ಬೆಂಗಳೂರು: ಕಪ್ಪಿಟ್ಟ ಕೈಗಳು, ಬಾಡಿದ ಮುಖ, ಅಪಾಯಕಾರಿ ರಾಸಾಯನಿಕದ ಗಾಳಿ ಸೇವಿಸಿ ನಿತ್ರಾಣಗೊಂಡ ದೇಹ, ದೂಳು ಮಿಶ್ರಿತ ವಾತಾವರಣದಿಂದ ಬಾಧಿಸುತ್ತಿರುವ ಮಾರಣಾಂತಿಕ ಕಾಯಿಲೆಗಳು...

ಇದು ದೇಶದಲ್ಲಿ ಅತೀ ಹೆಚ್ಚು ಪಟಾಕಿ ತಯಾರಿಸುವ ಪ್ರಮುಖ ತಾಣವಾದ ತಮಿಳುನಾಡಿನ ಶಿವಕಾಶಿಯಲ್ಲಿ ಸಾವಿರಾರು ಕಾರ್ಮಿಕರು ಎದುರಿಸುತ್ತಿರುವ ಯಾತನೆ.

ಹಸಿವು, ನಿರುದ್ಯೋಗ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ಬಡತನ ಸ್ಥಳೀಯ ಜನರನ್ನು ಅತ್ಯಂತ ಅಪಾಯಕಾರಿ ಕೆಲಸಕ್ಕೆ ದೂಡಿದೆ. ಪಟಾಕಿ ಉದ್ಯಮದಲ್ಲಿ ದುಡಿಯುತ್ತಿರುವ ಕಾರ್ಮಿಕರ ಇಡೀ ಬದುಕು ಪಟಾಕಿ ಕುಲುಮೆಯಲ್ಲಿ ಬೆಂದುಹೋಗುತ್ತಿದೆ. ಪಟಾಕಿ ತಯಾರಿಕೆ ಘಟಕದ ನೂರಾರು ಮಾಲೀಕರು ‘ಬೆಳಕಿನ ಹಬ್ಬ’ದಲ್ಲಿ ಕೈತುಂಬ ಕಾಸು ಸಂಪಾದಿಸಿದರೆ, ಕಾರ್ಮಿಕರು ಸಾವಿನ ಜತೆಗೆ ನಿತ್ಯ ಸೆಣಸಾಡುತ್ತಿದ್ದಾರೆ.

ಬೆಂಗಳೂರಿನಿಂದ ಶಿವಕಾಶಿ 500 ಕಿ.ಮೀ ದೂರದಲ್ಲಿದೆ. ಸಾವಿರಾರು ಪಟಾಕಿ ತಯಾರಿಕೆಯ ಪುಟ್ಟ ಪುಟ್ಟ ಘಟಕಗಳು ಒಂದೇ ಸ್ಥಳದಲ್ಲಿ ಹಬ್ಬಿಕೊಂಡಿವೆ. ವಾರ್ಷಿಕವಾಗಿ ₹ 6 ಸಾವಿರ ಕೋಟಿಯಷ್ಟು ವಹಿವಾಟು ನಡೆಯುತ್ತಿದೆ ಎಂದೇ ಅಂದಾಜಿಸಲಾಗಿದೆ. ಪಟಾಕಿ ತಯಾರಿಕೆ ದೊಡ್ಡ ಉದ್ಯಮವಾಗಿ ಬೆಳೆದಿದ್ದರೂ ಕಾರ್ಮಿಕರು ಅಸಂಘಟಿತ ವಲಯದಲ್ಲೇ ನರಳುತ್ತಿದ್ದಾರೆ. ಕಾರ್ಮಿಕರಿಗೆ ಹೇಳಿಕೊಳ್ಳುವ ಸೌಲಭ್ಯಗಳು ಇಲ್ಲ.

ಸವಲತ್ತು ಇಲ್ಲವಾದರೂ ಆಯುಧ ಪೂಜೆ, ವಿಜಯದಶಮಿ, ದೀಪಾವಳಿ, ಲೋಕಸಭೆ–ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಸಂದರ್ಭಗಳಲ್ಲಿ ಕಾರ್ಮಿಕರಿಗೆ ಕೈತುಂಬ ಕೆಲಸ ಲಭಿಸುತ್ತದೆ. ಆಗ ವಹಿವಾಟು ಹೆಚ್ಚಾಗುತ್ತದೆ. ಆದರೆ, ಕಾರ್ಮಿಕರ ಸುರಕ್ಷತೆ ಎಂಬುದು ಮರೀಚಿಕೆಯಾಗಿದೆ. ಅವರಿಗೆ ಭವಿಷ್ಯ ನಿಧಿ ಸೌಲಭ್ಯ ಸಹ ಇಲ್ಲ. ನಿತ್ಯದ ಕೂಲಿ ಅಷ್ಟೆ. ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ. ಪಟಾಕಿ ಖರೀದಿಸಲು ತೆರಳಿದಾಗ ಕಾರ್ಮಿಕರ ಸ್ಥಿತಿ ನೋಡಿ ನಮಗೂ ಕಣ್ಣೀರು ಬರುತ್ತದೆ ಎಂದು ಶಿವಕಾಶಿಯಲ್ಲಿ ಪಟಾಕಿ ಖರೀದಿಸುವ ರಾಜ್ಯದ ವ್ಯಾಪಾರಸ್ಥರು ಹೇಳುತ್ತಾರೆ.

ಶಿವಕಾಶಿಯಲ್ಲಿ ಕಾರ್ಮಿಕರಿಗೆ ತಮ್ಮ ಕೆಲಸವೇ ಜೀವಕ್ಕೆ ಆಪತ್ತು ತರುತ್ತಿದೆ. ದೇಹ ನಿಧಾನವಾಗಿ ಸುಡುತ್ತಿದ್ದರೂ, ಅದರ ಅರಿವಿಲ್ಲದೆ ಕಾರ್ಮಿಕರು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಕೆಲವೊಮ್ಮೆ ಸಂಭವಿಸುವ ದುರಂತದಿಂದ ಬೆಂಕಿಯ ಕೆನ್ನಾಲಿಗೆಗೆ ಕಾರ್ಮಿಕರು ಸಿಲುಕಿ ಬದುಕನ್ನೇ ಮುಗಿಸುತ್ತಿದ್ದಾರೆ ಎಂದು ಶಿವಕಾಶಿ ಘಟಕವೊಂದರ ಪಟಾಕಿ ಖರೀದಿದಾರರು ಹೇಳುತ್ತಾರೆ.

‘ದೀಪಾವಳಿ ಹಬ್ಬದ ವೇಳೆ ತಾತ್ಕಾಲಿಕ ಪರವಾನಗಿ ಪಡೆದು ಮಾರಾಟ ಮಾಡುತ್ತೇವೆ. ಶಿವಕಾಶಿಯಿಂದ ತಂದ ಪಟಾಕಿಗಳನ್ನು ಮಳಿಗೆಯಲ್ಲಿ ಜೋಡಿಸಿ ಗ್ರಾಹಕರನ್ನು ಆಕರ್ಷಿಸುತ್ತೇವೆ. ಸಿಡಿಮದ್ದುಗಳು ಭಾರಿ ಶಬ್ದ, ಬೆಳಕು ಹೊಮ್ಮಿಸುತ್ತ ಸಂಭ್ರಮ ತರುತ್ತವೆ. ಆದರೆ, ಕಾರ್ಮಿಕರ ಪಾಲಿಗೆ ಕತ್ತಲು ಕವಿಯುವಂತೆ ಮಾಡುತ್ತಿವೆ’ ಎಂದು ಅವರೂ ಹೇಳುತ್ತಾರೆ.

ಅತ್ತಿಬೆಲೆ ಪಟಾಕಿ ದುರಂತವಾದ ಎರಡೇ ದಿನವೇ ಶಿವಕಾಶಿ ಬಳಿಯ ವಿರಗಲೂರಿನಲ್ಲಿ ನಡೆದ ಪಟಾಕಿ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಪ್ರತಿವರ್ಷ ತಯಾರಿಕೆ ಘಟಕಗಳಲ್ಲಿ ಅಲ್ಲದೇ ಗೋದಾಮು, ಮಾರಾಟದ ಸ್ಥಳ, ಸಾಗಣೆ ವೇಳೆ ಅವಘಡಗಳು ಸಂಭವಿಸುತ್ತಿವೆ. 2012ರ ಸೆಪ್ಟೆಂಬರ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ 39 ಕಾರ್ಮಿಕರು ಸುಟ್ಟು ಕರಕಲಾಗಿದ್ದರು. 2022ರಲ್ಲೂ ಶಿವಕಾಶಿಯ ಪುದುಪಟ್ಟಿ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದರು. ಶಿವಕಾಶಿ ಸುತ್ತಮುತ್ತಲಿನ ಪಟಾಕಿ ತಯಾರಿಕೆ ಘಟಕಗಳಲ್ಲಿ ಪ್ರಾಣ ಕಳೆದುಕೊಳ್ಳುವ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಯಾವುದೇ ಸುರಕ್ಷತಾ ನಿಯಮ ಪಾಲಿಸದಿರುವುದಕ್ಕೆ ಸಾಕ್ಷಿಯಾಗಿದೆ.

ಅಧಿಕ ಉಷ್ಣಾಂಶವೇ ತಯಾರಿಕೆಗೆ ವರದಾನ:

ಪಟಾಕಿ ತಯಾರಿಕೆಗೆ ಬಿಸಿಲು ವಾತಾವರಣ ಇರಬೇಕು. ಹೀಗಾಗಿ, ಶಿವಕಾಶಿ ಸೂಕ್ತ ಸ್ಥಳ ಎನಿಸಿದೆ. ಅಲ್ಲಿ ಯಾವಾಗಲೂ ಅಧಿಕ ಉಷ್ಣಾಂಶವೇ ದಾಖಲಾಗಿರುತ್ತದೆ. ನಮ್ಮ ರಾಜ್ಯದಲ್ಲಿ ಆ ರೀತಿಯ ವಾತಾವರಣ ಇಲ್ಲ. ಹೀಗಾಗಿ, ತಮಿಳುನಾಡಿನ ಮಧುರೈ ಹಾಗೂ ವಿರುಧನಗರ ಜಿಲ್ಲೆಗಳಲ್ಲಿ ಅಂದಾಜು 1,500 ಕಾರ್ಖಾನೆಗಳಿವೆ. ಈ ಎರಡು ಜಿಲ್ಲೆಗಳ ಬಹುತೇಕ ಮನೆಗಳಲ್ಲೂ ಪಟಾಕಿ ತಯಾರಿಸಲಾಗುತ್ತಿದೆ. ಮನೆ ಎದುರು ಸಿಡಿಮದ್ದು ಒಣಗಿಸಲು ಹಾಕಿರುವ ದೃಶ್ಯ ಸಾಮಾನ್ಯವಾಗಿ ಕಾಣಿಸುತ್ತದೆ. ಈ ಸ್ಥಳದಲ್ಲಿ ಪಟಾಕಿ ತಯಾರಿಕೆ ಇನ್ನೂ ಯಾಂತ್ರೀಕರಣಗೊಂಡಿಲ್ಲ. ಪುಟ್ಟ ಕೊಠಡಿಗಳಲ್ಲಿ ಕಾರ್ಮಿಕರು ಕೈಯಿಂದಲೇ ಪಟಾಕಿ ತಯಾರಿಸುತ್ತಿದ್ದಾರೆ. ಕೈಗವಸು ಬಳಸದೇ ಅಪಾಯಕಾರಿ ರಾಸಾಯನಿಕ ಮಿಶ್ರಣ ಮಾಡುತ್ತಾರೆ. ಸ್ಫೋಟಕಗಳನ್ನೂ ತುಂಬುತ್ತಾರೆ. ಇದು ಅನಾಹುತ ತರುತ್ತಿದೆ’ ಎಂದು ಶಿವಕಾಶಿಯಿಂದ ಪಟಾಕಿ ಖರೀದಿಸುವ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಮತ್ತೆ ಉದ್ಯಮ ಚೇತರಿಕೆ:
ಹಸಿರು ಪಟಾಕಿ ಬಳಕೆಗೆ ಮಾತ್ರ ಈ ಹಿಂದೆ ಸುಪ್ರೀಂಕೋರ್ಟ್ ಅವಕಾಶ ನೀಡಿ ಆದೇಶಿಸಿತ್ತು. ಅದಾದ ಮೇಲೆ ಮಾಲಿನ್ಯಕಾರಕ ಹೊಗೆ ಸೂಸುವ ಪಟಾಕಿ ತಯಾರಿಕೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತು. ಕೋವಿಡ್ ಸಾಂಕ್ರಾಮಿಕದ ವೇಳೆ ಶಿವಕಾಶಿಯಲ್ಲಿ ಬಹುತೇಕ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಸಾವಿರಾರು ಕಾರ್ಮಿಕರು ಪರ್ಯಾಯ ಕೆಲಸಗಳತ್ತ ಹೊರಳಿದ್ದರು. ಈಗ ಮತ್ತೆ ಪಟಾಕಿ ಉದ್ಯಮ ಚೇತರಿಸಿಕೊಂಡಿದೆ. ಕಾರ್ಮಿಕರು ಮತ್ತೆ ಇದೇ ಕೆಲಸದತ್ತ ಮರಳಿದ್ದಾರೆ.

ಈಗ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು ಉದ್ಯಮಕ್ಕೆ ಪೂರಕ ಎನಿಸಿದೆ. ಎಲ್ಲ ಮಾದರಿ ಸಿಡಿಮದ್ದುಗಳು ತಯಾರಿಕೆ ದುಪ್ಪಟ್ಟು ಪ್ರಮಾಣದಲ್ಲೇ ನಡೆಯುತ್ತಿದೆ. ಬಾಲಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಶಿವಕಾಶಿಯಲ್ಲಿ ಅನಧಿಕೃತ ತಯಾರಿಕೆ ಘಟಕಗಳೇ ಹೆಚ್ಚು. ಹಬ್ಬದ ವೇಳೆ ದಿಢೀರ್ ಘಟಕಗಳು ಆರಂಭಗೊಳ್ಳುತ್ತಿವೆ ಎಂಬ ಆರೋಪವಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆಯು ಸುರಕ್ಷತೆ ನಿಯಮ ಅಳವಡಿಸದಿದ್ದರೂ ಅನುಮತಿ ನೀಡುತ್ತಿದೆ ಎಂದು ಹೆಸರು ಹೇಳಲು ಬಯಸದ ಮಾರಾಟಗಾರರು ಆಪಾದಿಸುತ್ತಾರೆ.

‘ಮರಳು, ನೀರು ಹತ್ತಿರದಲ್ಲೇ ಇರಲಿ’

‘ಮಾರಾಟ ಮಳಿಗೆ ಅಥವಾ ದಾಸ್ತಾನು ಕೊಠಡಿಗಳಲ್ಲಿ ಕೆಲವು ಪಟಾಕಿಗಳನ್ನು ಸುರಕ್ಷಿತವಾಗಿ ಇಡಬೇಕು. ಪಾಪ್ಸ್ ಹಾಗೂ ರೋಲ್ಕ್ಯಾಪ್ಗಳನ್ನು ಪ್ರಮುಖ ಪಟಾಕಿಗಳ ಜತೆಗೆ ಇಟ್ಟರೆ ದುರಂತ ನಡೆಯುವ ಸಾಧ್ಯತೆ ಹೆಚ್ಚು. ಪುಟ್ಟ ಮಕ್ಕಳು ಹಬ್ಬದ ಸಂದರ್ಭದಲ್ಲಿ ಪಾಪ್ಸ್ ಕೇಳುತ್ತಾರೆ. ಬೇಡಿಕೆಯಿದೆ ಎಂಬ ಕಾರಣಕ್ಕೆ ಬಹುತೇಕ ವ್ಯಾಪಾರಸ್ಥರು ಪಾಪ್ಸ್ ಪಟಾಕಿ ದಾಸ್ತಾನು ಮಾಡುತ್ತಾರೆ. ಪಾಪ್ಸ್ಗಳು ಒಂದಕ್ಕೊಂದು ತಾಗಿ ಬೆಂಕಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್ಚರಿಕೆ ವಹಿಸಬೇಕು’ ಎಂದು ಶಿವಕಾಶಿಯಲ್ಲಿ ಪಟಾಕಿ ಖರೀದಿಸುವ ಅತ್ತಿಬೆಲೆ ವ್ಯಾಪಾರಿ ವಿಜಯಕುಮಾರ್ ಹೇಳುತ್ತಾರೆ.

‘ದಾಸ್ತಾನು ಕೊಠಡಿಯಲ್ಲಿ ಮೂರು ಪ್ರತ್ಯೇಕ ಬಾಗಿಲುಗಳು ಇರಬೇಕು. ವಿದ್ಯುತ್ ಸಂಪರ್ಕ ತೆಗೆದುಕೊಳ್ಳಬಾರದು. ಅಗ್ನಿನಂದಕ ಉಪಕರಣ ಇರಬೇಕು. ಮರಳು, ನೀರು ಹತ್ತಿರದಲ್ಲಿ ಇರಬೇಕು. ದಾಸ್ತಾನು ಮಳಿಗೆ ಜನವಸತಿ ಪ್ರದೇಶದಿಂದ ದೂರದಲ್ಲಿ ಇರಬೇಕು’ ಎಂದು ಮಾಹಿತಿ ನೀಡಿದರು.

‘ಸಾಗಣೆ ವೇಳೆ ಅಪಘಾತವಾದರೆ ಡೀಸೆಲ್ ಸೋರಿಕೆಯಿಂದ ಬೆಂಕಿ ದುರಂತ ಸಂಭವಿಸುವ ಸಾಧ್ಯತೆಯಿದೆ. ಅದನ್ನು ಹೊರತುಪಡಿಸಿ ಸಾಗಣೆ ವೇಳೆ ಪಟಾಕಿ ದುರಂತ ನಡೆದಿರುವ ಸಂಖ್ಯೆ ಕಡಿಮೆ. ದೇಶದ ಬಹುತೇಕ ಭಾಗಕ್ಕೆ ಶಿವಕಾಶಿಯಿಂದಲೇ ಪೂರೈಕೆಯಾಗುತ್ತಿದೆ. ನಾಲ್ಕೈದು ವ್ಯಾಪಾರಿಗಳು ಒಟ್ಟಿಗೆ ತೆರಳಿ ಕಂಟೈನರ್ನಲ್ಲಿ ಪಟಾಕಿ ತರುತ್ತಾರೆ. ಇಲ್ಲವೇ ಕಾರ್ಖಾನೆ ತಯಾರಿಕೆ ಘಟಕದ ಮಾಲೀಕರೇ ಪೂರೈಸುತ್ತಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.