ಕರಿಮೋಡವನ್ನೇ ದೂತನನ್ನಾಗಿಸಿದ ಮಹಾಕವಿ ಕಾಳಿದಾಸ. ಸವಿಗನ್ನಡದ ಕವಿವರರ ಲೇಖನಿಯ ಮಳೆಗಾಲದ ಬಣ್ಣನೆಯೂ ಅಪೂರ್ವ. ‘... ಕನ್ನಡನಾಡಿನ ಹಸಿವಿನ ಭೂತದ ಕೂವೋ? ಹೊಸತಿದು ಕಾಲನ ಕೋಣನ ಓವೋ? ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ ಕೆರೆಗಳನುಕ್ಕಿಸಿ ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ ತೊರೆಗಳನುಕ್ಕಿಸಿ ಬರುವುದು ಬರ ಬರ ಭರದಲಿ ಬರುವುದು ಕಾರ್ಮೋಡ!’ ಹೀಗೆಂದರು ಪಂಜೆ ಮಂಗೇಶರಾಯರು. ‘...ಬಂತೈ ಬಂತೈ ಇದೆ ಇದೆ ಬಂತೈ ಜಿನುಗುತಿರುವ ಹನಿ ಸೋನೆಗಳು/ ಗುಡುಗನು ಗುಡುಗಿಸಿ ನೆಲವನು ನಡುಗಿಸಿ ಸುರಿಸಿದ ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂತೈ ಬಂತೈ.’ ‘ನೇಗಿಲ ಹಿಡಿದ ಹೊಲದಲಿ ಹಾಡುವ ಉಳುವಾ ಯೋಗಿಯ ನೋಡಲ್ಲಿ!’ ಕುವೆಂಪು ಬರೆದ ಮಳೆಗಾಲದ ಕಾಯಕ ಯೋಗಿಯ ಮಳೆಗಾಲದ ಜೀವನಗಾಥೆ. ಇಂತಹ ಸಾಲುಗಳು ಅಂದು ಇಂದು ಎಂದೆಂದಿಗೂ ಪ್ರಸ್ತುತ. ಆದರೆ ಇಂದು ಹೊಸ ಕಾಲಘಟ್ಟದ ಸವಾಲುಗಳನ್ನೆದುರಿಸುವ ಅನಿವಾರ್ಯತೆ, ಅನಿಶ್ಚಿತತೆ ನಮ್ಮನ್ನು ಕಾಡುತ್ತಿರುವುದು ನಿತ್ಯ ಸತ್ಯ. ‘ಅಯ್ಯೋ ನೆಗಡಿಯೇ’ – ಎಂದು ಹೀಗಳೆಯುವ ಕಾಲವಿದಲ್ಲ. ನೆಗಡಿಯೇ ಆಳುವವರ, ಅಳುವವರ ಮೂಗು ಹಿಡಿದು ಹಿಂಡಿ ಹಿಪ್ಪೆಯಾಗಿವೆ. ಎರಡು ಮಳೆಗಾಲಗಳು ಅಂತೂ ಇಂತೂ ಕಳೆದುವು. ಇದೀಗ ಮತ್ತೆ ಶುರು. ಕಾರ್ಗಾಲದ ವೈಭವ! ಇಂತಹ ವಿಷಮ ಋತು ಮತ್ತು ರೋಗಭಯದ ನಡುವೆ ನಾವೇನು ಮಾಡಬೇಕು? ಆರೋಗ್ಯಭಾಗ್ಯವನ್ನು ಪಡೆಯುವ ದಾರಿಗಳಾವುವು? ಆಯುರ್ವೇದ ರೀತ್ಯಾ ಮಳೆಗಾಲದಲ್ಲಿ ರೋಗನಿರೋಧಕ ಕಸುವು ಬೆಳೆಸಿಕೊಳ್ಳುವ ವಿಧಾನಗಳ್ಯಾವುವು?

ಹವಾಮಾನ ವೈಪರೀತ್ಯ ಎಂಬ ಅಂತರರಾಷ್ಟ್ರೀಯ ಮಟ್ಟದ ಸವಾಲುಗಳಿಗೆ ನಮ್ಮ ರಾಜ್ಯವೂ ಹೊರತಾಗಿಲ್ಲ. ಯಾವುದು ಬೇಸಿಗೆ, ಯಾವುದು ಮಳೆಗಾಲ – ಎಂಬ ದ್ವಂದ್ವ ಮನುಷ್ಯರ ಸಮಸ್ಯೆ ಮಾತ್ರವಲ್ಲ. ಕಾಡು, ನಾಡು ಪ್ರಾಣಿಗಳು, ಪಕ್ಷಿಸಂಕುಲ ಸಹ ಎದುರಿಸುವ ಸವಾಲುಗಳು. ಗಿಡ ಮರಗಳೂ ಅಕಾಲದ ಹೂ ಹಣ್ಣು, ಫಸಲು ತಳೆದಿವೆ. ಬಿಸಿಲು– ಮಳೆಗಳ ಜೂಟಾಟ ಮುಂದು ವರೆದಂತೆ ಉಸಿರಾಟದ ಸಮಸ್ಯೆ ಉಲ್ಬಣ. ಮೋಡ ಕವಿದಷ್ಟೂ ವಾತಾವರಣದ ಆಮ್ಲಜನಕಾಂಶ ಕುಸಿತ. ಹೀಗಾದಾಗ ಗುಂಡಿಗೆ ರೋಗ, ಪುಫ್ಫುಸದ ಕಾರ್ಯಕ್ಷಮತೆ ಇಳಿಮುಖ. ನದಿ, ಕೆರೆ ತುಂಬ ತುಂಬಿ ಹರಿದಾಡುವ ಹೊಸ ನೀರು ಪಾನ ಯೋಗ್ಯವಲ್ಲ ಅನ್ನುತ್ತದೆ, ‘ಚರಕಸಂಹಿತೆ’. ಅಂತಹ ಮೂಲಗ್ರಂಥಗಳ ನಿಲುವುಗಳಾವುವು?

ಜಲಮೂಲಗಳ ಶುದ್ಧೀಕರಣ

ಅಧರ್ಮದಿಂದ ಜನಸಮೂಹ ನಾಶವಾಗುವ ಸಂಗತಿ ಹಿಂದೆ ಇತ್ತು. ಅದರ ಬಗೆಗಳನ್ನು ಚರಕಸಂಹಿತೆಯಲ್ಲಿ ಸವಿವರವಾಗಿ ಬಣ್ಣಿಸಿದ್ದು ಐದು ಸಹಸ್ರ ವರ್ಷಗಳ ಪೂರ್ವದಲ್ಲಿ. ಜನರ ಮನಸ್ಸು ಸಹ ಭೂಮಿ, ಗಾಳಿ ಮತ್ತು ನೀರು ಕೆಡುವಂತೆ ಕೆಡುವುದು ಸಹಜ. ಕುದಿಸಿದ ನೀರು ಕುಡಿಯುವ ಪರಿಪಾಠ ಎಂದಿಗಿಂತ ಮಳೆಗಾಲಕ್ಕೆ ಹೆಚ್ಚು ಅನ್ವಯ. ಬೇರೆ ಸಮಯದಲ್ಲಿ ಕಾದಾರಿದ ನೀರು ಕುಡಿಯುವ ಅಭ್ಯಾಸವಿದ್ದವರೂ, ಮಳೆಗಾಲದಲ್ಲಿ ಕಾದು ಬಿಸಿಬಿಸಿಯಾಗಿರುವ ನೀರು ಕುಡಿಯುವುದು ಒಳಿತು. ಊಟ ತಿಂಡಿಯ ನಡು ನಡುವೆ ಬಿಸಿ ನೀರು ಕುಡಿಯುತ್ತಾ ಆಹಾರ ಸೇವಿಸಿರಿ. ಆಯುರ್ವೇದದರೀತ್ಯಾ, ಮಳೆಗಾಲದುದ್ದಕ್ಕೆ ವಾತ ದೋಷ ಉಲ್ಬಣಿತ. ಹಾಗಾಗಿ ಅದಕ್ಕೆ ಪ್ರತ್ಯುಪಾಯ ಬಿಸಿ ಆಹಾರ ಮತ್ತು ಪಾನೀಯ ಸೇವನೆ. ಪಂಚಕೋಲ, ಅಂದರೆ ಶುಂಠಿ, ಹಿಪ್ಪಲಿ, ಕಾಳುಮೆಣಸು, ಕಾಳು ಮೆಣಸಿನ ಬಿಳಲ ಬೇರು ಮತ್ತು ಚಿತ್ರಮೂಲವೆಂಬ ಸಸ್ಯದ ಬೇರು. ಈ ಐದನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಡಬೇಕು. ಅಂತಹ ಪುಡಿಯನ್ನು ಕುಡಿಯುವ ನೀರಿನ ಸಂಗಡ ಬೆರಸಿ ಕುಡಿದರೆ ಹಿತ. ಹಳೆಯ ಧಾನ್ಯ ಬಳಕೆಗೆ ಮಳೆಗಾಲ ಸೂಕ್ತ. ಹಿಂದೆ ಅಂತಹ ವಿಧಾನಗಳು ಚಾಲ್ತಿಯಲ್ಲಿತ್ತು. ಹೊಸ ಧಾನ್ಯ ಬಳಸಿದ್ದಾದರೆ ಕಫ ಹೆಚ್ಚಳ ಎಂಬ ಸತ್ಯ ನೆನಪಿಡಿರಿ. ತುಳಸಿ, ತುಂಬೆ, ಬಿಲ್ವಪತ್ರೆಯಂತಹ ಎಲೆಗಳಿಂದ ಜಲಶುದ್ಧೀಕರಣ ಸಾಧ್ಯ. ಅವುಗಳನ್ನು ಕುಡಿಯುವ ನೀರಿನ ಸಂಗಡ ಹಾಕಿ ಕುದಿಸಬಹುದು. ಕುಡಿಯಲು ಬಳಸಬಹುದು. ಮನೆಯವರಿಗೆಲ್ಲ ಇದು ಸಾಧು. ಮನಸ್ಸಿಗೆ ಇದು ಆಹ್ಲಾದಕರ. ಕೇರಳದಲ್ಲಿ ಲಾವಂಚ, ಪದಿಮೊಗ (ಹಳದಿ ಚಕ್ಕೆ), ಲವಂಗ ಹಾಕಿದ ಬಿಸಿನೀರನ್ನು ವರ್ಷವಿಡೀ ಕುಡಿಯುವ ರಿವಾಜಿದೆ. ಇದರ ಹಿಂದೆ ಆಯುರ್ವೇದ ಸಂಗತಿಗಳಿವೆ.

ಮಳೆಗಾಲದ ಆಹಾರ

ಸುಲಭವಾಗಿ ಅರಗುವ ಆಹಾರವಷ್ಟೆ ಸಾಕು. ಭತ್ತದ ಅರಳು, ಹೆಸರುಬೇಳೆ, ಶುಂಠಿ ಹಾಕಿದ ಮಜ್ಜಿಗೆ ಬಳಸಿರಿ. ಹುಳಿ ಮತ್ತು ಸಿಹಿರಸಕ್ಕೆ ಜೈ. ಅತಿ ಖಾರ, ಮಸಾಲೆ ಪದಾರ್ಥ ಸೇವನೆ ಬೇಡ. ಮಿತಿಯರಿತ ಎಣ್ಣೆ, ತುಪ್ಪದ ಬಳಕೆಯಿಂದ ಹಿತವಿದೆ. ವಾತದ ಪ್ರಕೋಪಕ್ಕೆ ಅದರಿಂದ ಕಡಿವಾಣ. ಮಾಂಸಾಹಾರಿಗಳಿಗೆ ಬೇಗ ಜೀರ್ಣವಾಗುವಂತಹ ಆಹಾರದ ಆಯ್ಕೆ ಸೂಕ್ತ. ಹಲಸಿನ ಬಳಕೆಯ ಸಂಗಡ ತುಪ್ಪ ಮತ್ತು ಜೇನು ಮಿಶ್ರಣದಿಂದ ಲಾಭವಿದೆ. ಬೇಯಿಸಿದ ಹಲಸಿನ ತೊಳೆ ಖಾದ್ಯಗಳಿಗೆ ಒತ್ತು ನೀಡಿರಿ. ಆಷಾಢದ ಏಕಾದಶಿಗೆ ಹಲಸಿನ ಬಳಕೆಗೆ ಪರಂಪರೆಯ ಒತ್ತು ನೀಡಿದ್ದು ನೆನಪಿಡಿರಿ.

ವಿಹಾರಕ್ರಮ

ವೆಚ್ಚಕ್ಕೆ ಹೊನ್ನಾಗಿ ಬೆಚ್ಚನೆಯ ಮನೆಯಾಗಿ, ಇಚ್ಛೆಯನರಿತು ನಡೆವ ಸತಿಯಿದ್ದೊಡೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ! ಮನೆ ಬೆಚ್ಚಗಾಗಿಸಲು ಧೂಪನ ವಿಧಾನ ಹೇಳಿದೆ. ಮನ ಬೆಚ್ಚಗಾಗಲು ಧೂಮಪಾನ, ನಶೆಗಳು ಮಾತ್ರ ಬೇಡ. ಮಧೂದಕ, ಅಂದರೆ ಜೇನುನೀರಷ್ಟೆ ಕುಡಿಯಿರಿ. ಬೆಚ್ಚನೆಯ ಬಟ್ಟೆ ಧರಿಸಿರಿ. ಕೈಕಾಲು ಬೆಚ್ಚಗೆ ಇರುವಂತೆ ಕೈಗವಸು, ಕಾಲ್ಚೀಲದ ಬಳಕೆ ಲೇಸು. ಅನಗತ್ಯ ಓಡಾಟ ಬೇಡ. ಕುಳಿರ್ಗಾಳಿ, ಎದಿರು ಮಳೆ, ತುಂತುರು ಸೋನೆಗೊಡ್ಡಿಕೊಳ್ಳದಿರಿ. ಜಾಗಿಂಗ್ ನೆಪದಲ್ಲಿ ಅಪಾಯ ತಂದುಕೊಳ್ಳದಿರಿ. ಮನೆಯೊಳಗಿನ ವ್ಯಾಯಾಮ, ಯೋಗ, ಪ್ರಾಣಾಯಾಮಗಳಿಗಿರಲಿ ಒತ್ತು.

ಗಾಳಿ ಶುದ್ಧೀಕರಣ

ಉಸಿರಾಡುವ ಗಾಳಿ ಶುದ್ಧೀಕರಣದ ಬಗೆ ಹೇಗೆ? ಮಳೆಗಾಲದ ಬೀಸುಗಾಳಿಯಲ್ಲಿ ತೇವಾಂಶ ಅಧಿಕ. ಮನೆಗಳಲ್ಲಿ ಮಣ್ಣಿನ ಕುಂಡದ ತುಂಬ ಕೆಂಡ ಹಾಕಿ ಅದಕ್ಕೆ ಕೆಲ ಸುವಾಸನಾಭರಿತ ವಸ್ತುಗಳನ್ನು ಉದುರಿಸಿ ಧೂಪದ ಹೊಗೆ ಬರಿಸುವ ವಿಧಾನ. ‘ಅಗ್ಗಿಷ್ಟಿಕೆ’ ಎಂಬ ಹೆಸರಿನ ಈ ವಿಧಾನದ ಹಿಂದೆ ಆಯುರ್ವೇದ ಸೂತ್ರಗಳಿವೆ. ಲಕ್ಕಿಗಿಡದ ಎಲೆಯ ಧೂಪನ ಬಹಳ ಪ್ರಖರ. ಮಳೆಗಾಲದ ಏಕಾಣು, ವೈರಾಣು ಜನಿತ ಕಾಯಿಲೆಗಳೆನಿಸಿದ ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ ಬರಲು ಕಾರಣ ಸೊಳ್ಳೆ ಕಡಿತ. ಅದರ ತಡೆ ಮತ್ತು ನಿವಾರಣೆಗೆ ಸೊಳ್ಳೆಗಳ ನಿರ್ಮೂಲನೆ ಅತ್ಯಗತ್ಯ. ಲಕ್ಕಿಸೊಪ್ಪು, ಮಡ್ಡಿ ಸಾಂಬ್ರಾಣಿ, ಸಾಸಿವೆ, ಬಜೆ ಬೇರು, ಬೆಳ್ಳುಳ್ಳಿ ಸಿಪ್ಪೆ, ತುಳಸಿ ಎಲೆಯ ಘಾಟು ಹೊಗೆ ಮನೆಯಲ್ಲಿ ಹಾಯಿಸಿರಿ. ಕಡು ಮಳೆಗಾಲದ ದಿನಗಳಿಗೆ ಮನೆಯ ಒಳಗಿನ ತೇವಾಂಶ ಕಳೆಯಲಿದು ಸುಲಭ ಉಪಾಯ. ಕಾಳುಮೆಣಸು, ವೀಳ್ಯದೆಲೆ, ಅರಶಿನಪುಡಿ, ಅರಶಿನಗಿಡದ ಎಲೆ, ದಾಲ್ಚೀನಿ ಎಲೆ, ಏಲಕ್ಕಿಸಿಪ್ಪೆ, ಹರಳುಗಿಡದ ಎಲೆ, ಒಣಬೇರು, ತುಪ್ಪದಂತಹ ಸುವಸ್ತುಗಳು ಎಲ್ಲರ ಕೈಗೆಟಕುತ್ತವೆ. ನಗರವಾಸಿಗಳೂ ಅಪಾರ್ಟ್‍ಮೆಂಟ್ ನಿವಾಸಿಗಳೂ ಈ ಉಪಾಯ ಸುಲಭವಾಗಿ ಕೈಗೊಳ್ಳಲಾದೀತು. ಹೆಂಚಿನ ತುಂಡಿನಲ್ಲಿ ಕೆಂಡ ಹಾಕಿಕೊಳ್ಳಿರಿ. ಇಂತಹ ವಸ್ತುಗಳ ಪುಡಿ ಉದುರಿಸಿ. ಹೊಗೆ ಬರಿಸಿ ವಾತಾವರಣ ಮತ್ತು ವಾಸದ ಕೋಣೆಯ ತೇವಾಂಶ ನೀಗಿರಿ. ನಿಗಿ ನಿಗಿ ಕೆಂಡದ ಉದುರಿಸಬಹುದಾದ ವಸ್ತುಗಳ ಪಟ್ಟಿ ಓದಿದಿರಲ್ಲ. ‘ವನಸ್ಪತಿ ರಸೋತ್ಪನ್ನೋ ಧೂಪೋಯಂ ಪ್ರತಿಗೃಹ್ಯತಾಂ’ ಎಂಬ ಮಂತ್ರ ಹೇಳಿ ಪೂಜೆಯ ವೇಳೆ ಧೂಪ ಹಾಕುವೆವು. ಅದರ ಹಿಂದಿನ ಆರೋಗ್ಯಕಾಳಜಿಯನ್ನು ಮರೆತೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.