ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ವಿರೋಧಿ ಮಸೂದೆಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗೆ ಮನವಿ- ಸ್ಟಾಲಿನ್

Published : 27 ಅಕ್ಟೋಬರ್ 2023, 12:45 IST
Last Updated : 27 ಅಕ್ಟೋಬರ್ 2023, 12:45 IST
ಫಾಲೋ ಮಾಡಿ
Comments

ಚೆನ್ನೈ (ಪಿಟಿಐ): ನೀಟ್ ವಿರೋಧಿ ಮಸೂದೆಗೆ ಅನುಮೋದನೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಶುಕ್ರವಾರ ಒತ್ತಾಯಿಸಿದ್ದಾರೆ.

ಇಲ್ಲಿನ ‘ಇಂಡಿಯನ್‌ ಮ್ಯಾರಿಟೈಮ್‌ ಯೂನಿವರ್ಸಿಟಿ’ಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಷ್ಟ್ರಪತಿ ಮುರ್ಮು ಅವರಿಗೆ ವಿಮಾನ ನಿಲ್ದಾಣದಲ್ಲಿ, ಈ ಕುರಿತ ಪತ್ರವನ್ನು ಮುಖ್ಯಮಂತ್ರಿ ಹಸ್ತಾಂತರಿಸಿದರು ಎಂದು ಪ್ರಕಟಣೆ ತಿಳಿಸಿದೆ.

‘ತಮಿಳುನಾಡು ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶ ಮಸೂದೆ– 2021’ ಅನ್ನು ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿಧಾನಸಭೆ ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು. ಆದರೆ ರಾಜ್ಯಪಾಲ ಆರ್‌.ಎನ್‌.ರವಿ ಅವರು ಮಸೂದೆಯನ್ನು ಹಿಂದಕ್ಕೆ ಕಳುಹಿಸಿದ್ದರು.

ಬಳಿಕ 2022ರ ಫೆಬ್ರುವರಿಯಲ್ಲಿ ವಿಧಾನಸಭೆಯಲ್ಲಿ ಮತ್ತೆ ಈ ಮಸೂದೆಯನ್ನು ಅಂಗೀಕರಿಸಿ, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಮೀಸಲಿರಿಸಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ಸ್ಟಾಲಿನ್‌ ಅವರು ರಾಷ್ಟ್ರಪತಿ ಮುರ್ಮು ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ರಾಜ್ಯಪಾಲರು ಇದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ ಮತ್ತು ಆಯುಷ್‌ ಸಚಿವಾಲಯಗಳ ಅಭಿಪ್ರಾಯಗಳನ್ನು ಆಧರಿಸಿ ಗೃಹ ಸಚಿವಾಲಯ ಕೇಳಿದ್ದ ಪ್ರಶ್ನೆಗಳಿಗೆ ಸ್ಪಷ್ಟೀಕರಣಗಳನ್ನು ಕಳುಹಿಸಲಾಗಿದೆ. ಆದರೆ ಆ ಬಳಿಕ ಈ ವಿಷಯದಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಹೀಗಾಗಿ 2023ರ ಆಗಸ್ಟ್‌ನಲ್ಲಿ ಪತ್ರ ಬರೆದು, ವಿಳಂಬದಿಂದ ಅಗುತ್ತಿರುವ ಅಡ್ಡ ಪರಿಣಾಮಗಳ ಕುರಿತು ಪ್ರಸ್ತಾಪಿಸಿದ್ದೇನೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದನ್ನು ಮತ್ತು ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಅಂಶಗಳನ್ನು ಉಲ್ಲೇಖಿಸಿದ್ದೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಹೀಗಾಗಿ ಈ ವಿಷಯದಲ್ಲಿ ತಾವು ತಕ್ಷಣವೇ ಮಧ್ಯಪ್ರವೇಶಿಸಿ, ಮಸೂದೆಗೆ ಒಪ್ಪಿಗೆ ನೀಡುವಂತೆ ಕೋರುತ್ತೇನೆ’ ಎಂದು ಸ್ಟಾಲಿನ್‌ ಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT