ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದಲ್ಲಿ ಅಸಹಕಾರ ಚಳವಳಿ: ಹಿಂಸೆಗೆ 100 ಸಾವು

Published : 4 ಆಗಸ್ಟ್ 2024, 12:56 IST
Last Updated : 5 ಆಗಸ್ಟ್ 2024, 2:07 IST
ಫಾಲೋ ಮಾಡಿ
Comments

ಢಾಕಾ: ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಸಹಕಾರ ಚಳವಳಿಯ ಮೊದಲ ದಿನವಾದ ಭಾನುವಾರ, ಪ್ರತಿಭಟನಕಾರರು ಹಾಗೂ ಆಡಳಿತಾರೂಢ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಸುಮಾರು 100 ಮಂದಿ ಮೃತಪಟ್ಟಿದ್ದಾರೆ.

ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಅಸಹಕಾರ ಚಳವಳಿ ನಡೆಸುತ್ತಿರುವವರಿಗೆ ಅವಾಮಿ ಲೀಗ್, ಛಾತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರಿಂದ ಭಾನುವಾರ ಬೆಳಿಗ್ಗೆ ಪ್ರತಿರೋಧ ಎದುರಾದಾಗ ಘರ್ಷಣೆ ಉಂಟಾಯಿತು. ದೇಶದ 13 ಜಿಲ್ಲೆಗಳಲ್ಲಿ  ಘರ್ಷಣೆ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಭಾನುವಾರ ಸಂಜೆ 6 ಗಂಟೆಯಿಂದ ಅನಿರ್ದಿಷ್ಟ ಅವಧಿಗೆ ದೇಶದಾದ್ಯಂತ ಕರ್ಫ್ಯೂ ವಿಧಿಸಲು ಗೃಹ ಸಚಿವಾಲಯ ತೀರ್ಮಾನಿಸಿದೆ. ಫೇಸ್‌ಬುಕ್‌, ಮೆಸೆಂಜರ್, ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಂ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿದೆ. 4ಜಿ ಮೊಬೈಲ್‌ ಇಂಟರ್ನೆಟ್ ಸೇವೆಗಳ ಸ್ಥಗಿತಕ್ಕೂ ಆದೇಶಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ತಾರತಮ್ಯದ ವಿರುದ್ಧ ವಿದ್ಯಾರ್ಥಿಗಳು’ ಹೆಸರಿನ ಒಕ್ಕೂಟವೊಂದು ಹಸೀನಾ ರಾಜೀ
ನಾಮೆಗೆ ಆಗ್ರಹಿಸಿ, ಅಸಹಕಾರ ಚಳವಳಿಗೆ ಕರೆ ನೀಡಿದೆ. ಆದರೆ, ಪ್ರತಿಭಟನೆಯ ಹೆಸರಿನಲ್ಲಿ ದೇಶದಾದ್ಯಂತ ವಿಧ್ವಂಸಕ ಕಾರ್ಯಗಳಲ್ಲಿ ತೊಡಗಿರುವವರು ವಿದ್ಯಾರ್ಥಿಗಳಲ್ಲ, ಅವರು ಭಯೋತ್ಪಾದಕರು ಎಂದು ಹಸೀನಾ ಹೇಳಿದ್ದಾರೆ. ಅವರನ್ನು ಹತ್ತಿಕ್ಕಬೇಕು ಎಂದು ಜನರಿಗೆ ಕರೆ ನೀಡಿದ್ದಾರೆ.

ಢಾಕಾದ ಶಾಹಬಾಗ್‌ನಲ್ಲಿ ಸೇರಿದ ನೂರಾರು ಮಂದಿ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡಿದರು. ಢಾಕಾದಲ್ಲಿ ಬಹುತೇಕ ಮಾಲ್‌ಗಳು ಹಾಗೂ ಅಂಗಡಿಗಳು ತೆರೆದಿರಲಿಲ್ಲ. ಈಚೆಗೆ ನಡೆದ ಕೆಲವು ಪ್ರತಿಭಟನೆಗಳಲ್ಲಿ ಮೃತಪಟ್ಟವರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ (ಬಿಎಸ್‌ಎಂಎಂಯು) ನಿಲ್ಲಿಸಿದ್ದ ಹಲವು ವಾಹನಗಳಿಗೆ  ಭಾನುವಾರ ಬೆಂಕಿ ಹಾಕಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ಖಾಸಗಿ ಕಾರುಗಳಿಗೆ, ಆಂಬುಲೆನ್ಸ್‌ ವಾಹನಗಳಿಗೆ, ದ್ವಿಚಕ್ರ ವಾಹನಗಳಿಗೆ ಮತ್ತು ಬಸ್ಸುಗಳಿಗೆ ದೊಣ್ಣೆಗಳನ್ನು ಹಿಡಿದಿದ್ದ ಕೆಲವರು ಹಾನಿ ಉಂಟುಮಾಡಿದ್ದಾರೆ.

ದೇಶದ ಹಲವೆಡೆ ಪೊಲೀಸ್ ವಾಹನಗಳು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ ವರದಿಗಳು ಇವೆ. 

ಮಾತುಕತೆಗೆ ಬರುವಂತೆ ಹಸೀನಾ ಅವರು ನೀಡಿದ್ದ ಆಹ್ವಾನವನ್ನು ಪ್ರತಿಭಟನಕಾರರು ತಿರಸ್ಕರಿಸಿದ್ದಾರೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಮದರಸಾಗಳ ವಿದ್ಯಾರ್ಥಿಗಳು, ರಾಜಕೀಯ ಕಾರ್ಯಕರ್ತರು ಮತ್ತು ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಎಂದು ಪ್ರತಿಭಟನೆಗಳ ಸಮನ್ವಯದ ಹೊಣೆ ಹೊತ್ತವರು
ಕರೆ ನೀಡಿದ್ದಾರೆ.

ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ
ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು
ಕೊನೆಗೊಳಿಸಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT