ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಮಾಸ್ ದಾಳಿಗೆ ವರ್ಷ: ಬೈರೂತ್‌ ಮೇಲೆ ಇಸ್ರೇಲ್ ದಾಳಿ, ಹಿಜ್ಬುಲ್ಲಾ ಪ್ರತಿದಾಳಿ

Published : 7 ಅಕ್ಟೋಬರ್ 2024, 4:06 IST
Last Updated : 7 ಅಕ್ಟೋಬರ್ 2024, 4:06 IST
ಫಾಲೋ ಮಾಡಿ
Comments

ದೇರ್ ಅಲ್ ಬಲಾಹ್(ಗಾಜಾ ಪಟ್ಟಿ): ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ಇಂದು(ಅಕ್ಟೋಬರ್ 7) ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರವೇ ಗಾಜಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ತೀವ್ರ ದಾಳಿ ನಡೆಸಿದೆ. ಇಸ್ರೇಲ್ ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಸಹ ರಾಕೆಟ್ ದಾಳಿ ನಡೆಸಿದೆ.

ದಕ್ಷಿಣ ಲೆಬನಾನ್‌ನಿಂದ ಹಾರಿಬಂದ ಐದು ರಾಕೆಟ್‌ಗಳು ಬಂದರು ನಗರ ಹೈಫಾಗೆ ಸೋಮವಾರ ಅಪ್ಪಳಿಸಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ರಾಕೆಟ್‌ಗಳು ರೆಸ್ಟೋರೆಂಟ್, ಮುಖ್ಯರಸ್ತೆ ಮತ್ತು ಒಂದು ಮನೆಗೆ ಅಪ್ಪಳಿಸಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇ್‌ಲ್‌ನ ಉತ್ತರ ಭಾಗದಲ್ಲಿರುವ ಟಿಬೇರಿಯಸ್ ನಗರದಲ್ಲೂ ಸೈರನ್ ಮೊಳಗಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇತ್ತ, ಮತ್ತೆ 15 ರಾಕೆಟ್‌ಗಳು ಬರುತ್ತಿರುವುದರ ಬಗ್ಗೆ ಮಾಹಿತಿ ಅರಿತ ಇಸ್ರೇಲ್ ಸೇನೆ ಗಲಿಲೀ ಪ್ರದೇಶದಲ್ಲೂ ಎಚ್ಚರಿಕೆಯ ಸೈರನ್ ಮೊಳಗಿಸಿದೆ. ಅಲ್ಲದೆ, ಕೆಲವನ್ನು ಹೊಡೆದುರುಳಿಸಿದೆ.

ಹಮಾಸ್‌ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ದಾಳಿಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನ ಬೈರೂತ್ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ದಾಳಿ ನಡೆಸಿದೆ ಎಂದು ಅಲ್ ಜಜೀರಾ ಹೇಳಿದೆ.

ಇಸ್ರೇಲ್ ನಡೆಸಿದ್ದ ಬಾಂಬ್ ದಾಳಿಯಲ್ಲಿ ಭಯಾನಕ ಬೆಂಕಿ ಉಂಡೆಗಳು ಮತ್ತು ಆಗಸದೆತ್ತರಕ್ಕೆ ಹೊಗೆ ವ್ಯಾಪಿಸಿತ್ತು.

ಲೆಬನಾನ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಗುರಿ ಮಾಡಿಕೊಂಡು ದಾಳಿ ನಡೆಸಲಾಗಿದೆ. ಆದರೆ, ಸಾವುನೋವಿನ ಬಗ್ಗೆ ಲೆಬನಾನ್ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಲೆಬನಾನ್ ಗಡಿಯಲ್ಲಿರುವ ಐಡಿಎಫ್‌ನ(ಇಸ್ರೇಲ್ ರಕ್ಷಣಾ ಪಡೆಯ) ಯೋಧರ 36ನೇ ವಿಭಾಗಕ್ಕೆ ಭೇಟಿ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು, ಭದ್ರತಾ ಪರಿಶೀಲನ ನಡೆಸಿದರು.

ಲೆಬನಾನ್‌ನಲ್ಲಿ ಸೇನೆಯ ಯೋಧರ ನಿಯೋಜನೆ, ದಾಳಿ ಮತ್ತು ಸಾಧಿಸಿದ ಪ್ರಗತಿ ಬಗ್ಗೆ ಸೇನೆ ಪ್ರಧಾನಿಗೆ ವಿವರಿಸಿದೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಇದೇವೇಳೆ, ಮಾತನಾಡಿರುವ ನೇತನ್ಯಾಹು, ಉತ್ತರ ಗಡಿಯ ಐಡಿಎಫ್ ಯೋಧರ ಜೊತೆ ನಾನಿದ್ದೇನೆ. ನಮ್ಮ ಸಮುದಾಯಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ಹಿಜ್ಬುಲ್ಲಾ ಬಂಡುಕೋರರ ನೆಲೆಗಳನ್ನು ನಮ್ಮ ಪ್ರೀತಿಯ ಯೋಧರು ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ.

‘ನೀವು ಪ್ರಶಂಸೆಗೆ ಅರ್ಹರಾದ ವೀರರು ಎಂದು ನಾನು ಅವರಿಗ ಹೇಳಿದ್ದೇನೆ. ನೀವು, ನಿಮ್ಮ ಸಹ ಸೈನಿಕರು, ಗಾಜಾ, ಜುಡಿಯಾ ಮತ್ತು ಸಮಾರಿಯಾದಲ್ಲಿ ನಿಯೋಜನೆಗೊಂಡಿರುವ ಯೋಧರು ಅದ್ಭುತವಾದ ಕೆಲಸಗಳನ್ನು ಮಾಡುತ್ತಿದ್ದೀರಿ. ನೀವು ನಮ್ಮ ದೇಶದ ಸಿಂಹಗಳು ಎಂದು ನಾನು ಅವರಿಗೆ ಹೇಳಿದ್ದೇನೆ’ಎಂದು ನೇತನ್ಯಾಹು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್‌ಗೆ ನುಗ್ಗಿದ್ದ ಹಮಾಸ್ ಬಂಡುಕೋರರು, 1200ಕ್ಕೂ ಅಧಿಕ ಮಂದಿಯನ್ನು ಕೊಂದಿದ್ದರು. ಅಲ್ಲದೆ, 250 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಆ ಪೈಕಿ ಇನ್ನೂ 100 ಮಂದಿ ಅವರ ವಶದಲ್ಲಿಯೇ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT