸುಮಾರು 8 ಕೋಟಿ ಜನರಿಗೆ ಮುಂದೆ ಇದು ಸಮಸ್ಯೆ ತಂದೊಡ್ಡಲಿದೆ’ ಎಂದು ಕೊಡಗು ವನ್ಯಜೀವಿ ಸೊಸೈಟಿಯ ಮಾಜಿ ಅಧ್ಯಕ್ಷ ಕರ್ನಲ್ ಸಿ.ಪಿ ಮುತ್ತಣ್ಣ ವಾದಿಸುತ್ತಾರೆ.

ಕಾವೇರಿ ನದಿ ಮೂರು ರಾಜ್ಯಗಳಲ್ಲಿ ಹರಿಯುತ್ತದೆ. ಈ ನದಿಯ ಶೇ 33ರಷ್ಟು ಜಲಾನಯನ ಪ್ರದೇಶ ಇರುವುದು ಕೊಡಗಿನಲ್ಲಿ. ಅರಣ್ಯ ಪ್ರದೇಶವನ್ನು ನಾಶಮಾಡಿ, ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಿದರೆ ನೀರು ಇಂಗುವ ಪ್ರದೇಶ ಕಡಿಮೆಯಾಗಿ ನದಿಯ ಹರಿವು ಕಡಿಮೆಯಾಗುವುದು ಖಚಿತ. ಹಾಗಾದರೆ ನೆರೆಯ ರಾಜ್ಯಗಳಷ್ಟೇ ಅಲ್ಲ ನಮ್ಮ ಬೆಂಗಳೂರು, ಮೈಸೂರಿಗೂ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಸುಮಾರು 600ರಷ್ಟು ದೊಡ್ಡ ಉದ್ದಿಮೆಗಳು ಕಾವೇರಿ ನದಿಯ ನೀರನ್ನು ಅವಲಂಬಿಸಿವೆ. ಇವುಗಳ ಗತಿಯೆನು ಎಂದು ಅವರು ಪ್ರಶ್ನಿಸುತ್ತಾರೆ.

ಪ್ರಕೃತಿಯನ್ನು ಉಳಿಸಲು ನಮ್ಮ ಜಿಲ್ಲೆಯ ಮಟ್ಟಿಗೆ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸಬೇಕು ಎಂದು ವಾದಿಸುತ್ತಾರೆ.

ಪೂರಕ ಮಾಹಿತಿ: ಕೆ.ಎಸ್.ಗಿರೀಶ, ವಿಜಯಕುಮಾರ್ ಎಸ್.ಕೆ.

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ

ಪುಟ ವಿನ್ಯಾಸ: ಶಶಿಧರ ಹಳೇಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.