ಅದೊಂದು ವಿವಿಧ ಹಣ್ಣುಗಳ ಮೌಲ್ಯವರ್ಧನೆಯ ಕುರಿತಾದ ಪ್ರದರ್ಶನ ಮತ್ತು ಕಾರ್ಯಾಗಾರ. ಬಗೆಬಗೆಯ ಹಣ್ಣುಗಳಿಂದ ತಯಾರಿಸಿದ ಉತ್ಪನ್ನಗಳ ಸಾಲುಸಾಲು ಮಳಿಗೆಗಳು. ಒಂದು ಮಳಿಗೆಯ ಸುತ್ತ ಏಳೆಂಟು ಜನರು ತಮ್ಮ ಅಂಗೈ ನೆಕ್ಕಿ ಅದೇನನ್ನೋ ರುಚಿ ನೋಡುತ್ತಿದ್ದರು. ಗುಂಪಿನ ಮಧ್ಯದಿಂದ ‘ಈ ಬಿಳಿ ಮುರುಗಲುಹಣ್ಣಿನ ಜಾಮ್ ಇದೆಯಲ್ಲಾ, ಇದು ಅಸಿಡಿಟಿಗೆ ರಾಮಬಾಣ’ ಎಂದು ತಮ್ಮ ಸುತ್ತ ಸೇರಿದ್ದ ಆಸಕ್ತರಿಗೆ ವಿವರಿಸುತ್ತಿದ್ದರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕೃಷಿಕ-ಗೃಹೋದ್ಯಮಿ ಬೆಂಗಳಿ ವೆಂಕಟೇಶ.

ಕಾರ್ಯಾಗಾರದ ವೇದಿಕೆಯಲ್ಲಿ ಆಗತಾನೇ ಅವರು ಬಿಳಿ ಮುರುಗಲು ಹಣ್ಣಿನ ಮೌಲ್ಯವರ್ಧನೆ ಮಾಡಿ ಜಾಮ್ ತಯಾರಿಸುವ ವಿಧಾನವನ್ನು ವಿವರಿಸಿ ಹೊರಬಂದಿದ್ದರು. ತಾವೇ ತಯಾರಿಸಿ ತಂದಿದ್ದ ಬಂಗಾರದ ಬಣ್ಣದ ಜಾಮ್ ಅನ್ನು ಪುಟ್ಟ ಚಮದಲ್ಲಿ ಸಭೆಯಲ್ಲಿದ್ದವರ ಕೈಗೆ ನೀಡುತ್ತಿದ್ದರೆ, ಅದನ್ನು ಆಸ್ವಾದಿಸುತ್ತಿದ್ದ ಜನ ಜೇನುತುಪ್ಪ ಸವಿದವರಂತೆ ಬಾಯಿ ಚಪ್ಪರಿಸುತ್ತಿದ್ದರು!

ಪುನರ್ಪುಳಿ, ಕೋಕಂ ಅಥವಾ ಮುರುಗಲು ಪಶ್ಚಿಮಘಟ್ಟಗಳ ಕಾಡಿನಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುವ ಸಣ್ಣ ಗಾತ್ರದ ಮರ. ಆಕರ್ಷಕ ಕೆಂಪು ಬಣ್ಣದ ಹಣ್ಣುಗಳು ಸುಮಾರು 35ರಿಂದ 80 ಗ್ರಾಂ ತೂಗುತ್ತವೆ. ಏಪ್ರಿಲ್, ಮಾರ್ಚ್ ತಿಂಗಳಲ್ಲಿ ಹಣ್ಣಾಗುವ ಹುಳಿಸಿಹಿ ರುಚಿಯ ಇದಕ್ಕೆ ಔಷಧೀಯ ಗುಣಗಳಿಂದಾಗಿ ಮತ್ತು ಹೆಚ್ಚು ಗ್ರಾಹಕ ಸ್ನೇಹಿಯಾಗಿ ಮೌಲ್ಯವರ್ಧನೆಗೊಳ್ಳುವ ಗುಣಗಳಿಂದ ಈಗೀಗ ಹೆಚ್ಚು ಬೇಡಿಕೆ ಕುದುರುತ್ತಿದೆ.

ಮುರುಗಲು ಹಣ್ಣಿನಲ್ಲಿ ಬಿಳಿ ಅಥವಾ ಹಳದಿ ಬಣ್ಣದ ಉಪಜಾತಿಯೂ ಇದೆ. ಅರಣ್ಯ ತಜ್ಞ ರವಿ ರಾಲ್ಫ್ ಎಂಬ ವಿಜ್ಞಾನಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಬರೆದ ‘ಪ್ಲಸ್ ಟ್ರೀಸ್ ಆಫ್ ಕರ್ನಾಟಕ’ ಕೃತಿಯಲ್ಲಿ ಆರ್ಥಿಕವಾಗಿ ಉತ್ತಮ ಭವಿಷ್ಯವಿರುವ ಗಿಡಮರಗಳ ಪಟ್ಟಿಯಲ್ಲಿ ಮುರುಗಲನ್ನೂ ಸೇರಿಸಿರುವುದು ಗಮನಾರ್ಹ. ಹೆಚ್ಚಿನಂಶ ಕಾಡು ಉತ್ಪನ್ನವಾಗಿಯೇ ಇರುವ ಇದನ್ನು ಶಿರಸಿಯ ದತ್ತಾತ್ರೇಯ ಭೈರಿಮನೆ, ರಾಮು ಕಿಣಿ ಮತ್ತು ಉಷಾ ಹೆಗಡೆಯಂತಹ ಕೆಲವು ಉತ್ಸಾಹಿ ರೈತರು ಸ್ವಂತ ಜಮೀನಿನಲ್ಲಿ ವಾಣಿಜ್ಯ ದೃಷ್ಟಿಯಿಂದ ಬೆಳೆಸುತ್ತಿದ್ದಾರೆ.

ಏನಿದರ ಹೆಚ್ಚುಗಾರಿಕೆ?
ಮುರುಗಲು ಹಣ್ಣು ಉತ್ತಮ ಪೋಷಕಾಂಶಗಳ ಜೊತೆಗೆ ಅಪರೂಪದ ಔಷಧೀಯ ಗುಣಗಳನ್ನು ಹೊಂದಿರುವುದೇ ವಿಶೇಷ. ಇದು ಅತ್ಯಂತ ಪರಿಣಾಮಕಾರಿ ಆಂಟಾಸಿಡ್(ಪಿತ್ತವಿಕಾರ ಶಮನಕ್ಕಾಗಿ) ಮತ್ತು ಆಮಶಂಕೆಗೆ ಉತ್ತಮ. ಇದರ ಜ್ಯೂಸ್ ದೇಹಕ್ಕೆ ತಂಪು. ಬೊಜ್ಜು ನಿಯಂತ್ರಿಸುವ ರಾಸಾಯನಿಕಗಳಲ್ಲೊಂದಾದ ಹೈಡ್ರಾಕ್ಸಿ ಸಿಟ್ರಿಕ್ ಆಸಿಡ್ ಅಂಶವು ಮುರುಗಲು ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಮುರುಗಲು ಕೊಲೆಸ್ಟರಾಲ್ ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ. ಮಲಬದ್ಧತೆ ನಿವಾರಿಸುತ್ತದೆ. ಹೊಟ್ಟೆಯುಬ್ಬರ ಪರಿಹರಿಸುತ್ತದೆ. ಹುಳಿರುಚಿ ಹೊಂದಿರುವುದರಿಂದ ಅಡುಗೆಯಲ್ಲಿ ಬಳಸಿದರೆ ವಿಶಿಷ್ಟವಾದ ರುಚಿ ಸಿಗುತ್ತದೆ. ಬೀಜದಿಂದ ತಯಾರಿಸಿದ ತುಪ್ಪವನ್ನು ಚರ್ಮರೋಗಗಳಿಗೆ, ಚರ್ಮದ (ಮುಖದ) ಕಾಂತಿ ಹೆಚ್ಚಿಸಲು, ಸುಟ್ಟ ಗಾಯಕ್ಕೆ, ಒಣ ಚರ್ಮದ ಸಮಸ್ಯೆಗೆ, ಅಂಗಾಲು ಬಿರುಕಿಗೆ, ಕರುಳು ಹುಣ್ಣಿಗೆ, ಮಲದಲ್ಲಿ ರಕ್ತಸ್ರಾವವಿದ್ದರೆ ಬಳಸಬಹುದು. ‘ಈ ಎಲ್ಲ ಕಾರಣಗಳಿಂದ ಇದೊಂದು ಸೂಪರ್ ಫ್ರೂಟ್’ ಎನ್ನುತ್ತಾರೆ ಮೈಸೂರು ಸಿ.ಎಎಫ್.ಟಿ.ಆರ್.ಐ. ನ ವಿಜ್ಞಾನಿ ಎನ್.ಕೆ.ಸಿಂಗ್.

ಮೌಲ್ಯವರ್ಧನೆಯಿಂದ ಸುಸ್ಥಿರತೆ
ಇಷ್ಟೆಲ್ಲ ಅದ್ಭುತ ಗುಣಗಳಿರುವ ಮುರುಗಲು ಹಣ್ಣನ್ನು ನಾಲ್ಕಾರು ದಿನಗಳಿಗಿಂತ ಹೆಚ್ಚಾಗಿ ಕಾಪಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಇದನ್ನು ಸಂಸ್ಕರಿಸಿ ಮೌಲ್ಯವರ್ಧಿಸುವುದೊಂದೇ ದಾರಿ. ಕರ್ನಾಟಕದ ಪಶ್ಚಿಮ ಘಟ್ಟದ ಆಸುಪಾಸಿನ ನಿವಾಸಿಗಳು ಮೊದಲಿನಿಂದಲೂ ಮುರುಗಲನ್ನು ಬಳಸುತ್ತಿದ್ದಾರೆ. ಆದರೆ ಈ ಬಳಕೆ ಕುಟುಂಬದ ಖರ್ಚಿಗಾಗಿ ಸೀಮಿತವಾಗುತ್ತಿತ್ತು. ಹಣ್ಣಿನ ಸಿಪ್ಪೆಯನ್ನು ಒಣಗಿಸಿಟ್ಟುಕೊಳ್ಳುವುದು, ಅತ್ಯಲ್ಪ ಪ್ರಮಾಣದಲ್ಲಿ ಬೀಜದ ತುಪ್ಪ ತಯಾರಿಸುವುದು ಮತ್ತು ತಾಜಾ ಹಣ್ಣಿನ ಮತ್ತು ಒಣಗಿಸಿದ ಸಿಪ್ಪೆಯ ಜ್ಯೂಸ್ ತಯಾರಿಸಿ ಬಳಸುವುದು. ಇದಕ್ಕಿಂತ ಹೆಚ್ಚು ಮುಂದಕ್ಕೆ ಹೋಗಿರಲಿಲ್ಲ.

ಆದರೆ ಹತ್ತು–ಹದಿನೈದು ವರ್ಷಗಳಿಂದೀಚೆಗೆ ಕೆಲವು ಉತ್ಸಾಹಿ ಮಹಿಳೆಯರು ಮನೆಯ ಸುತ್ತಲಿನಲ್ಲಿ ದೊರೆಯುವ ಈ ಹಣ್ಣನ್ನು ಬಳಸಿ ಮನೆಯಲ್ಲಿಯೇ ಸ್ಕ್ವಾಷ್(ಮಂದರಸ) ತಯಾರಿಸಿ ಮಾರಾಟ ಮಾಡುವುದರ ಮೂಲಕ ಮುರುಗಲು ಮೌಲ್ಯವರ್ಧನೆ ಪ್ರಾರಂಭವಾಯಿತು ಎನ್ನಬಹುದು. ಈ ಮೌಲ್ಯವರ್ಧನೆಯ ಪ್ರಕ್ರಿಯೆಯಲ್ಲಿ ತಕ್ಷಣ ನೆನಪಾಗುವವರು ಶಿರಸಿಯ ಅನ್ನಪೂರ್ಣ ಚಿಪಗಿ. ಸುಮಾರು 10 ವರ್ಷಗಳಿಂದ ಮುರುಗಲು ಮಂದರಸ ತಯಾರಿಸುತ್ತಿದ್ದಾರೆ. ‘ಮೊದಮೊದಲು ವರ್ಷಕ್ಕೆ ಸುಮಾರು 50 ಲೀಟರಿನಷ್ಟು ತಯಾರಿಸುತ್ತಿದ್ದೆ. ಆದರೆ ಅಧಿಕ ಬೇಡಿಕೆಯಿಂದಾಗಿ ಕಳೆದ ವರ್ಷ ಇದರ ನಾಲ್ಕು ಪಟ್ಟು ಹೆಚ್ಚು ಮಂದರಸ ತಯಾರಿಸಿದ್ದೇನೆ. ಮನೆಯಲ್ಲಿ ಒಂದು ಸಣ್ಣ ಉದ್ಯಮವಾಗಿ ಉತ್ತಮ ಉಪಆದಾಯವೂ ಸಿಗುತ್ತದೆ’ ಎನ್ನುತ್ತಾರೆ ಅವರು.

ಮಂದರಸವನ್ನು ತಾಜಾ ಹಣ್ಣಿನ ಸಿಪ್ಪೆಯೊಳಗೆ ಸಕ್ಕರೆ ಮತ್ತು ಸ್ವಲ್ಪ ಉಪ್ಪು ಸೇರಿಸಿ ತಯಾರಿಸುತ್ತಾರೆ. ದಟ್ಟಕೆಂಪು ಬಣ್ಣ ತಾಳುವ ಇದಕ್ಕೆ ಯಾವುದೇ ಪ್ರಿಸರ್ವೇಟಿವ್ ಆಗಲಿ ಬಣ್ಣವಾಗಲೀ ಅಗತ್ಯವಿಲ್ಲ. ಇದೇ ರೀತಿಯಲ್ಲಿ ಶಿರಸಿ ಸುತ್ತಲಿನ ಉಂಚಳ್ಳಿಯ ಶೋಭಾ, ದೇವನಳ್ಳಿಯ ಪರಮೇಶ್ವರಿ ಮರಾಠಿ ಮತ್ತಿತರರು ಹೆಚ್ಚಿನ ಪ್ರಮಾಣದಲ್ಲಿ ಕೋಕಂ ಸಿರಪ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಸಿದ್ದಾಪುರದ ಪ್ರಕಾಶ್ ಶೇಟ್ ‘ಐನಕೈ ಪ್ರಾಡಕ್ಟ್ಸ್’ ಹೆಸರಿನಲ್ಲಿ ಕೋಕಂ(ಮುರುಗಲು) ಮಂದರಸ ಮತ್ತು ಕುಡಿಯಲು ಸಿದ್ಧ-ಕೋಕಂ ಜ್ಯೂಸ್ ತಯಾರಿಸುತ್ತಿದ್ದಾರೆ. ಗೇರುಸೊಪ್ಪಾದ ಮಂಜುನಾಥ ಕೋಕಂ ವೈನ್ ತಯಾರಿಸಿದ್ದಾರೆ. ‘ಇದಕ್ಕೆ ವಿಜ್ಞಾನಿಗಳು ನಿರ್ದಿಷ್ಟ ಮಾನದಂಡ ಹಾಕಿಕೊಟ್ಟರೆ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ’ ಎಂಬುದು ಅವರ ಅಭಿಪ್ರಾಯ. ಸಕ್ಕರೆ ಆಧಾರಿತ ಕೋಕಮ್ ಸಿರಪ್ನಂತೆಯೇ ಮಧುಮೇಹಿಗಳಿಗಾಗಿ ಸಕ್ಕರೆರಹಿತ ಕೋಕಂ ಸಿರಪ್ ತಯಾರಿಸಲೂ ಅವಕಾಶವಿದೆ ಎಂಬ ಸುಳುಹನ್ನು ಅವರು ನೀಡುತ್ತಾರೆ.

ಇನ್ನಷ್ಟು ಉತ್ಪನ್ನಗಳು
ತಾಜಾ ಹಣ್ಣುಗಳನ್ನು ಹಾಗೆಯೇ 5-10ರ ಸಂಖ್ಯೆಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವುದರ ಜೊತೆಗೆ ಮುರುಗಲು ಸಿಪ್ಪೆಯ ಪುಡಿ, ಕುಡಿಯಲು ಸಿದ್ಧ ಜ್ಯೂಸ್, ಕೋಕಂ ಕ್ಯಾಂಡಿ, ಜೆಲ್ಲಿ, ಮಿಕ್ಸೆಡ್ ಫ್ರೂಟ್ ಜಾಮ್, ಕೋಕಂ ಸೋಡಾ, ಸೋಲ್ ಕಡಿ, ಉಪ್ಪಿನಕಾಯಿ, ಸಾಬೂನು, ಫೇಸ್ ಕ್ರೀಮ್, ವೈನ್ನಂತಹವು ಗ್ರಾಹಕರನ್ನು ಸೆಳೆಯಬಲ್ಲ ಉತ್ಪನ್ನಗಳು. ಇದರ ಜತೆಗೆ ಈ ಹಣ್ಣಿನಿಂದ ದೊಡ್ಡ ಪ್ರಮಾಣದ ಉದ್ಯಮದ ಮೂಲಕ ಸ್ವಾಭಾವಿಕ ಬಣ್ಣ ಮತ್ತು ಬೊಜ್ಜು ನಿವಾರಕ ಹೈಡ್ರಾಕ್ಸಿಸಿಟ್ರಿಕ್ ಆಸಿಡ್ ತೆಗೆಯುವುದಕ್ಕೆ ಕೂಡ ಅವಕಾಶವಿದೆ. ‘ಮುರುಗಲು ತುಪ್ಪವನ್ನು ಪೆಟ್ರೋಲಿಯಮ್ ಉತ್ಪನ್ನಗಳ ಘನೀಕರಣಕ್ಕೆ ಬಳಸಬಹುದು ಎಂದು ಕಂಡುಹಿಡಿಯಲಾಗಿದೆ. ಇದು ಭವಿಷ್ಯದಲ್ಲಿ ಮುರುಗಲು ಹಣ್ಣಿನ ಮೌಲ್ಯವರ್ಧನೆಗೆ ಇನ್ನಷ್ಟು ವಿಸ್ತಾರವಾದ ಅವಕಾಶವನ್ನೇ ತೆರೆದಿಡಬಹುದು’ ಎನ್ನುತ್ತಾರೆ ತೋಟಗಾರಿಕಾ ವಿಜ್ಞಾನಿ ಡಾ. ಲಕ್ಷ್ಮೀನಾರಾಯಣ ಹೆಗಡೆ.

ಬಿಳಿ ಮುರುಗಲು ಜಾಮ್
ಗೃಹೋದ್ಯಮಿಯೂ ಆಗಿರುವ ರೈತ ಬೆಂಗಳಿಯ ವೆಂಕಟೇಶ ಹೆಗಡೆ ಮುರುಗಲಿನ ಮೌಲ್ಯವರ್ಧನೆಯನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ದವರಲ್ಲೊಬ್ಬರು. ವಿಶೇಷವಾಗಿ ಬಿಳಿಮುರುಗಲಿನ ಚಟ್ನಿ, ಜಾಮ್ ಮತ್ತು ತುಪ್ಪದ ಚರ್ಮಕಾಂತಿ ಕ್ರೀಮ್ ಅವರ ಪ್ರಮುಖ ಮೌಲ್ಯವರ್ಧಿತ ಉತ್ಪನ್ನಗಳು. ಅದರಲ್ಲೂ ಈ ವರ್ಷ ತಮ್ಮ ಪತ್ನಿ ಗಂಗಾ ಜೊತೆಗೆ ಮನೆಯಲ್ಲಿಯೇ ತಯಾರಿಸಿದ ತಲಾ 700 ಗ್ರಾಂನ ಒಂದು ಸಾವಿರಕ್ಕೂ ಹೆಚ್ಚು ಜಾಮ್ ಡಬ್ಬಗಳನ್ನು ಮಾರಾಟ ಮಾಡಿದ್ದಾರೆ. ಶಿರಸಿಯ ಕದಂಬ ಆರ್ಗ್ಯಾನಿಕ್ ಮಾರ್ಕೆಟಿಂಗ್ ಸಂಸ್ಥೆಯು ಈ ಎಲ್ಲ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಒದಗಿಸುತ್ತಿದೆ. ‘ನಾನು ಮನೆಯಲ್ಲಿ ಯಾವಾಗಲೂ ಮುರುಗಲು ಸ್ಕ್ವಾಷ್ ಇಟ್ಟಿರುತ್ತೇನೆ. ಆಯಾಸ ನಿವಾರಣೆಗೆ, ಆರೋಗ್ಯಕ್ಕೆ, ಅತಿಥಿ ಸತ್ಕಾರಕ್ಕೆ ಇದು ಹೇಳಿ ಮಾಡಿಸಿದ್ದು’ ಎನ್ನುತ್ತಾರೆ ಶಿರಸಿಯ ಗೃಹಿಣಿ ವನಿತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.