ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ | ನೀಟ್ ಪರೀಕ್ಷೆ ರದ್ದತಿ ಸಮಸ್ಯೆಗೆ ಪರಿಹಾರವಲ್ಲ

–ಗುರುರಾಜ್‌ ಎಸ್‌.ವಿ.
Published : 19 ಜುಲೈ 2024, 21:52 IST
Last Updated : 19 ಜುಲೈ 2024, 21:52 IST
ಫಾಲೋ ಮಾಡಿ
Comments

ನೀಟ್‌ನಿಂದಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಬಡ, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗಗಳ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಹಲವು ಪ್ರವೇಶ ಪರೀಕ್ಷೆಗಳಿಗೆ ಶುಲ್ಕ ಪಾವತಿಸುವ ಹೊರೆ ಇಲ್ಲದಂತೆ ಆಗಿರುವುದು ಒಂದೆಡೆಯಾದರೆ, ಅಧ್ಯಯನ ಹಾಗೂ ಸೀಟು ಹಂಚಿಕೆಯ ದೃಷ್ಟಿಯಿಂದಲೂ ಪ್ರಯೋಜನವಾಗಿದೆ...

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಡೆದಿರುವ ಹಗರಣವು, ನೀಟ್‌ ಬೇಕೇ ಬೇಡವೇ ಎಂಬ ಚರ್ಚೆ ಹುಟ್ಟುಹಾಕಿದೆ. ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳು ಈ ಪರೀಕ್ಷೆಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸುತ್ತಿವೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ತೀರ್ಮಾನಕ್ಕಾಗಿ ಕಾಯೋಣ. ಆದರೆ, ನಡೆದಿರುವ ಅಕ್ರಮವನ್ನು ಮುಂದಿಟ್ಟುಕೊಂಡು, ವೈದ್ಯಕೀಯ ಕೋರ್ಸ್‌ ಸೇರಲು ಬಯಸುವವರ ಹಿತದೃಷ್ಟಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪರೀಕ್ಷೆ ನಡೆಯಬೇಕು ಎಂಬ ಸದುದ್ದೇಶದಿಂದ ಜಾರಿಗೆ ಬಂದಿರುವ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಪಡಿಸಬೇಕು ಎನ್ನುವ ವಾದ ಸಮರ್ಥನೀಯವಲ್ಲ. 

ನೀಟ್‌ ವಿರುದ್ಧ ಕೇಳಿ ಬರುತ್ತಿರುವ ಧ್ವನಿಗಳ ಹಿಂದೆ ಖಾಸಗಿ ವೈದ್ಯಕೀಯ ಕಾಲೇಜುಗಳು, ಅದರ ಮಾಲೀಕರಾಗಿರುವ ರಾಜಕಾರಣಿಗಳ ಲಾಬಿ ಇರುವುದು ಗುಟ್ಟಾಗಿ ಉಳಿದಿಲ್ಲ. ನೀಟ್‌ನಲ್ಲಿ ನಡೆದಿರುವ ಅಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ಪರೀಕ್ಷೆ ಅತ್ಯಂತ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ನೀಟ್‌ ರದ್ದು ಮಾಡಿದರೆ ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗುತ್ತದೆ. ಶೀತ–ನೆಗಡಿಯಾದರೆ ಅದಕ್ಕೆ ಔಷಧಿ ಸೇವಿಸಬೇಕೇ ವಿನಾ, ಮೂಗನ್ನೇ ಕತ್ತರಿಸಿದರೆ ಆಗುತ್ತದೆಯೇ? 

ಈ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡುವುದಕ್ಕೂ ಮುನ್ನ, ವೈದ್ಯಕೀಯ ಕೋರ್ಸ್‌ ಪ್ರವೇಶ‌ಕ್ಕೆ ರಾಷ್ಟ್ರಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆಯ ವ್ಯವಸ್ಥೆ ಯಾಕೆ ಬಂತು ಎಂಬುದನ್ನು ಎಲ್ಲರೂ ಅರಿಯಬೇಕು. 

ಪರೀಕ್ಷೆ ಬರೆಯುವುದೇ ಸವಾಲು: ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತ್ಯೇಕ ಪರೀಕ್ಷೆ ನಡೆಸುವ ಪರಿಕಲ್ಪನೆ ಆರಂಭವಾಗಿದ್ದು 1980ರ ದಶಕದಲ್ಲಿ. ಅದುವರೆಗೂ ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ‌‘ದ್ವಿತೀಯು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಮಂಡಳಿ ಪರೀಕ್ಷೆಗಳ ಪಾವಿತ್ರ್ಯ ಹಾಳಾಗುತ್ತಿದೆ. ಹೀಗಾಗಿ ಪ್ರತ್ಯೇಕ ಪರೀಕ್ಷೆಯ ಅಗತ್ಯವಿದೆ’ ಎಂಬ ಅಭಿಪ್ರಾಯ ಶಿಕ್ಷಣ ವಲಯದಲ್ಲಿ ವ್ಯಕ್ತವಾಗಿತ್ತು. 1984ರಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿದ್ದು ಕರ್ನಾಟಕ.   

ಕರ್ನಾಟಕದ ಮಾದರಿಯಲ್ಲಿ ಇತರ ರಾಜ್ಯಗಳು ತಮ್ಮದೇ ಪ್ರವೇಶ ಪರೀಕ್ಷೆ ನಡೆಸಲು ಆರಂಭಿಸಿದವು. ಖಾಸಗಿ ಕಾಲೇಜುಗಳು, ಡೀಮ್ಡ್‌ ವಿವಿಗಳು ಕೂಡ ಪ್ರತ್ಯೇಕ ಪ್ರವೇಶ ಪರೀಕ್ಷೆ ರೂಪಿಸಿದವು. ವೈದ್ಯಕೀಯ ಸೀಟು ಪಡೆಯಲು ಅಭ್ಯರ್ಥಿಗಳು ಒಂದೆರಡು ಪರೀಕ್ಷೆ ಬರೆದರೆ ಸಾಲದು ಎಂಬಂಥ ಪರಿಸ್ಥಿತಿ ನಿರ್ಮಾಣವಾಯಿತು. ಪ್ರವೇಶ ಪರೀಕ್ಷೆಗಳನ್ನು ಬರೆಯುವುದೇ ಅವರಿಗೆ ಸವಾಲಾಯಿತು. ಇದೇ ಸಮಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಹೆಚ್ಚು ಡೊನೇಶನ್‌ (ಕ್ಯಾಪಿಟೇಷನ್‌ ಫೀಸ್‌) ಪಡೆಯುವುದು ದೊಡ್ಡ ಚರ್ಚೆ ಹುಟ್ಟುಹಾಕಿತು. ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ, ಡೊನೇಶನ್‌ ಪಡೆಯುವುದನ್ನು ನ್ಯಾಯಾಲಯ ನಿರ್ಬಂಧಿಸಿತು. ಇದರ ಬಳಿಕ, ವಾಮ ಮಾರ್ಗದಲ್ಲಿ ಹಣ ಸಂಪಾದಿಸಲು ವೈದ್ಯಕೀಯ ಕಾಲೇಜುಗಳು ಪ್ರವೇಶ ಪರೀಕ್ಷೆಯನ್ನು ದಾರಿ ಮಾಡಿಕೊಂಡವು. 

ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ಆಗುವ ಅಕ್ರಮ, ಲೋಪಗಳನ್ನು ತಪ್ಪಿಸಲು ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕು ಎಂಬ ಕೂಗು 2009ರಲ್ಲಿ ಕೇಳಿ ಬಂತು. ಇದಕ್ಕೆ ಖಾಸಗಿ ಕಾಲೇಜುಗಳ ಸಹಮತ ಇರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದು, ರಾಷ್ಟ್ರ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ (ನೀಟ್‌) ನಡೆಸಲೇಬೇಕು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿತು. ಹೆಚ್ಚು ಖಾಸಗಿ ಕಾಲೇಜುಗಳನ್ನು ಹೊಂದಿರುವ ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್‌, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಈ ತೀರ್ಪನ್ನು ತೀವ್ರವಾಗಿ ವಿರೋಧಿಸಿದವು. 2013ರ ಮೇ 5ರಂದು ಸಿಬಿಎಸ್‌ಇ ಮೊದಲ ಬಾರಿಗೆ ‘ನೀಟ್‌’ ನಡೆಸಿತು. 6,58,040 ಅಭ್ಯರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷೆ ನಂತರ ಮತ್ತೆ ಗೊಂದಲ ಉಂಟಾದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಸೀಟುಗಳ ಹಂಚಿಕೆಯಾಗಲಿಲ್ಲ. ಈ ಪರೀಕ್ಷೆ ಆಧಾರದಲ್ಲಿ ಅಖಿಲ ಭಾರತ ಕೋಟಾದ ಸೀಟುಗಳನ್ನು ಮಾತ್ರ ಭರ್ತಿ ಮಾಡಲಾಯಿತು. 2014–15ನೇ ಸಾಲಿನಲ್ಲಿ ‘ನೀಟ್‌ ನಡೆಯಲಿಲ್ಲ. 2016ರ ಹೊತ್ತಿಗೆ ನೀಟ್‌ ನಡೆಸಲೇ ಬೇಕು ಎಂಬ ದೃಢ ನಿರ್ಧಾರ ತಳೆದ ಕೇಂದ್ರ ಸರ್ಕಾರ, ಮೇ  ಮತ್ತು ಜುಲೈನಲ್ಲಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿತು. 7,31,233 ಅಭ್ಯರ್ಥಿಗಳು ಹಾಜರಾದರು.

ಪ್ರವೇಶ ಪರೀಕ್ಷೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಬೇಕು ಎಂಬುದು ಕೇಂದ್ರದ ನಿಲುವಾಗಿತ್ತು. ಇದೇ ವೇಳೆ, ಭ್ರಷ್ಟಾಚಾರ, ಹಗರಣಗಳ ಕೂಪವಾಗಿದ್ದ ಭಾರತೀಯ ವೈದ್ಯಕೀಯ ಮಂಡಳಿಯನ್ನು (ಎಂಸಿಐ) ರದ್ದು ಪಡಿಸಿ ಸ್ವಾಯತ್ತವಾದ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪಿಸಿತು. ಇದಕ್ಕೆ ಪೂರಕವಾಗಿ 2019ರಲ್ಲಿ ಕಾಯ್ದೆಯನ್ನೂ ರೂಪಿಸಿತು. ರಾಷ್ಟ್ರಿಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಸ್ಥಾಪಿಸಿ ನೀಟ್‌ ನಡೆಸುವ ಹೊಣೆ ಒಪ್ಪಿಸಿತು. ‌

‘ಎಲ್ಲ ರಾಜ್ಯಗಳಲ್ಲಿ ಬೇರೆ ಬೇರೆ ಪಠ್ಯಕ್ರಮ (ಪಿಯು ಶಿಕ್ಷಣದಲ್ಲಿ) ಇದೆ. ಹೀಗಿರುವಾದ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪರೀಕ್ಷೆ ನಡೆಸಲು ಹೇಗೆ ಸಾಧ್ಯ’ ಎಂಬುದು ಹಲವು ರಾಜ್ಯಗಳು ‘ನೀಟ್‌’ ಬಗ್ಗೆ ವ್ಯಕ್ತಪಡಿಸಿದ್ದ ಪ್ರಮುಖ ಆಕ್ಷೇಪವಾಗಿತ್ತು. ಈಗ ಈ  ಸಮಸ್ಯೆ ಇಲ್ಲ. ಎಲ್ಲ ರಾಜ್ಯಗಳಲ್ಲಿ ಒಂದೇ ಪಠ್ಯಕ್ರಮ ಇದ್ದು, ಎನ್‌ಸಿಇಆರ್‌ಟಿ ರೂಪಿಸಿರುವ ಪಠ್ಯಕ್ರಮವನ್ನೇ ಪಾಲಿಸಲಾಗುತ್ತಿದೆ.  

‘ನೀಟ್‌’ ನಡೆಸುವ ಕೇಂದ್ರ ಸರ್ಕಾರದ ಉದ್ದೇಶ ಸರಿಯಾಗಿದ್ದರೂ, ಪರೀಕ್ಷಾ ಪ್ರಕ್ರಿಯೆಯ ನಿರ್ವಹಣೆ ವ್ಯವಸ್ಥಿತವಾಗಿಲ್ಲ. ಪ್ರತಿ ವರ್ಷ ಅದು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ. ನೀಟ್‌ ಬರೆಯುತ್ತಿರುವ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ವರ್ಷ 1,09,065 ಎಂಬಿಬಿಎಸ್‌, 28,088 ದಂತ ವೈದ್ಯಕೀಯ (ಬಿಡಿಎಸ್‌), 50,720 ಆಯುಷ್‌ ಸೀಟುಗಳು ಸೇರಿದಂತೆ ದೇಶದಲ್ಲಿ 1.75 ಲಕ್ಷದಷ್ಟು ವೈದ್ಯಕಿಯ ಸೀಟುಗಳು ಲಭ್ಯವಿವೆ. ಈ ವರ್ಷದ ಮೇ 5ರಂದು ನಡೆದಿದ್ದ ಪರೀಕ್ಷೆಗೆ 23,33,297 ಮಂದಿ ಹಾಜರಾಗಿದ್ದರು. 24,06,029 ಅಭ್ಯರ್ಥಿಗಳು ನೋಂದಣಿ ಮಾಡಿದ್ದರು. 

ವೈದ್ಯಕೀಯ ಸೀಟು ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಎನ್‌ಟಿಎ ಹೆಚ್ಚು ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಗಮನ ಹರಿಸಬೇಕು. ಆದರೆ, ಇದರಲ್ಲಿ ಅದು ಎಡವುತ್ತಿದೆ. ‘ನೀಟ್‌’ ಆರಂಭವಾದಾಗಿನಿಂದಲೂ ಒಂದಲ್ಲ ಒಂದು //ಎಡವಟ್ಟು// ನಡೆಯುತ್ತಲೇ ಇದೆ. ಇದುವರೆಗೂ ಅದು ಸಣ್ಣಪುಟ್ಟದ್ದಾಗಿತ್ತು, ಈ ಬಾರಿಯ ಅಕ್ರಮ ದೊಡ್ಡ ಮಟ್ಟದ್ದು. ಶಿಕ್ಷಣ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲವು ರಾಜ್ಯಗಳು ನೀಟ್‌ ರದ್ದತಿ ಬಗ್ಗೆ ಮಾತನಾಡುತ್ತಿವೆ. ಮತ್ತೆ ಹಲವು ಪ್ರವೇಶ ಪರೀಕ್ಷೆಗಳು ನಡೆಯುವ ವ್ಯವಸ್ಥೆ ಈಗಿನ ಬಿಕ್ಕಟ್ಟಿಗೆ ಖಂಡಿತವಾಗಿಯೂ ಪರಿಹಾರವಾಗದು. ಹೆಚ್ಚು ಪರೀಕ್ಷೆಗಳು ನಡೆದಷ್ಟೂ ಅಕ್ರಮಗಳು ಜಾಸ್ತಿಯಾಗುವುದಕ್ಕೆ ಅವಕಾಶ ಸಿಕ್ಕಂತಾಗುತ್ತದೆ. 

‘ನೀಟ್‌ ರದ್ದು ಮಾಡಬೇಕು, ರಾಜ್ಯಕ್ಕೆ ವಿನಾಯಿತಿ ನೀಡಬೇಕು’ ಎಂದು ಕೆಲವು ರಾಜ್ಯಗಳು ವಿಧಾನಸಭೆಗಳಲ್ಲಿ ನಿರ್ಣಯ ಅಂಗೀಕಾರ ಮಾಡುತ್ತಿವೆ. ಇದರಿಂದ ಪ್ರಯೋಜನವಾಗದು. ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಚರ್ಚೆ ನಡೆಸಿ ಅಂಗೀಕರಿಸಿದ ನಂತರ ರೂಪುಗೊಂಡಿರುವ ವ್ಯವಸ್ಥೆ ಇದು. ಸಂಸತ್ತಿನ ನಿರ್ಧಾರಗಳನ್ನು ವಿಧಾನಸಭೆಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸಿ ಅಥವಾ ಕಾನೂನು ರೂಪಿಸಿ ರದ್ಧು ಪಡಿಸಲು ಸಾಧ್ಯವಿಲ್ಲ. 

ನೀಟ್‌ನಿಂದಾಗಿ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ತಮಿಳುನಾಡು ಹೇಳುತ್ತಿದೆ. ಇದು ಅತ್ಯಂತ ಬಾಲಿಶ ವಾದ. ಎಲ್ಲ ರಾಜ್ಯಗಳಿಗೂ ರಾಜ್ಯ ಕೋಟಾ ಸೀಟುಗಳಿರುತ್ತವೆ. ಆ ಸೀಟುಗಳನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೇ ನೀಡಬೇಕು. ಹಾಗಿರುವಾಗ ಅನ್ಯಾಯದ ಪ್ರಶ್ನೆ ಎಲ್ಲಿ ಬಂತು? ಇವೆಲ್ಲವೂ ಜನರನ್ನು ‘ಮಂಗ’ ಮಾಡುವ ಪ್ರಯತ್ನವಷ್ಟೇ.

ಅಭ್ಯರ್ಥಿಗಳಿಗೆ ಅನುಕೂಲ: ನೀಟ್‌ನಿಂದಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಬಡ, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗಗಳ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಹಲವು ಪ್ರವೇಶ ಪರೀಕ್ಷೆಗಳಿಗೆ ಶುಲ್ಕ ಪಾವತಿಸುವ ಹೊರೆ ಇಲ್ಲದಂತೆ ಆಗಿರುವುದು ಒಂದೆಡೆಯಾದರೆ, ಅಧ್ಯಯನ ಹಾಗೂ ಸೀಟು ಹಂಚಿಕೆಯ ದೃಷ್ಟಿಯಿಂದಲೂ ಪ್ರಯೋಜನವಾಗಿದೆ. ಅಭ್ಯರ್ಥಿಗಳು ಒಂದು ಪರೀಕ್ಷೆಗೆ ಓದಿದರೆ ಸಾಕು. ಒಂದೇ ಪರೀಕ್ಷೆಯ ಆಧಾರದಲ್ಲಿ ಅಖಿಲ ಭಾರತ ಕೋಟಾ, ರಾಜ್ಯದ ಕೋಟಾ, ಮ್ಯಾನೇಜ್‌ಮೆಂಟ್‌ ಕೋಟಾ ಸೇರಿದಂತೆ ಎಲ್ಲ ಕೋಟಾಗಳ ಅಡಿಯಲ್ಲೂ ಸೀಟು ಹಂಚಿಕೆಯಾಗುತ್ತದೆ. 

ಈಗಿನ ವ್ಯವಸ್ಥೆಯಲ್ಲಿ ಇರುವ ದೋಷಗಳನ್ನು ಸರಿಪಡಿಸಿ, ನೀಟ್‌ ಸುಧಾರಣೆಗೆ ಕ್ರಮಕೈಗೊಳ್ಳಬೇಕೇ ವಿನಾ ಪರೀಕ್ಷೆಯನ್ನೇ ರದ್ದುಪಡಿಸುವುದು ಸೂಕ್ತ ನಿರ್ಧಾರವಾಗದು. ಆಧುನಿಕ ತಂತ್ರಜ್ಞಾನಗಳು ಅಕ್ರಮಗಳಿಗೆ ಹಲವು ಮಾರ್ಗಗಳನ್ನು ತೋರಿಸಿವೆ. ಇದಕ್ಕೆ ಕಡಿವಾಣ ಹಾಕುವಂತಹ ಸುಧಾರಿತ ವ್ಯವಸ್ಥೆಯೊಂದರ ಅಗತ್ಯವಿದೆ. ಎನ್‌ಟಿಎಗೆ ಪರೀಕ್ಷೆ ನಡೆಸುವ ಜವಾಬ್ದಾರಿ ಮಾತ್ರ ಬಿಟ್ಟು, ಅಕ್ರಮ ನಡೆಯದ ರೀತಿಯಲ್ಲಿ ನಿಗಾ ಇಡಲು ಪ್ರತ್ಯೇಕ ವ್ಯವಸ್ಥೆ ರೂಪಿಸುವುದು ಸಮಸ್ಯೆಗೆ ಪರಿಹಾರವಾಗಬಲ್ಲುದು. 

ಲೇಖಕ: ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ

ನಿರೂಪಣೆ: ಸೂರ್ಯನಾರಾಯಣ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT