ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ | ಇನ್ನು ಮುಟ್ಟಾಗಿಲ್ಲ ಏನು ಮಾಡಲಿ?

Published : 1 ಜುಲೈ 2023, 0:01 IST
Last Updated : 1 ಜುಲೈ 2023, 0:01 IST
ಫಾಲೋ ಮಾಡಿ
Comments
ಪ್ರ

1. ನನಗೆ ಹೆರಿಗೆಯಾಗಿ ಏಳು ತಿಂಗಳು ಕಳೆಯಿತು. ಇನ್ನೂ ಮುಟ್ಟು ಆಗಿಲ್ಲ. ಏನಾದರೂ ತೊಂದರೆ ಇದೆಯೇ?

ಉತ್ತರ: ನಿಮಗೆ ಹೆರಿಗೆಯಾಗಿ ಕೇವಲ ಏಳು ತಿಂಗಳಷ್ಟೇ ಆಗಿದೆ. ಇದು ಮೊದಲನೆಯದೋ ಅಥವಾ ಎರಡನೇ ಮಗುವೋ ಎಂದು ನೀವು ತಿಳಿಸಿಲ್ಲ. ಮಗುವಿಗೆ ಆರು ತಿಂಗಳವರೆಗೆ ಎದೆಹಾಲನ್ನಷ್ಟೇ ಕುಡಿಸುತ್ತಿದ್ದೀರಾ? ಇನ್ನೂ ಮುಂದುವರಿಸುತ್ತಿದ್ದೀರಾ ? ಜೊತೆಗೆ ಪೂರಕ ಆಹಾರವನ್ನು ಕೊಡುತ್ತಿದ್ದೀರಾ...? ಈ ಮಾಹಿತಿಗಳನ್ನು ನೀವು ತಿಳಿಸಿಲ್ಲ.

ಏಕೆಂದರೆ, ಮಗುವಿಗೆ ಮೊದಲ ಆರು ತಿಂಗಳು ಕೇವಲ ಎದೆಹಾಲನ್ನಷ್ಟೇ ಕುಡಿಸುತ್ತಿದ್ದರೆ ಹೆಚ್ಚಿನ ಮಹಿಳೆಯರಿಗೆ ಮಾಸಿಕ ಮುಟ್ಟು ಆಗುವುದಿಲ್ಲ. ಇದನ್ನು ಲ್ಯಾಕ್ಟೇಶನಲ್ ಅಮೇನೋರಿಯಾ ಎನ್ನುತ್ತೇವೆ. ಇದೊಂದು ಸಹಜವಾದ ಸಂತಾನ ನಿಯಂತ್ರಣ ವಿಧಾನ. ಆದರೆ,  ಹೆರಿಗೆಯಾಗಿ ಕೇವಲ ಆರು ತಿಂಗಳೊಳಗಾಗಿ ಮಾತ್ರ ಇದು ಶೇ 99.5ರಷ್ಟು ಸುರಕ್ಷಿತವಾದ ನೈಸರ್ಗಿಕ ಸಂತಾನ ನಿರೋಧಕ ಕ್ರಮವಾಗಿ ಕೆಲಸಮಾಡುತ್ತದೆ. ನಿಮಗೀಗ ಏಳನೇ ತಿಂಗಳು ನಡೆಯುತ್ತಿದೆ ಎಂದಿದ್ದೀರಿ. ನಿಮಗೆ ಸಹಜ ಮಾಸಿಕ ಋತುಚಕ್ರ ಬರದಿದ್ದರೂ, ಇನ್ನು ಮುಂದೆ ಯಾವಾಗ ಬೇಕಾದರೂ ಬರಬಹುದು. ಒಂದು ವೇಳೆ ಬರದಿದ್ದರೂ ಮಗುವಿಗೆ ಕನಿಷ್ಠ ಎರಡು ವರ್ಷಗಳಾಗುವವರೆಗೂ ನೀವು ಸಂತಾನ ನಿಯಂತ್ರಣ ಕ್ರಮವನ್ನು ಅನುಸರಿಸಿ. ನಿಮ್ಮ ಪತಿ ಕಾಂಡೋಮ್‌ಗಳ ಬಳಕೆ ಮಾಡಬಹುದು ಅಥವಾ ನೀವೇ ಕಾಪರ್ಟಿ ಅಳವಡಿಸಿ ಕೊಳ್ಳಬಹುದು. ಇಲ್ಲವೇ ನೀವು ಸಂತಾನ ನಿಯಂತ್ರಣ ಮಾತ್ರೆಗಳನ್ನು ಬಳಸಬಹುದು. ನಿಮ್ಮ ಹತ್ತಿರದ ವೈದ್ಯರನ್ನು ಕಂಡು ಸೂಕ್ತಸಲಹೆಗಳನ್ನು ಪಡೆಯಿರಿ.

ಕೆಲವರಿಗೆ ಹೆರಿಗೆಯಾಗಿ ಒಂದು ವರ್ಷವಾದರೂ ಮುಟ್ಟು ಬರದೇ ಇರಬಹುದು. ಆದರೆ ಅಂಡೋತ್ಪತ್ತಿಯ ಪ್ರಕ್ರಿಯೆ ಉಂಟಾಗಿ ಗರ್ಭಧಾರಣೆ ಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಾಗ್ರತೆ ಇರಲಿ. ಸೂಕ್ತ ಸಂತಾನ ನಿಯಂತ್ರಣ ಕ್ರಮಗಳನ್ನು ಅನುಸರಿಸಿ. ಈಗಾಗಲೇ ನಿಮಗೆ ಎರಡು ಮಕ್ಕಳಾಗಿದ್ದರೆ ಶಾಶ್ವತ ಸಂತಾನ ಶಕ್ತಿ ಹರಣ ಚಿಕಿತ್ಸೆಯನ್ನು ನೀವು ಅಥವಾ ನಿಮ್ಮ ಪತಿ ಮಾಡಿಸಿಕೊಳ್ಳಬಹುದು.

ADVERTISEMENT
ಪ್ರ

2. ನನ್ನ ಪತ್ನಿಗೆ 28 ವರ್ಷ. ನಮಗೆ ಒಬ್ಬ ಮಗ, ಒಬ್ಬ ಮಗಳು ಇದ್ದಾರೆ. ಕಾರಣಾಂತರಗಳಿಂದಾಗಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಲಾಗಿಲ್ಲ. ಬದಲಿಗೆ ಒಂದು ಸಾರಿ ಗರ್ಭನಿರೋಧಕ ಛಾಯ ಎಂಬ ಚುಚ್ಚು ಮದ್ದು ಕೊಡಿಸಿದ್ದೇನೆ. ಈ ಚುಚ್ಚು ಮದ್ದು ಕೊಡಿಸುವ ಮುನ್ನ ಸರಿಯಾಗಿ ಮಾಸಿಕ ಮುಟ್ಟಾಗುತ್ತಿತ್ತು. ಚುಚ್ಚು ಮದ್ದು ಕೊಡಿಸಿದ ನಂತರ, ಸರಿಯಾಗಿ ಮಾಸಿಕ ಮುಟ್ಟಾಗುತ್ತಿಲ್ಲ. ಈಗ ಅವರು ಮುಟ್ಟಾಗಿ ನಾಲ್ಕು ತಿಂಗಳಾಯಿತು. ಇದಕ್ಕೆ ಕಾರಣವೇನು ಎಂದು ತಿಳಿಸಿ, ಪರಿಹಾರ ಸೂಚಿಸಿ. 

ಉತ್ತರ: ನಿಮ್ಮ ಪತ್ನಿಗೆ ಕೊಡಿಸಿರುವುದು ಬಹುಶಃ ‘ಅಂತರ‘ ಎಂಬ ಇಂಜೆಕ್ಷನ್‌ ಇರಬಹುದು. ಏಕೆಂದರೆ ನನಗೆ ತಿಳಿದಂತೆ ಛಾಯ ಎಂಬ ಹೆಸರಿನ ಸಂತಾನ ನಿರೋಧಕ ಚುಚ್ಚುಮದ್ದು ಇಲ್ಲ. ಛಾಯ ಎಂಬ ಮಾತ್ರೆ ಇದೆ. ಅದನ್ನು ವಾರಕ್ಕೆರಡು ತೆಗೆದುಕೊಳ್ಳಬೇಕು. ನೀವು ಹೇಳಿದ ಇಂಜೆಕ್ಷನ್ ಮೂರು ತಿಂಗಳಿಗೊಮ್ಮೆ ತೆಗೆದುಕೊಳ್ಳುವಂತದ್ದು. ಅದು ಡಿ.ಪೋ.ಪ್ರೊವೆರಾ ಎನ್ನುವಂತದ್ದು. ಈ ಚುಚ್ಚುಮದ್ದು 12 ವಾರಗಳ ಕಾಲ ಪರಿಣಾಮಕಾರಿಯಾಗಿರುತ್ತದೆ. ಇದರಿಂದ ಕೆಲವು ಬಾರಿ ಹಲವು ತಿಂಗಳವರೆಗೆ ಕೆಲವೊಮ್ಮೆ ವರ್ಷಗಟ್ಟಲೇ ಮಾಸಿಕ ಋತುಚಕ್ರ ಬರುವುದೇ ಇಲ್ಲ. ಯಾಕೆಂದರೆ ಇದು ಗರ್ಭಕೋಶದ ಒಳಪದರವನ್ನ ತೆಳುವಾಗಿಸುತ್ತದೆ. ಇದರಿಂದ ಕೆಲವರಿಗೆ ಋತುಚಕ್ರ ಬರುವುದಿಲ್ಲ. ಈ ಇಂಜೆಕ್ಷನ್‌ನ ಸೈಡ್‌ಎಫೆಕ್ಟ್‌ಗಳಲ್ಲಿ (ಅಡ್ಡಪರಿಣಾಮಗಳಲ್ಲಿ) ಇದೂ ಒಂದು. ನೀವು ಹೇಳಿರುವ ಸಮಸ್ಯೆ ಕ್ರಮೇಣ ಇದು ಸರಿ ಹೋಗುತ್ತದೆ, ಸಹಜವಾಗಿ ಮುಟ್ಟು ಬರುತ್ತದೆ.  ಚಿಂತಿಸುವುದು ಬೇಡ. ಒಂದು ವರ್ಷವಾದರೂ ಮುಟ್ಟು ಬರದಿದ್ದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನೀವು ಯಾವಾಗಬೇಕಾದರೂ ಶಾಶ್ವತ ಸಂತಾನ ಶಕ್ತಿ ಹರಣ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.

ಪ್ರ

3. ನನ್ನ ಮಗಳು ಮೊದಲ ಬಾರಿಗೆ 15 ನೇ ವರ್ಷಕ್ಕೆ ಮುಟ್ಟಾಗಿದ್ದಾಳೆ. ಈಗ ಅವಳಿಗೆ ತಿಂಗಳಿಗೆ ಸರಿಯಾಗಿ ಮುಟ್ಟಾಗುತ್ತಿಲ್ಲ. ಕೆಲವೊಮ್ಮೆ ಎರಡು ತಿಂಗಳಿಗೆ, ಇನ್ನೂ ಕೆಲವೊಮ್ಮೆ 28 ದಿನಕ್ಕೆ ಮುಟ್ಟಾಗುತ್ತಿದ್ದಾಳೆ. ಇದಕ್ಕೆ ಏನು ಪರಿಹಾರ?

ಉತ್ತರ: ಈಗಷ್ಟೇ ನಿಮ್ಮ ಮಗಳಿಗೆ ಋತುಚಕ್ರ ಆರಂಭವಾಗಿದೆ. ಹೀಗೆ ಋತುಚಕ್ರ ಆರಂಭವಾದ ಮೊದಲ 2 ವರ್ಷಗಳಲ್ಲಿ ಋತುಚಕ್ರದ ಅವಧಿಯಲ್ಲಿ ಏರುಪೇರುಗಳಾಗುವುದು ಸಹಜ. ಏಕೆಂದರೆ ಹೈಪೋಥಲಾಮಸ್/ಪಿಟ್ಯೂಟರಿ/ಅಂಡಾಶಯದ ಅಕ್ಷೆ(ಹೆಚ್.ಪಿ.ಎ.ಆಕ್ಸಿಸ್) ಸರಿಯಾಗಿ ಪಕ್ವವಾಗಿರುವುದಿಲ್ಲ. ಹಾಗಾಗಿ ಇನ್ನೆರಡು ವರ್ಷದ ನಂತರವೂ ಅನಿಯಮಿತ ಋತುಚಕ್ರ ಉಂಟಾದರೆ ಮಾತ್ರ ನೀವು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT