ಧಾರವಾಡ: ‘ಮಲ್ನಾಡ್ ಅಡಿಕೆ, ಮೈಸೂರು ವೀಳ್ಯದೆಲೆ ಬೆರೆತರೆ ಕೆಂಪು...’ ‘ಸಿಂಹಾದ್ರಿಯ ಸಿಂಹ’ ಚಿತ್ರದ ಈ ಹಾಡು ಕೇಳಿದವರಿಗೆ ಪ್ರದೇಶಕ್ಕೊಂದು ಬೆಳೆ ಹಾಗೂ ಬೆಳೆಗೊಂದು ಪ್ರದೇಶ ಇದೆ ಎಂದೆನಿಸದೇ ಇರದು.

ಜನಪದದಲ್ಲಿಯೂ ಬಿಜಾಪುರದ ಬಿಳಿಜೋಳ, ಕರಾವಳಿಯ ಕರಿನೆಲ್ಲ, ಬ್ಯಾಡಗಿ ಮೆಣಸಿನಕಾಯಿ, ಲೋಕಾ ಪುರದ ಚಿಕ್ಕು ಅಂತೆಲ್ಲ ಉಲ್ಲೇಖಿಸಿ ತ್ರಿಪದಿಗಳಿವೆ.

ಕೃಷಿಕರ ಬದುಕಿನ ಹದ ಕೇವಲ ಕೃಷಿಯಲ್ಲಷ್ಟೇ ಅಲ್ಲ, ಅವರು ಹಾಡಿದ ಪದಗಳಲ್ಲಿಯೂ ಕಾಣಿಸಿಕೊಂಡಿವೆ. ಮೈಸೂರಿನ ವೀಳ್ಯದೆಲೆ, ನಂಜನಗೂಡಿನ ರಸಬಾಳೆ, ಬ್ಯಾಡಗಿ ಮೆಣಸಿನಕಾಯಿ, ಧಾರವಾಡದ ಆಪೂಸು, ಕೊಪ್ಪಳದ ಸೀಬೆ, ಕೊಡಗಿನ ಕಾಫಿ, ಮಂಗಳೂರಿನ ಮಲ್ಲಿಗೆ.... ಹೀಗೆ ಪಟ್ಟಿ ಮಾಡಬಹುದು.

2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯ ಪರಿಕಲ್ಪನೆ ಹುಟ್ಟಿದ್ದು ಹೀಗೆಯೇ. ಆಯಾ ಜಿಲ್ಲೆಯ ಜನಪ್ರಿಯ ಬೆಳೆಯನ್ನೇ ಆಧರಿಸಿ, ಅದರ ಮೌಲ್ಯಾಧಾರಣೆ, ಮೌಲ್ಯವರ್ಧನೆಗೆ ಉದ್ಯಮ ಕಲ್ಪಿಸಿ ‘ಆತ್ಮನಿರ್ಭರ ಭಾರತ’ ಅಥವಾ ಸ್ವಾವಲಂಬಿ ಭಾರತವಾಗಿಸುವ ಕನಸುಗಳನ್ನು ರೈತೋದ್ಯಮಿಗಳಲ್ಲಿ ಬಿತ್ತಲಾಯಿತು.

‘ವೋಕಲ್ ಫಾರ್ ಲೋಕಲ್’ ಎಂಬ ಅಭಿಯಾನದ ಭಾಗವಾದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಮೂಲ ಜಪಾನ್ ದೇಶ. 1979ರಲ್ಲಿ ಓಯಿಟಾ ಪ್ರದೇಶದ ಗವರ್ನರ್ ಮೊರಿಹಿಕೊ ಹಿರಮಟ್ಸು ಎಂಬುವವರು ತಮ್ಮ ವ್ಯಾಪ್ತಿಯ ಪ್ರತಿ ಹಳ್ಳಿಗಳ ವಿಶೇಷಗಳಿಗೆ ಪ್ರಾಮುಖ್ಯ ನೀಡಿ, ಕೌಶಲ ಉದ್ದಿಮೆ ಸ್ಥಾಪಿಸುವತ್ತ ಹೆಚ್ಚು ಗಮನ ನೀಡಿದರು. ಆದಾಯ ಗಳಿಕೆಗೆ ಮೂಲ ಆಗುವಂತೆ ‘ಒಂದು ಹಳ್ಳಿ, ಒಂದು ಉತ್ಪನ್ನ’ ಯೋಜನೆ ಪರಿಚಯಿಸಿದ್ದರು.

ಇದೇ ಯೋಜನೆಯ ತದ್ರೂಪು ಎನ್ನುವಂತೆ 2018ರಲ್ಲಿ ಕೇಂದ್ರ ಸರ್ಕಾರ ಒಂದು ಜಿಲ್ಲೆ ಒಂದು ಉತ್ಪನ್ನ (ಒನ್ ಡಿಸ್ಟ್ರಿಕ್ಟ್, ಒನ್ ಪ್ರೊಡಕ್ಟ್‘ ಒಡಿಒಪಿ) ಎಂದು ಪ್ರತಿಪಾದಿಸಿತು. ಒಂದು ಉತ್ಪನ್ನವನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸಲಾಯಿತು. ಆಗ ರಾಜ್ಯದ 31 ಜಿಲ್ಲೆಗಳಿಂದ 31 ಉತ್ಪನ್ನ ಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಲಾಯಿತು.

ದವಸ ಧಾನ್ಯ, ಹಣ್ಣು, ತರಕಾರಿ, ಜೇನು, ಸಾಗರೋತ್ಪನ್ನಗಳು, ಸಾಂಬಾರ ಪದಾರ್ಥಗಳು ಹೀಗೆ ಈ ಉತ್ಪನ್ನಗಳನ್ನು ವಿಂಗಡಿಸಲಾಯಿತು.

ಈ ಯೋಜನೆಗಾಗಿ 2021ರಿಂದ 2025ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 60:40ರ ಅನುಪಾತದಂತೆ ₹500 ಕೋಟಿ ಮೀಸಲಿಡಬೇಕಿದೆ. ರಾಜ್ಯ ಸರ್ಕಾರ 2021–22ರ ಬಜೆಟ್ನಲ್ಲಿ ₹100 ಕೋಟಿ ಮೀಸಲಿಟ್ಟಿತ್ತು.

ಯೋಜನೆಯಲ್ಲಿ ಶೇ 50ರಷ್ಟು ಸಬ್ಸಿಡಿ ಸಿಗಲಿದೆ. ಇದರಲ್ಲಿ ರಾಜ್ಯದ ಪಾಲು ಶೇ 15. ಉಳಿದದ್ದು ಕೇಂದ್ರದ್ದು. ಉಳಿದ ಶೇ 50ರಲ್ಲಿ
ಶೇ 10ರಷ್ಟನ್ನು ಉದ್ಯಮಿಗಳಾಗಬಯಸುವವರು ಹೂಡಬೇಕು. ಶೇ 40ರಷ್ಟು ಬ್ಯಾಂಕ್ಗಳಿಂದ ₹10ಲಕ್ಷದಿಂದ ₹30 ಲಕ್ಷದರೆಗೆ ಸಾಲ ಸಿಗಲಿದೆ.

ಯೋಜನೆಯು ಯೋಜಿಸಿದಂತೆಯೇ ಕಾರ್ಯಾನುಷ್ಠಾನಕ್ಕೆ ಬಂದಿದ್ದರೆ ನಮ್ಮ ಕೃಷಿಕರಲ್ಲಿ ಬಹುತೇಕರು ರೈತೋದ್ಯಮಿ ಗಳಾಗಬೇಕಿತ್ತು. ಮತ್ತು ಕೃಷಿಕರ ಆದಾಯವೂ ಹೆಚ್ಚಬೇಕಿತ್ತು. ಆದರೆ ದೂರದೃಷ್ಟಿಯ ಕೊರತೆಯಿಂದಾಗಿ ನಿರೀಕ್ಷಿತಮಟ್ಟದ ಸ್ಪಂದನೆ ರೈತರಿಂದ ಸಿಗಲಿಲ್ಲ.

ಯೋಜನೆ ಆರಂಭವಾದಾಗ 3 ಲಕ್ಷ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ ‘ರಾಸಾಯನಿಕ ರಹಿತ ಬೆಲ್ಲ ತಯಾರಿಕೆ ಘಟಕ’ ನಿರ್ಮಿಸಲು ಅವಕಾಶ ಕಲ್ಪಿಸಲಾಗಿತ್ತು.

ಯೋಜನೆ ಆರಂಭವಾದಾಗ 3 ಲಕ್ಷ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ ‘ರಾಸಾಯನಿಕ ರಹಿತ ಬೆಲ್ಲ ತಯಾರಿಕೆ ಘಟಕ’ ನಿರ್ಮಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಘಟಕ ಸ್ಥಾಪಿಸುವ ಜಾಗವನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸುವ ಷರತ್ತು, ಸಾಲ ನೀಡಲು ಬ್ಯಾಂಕ್ಗಳ ನಿರಾಕರಣೆ ಮತ್ತಿತರ ಕಾರಣಗಳಿಂದಾಗಿ ಬೆರಳೆಣಿಕೆಯ ಅರ್ಜಿಗಳಷ್ಟೇ ಬಂದಿದ್ದವು. ಮಹತ್ವಾಕಾಂಕ್ಷೆಯ ಯೋಜನೆಯೊಂದು ನೆಲಕಚ್ಚುವ ಎಲ್ಲ ಸಾಧ್ಯತೆಗಳನ್ನೂ ತೆರೆದಿಟ್ಟಿತು.

ನೀರಸ ಪ್ರತಿಕ್ರಿಯೆ

ರೈತರು ಮತ್ತು ಬಹುತ್ವ ಭಾರತದ ಆಹಾರ ವೈವಿಧ್ಯವನ್ನು ಅರಿಯದೆಯೇ ಮೇಲ್ಪದರದಲ್ಲಿ ಯೋಚಿಸಿ, ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರಿಂದ ಎಲ್ಲಿಲ್ಲದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. 2022–23ರ ಸಾಲಿನಲ್ಲಿ ಯೋಜನೆಯ ಸ್ವರೂಪವನ್ನು ಬದಲಿಸದೆಯೇ, ‘ಒಂದು ಜಿಲ್ಲೆ ಹಲವು ಉತ್ಪನ್ನ’ ಎಂದು ತನ್ನ ಘೋಷವಾಕ್ಯವನ್ನು ಬದಲಿಸಿತು. ಪರಿಣಾಮ 30 ಉತ್ಪನ್ನಗಳಿಂದ 265 ಉತ್ಪನ್ನಗಳಿಗೆ ಈ ಯೋಜನೆ ವಿಸ್ತರಣೆ ಆಯಿತು. ಬೆಲ್ಲ ಅಷ್ಟೇ ಅಲ್ಲ, ಬೆಳಗಾವಿಯಲ್ಲಿ ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಗೆ ಅವಕಾಶ ನೀಡಲಾಯಿತು. ಪರಿಣಾಮ ರಾಜ್ಯದಲ್ಲಿಯೇ ಅತಿ ಹೆಚ್ಚು 357 ಫಲಾನುಭವಿಗಳಿಗೆ ಸಾಲ ಮಂಜೂರಾಯಿತು.

ಕೊಪ್ಪಳ ಜಿಲ್ಲೆಯಲ್ಲಿ ಪೇರಲ ಹಣ್ಣು ಹೇರಳವಾಗಿ ಬೆಳೆಯಲಾಗುತ್ತಿದೆ. 500 ಹೆಕ್ಟೇರ್ ಪೇರಲ ಬೆಳೆಯುವ ಪ್ರಮಾಣ ಈಗ 2,000 ಹೆಕ್ಟೇರ್ಗೆ ವಿಸ್ತಾರವಾಗಿದೆ. ಆದರೆ, ಪೇರಲ ಸಂಸ್ಕರಣೆಗೆ, ಮೌಲ್ಯವರ್ಧನೆಗೆ ಅವಕಾಶವಿಲ್ಲ. ಜ್ಯಾಮ್ ಮತ್ತು ಜ್ಯೂಸು ಮಾಡುವ ಪ್ರಯತ್ನ ಮಾಡಿದರೂ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜ್ಯಾಮ್ ತಿನ್ನುವುದು, ಸೀಬೆಕಾಯಿ ಜ್ಯೂಸು ಸೇವಿಸುವುದು ಎರಡೂ ಇಲ್ಲಿಯ ಆಹಾರ ಸಂಸ್ಕೃತಿಯಿಂದ ದೂರವೇ ಇದೆ. ಉತ್ಪನ್ನಗಳನ್ನು ಮಾರಾಟ ಮಾಡುವಷ್ಟೇ ಕಷ್ಟದ ಕೆಲಸ ಸಂಗ್ರಹಿಸಿಡುವುದು, ಕೆಡದಂತೆ ದಾಸ್ತಾನು ಮಾಡುವುದೂ ಸಹ. ಕೇವಲ ರಸ್ತೆಬದಿಗೆ ಹಣ್ಣು ಮಾರಾಟ ಮಾಡುವುದರಲ್ಲಿಯೇ ರೈತರು ಸಂತೃಪ್ತರಾಗುವಂತಾಗಿದೆ.

ಗದಗ ಜಿಲ್ಲೆಯಲ್ಲಿ ಕೇವಲ 19 ಮಂದಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಈ ಪೈಕಿ ಬ್ಯಾಡಗಿ ಮೆಣಸಿನ ಮೌಲ್ಯವರ್ಧನೆ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಉತ್ಪನ್ನಗಳ ಮಾರಾಟ ಸಂಬಂಧಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸಿಕೊಂಡವರು 9 ಮಂದಿ. ಉಳಿದಂತೆ, ಸಿರಿಧಾನ್ಯ 4, ಜೋಳ 3, ಎಣ್ಣೆಗಾಣ 1, ಭತ್ತ 1 ಮತ್ತು ಆಲೂಗಡ್ಡೆ ಸಂಬಂಧಿತ ಉತ್ಪನ್ನಗಳ ತಯಾರಿಗೆಂದು ಒಬ್ಬರು ಸಹಾಯಧನ ಪಡೆದುಕೊಂಡಿದ್ದಾರೆ. 25 ಮಂದಿಯ ಅರ್ಜಿಗಳು ಬ್ಯಾಂಕ್ನಲ್ಲಿನ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಅವರಿಗೆ ಇನ್ನು ಕೆಲವೆ ದಿನಗಳಲ್ಲಿ ಸಹಾಯಧನ ಲಭ್ಯವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ದಿಮೆಯಾಗಿ ರೂಪುಗೊಳ್ಳದ ತರಬೇತಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀನಿನ ವಿವಿಧ ಉತ್ಪನ್ನಗಳ ತಯಾರಿಕೆಗೆ ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗಿತ್ತು. ಆದರೆ, ಉತ್ಪನ್ನಗಳ ತಯಾರಿಕೆ ಮನೆ ಮಟ್ಟಕ್ಕೆ ಸೀಮಿತವಾಗಿ, ಉದ್ದಿಮೆಯಾಗಿ ರೂಪುಗೊಂಡಿಲ್ಲ. ಜತೆಗೆ, ಇದನ್ನು ಹೆಚ್ಚು ದಿನ ಕೆಡದಂತೆ ಇಡುವ ಸವಾಲು ಸೇರಿದಂತೆ ಅನೇಕ ಮಿತಿಗಳು ಇವೆ. ಕೆಲವೇ ಮಹಿಳೆಯರು ಗೃಹ ಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ತಂದಿದ್ದಾರೆ, ಆದರೆ ಇದು ಜಿಲ್ಲೆಯ ಗಡಿ ದಾಟಿಲ್ಲ. ಕಾರವಾರ ಜಿಲ್ಲೆಯಲ್ಲಂತೂ ಬಹುತೇಕ ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ.

ಹೀಗೆಯೇ ಒಂದೊಂದು ಜಿಲ್ಲೆಯ ಕತೆಗಳೂ ಭಿನ್ನವಾಗಿವೆ. ಇಂಥ ಸವಾಲುಗಳನ್ನೂ ಮೀರಿ ಕೋಲಾರದಲ್ಲಿ ಟೊಮೆಟೊ ಸಾಸ್, ಕೆಚಪ್, ಟೊಮೆಟೊ ಉಪ್ಪಿನಕಾಯಿ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕಾ ಘಟಕಗಳು ಸ್ಥಾಪನೆಯಾಗಿವೆ. ಬೆಳಗಾವಿಯಲ್ಲಿಯೂ ಯಶಸ್ಸಿನ ಹಲವು ಕತೆಗಳು ಸಿಗುತ್ತವೆ. ಆದರೆ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೇ ಇರಲು ಕಾರಣವನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ‘ಪ್ರಜಾವಾಣಿ’ಗೆ ಬಿಚ್ಚಿಟ್ಟರು.

ಅವರ ಪ್ರಕಾರ ‘ಮಾರುಕಟ್ಟೆ ಕಲ್ಪಿಸದೇ ಮೌಲ್ಯವರ್ಧನೆ ಮಾಡಿ ಎಂದರೆ ಹೇಗೆ? ಬಾಳೆಹಣ್ಣು ಬೆಳೆಯುವ ರೈತನಿಗೆ ಮಾರುಕಟ್ಟೆ ಕಲ್ಪಿಸಿಕೊಳ್ಳುವುದೇ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಳೆಹಣ್ಣನ್ನು ಮೌಲ್ಯವರ್ಧನೆ ಮಾಡಿ, ವಿದೇಶಕ್ಕೆ ಕಳುಹಿಸಿ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಧ್ಯವಾಗುವುದೇ? ಮಾರುಕಟ್ಟೆ ವ್ಯವಸ್ಥೆ ಅರಿವುಳ್ಳ ರೈತರು ಮಾತ್ರ ಯಶಸ್ಸಿಯಾಗಲು ಸಾಧ್ಯವಿದೆ. ಅವರೂ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅರಿಸಿನದಿಂದ ಫೇಸ್ಮೇಕರ್, ಪೌಡರ್ ಮಾಡಬಹುದು. ಬೇಯಿಸಿದ ಅರಿಸಿನ ಮಾರಾಟ ಮಾಡುವುದೇ ರೈತರಿಗೆ ಸವಾಲಾಗಿದೆ. ಅಲ್ಪಸ್ವಲ್ಪ ಜಮೀನುವುಳ್ಳ ರೈತನೊಬ್ಬ ಸಾಲ ಪಡೆದು, ಸಂಸ್ಕರಣಾ ಘಟಕ ತೆರೆದು ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯಲ್ಲಿ ಅಸ್ತಿತ್ವ ಕಂಡುಕೊಳ್ಳಲು ಸಾಧ್ಯವಿದೆಯೇ ಎಂದೂ ಅವರು ಪ್ರಶ್ನಿಸುತ್ತಾರೆ.

ರಾಮನಗರದಲ್ಲಿ ತೆಂಗು ಉತ್ಪನ್ನಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಈ ಯೋಜನೆ ಅಡಿ ಸಬ್ಸಿಡಿ ಸೌಲಭ್ಯ ಸಿಗುತ್ತದೆ. ಕೊಬ್ಬರಿ ಎಣ್ಣೆ, ಬಿಸ್ಕತ್, ಕ್ರೀಂ, ಪೌಡರ್, ಐಸ್ಕ್ರೀಂ ಸೇರಿದಂತೆ 30 ಬಗೆಯ ತೆಂಗು ಉತ್ಪನ್ನಗಳನ್ನು ತಯಾರಿಸುವ ಅವಕಾಶ ಇದೆ. ಪ್ರತಿಷ್ಠಿತ ಕಂಪನಿಯ ಬ್ರ್ಯಾಂಡ್ಗಳೇ ಮಾರುಕಟ್ಟೆಯಲ್ಲಿದ್ದು, ಕೈಗೆಟಕುವ ದರದಲ್ಲಿ ಅತ್ಯಾಕರ್ಷಕ ಪ್ಯಾಕೇಜಿನಲ್ಲಿ ಉತ್ಪನ್ನಗಳು ಲಭ್ಯ ಇರುವಾಗ ರೈತರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಳ್ಳುವುದು ಕಠಿಣವಾಗುತ್ತಿದೆ. ಮಧ್ಯಮ ಮತ್ತು ಚಿಕ್ಕ ಹಿಡುವಳಿದಾರರು ತಮ್ಮ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಿಕೊಳ್ಳುವಲ್ಲಿಯೂ ಅನಾಸಕ್ತಿ ತೋರುತ್ತಿದ್ದಾರೆ. ಈ ಎಲ್ಲ ಅಡೆತಡೆಗಳನ್ನು ಬದಿಗಿರಿಸಿ, ಉದ್ಯಮದ ಸಾಹಸಕ್ಕೆ ಇಳಿದವರಿಗೆ ಈ ಉದ್ದಿಮೆ ಲಾಭಕರ ಎಂದೆನಿಸುತ್ತಿಲ್ಲ.

ತೋಟಗಾರಿಕೆ ಹಾಗೂ ಹಣ್ಣುಗಳ ಉತ್ಪನ್ನಗಳು ಮಾರುಕಟ್ಟೆ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು, ಅಗತ್ಯದ ಮೂಲಸೌಲಭ್ಯಗಳಿಲ್ಲದೇ ಇರುವುದು, ಯೋಜನೆ ಹಿಂದುಳಿಯಲು ಕಾರಣವಾಗಿದೆ.

ಸಾಂಬಾರ ಪದಾರ್ಥ ಹಾಗೂ ಕಾಫಿಯಂಥ ಬೆಳೆಗಳೂ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಕಾಫಿ ಹಾಗೂ ಕಾಳುಮೆಣಸಿನ ಮೌಲ್ಯವರ್ಧನೆಗೆ ಸಂಬಂಧಿಸಿದ ರೈತರೇ ಯಂತ್ರೋಪಕರಣ ಅಳವಡಿಸಿಕೊಳ್ಳುವುದು ಕಷ್ಟ. ದುಬಾರಿ ಸಹ ಹೌದು. ಗೃಹ ಕೈಗಾರಿಕೆಗಳಂತೆ ಕಾಫಿ ಉದ್ದಿಮೆ ನಡೆಸಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಿಂದಲೂ ಕಾಫಿ ಮಾರುಕಟ್ಟೆ ವಿಸ್ತಾರವಾಗಿ ಬೆಳೆದಿದೆ. ಮೂವರೇ ಬೆಳೆಗಾರರು ಸೇರಿಕೊಂಡು ಕಾಫಿಯ ಮೌಲ್ಯವರ್ಧನೆ ಮಾಡುವುದು ಪ್ರಸ್ತುತ ಕಷ್ಟವಿದೆ. ಇನ್ಸ್ಟಂಟ್ ಕಾಫಿಯಲ್ಲಿ ಬ್ರೂ, ನೆಸ್ಕೆಫೆ, ಸನ್ರೈಸ್ನಂತಹ ಬ್ರ್ಯಾಂಡ್ಗಳಿವೆ. ಈ ಬ್ರ್ಯಾಂಡ್ಗಳ ನಡುವೆ ಅಸ್ತಿತ್ವ ಕಂಡುಕೊಳ್ಳುವುದು ಸಣ್ಣ ರೈತರಿಗೆ ಸವಾಲು. ಹೊಸ ಮಾರುಕಟ್ಟೆ ಸೃಷ್ಟಿಯೂ ಸಾಧ್ಯವಾಗುವುದಿಲ್ಲ. 10ಕ್ಕೂ ಹೆಚ್ಚು ಮಂದಿ ಗುಂಪಾಗಿ ಸೇರಿಕೊಂಡು ಕಾಫಿ ಸಂಸ್ಕರಣಾ ಘಟಕ, ಪಲ್ಪಿಂಗ್ ಯಂತ್ರ ಅಳವಡಿಸಿಕೊಂಡರೆ ಯೋಜನೆಯಿಂದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಸಮಸ್ಯೆಯನ್ನೂ ಪರಿಹಾರವನ್ನೂ ವಿಶ್ಲೇಷಿಸುತ್ತಾರೆ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಿಶ್ವನಾಥ್.

ಇವು ವಾಸ್ತವದ ಸಮಸ್ಯೆಗಳನ್ನು ಬಿಡಿಸಿಡುತ್ತವೆ. ಮೂಲ ಸಮಸ್ಯೆ ಇರುವುದು ಯೋಜನೆಯ ಅನುಷ್ಠಾನದ ಪ್ರಮುಖ ಘಟ್ಟ ಸಾಲ ನೀಡುವಿಕೆ. ಸಾಲ ಕೊಡುವ ಪ್ರಕ್ರಿಯೆಯೂ ತ್ರಾಸದಾಯಕವಾಗಿದೆ.

ಆಡಳಿತಶಾಹಿಯಲ್ಲಿರುವ ಸಮನ್ವಯದ ಕೊರತೆ ಅಂದರೆ ಕೃಷಿ ಇಲಾಖೆಯವರು ಸಾಲ ಮಂಜೂರು ಮಾಡಲು ಶಿಫಾರಸು ಮಾಡುತ್ತಾರೆ. ಬ್ಯಾಂಕಿನವರು ತಡೆ ಹಿಡಿಯುತ್ತಾರೆ. ಜಿಲ್ಲಾಧಿಕಾರಿಗಳು ಕೆಲವೆಡೆ ಮಧ್ಯಪ್ರವೇಶಿಸಿ ಸಾಲ ನೀಡಲು ಬ್ಯಾಂಕುಗಳಿಗೆ ತಾಕೀತು ಮಾಡಿರುವ ಉದಾಹರಣೆಗಳೂ ಅಲ್ಲಲ್ಲಿ ಸಿಗುತ್ತವೆ. ಅಗತ್ಯದ ದಾಖಲೆಗಳನ್ನು ಸೂಕ್ತವಾದ ರೀತಿಯಲ್ಲಿ ಕಚೇರಿಗೆ ನೀಡಲು ರೈತರಲ್ಲಿ ಅರಿವಿನ ಕೊರತೆ, ಬ್ಯಾಂಕ್ ಅಧಿಕಾರಿಗಳಲ್ಲಿ ಬದ್ಧತೆಯ ಕೊರತೆ ಇವೆಲ್ಲವೂ ಸೇರಿ ಯೋಜನೆಯೊಂದು ದಾಖಲೆಗಳಲ್ಲಿ ಅಂಕಿ ಅಂಶಗಳಡಿ ‘ಅಡಕ’ವಾಗಿ ಹೋಗಿದೆ.

ನಿರಾಸಕ್ತಿಗೆ ಕಾರಣಗಳು

l ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಕುರಿತು ಮಾಹಿತಿ, ಅರ್ಜಿ ಸಲ್ಲಿಸುವ ಬಗೆ, ಅರ್ಹತೆ, ವರದಿ ಸಲ್ಲಿಕೆ ಇತ್ಯಾದಿಗಳೇನು ಎಂಬ ಮಾಹಿತಿ ಸುಲಭವಾಗಿ ಸಿಗದಿರುವುದು

l ಬ್ಯಾಂಕುಗಳು ಅರ್ಜಿಗಳನ್ನು ತಿರಸ್ಕರಿಸುತ್ತಿರುವುದರಿಂದ ಅರ್ಜಿದಾರರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

l ಒಮ್ಮೆ ಅರ್ಜಿ ತಿರಸ್ಕೃತಗೊಂಡವರ ಇತರರೊಂದಿಗೂ ಈ ಮಾಹಿತಿ ಹಂಚಿಕೊಳ್ಳುತ್ತಿರುವುದರಿಂದ ಅರ್ಜಿ ಸಲ್ಲಿಸುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ.

l ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಪ್ರತಿಷ್ಠಿತ ಕಂಪನಿಗಳ ಜತೆಗಿನ ಒಪ್ಪಂದ ಹೇಗೆ ಎಂಬುದರ ಮಾಹಿತಿ ಕೊರತೆ

l ದಿಢೀರ್ ಲಾಭದ ಉದ್ದೇಶ ಹಾಗೂ ಲಾಭ ಬಾರದಿದ್ದರೆ ಸಾಲ ತೀರಿಸುವ ಬಗೆ ಕುರಿತ ಚಿಂತೆಯೂ ನಿರಾಸಕ್ತಿಗೆ ಕಾರಣ

ಸಾಲ ನೀಡಲು ಹಿಂದೇಟು ಏಕೆ?

l ಲೀಡ್ ಬ್ಯಾಂಕ್ ಮೂಲಕ ವಿವಿಧ ಬ್ಯಾಂಕುಗಳಿಗೆ ಮಾಹಿತಿ ರವಾನೆಯಾಗಿದ್ದರೂ, ಬಹಳಷ್ಟು ಬ್ಯಾಂಕುಗಳ ಅಧಿಕಾರಿಗಳಿಗೆ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯ ಮಾಹಿತಿ ಕೊರತೆ ಇದೆ.

l ಕೊರೊನಾ ಸಂದರ್ಭದಲ್ಲಿ ಜಾರಿಗೆ ಬಂದ ಯೋಜನೆಯಿಂದಾಗಿ ಬ್ಯಾಂಕುಗಳು ಸಾಲ ನೀಡಲು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿವೆ.

ತರಬೇತಿ ಪಡೆದ ಮೇಲೆ ಪಿಎಂಎಫ್ಎಂಇ ಸಾಲ ಪಡೆದು ಮೀನಿನ ಉಪ್ಪಿನಕಾಯಿ, ಚಟ್ನಿಪುಡಿ ತಯಾರಿಸಿ, ಮೂವರು ಮಹಿಳೆಯರು ಸೇರಿ ಮಾರಾಟ ಮಾಡುತ್ತಿದ್ದೇವೆ. ಯೋಜನೆಯಿಂದ ಅನುಕೂಲ ಆಗಿದೆ
–ಬಬಿತಾ ಮುರ, ಕಂದಾವರ

ಒಣಮೀನುಗಳನ್ನು ಪೊಟ್ಟಣ ಮಾಡಿ ಕರಾವಳಿ ಯಿಂದ ದೂರದ ಪ್ರದೇಶಗಳಿಗೆ ರವಾನಿಸುತ್ತಿದ್ದೇವೆ. ನಮಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕದ ಬಗ್ಗೆ ಮಾಹಿತಿಯೇ ಇಲ್ಲ
–ರೇಖಾ ರಾಜೇಶ ತಾಂಡೇಲ,ಹೊನ್ನಾವರ

ಬಜೆಟ್ನಲ್ಲಿ ಘೋಷಿಸಿದಂತೆ ಹಾನಗಲ್ ತಾಲ್ಲೂಕಿನಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣ ಆಗಿಲ್ಲ . ಈ ಘಟಕ ನಿರ್ಮಾಣವಾದಲ್ಲಿ ಉಪ ಕಸುಬುಗಳಿಗೆ ಪ್ರೋತ್ಸಾಹ ದೊರೆಯಲಿದೆ
–ಮರಿಗೌಡ ಪಾಟೀಲ್, ಹಾನಗಲ್ ತಾಲ್ಲೂಕು ರೈತ ಸಂಘದ ಅಧ್ಯಕ್ಷರು.

ಪೂರಕ ಮಾಹಿತಿ: ಇಮಾಮ್ ಹುಸೇನ್ ಗೂಡುನವರ, ಸಂಧ್ಯಾ ಹೆಗಡೆ, ಗಣಪತಿ ಹೆಗಡೆ, ಆದಿತ್ಯ ಕೆ.ಎ. ಮತ್ತು ಪ್ರಜಾವಾಣಿಯ ಜಿಲ್ಲಾ ವರದಿಗಾರರ ತಂಡ

ಸಿರಿಧಾನ್ಯದಿಂದಲೇ ಸ್ವಾವಲಂಬನೆ...

ಬೆಳಗಾವಿ: ‘ನಾನು ಓದಿದ್ದು ಎಸ್ಸೆಸ್ಸೆಲ್ಸಿ ಮಾತ್ರ. ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂಬ ತವಕ ಇತ್ತು. ಆ ಸಂದರ್ಭದಲ್ಲಿ ಗಮನಕ್ಕೆ ಬಂದಿದ್ದು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆ. ನನ್ನಲ್ಲಿ ಇದ್ದ ಆಹಾರ ತಯಾರಿಕೆ ಕೌಶಲವನ್ನೇ ಬಳಸಿಕೊಳ್ಳಲು ನಿರ್ಧರಿಸಿದೆ. ಈಗ ನನ್ನಂಥ ನಾಲ್ವರು ಮಹಿಳೆಯರಿಗೆ ಕೆಲಸ ಕೊಟ್ಟಿದ್ದೇನೆ...’

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಇಟಗಿ ಎಂಬ ಪುಟ್ಟ ಗ್ರಾಮದ ಭಾರತಿ ಬಡಿಗೇರ ಅವರ ಮನದಾಳದ ಮಾತು ಇವು. ಸಿರಿಧಾನ್ಯಗಳನ್ನು ಬಳಸಿ ಬಗೆಬಗೆಯ ತಿಂಡಿ– ತಿನಿಸುಗಳನ್ನು ತಯಾರಿಸಿ ಅವರು ಸ್ವಾವಲಂಬನೆ ಸಾಧಿಸಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

ಸಿರಿಧಾನ್ಯಗಳಿಂದ ಶಾವಿಗೆ, ಸಂಡಿಗೆ, ರೊಟ್ಟಿ, ಹಪ್ಪಳ, ಕೇಕ್, ಬಿಸ್ಕತ್, ಪಾನೀಯ, ಗಿಣ್ಣ, ಸಿಹಿ ತಿಂಡಿಗಳು ಮುಂತಾದ ತಿನಿಸು ತಯಾರು ಮಾಡುತ್ತೇನೆ.

ನೆರವಾಗಿದ್ದು ಏನು?:

₹1.50 ಲಕ್ಷ ಬೆಲೆಬಾಳುವ ಒಂದು ಶಾವಿಗೆ ಯಂತ್ರ, ₹ 1.85 ಲಕ್ಷದ ಒಂದು ರೊಟ್ಟಿ ಮಾಡುವ ಯಂತ್ರವನ್ನು ಯೋಜನೆ ಅಡಿ ಖರೀದಿ ಮಾಡಿದೆ. ಆರಂಭದಲ್ಲಿ ₹ 25 ಸಾವಿರ ಬಂಡವಾಳ ಹಾಕಿದೆ. ಈಗ ಪ್ರತಿ ತಿಂಗಳೂ ಲಕ್ಷಕ್ಕೂ ಹೆಚ್ಚು ವ್ಯವಹಾರ ಮಾಡುತ್ತೇನೆ. ಕನಿಷ್ಠ ₹ 25 ಸಾವಿರ ಉಳಿತಾಯವಾಗುತ್ತದೆ.

ಹಟ ಹಿಡಿದು ಸಾಧಿಸಿದೆ:

ಮೊದಲು ವಿವಿಧ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು, ಆಸ್ಪತ್ರೆಗಳಲ್ಲಿ ತಿನಿಸುಗಳ ಮಾರಾಟ ಶುರು ಮಾಡಿದೆ. ಮನೆ ಮನೆಗೂ ತಿರುಗಿದೆ. ಈಗ ನನಗೆ ‘ಆರ್ಡರ್’ ಬರುತ್ತವೆ. ಬೆಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ ಮುಂತಾದ ಜಿಲ್ಲೆಗಳಿಗೂ ಸರಬರಾಜು ಮಾಡುತ್ತೇನೆ.

ಸಾವಯವ ರೈತರಿಂದಲೇ ರಾಗಿ, ನವಣೆ, ಸಾವೆ, ಬರಗು, ಹಾರಕ, ಊದಲು, ಕೊರಲೆ, ಸಜ್ಜೆ, ಸಾವಯವ ಬೆಲ್ಲ ಮುಂತಾದವುಗಳನ್ನು ಖರೀದಿಸುತ್ತೇನೆ.

ರಾಜ್ಯದಲ್ಲಿ ಎಲ್ಲಿಯೇ ಸಿರಿಧಾನ್ಯ ಮೇಳ, ಆಹಾರ ಮೇಳ, ನಾಡ ಉತ್ಸವಗಳು ನಡೆದರೂ ಮಳಿಗೆ ಹಾಕುತ್ತೇನೆ. ಉತ್ಪಾದನೆ ಹೆಚ್ಚಿಸಬೇಕಿದೆ. ಇನ್ನಷ್ಟು ಜನರನ್ನು ಕೆಲಸಕ್ಕೆ ತೆಗೆದುಕೊಂಡು, ಬೆಳಗಾವಿ ನಗರದಲ್ಲಿ ಸ್ವಂತ ಮಳಿಗೆ ಹಾಕುವ ತಯಾರಿ ನಡೆಸಿದ್ದೇನೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ನೆರವು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.