ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿರುವ ಕೇಜ್ರಿವಾಲ್: ಸಿಸೋಡಿಯಾ

Published : 16 ಆಗಸ್ಟ್ 2024, 5:47 IST
Last Updated : 16 ಆಗಸ್ಟ್ 2024, 5:47 IST
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ಇಂದು (ಆಗಸ್ಟ್‌ 16) ಕೇಜ್ರಿವಾಲ್‌ ಅವರ ಜನ್ಮದಿನ. ಹೀಗಾಗಿ, ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ  ಸಿಸೋಡಿಯಾ ಶುಭಾಶಯ ಕೋರಿದ್ದಾರೆ.

'ದೇಶದಲ್ಲಿ ಅಸ್ತಿತ್ವದಲ್ಲಿರುವ ಸರ್ವಾಧಿಕಾರದ ವಿರುದ್ಧ ಕಠಿಣ ಹೋರಾಟ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ, ನನ್ನ ಸ್ನೇಹಿತ ಮತ್ತು ರಾಜಕೀಯ ಗುರು ಅರವಿಂದ ಕೇಜ್ರಿವಾಲ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, 'ಸರ್ವಾಧಿಕಾರಿಯ ಎದುರು ಮಂಡಿಯೂರುವುದಕ್ಕಿಂತ ಜೈಲಿಗೆ ಹೋಗಲು ನಿರ್ಧರಿಸಿದ ದೇಶಭಕ್ತ ಮತ್ತು ಕ್ರಾಂತಿಕಾರಿ ನಾಯಕನ ಸೈನಿಕರಾಗಿರಲು ನಾವು ಹೆಮ್ಮೆಪಡುತ್ತೇವೆ. ಇಂದು ದೇಶದ ಪ್ರಜಾಪ್ರಭುತ್ವವು ಕೇಜ್ರಿವಾಲ್ ಅವರ ರೂಪದಲ್ಲಿ ಬಂಧನದಲ್ಲಿದೆ' ಎಂದು ಹೇಳಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಮದ್ಯ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ 17 ತಿಂಗಳಿನಿಂದ ಜೈಲಿನಲ್ಲಿದ್ದ ಸಿಸೋಡಿಯಾ, ಆಗಸ್ಟ್‌ 9ರಂದು ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಇಂದು ಸಂಜೆ 'ಪಾದಯಾತ್ರೆ' ನಡೆಸಲು ಸಜ್ಜಾಗಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಎಎಪಿ ನಾಯಕರೊಂದಿಗೆ ಆಗಸ್ಟ್‌ 11ರಂದು ಸಭೆ ನಡೆಸಿದ್ದ ಅವರು, ದೆಹಲಿಯ ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಕುರಿತು ಚರ್ಚಿಸಿದ್ದರು. ಅದರ ಭಾಗವಾಗಿ ಆಗಸ್ಟ್‌ 14ರಂದು ಪಾದಯಾತ್ರೆ ಕೈಗೊಳ್ಳಲು ಮುಂದಾಗಿದ್ದರು.

ಆದರೆ, ಸ್ವಾತಂತ್ರ್ಯೋತ್ಸವದ ಮುನ್ನಾದಿನವಾಗಿರುವುದರಿಂದ ಭದ್ರತೆಯ ದೃಷ್ಟಿಯಿಂದ ಯೋಜನೆಯನ್ನು ಮುಂದೂಡುವಂತೆ ಪೊಲೀಸರು ಸಲಹೆ ನೀಡಿದ್ದರು. ಅದರಂತೆ, ಇಂದು ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ವಿಚಾರಧಾರೆಯಿದ್ದಂತೆ. ಅದನ್ನು ಹತ್ತಿಕ್ಕಿದಷ್ಟೂ ಬಲಗೊಳ್ಳುತ್ತಾ ಹೋಗುತ್ತದೆ ಎಂದು ಎಎಪಿ ಟ್ವೀಟಿಸಿದೆ.

ದೆಹಲಿ ಸಚಿವೆ ಆತಿಶಿ ಅವರು, ಕೇಜ್ರಿವಾಲ್ ಅವರನ್ನು 'ಆಧುನಿಕ ಭಾರತದ ಕ್ರಾಂತಿಕಾರಿ' ಎಂದು ಬಣ್ಣಿಸಿದ್ದಾರೆ. ಹಾಗೆಯೇ ಶೀಘ್ರದಲ್ಲೇ ಜೈಲಿನಿಂದ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಎಪಿಯ ಇನ್ನಷ್ಟು ನಾಯಕರು ಕೇಜ್ರಿವಾಲ್‌ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅವರನ್ನು ಹಣದ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾರ್ಚ್‌ 21ರಂದು ಬಂಧಿಸಿತ್ತು. ಈ ಪ್ರಕರಣದಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆಯಾದರೂ, ಸಿಬಿಐನಿಂದ ಬಂಧನಕ್ಕೊಳಗಾಗಿರುವುದರಿಂದ ಜೈಲಿನಲ್ಲೇ ಉಳಿಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT