ವಿಶ್ವದಾದ್ಯಂತ ಮಧುಮೇಹಿಗಳ ಸಂಖ್ಯೆ ಏರುತ್ತಲೇ ಇರುವುದು ಆರೋಗ್ಯವಲಯದಲ್ಲಿ ನಿಜಕ್ಕೂ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ, ದೀರ್ಘಕಾಲದಲ್ಲಿ ಇದರಿಂದ ಉಂಟಾಗುವ ಸಂಭವನೀಯ ಅಪಾಯಕರ ಪರಿಣಾಮಗಳೂ ವೈದ್ಯರಿಗೆ ಸವಾಲೆನಿಸುತ್ತವೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಭಾರತದಲ್ಲಿ ಏರುತ್ತಿರುವ ಮಧುಮೇಹಿಗಳ ಸಂಖ್ಯೆಯನ್ನು ಗಮನಿಸಿದಾಗ ಇನ್ನು ಸ್ವಲ್ಪವೇ ಕಾಲದಲ್ಲಿ ಇದು ಮಧುಮೇಹದ ರಾಜಧಾನಿ ಎಂದೆನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ, ವೈದ್ಯವಿಜ್ಞಾನಿಗಳು.

ಮಧುಮೇಹದ ಚಿಕಿತ್ಸೆ ಹಾಗೂ ನಿರ್ವಹಣೆಯಲ್ಲಿ ವೈದ್ಯವಿಜ್ಞಾನವು ನಿರಂತರವಾಗಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಲೇ ಬಂದಿದೆ. ಜೀವನಶೈಲಿ ಹಾಗೂ ಆಹಾರಶೈಲಿಯೂ ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆ ಬಗ್ಗೆಯೂ ಹೆಚ್ಚಿನ ಗಮನ ವಹಿಸಲು ವೈದ್ಯರು ಸೂಚಿಸುತ್ತಾರೆ. ಆದರೆ ಅದರ ಜೊತೆಯಲ್ಲಿಯೇ ವ್ಯಕ್ತಿಯೋರ್ವನಲ್ಲಿ ಈ ಸಮಸ್ಯೆಯ ನಿಯಂತ್ರಣ ಹಾಗೂ ಚಿಕಿತ್ಸೆಯ ಪರಿಣಾಮವು ಅನುವಂಶಿಕ ಅಂಶಗಳ ಮೇಲೆಯೂ ಅವಲಂಬಿತವಾಗಿರುವುದನ್ನು ನಾವು ನೆನಪಿನಲ್ಲಿಡಬೇಕು. ಅಲ್ಲದೆ ವ್ಯಕ್ತಿಯ ವಯಸ್ಸು, ಮಧುಮೇಹದ ಬಗೆ, ಆತನ ಇತರ ಆರೋಗ್ಯ ಸಮಸ್ಯೆಗಳು ಮೊದಲಾದ ಅಂಶಗಳೂ ಸಕ್ಕರೆಯ ಅಂಶದ ಮಟ್ಟ ಮತ್ತು ಚಿಕಿತ್ಸೆಯನ್ನು ನಿರ್ಧರಿಸುತ್ತವೆ.

ಕೆಲವು ಸಂದರ್ಭಗಳಲ್ಲಿ ದಿಢೀರೆಂದು ಹೆಚ್ಚಾಗುವ ಅಥವಾ ಕಡಿಮೆಯಾಗುವ ರಕ್ತದ ಸಕ್ಕರೆಯ ಅಂಶವು ತಕ್ಷಣದ ಚಿಕಿತ್ಸೆಯನ್ನು ಬೇಡುತ್ತವೆ. ಕಡಿಮೆಯಾದಾಗ ವ್ಯಕ್ತಿಗೆ ಕಣ್ಣು ಕತ್ತಲಾದಂತಾಗಿ ಬಿದ್ದು ಅನಾಹುತವಾಗಬಹುದಾದರೆ, ಹೆಚ್ಚಾದಾಗ ವ್ಯಕ್ತಿ ತೀವ್ರತರ ನಿತ್ರಾಣಕ್ಕೂ ಒಳಗಾಗಬಹುದು. ಅಷ್ಟೇ ಅಲ್ಲದೆ ದೀರ್ಘಕಾಲಿಕ ಅಪಾಯಗಳಿಗೂ ತುತ್ತಾಗುತ್ತಾನೆ. ಸಾಮಾನ್ಯವಾಗಿ ಪ್ರಯೋಗಾಲಯದಲ್ಲಿ ಅಥವಾ ಮನೆಯಲ್ಲಿಯೇ ಇರಿಸಿಕೊಂಡ ಚಿಕ್ಕ ಉಪಕರಣದ (ಗ್ಲುಕೋಮೀಟರ್) ನೆರವಿನಿಂದಲೋ ಸಕ್ಕರೆಯ ಅಂಶವನ್ನು ಪತ್ತೆ ಮಾಡಲಾಗುತ್ತದೆ. ಆದರೆ ದಿನವೊಂದರಲ್ಲಿಯೇ ವಿಪರೀತ ಏರಿಳಿತಕ್ಕೆ ಒಳಾಗಾಗುವ ಸಕ್ಕರೆ ಅಂಶವನ್ನು ಈ ವಿಧಾನಗಳಿಂದ ಪತ್ತೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟವೆನಿಸಬಹುದು. ಅಲ್ಲದೆ, ಆ ವರದಿಯನ್ನು ವೈದ್ಯರಿಗೆ ತಿಳಿಸಿ ಅವರ ಸಲಹೆಯಂತೆ ಇಂತಿಷ್ಟೇ ಪ್ರಮಾಣದ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಲು ಸಮಯವೂ ತಗುಲಬಹುದು. ಇಂತಹ ಸನ್ನಿವೇಶಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ಸುದೀರ್ಘ ಸಮಯದವರೆಗೆ ಸಕ್ಕರೆಯ ಅಂಶವನ್ನು ಸ್ಥಿರವಾಗಿರಿಸಲು ತಂತ್ರಜ್ಞಾನವನ್ನು ಬಳಸಿ ಹೊರ ತಂದಿರುವ ವ್ಯವಸ್ಥೆಯೇ ‘ಕೃತಕ ಮೇದೋಜೀರಕ ಗ್ರಂಥಿಯ ವ್ಯವಸ್ಥೆ’ (ಆರ್ಟಿಫಿಶಿಯಲ್ ಪ್ಯಾಂಕ್ರಿಯಾಸ್). ಸಾಮಾನ್ಯವಾಗಿ ಶರೀರದಲ್ಲಿ ಮೇದೋಜೀರಕಗ್ರಂಥಿಯು ದೇಹದ ಸಕ್ಕರೆಯ ಅಂಶದ ನಿಯಂತ್ರಣದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದರಿಂದ ಈ ವ್ಯವಸ್ಥೆಯನ್ನು ಆ ರೀತಿ ಹೆಸರಿಸಲಾಗಿದೆ.

ಏನಿದು?

ಇದರಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ. ಮೊದಲನೆಯದು, ಸಕ್ಕರೆಯ ಅಂಶವನ್ನು ಅಳೆಯುವ ಮಾಪಕ. ಚರ್ಮದ ಕೆಳಭಾಗದಲ್ಲಿ ಅಳವಡಿಸಲ್ಪಟ್ಟ ನಾಣ್ಯದ ಗಾತ್ರದ ಈ ಮಾಪಕದ ಸಂವೇದಕ ಸೂಚಿಯು ನಿರಂತರವಾಗಿ ಜೀವಕೋಶಗಳ ಸುತ್ತಲಿನ ದ್ರವಾಂಶದಲ್ಲಿ ಸಕ್ಕರೆಯ ಅಂಶವನ್ನು ಕಂಡುಹಿಡಿಯುತ್ತಿರುತ್ತದೆ. ಎರಡನೆಯದು, ಈ ಪ್ರಮಾಣದ ಸಕ್ಕರೆಯ ಅಂಶಕ್ಕೆ ಎಷ್ಟು ಅಳತೆಯ ಇನ್ಸುಲಿನ್ ಬೇಕಾಗಬಹುದು ಎಂಬುದನ್ನು ನಿರ್ಧರಿಸಿ, ಸಂದೇಶವನ್ನು ಇನ್ಸುಲಿನ್ ಪೂರೈಸುವ ಉಪಕರಣಕ್ಕೆ (ಇನ್ಸುಲಿನ್ ಪಂಪ್) ಕಳುಹಿಸುವ ತಂತ್ರಜ್ಞಾನದ ಒಂದು ವ್ಯವಸ್ಥೆ (ಸಾಫ್ಟ್ವೇರ್). ಮೂರನೆಯದು, ಇನ್ಸುಲಿನ್ ಪೂರೈಸುವ ಉಪಕರಣ. ಇದು ಚರ್ಮದ ಮೇಲ್ಭಾಗದಲ್ಲಿದ್ದರೂ, ಇದರ ಅತಿ ಸಣ್ಣನಾಳಗಳು ಚರ್ಮದ ಒಳಗೆ ತೂರಿರುತ್ತವೆ. ಇದು ತನಗೆ ಬಂದ ಸಂದೇಶದ ಆಧಾರದ ಮೇಲೆ ನಿರ್ದಿಷ್ಟ ಪ್ರಮಾಣದ ಇನ್ಸುಲಿನ್ ಅನ್ನು ತಕ್ಷಣವೇ ಶರೀರಕ್ಕೆ ಪೂರೈಸುತ್ತದೆ.

ದಿನದ ಯಾವುದೇ ಸಮಯದಲ್ಲಿಯೂ ಈ ಉಪಕರಣಗಳು ಶರೀರದ ಸಕ್ಕರೆ ಅಂಶವನ್ನು ಅಳೆಯುತ್ತಲೇ ಇರುತ್ತವೆ. ವ್ಯಕ್ತಿಯು ಯಾವುದೇ ಕೆಲಸದಲ್ಲಿ ಮಗ್ನನಾಗಿದ್ದಾಗಲೂ, ಉದಾಹರಣೆಗೆ ಆತ ಸ್ನಾನ ಮಾಡುವಾಗ, ನಿದ್ದೆ ಮಾಡುವಾಗ ಅಥವಾ ವ್ಯಾಯಾಮ ಮಾಡುವಾಗ – ಹೀಗೆ ದಿನದ ಇಪ್ಪತ್ನಾಲ್ಕು ತಾಸುಗಳಲ್ಲಿಯೂ ವ್ಯಕ್ತಿಯ ಶರೀರದ ಸಕ್ಕರೆಯ ಅಂಶದ ಮಟ್ಟವನ್ನು ತಿಳಿದು, ಸಾಮಾನ್ಯಕ್ಕಿಂತ ಹೆಚ್ಚಿದ್ದಾಗ, ಸ್ವಯಂಚಾಲಿತ ವ್ಯವಸ್ಥೆಯೇ ಇನ್ಸುಲಿನ್ ಪೂರೈಸುವುದರಿಂದ ವ್ಯಕ್ತಿ ನಿರಾತಂಕವಾಗಿರಬಹುದು. ಆತನಿಗೆ ಪದೇ ಪದೇ ಸಕ್ಕರೆಯ ಅಂಶವನ್ನು ಪತ್ತೆ ಮಾಡಿಕೊಳ್ಳುವ ಮತ್ತು ಇನ್ಸುಲಿನ್ ಚುಚ್ಚುಮದ್ಧನ್ನು ಚುಚ್ಚಿಕೊಳ್ಳುವ ಗೋಜಲಿರುವುದಿಲ್ಲ. ವ್ಯಕ್ತಿಯ ಯಾವ ಚಟುವಟಿಕೆ ಅಥವಾ ಆಹಾರಸೇವನೆ ಸಕ್ಕರೆ ಅಂಶವನ್ನು ಹೆಚ್ಚಿಸುವುದು ಎಂಬ ಮಾಹಿತಿಯೂ ತಿಳಿಯುವುದರಿಂದ ಅದರ ಮಾರ್ಪಾಡೂ ಸಾಧ್ಯ. ಹಾಗೆಯೇ, ಸಕ್ಕರೆಯ ಅಂಶ ಕಡಿಮೆಯಾಗುವ ಸೂಕ್ಷ್ಮವಿದ್ದಾಗಲೂ ಅದಕ್ಕೆ ತಕ್ಕಂತೆ ಇನ್ಸುಲಿನ್ ಪೂರೈಕೆಯನ್ನು ನಿಯಂತ್ರಿಸುವುದರಿಂದ ವ್ಯಕ್ತಿ ಸಕ್ಕರೆಯ ಅಂಶ ಕಡಿಮೆಯಾಗಿ (ಹೈಪೋಗ್ಲೈಸೀಮಿಯ) ಕಣ್ಣು ಕತ್ತಲು ಬರುವ ಸನ್ನಿವೇಶಗಳೂ ಸಂಪೂರ್ಣ ಇಲ್ಲದಂತಾಗುತ್ತವೆ.

ಎರಡು ರಸದೂತಗಳನ್ನು ಪೂರೈಸುವ ಕೃತಕ ವ್ಯವಸ್ಥೆ: ಮೇದೋಜೀರಕ ಗ್ರಂಥಿಯು ರಕ್ತದ ಸಕ್ಕರೆ ಅಂಶವನ್ನು ‘ಇನ್ಸುಲಿನ್’ ಮತ್ತು ‘ಗ್ಲುಕಾಗನ್’ ಎಂಬ ಎರಡು ರಸದೂತಗಳ ಮೂಲಕ ನಿಯಂತ್ರಿಸುತ್ತದೆ. ಇನ್ಸುಲಿನ್, ರಕ್ತದಲ್ಲಿ ಹೆಚ್ಚಾದ ಸಕ್ಕರೆ ಅಂಶವನ್ನು ಕಡಿಮೆ ಮಾಡಿದರೆ ಗ್ಲುಕಾಗನ್, ಅದಕ್ಕೆ ಪ್ರತಿಯಾಗಿ ಸಕ್ಕರೆ ಅಂಶವನ್ನು ಹೆಚ್ಚಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಗ್ಲುಕಾಗನ್ ಯಕೃತ್ತಿನಲ್ಲಿ ಶೇಖರವಾದ ಸಕ್ಕರೆ ಅಂಶವನ್ನು ಬೇಡಿಕೆಗೆ ತಕ್ಕಂತೆ ರಕ್ತ ಪರಿಚಲನಾ ವ್ಯವಸ್ಥೆಗೆ ಸೇರುವಂತೆ ಪ್ರಚೋದಿಸುತ್ತದೆ. ಇದೀಗ ಹೊಸದಾಗಿ ಆವಿಷ್ಕಾರಗೊಂಡ ಕೃತಕ ಮೇದೋಜೀರಕ ಗ್ರಂಥಿ ವ್ಯವಸ್ಥೆಯಲ್ಲಿ ಈ ಎರಡೂ ರಸದೂತಗಳನ್ನು ಅವಶ್ಯಕತೆಯ ಮೇರೆಗೆ ಪೂರೈಸುವ ವ್ಯವಸ್ಥೆಯಿದ್ದು, ಮಧುಮೇಹಿಗಳು ರಕ್ತದ ಸಕ್ಕರೆ ಅಂಶವನ್ನು ಪರಿಪೂರ್ಣವಾಗಿ ನಿಯಂತ್ರಣದಲ್ಲಿಡುವಲ್ಲಿ ನೆರವಾಗುತ್ತದೆ. ಹೀಗೆ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ವೈದ್ಯಕೀಯ ವಲಯದಲ್ಲಿ ಒಂದು ಬಗೆಯ ಸಂಚಲನವನ್ನು ಮೂಡಿಸುತ್ತಿದೆ.

ಹೆಚ್ಚುವರಿ ಉಪಯೋಗಗಳು

• ದೀರ್ಘಕಾಲಿಕ ಸಕ್ಕರೆಯ ಅಂಶದ ಸಮರ್ಪಕ ನಿಯಂತ್ರಣ ಸಾಧ್ಯ.

• ಪದೇ ಪದೇ ಸಕ್ಕರೆಯ ಅಂಶ ಪತ್ತೆ ಮಾಡುವುದನ್ನು ತಪ್ಪಿಸಬಹುದು.

• ಪದೇ ಪದೇ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ತಪ್ಪಿಸಬಹುದು.

• ಸಕ್ಕರೆಯ ಅಂಶ ದಿಢೀರ್ ಕಡಿಮೆಯಾಗುವುದನ್ನು ಬಹುತೇಕ ಸಂಪೂರ್ಣ ತಪ್ಪಿಸಬಹುದು. ಮಧುಮೇಹಿಗಳ ಜೀವನಶೈಲಿಯಲ್ಲಿ ಸುಧಾರಣೆಯನ್ನು ತರಬಹುದು.

• ದೀರ್ಘಕಾಲಿಕ ಸಂಭವನೀಯ ಅಪಾಯಗಳಾದ ಮೂತ್ರಪಿಂಡಗಳ ವೈಫಲ್ಯ, ಹೃದಯದ ಸಮಸ್ಯೆ, ನರಗಳ ಉರಿಯೂತ ಮತ್ತು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಪ್ಪಿಸಬಹುದು.

• ಚಿಕ್ಕ ವಯಸ್ಸಿನವರಲ್ಲಿ ಕಂಡು ಬರುವ ಇನ್ಸುಲಿನ್ ಮೇಲೆಯೇ ಅವಲಂಬಿತವಾದ ಒಂದನೇ ಬಗೆಯ ಮಧುಮೇಹಿಗಳಿಗೆ ಇದು ವರದಾನವೆಂದೇ ಹೇಳಬಹುದು. ಇನ್ಸುಲಿನ್ ಚುಚ್ಚುಮದ್ಧನ್ನು ಉಪಯೋಗಿಸುವ ಎರಡನೆಯ ಬಗೆಯ ಮಧುಮೇಹಿಗಳಿಗೂ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಪ್ರಾಯೋಗಿಕ ಸಮಸ್ಯೆಗಳೇನು?

• ಇದರ ಬೆಲೆಯು ಸುಮಾರು ಮೂರರಿಂದ ಹತ್ತು ಲಕ್ಷದವರೆಗೂ ಇದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಿಲ್ಲದಿರುವುದು ಮೊದಲ ಸಮಸ್ಯೆ.

• ಪ್ರತಿ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಇನ್ಸುಲಿನ್ ಪೂರೈಸುವ ಉಪಕರಣದ ನಾಳಗಳನ್ನು ಬದಲಿಸಬೇಕು. ಇದರ ವೆಚ್ಛವೂ ತಿಂಗಳಿಗೆ ಸುಮಾರು ಹತ್ತು ಸಾವಿರದ ತನಕ ಬರಬಹುದು.

• ಉಪಕರಣವನ್ನು ಅಳವಡಿಸಿಕೊಳ್ಳಲು ತರಬೇತಿ ಕೊಡಬೇಕಾಗಬಹುದು. ಕೆಲವೊಮ್ಮೆ ಹಿರಿಯರಿಗೆ ಪ್ರತಿಬಾರಿಯೂ ಇನ್ನೊಬ್ಬರ ಸಹಾಯ ಬೇಕಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.