ಅಮಾವಾಸ್ಯೆಯ ನಟ್ಟ ನಡುರಾತ್ರಿ, ಸ್ಮಶಾನದ ದೊಡ್ಡ ಹುಣಸೆಮರದ ತುದಿಯಲ್ಲಿ ತಲೆಕೆಳಕಾಗಿ ಜೋತು ಬಿದ್ದ ಬಾಣಂತಿದೆವ್ವ ಊಳಿಡುತ್ತಿದೆ. ನಿನ್ನೆಯಷ್ಟೇ ಮಣ್ಣು ಸೇರಿದ ಹೆಣ ಹೊಸ ಜಾಗದಲ್ಲಿ ನಿದ್ರೆ ಬರದೆ ಮಗ್ಗಲು ಬದಲಿಸಿದೆ. ವಿಕಾರವಾಗಿ ತಲೆ ಕೆದರಿಕೊಂಡ ದಡಿಯನೊಬ್ಬ ದಾಪುಗಾಲಿಡುತ್ತ ಬರುತ್ತಿದ್ದಾನೆ. ಅವನ ಮುಷ್ಟಿಯಲ್ಲಿ ಪೊಟ್ಟಣ ಕಟ್ಟಿದ ಕಾಗದದಲ್ಲಿ ರಕ್ತವೊಸರುವ ಕಾಡುಬೆಕ್ಕಿನ ಕರುಳ ಮಾಲೆ...

ಈ ಸಾಲುಗಳನ್ನು ಓದುತ್ತಿದ್ದರೆ ಹೊಟ್ಟೆಯಲ್ಲೇನೋ ಝಿಲ್ಲನೆ ಸರಿದಾಡುತ್ತದೆಯಲ್ಲವೆ? ಅದೇ ಭಯ. ನಾವೆಲ್ಲ ಚಿಕ್ಕವರಿದ್ದಾಗ ಇಂತಹ ಕಥೆಗಳನ್ನು ಓದುತ್ತಿದ್ದರೆ ಕೂತಲ್ಲೇ ಕೂಗಿಕೊಳ್ಳುವಂತೆ ಆಗುತ್ತಿತ್ತು. ಗಂಟಲೊಣಗಿ ಧ್ವನಿ ಹೂತು ಹೋಗುತ್ತಿತ್ತು. ಮೊನ್ನೆ ಮೊನ್ನೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕಾಂತಾರ ಸಿನಿಮಾದಲ್ಲಿ ಕಾಡನಡುವೆ ಓಡುವ ನಾಯಕನ ಎದುರಿಗೆ ಥಟ್ಟನೆ ಆಕಾರವೊಂದು ಪ್ರತ್ಯಕ್ಷವಾಗುತ್ತದೆ. ಇಡೀ ಥಿಯೇಟರ್ ಚಿಟ್ಟನೆ ಚೀರಿಕೊಳ್ಳುತ್ತದೆ. ಅರೆ ಅದು ಸಿನಿಮಾ ಎಂದು ಗೊತ್ತು. ಆದರೂ ನಾವು ಹಾಗೇಕೆ ಭಯಪಡುತ್ತೇವೆ? ಓದುತ್ತಿರುವುದು ಕಥೆಯ ಪುಸ್ತಕ ಎಂದು ಗೊತ್ತಿದ್ದರೂ ಅಷ್ಟೇಕೆ ನಡುಕ ಹುಟ್ಟಬೇಕು?

ಹೆದರಿಕೆಯಾದಾಗ, ಅದು ನಮಗೆ ಅರ್ಥ ಆಗುವುದಕ್ಕೂ ಮುನ್ನವೇ, ನಮ್ಮ ಮೆದುಳಿನ ಆಳದಲ್ಲಿ ಹುದುಗಿರುವ ಬಾದಾಮಿಯಾಕಾರದ ನ್ಯೂರಾನ್‌ಗಳ ಗುಚ್ಛಕ್ಕೆ ಗೊತ್ತಾಗುತ್ತದೆ, ಇದು ಅಲಾರಾಂ ತರಹ ಕೆಲಸ ಮಾಡುತ್ತದೆ. ಇದಕ್ಕೆ ಎಷ್ಟು ಚೆಂದದ ಹೆಸರಿದೆ ಗೊತ್ತೆ? ‘ಅಮಿಗ್‌ಡಲಾ’. ಇದು ಹೈಪೊಥೆಲಮಸ್ ಮೂಲಕ ದೇಹಕ್ಕೆ ಸಂದೇಶ ಕಳಿಸುತ್ತದೆ. ಆಗ ಪಿಟ್ಯುಟರಿ ಗ್ರಂಥಿಯಿಂದ ಅಡ್ರೆನಾಲ್ ಹಾರ್ಮೊನು ಹಾಗೂ ಕಾರ್ಟಿಸೊಲ್ ಹಾರ್ಮೊನುಗಳು ಉತ್ಪತ್ತಿಯಾಗುತ್ತವೆ. ಈ ಸಂದೇಶದ ಪರಿಣಾಮವಾಗಿ ಹೃದಯವು ಸಹಜ ಸ್ಥಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಕ್ತವನ್ನು ಉತ್ಪಾದನೆ ಮಾಡುತ್ತದೆ. ಉಸಿರಾಟದ ವೇಗ ಹೆಚ್ಚಾಗುತ್ತದೆ. ರಕ್ತವು ಹೃದಯದಿಂದ ಹೊರಗೆ, ಅಂದರೆ ಅಂಗಾಂಗಗಳ ಕಡೆಗೆ ಹರಿಯುತ್ತದೆ. ನಮ್ಮೆಲ್ಲ ಅಂಗಾಂಗಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಚಲಿಸಲು ಶುರುವಾಗುತ್ತದೆ. ಅಂದರೆ ನಮ್ಮ ದೇಹವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಾರ್ಯಪ್ರವೃತ್ತವಾಗುತ್ತದೆ. ಈ ಹಾರ್ಮೊನು ದೇಹದ ಬೇರೆಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಿ ಕೇವಲ ರಕ್ಷಣಾಕಾರ್ಯಕ್ಕೆ ಮಾತ್ರ ಗಮನ ಹರಿಸುವಂತೆ ನಮ್ಮ ಅಂಗಾಂಗಗಳನ್ನು ಸಜ್ಜುಗೊಳಿಸುತ್ತದೆ. ಉದಾಹರಣೆಗೆ, ಅಂತಹ ಸಮಯದಲ್ಲಿ ಓಡುವುದಿದ್ದರೆ ಅಥವಾ ಹೊಡೆದಾಡುವುದಿದ್ದರೆ ಕೈಕಾಲುಗಳು ಸಹಜ ಸಮಯಕ್ಕಿಂತ ಹೆಚ್ಚಿನ ಚುರುಕುತನದಲ್ಲಿ ಚಲಿಸಬಲ್ಲವು. ಆದರೆ ಆ ಸಮಯದಲ್ಲಿ ಜೀರ್ಣಕ್ರಿಯೆ ನಿಂತುಬಿಡುತ್ತದೆ. ಆದ್ದರಿಂದ ಭಯವಾದಾಗ ಹಸಿವಾಗುವುದಿಲ್ಲ. ಹೀಗೆ ಜೀರ್ಣಕ್ರಿಯೆ ನಿಲ್ಲುವುದರಿಂದಲೇ ಹೊಟ್ಟೆಯಲ್ಲಿ ಒಂಥರ ಸುಳಿಸುಳಿ ಅಂತ ಏನೋ ತಿರುಗುವ ಅನಿಸಿಕೆ ಆಗುತ್ತದೆ. ಅದನ್ನೇ ‘ಹೊಟ್ಟೆಯಲ್ಲಿ ಚಿಟ್ಟೆ ಹಾರುತ್ತವೆ’ ಎನ್ನುತ್ತಾರೆ. ನೀರು ಉತ್ಪಾದನೆಯ ಕೆಲಸವೂ ನಿಂತುಬಿಡುತ್ತದೆ. ಹಾಗೆಂದರೆ ಕಣ್ಣೀರೂ ಬರುವುದಿಲ್ಲ; ಬಾಯಿಯ ದ್ರವವೂ ನಿಂತುಬಿಡುತ್ತದೆ. ಅದಕ್ಕಾಗಿಯೇ ಬಾಯಿ ಒಣಗುತ್ತದೆ. ಕಣ್ಣಪಾಪೆಗಳು ಸಹಜ ಸ್ಥಿತಿಗಿಂತ ದೊಡ್ಡದಾಗುತ್ತವೆ; ಅವುಗಳ ನೋಟದ ಶಕ್ತಿಯೂ ಹೆಚ್ಚುತ್ತದೆ. ಹೀಗೆ ನಮ್ಮನ್ನು ಭಯದ ಸ್ಥಿತಿಯಲ್ಲಿ ಹುಟ್ಟಿದ ಅಪಾಯವನ್ನು ನಾವು ಎದುರಿಸಬಹುದು.

ಇದೇ ಹೊತ್ತಿನಲ್ಲಿ ಇನ್ನೊಂದು ಪ್ರಶ್ನೆ ಏಳುತ್ತದೆ. ಕಾಡಿನಲ್ಲಿ ಹೋಗುವಾಗ ಎದುರಾಗುವ ಕಾಡುಪ್ರಾಣಿಗಳನ್ನು ಕಂಡಾಗ ಉಂಟಾಗುವ ಹೆದರಿಕೆಗೂ, ಝೂನಲ್ಲಿ ನೋಡುವ ಪ್ರಾಣಿಗಳ ಬಗ್ಗೆ ಹುಟ್ಟುವ ಭಯಕ್ಕೂ ವ್ಯತ್ಯಾಸವಿರುತ್ತದೆಯಲ್ಲವೆ? ದೆವ್ವದ ಸಿನಿಮಾವನ್ನು ನೋಡುವಾಗ ಹೆದರುತ್ತೇವಾದರೂ, ನಡುರಾತ್ರಿ ಒಬ್ಬರೇ ಇದ್ದಾಗ ಹುಟ್ಟುವ ಭಯಕ್ಕಿಂತಲೂ ಇದು ಭಿನ್ನವಾಗಿರುತ್ತದೆ. ಇದಕ್ಕೆ ಕಾರಣವೆಂದರೆ ನಮ್ಮ ಮೆದುಳಿನಲ್ಲಿ ಉಂಟಾಗುವ ರಾಸಾಯನಿಕ ಕ್ರಿಯೆ. ನಾನು ಹೇಳಿದ ಈ ಅಮಿಗ್‌ಡಲಾ ಇದೆಯಲ್ಲ, ಇದು ತನ್ನ ಹೆಸರಿನಷ್ಟೇ ಚೆಂದದ ಕೆಲಸವನ್ನೂ ಮಾಡುತ್ತದೆ. ಇದಕ್ಕೆ ‘ಹಿಪ್ಪೊಕ್ಯಾಂಪಸ್’ ಎಂಬ ಮೆದುಳಿನ ಭಾಗದ ಜೊತೆ ಬಹಳ ಹತ್ತಿರದ ಸಂಪರ್ಕ ಇದೆ. ಹಿಪ್ಪೊಕ್ಯಾಂಪಸ್ ಎಂದರೆ ನಾವು ಪರಿಸರಪ್ರಜ್ಞೆಯಿಂದ ಸಂಗ್ರಹಿಸಿದ ಸಕಲ ಜ್ಞಾನಗಳ ಸಂಗ್ರಹ. ಅದು ಕ್ರಿಯಾಶೀಲಗೊಂಡಾಗ ನಮ್ಮ ವಿವೇಕ ಮತ್ತು ತಾರ್ಕಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ನಾವೆಲ್ಲಿದ್ದೇವೆ? ಸನ್ನಿವೇಶ ಎಂತಹುದು? ಇದು ನಿಜದ ದೆವ್ವವಾ? ಸಿನಿಮಾವಾ? ಅಥವಾ ಮನುಷ್ಯನ ಪಾತ್ರವಾ? ಇಂತಹ ತರ್ಕಬದ್ಧ ತಿಳಿವಳಿಕೆ ಹುರಿಗೊಳ್ಳುತ್ತದೆ. ಆದ್ದರಿಂದಲೇ ನಮ್ಮ ಭಯಗಳ ಸ್ವರೂಪ ಮತ್ತು ಪ್ರಮಾಣ ಹಾಗೂ ಅವುಗಳ ಆಳ – ಇವೆಲ್ಲವೂ ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತವೆ. ನಮ್ಮೂರ ಜಾತ್ರೆಗೆ ದೈತ್ಯಾಕಾರದ ತೊಟ್ಟಿಲು ಬರುತ್ತದೆ. ಅದರ ಜೊತೆಗೆ ಮತ್ತೆಷ್ಟೋ ಆಟಗಳು ಬರುತ್ತವೆ. ಹಿಂದೆ-ಮುಂದೆ ಜೋಲಿಯಾಡುತ್ತ ಆಕಾಶದೆತ್ತರಕ್ಕೆ ಏರುವ ದೋಣಿ, ಪ್ರತಿಯೊಂದು ಕಪ್ಪು ತನ್ನ ಸುತ್ತಲೂ ತಾನು ‘ರಿಂವ್ ರಿಂವ್’ ಎಂದು ಸುತ್ತು ತಿರುಗುತ್ತ ಅಂತಹ ಅನೇಕ ಕಪ್ಪುಗಳಿರುವ ಸಾಸರ್‌ನಂತಹ ಆಕಾರ ಗಿರಿಗಿರಿ ತಿರುಗುವ ಆಟ – ಹೀಗೇ ಬಹಳಷ್ಟು ಬರುತ್ತವೆ. ಯಾವುದನ್ನು ಆಡಿದರೆ ಹೆಚ್ಚು ಭಯವಾಗುತ್ತದೆಯೋ ಅದಕ್ಕೆ ಜನ ಮುಗಿಬಿದ್ದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ‘ಅಯ್ಯೊ! ಇದು ರಾಶಿ ಹೆದರಿಕೆ ಆಗ್ತೆ ಆಡಾಣ ಬಾ’ ಎಂದು ಎಳೆದೊಯ್ಯುತ್ತಾರೆ. ಇದು ಅಷ್ಟೇನು ಹೆದರಿಕೆ ಉಂಟಾಗಿಸದಿದ್ದರೆ ದುಡ್ಡು ದಂಡ ಎಂದು ಬೈಯುತ್ತಾರೆ. ಅಂದರೆ ದುಡ್ಡು ಕೊಡುವುದೇ ಭಯಪಡಲಿಕ್ಕೆ!

‘ಒಂದು ಭೂತದ ಸಿನಿಮಾ ರಿಲೀಸ್ ಆಗಿದೆ ಮಾರಾಯ. ಥಿಯೇಟರ್‌ನಲ್ಲಿ ಒಬ್ಬನೇ ಕುಂತು ನೋಡಿದರೆ ಹತ್ತು ಸಾವಿರ ಕೊಡ್ತಾರಂತೆ. ಅಬ್ಬಾ !ಅಷ್ಟು ಭಯ ಬರುವುದಾದರೆ ನಡಿರಿ ಹೋಗಿ ನೋಡೋಣ’ ಎಂದು ಜನಜಂಗುಳಿ ನುಗ್ಗುತ್ತದೆ. ಏಕೆ ಜನರು ಭಯವನ್ನು ರೋಮಾಂಚನದ ಸಾಲಿಗೆ ಸೇರಿಸುತ್ತಾರೆ? ಹಾಗಾದರೆ ಭಯ ಅಂದರೆ ಮನುಷ್ಯನಿಗೆ ಇಷ್ಟದ ಭಾವವೆ? ಅದನ್ನು ಮನಃಶಾಸ್ತ್ರಜ್ಞರು ನಕಾರಾತ್ಮಕ ಭಾವವೆಂದು ಗುರುತಿಸುತ್ತಾರೆ. ಆದರೂ ನಮಗೆ ಭಯಪಡುವುದು ಯಾಕಿಷ್ಟ? ಭಯ ಉಂಟಾದಾಗ ಅಮಿಗ್‌ಡಲಾ ಪ್ರತಿಕ್ರಿಯೆಯಿಂದ ಆಗುವ ರಾಸಾಯನಿಕ ಪರಿಣಾಮಗಳನ್ನು ಹಿಪ್ಪೊಕ್ಯಾಂಪಸ್ ತನ್ನ ತಾರ್ಕಿಕ ಜ್ಞಾನದಿಂದ ತುಂಡರಿಸುತ್ತದೆ. ಹೀಗೆ ಭಯಗೊಳ್ಳುವ, ಮತ್ತದು ತಾರಕಕ್ಕೆ ಏರುತ್ತಿದ್ದಂತೆ ತುಂಡಾಗುವ ಕ್ರಿಯೆಯಿದೆಯಲ್ಲ, ಅದೊಂದು ತರಹ ತೊಟ್ಟಿಲು ಮೇಲೇರಿ ಕೆಳಗಿಳಿಯುವ ಕ್ರಿಯೆಯ ತರಹ ಇರುತ್ತದೆ. ಇದನ್ನು ಮನಸ್ಸು ಒಂದು ‘ಮಜ’ವಾಗಿಯೇ ಭಾವಿಸುತ್ತದೆ. ಮಾತ್ರವಲ್ಲ, ಬೇರೆ ನಶೆಗಳ ತರಹವೇ ಮಜವೂ ನಶೆಯಾಗಿ, ಅದನ್ನು ಪದೇ ಪದೇ ಹುಡುಕಿಕೊಂಡು ಪಡೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.