ಇಳಕಲ್ ಸೀರೆ, ಧಾರವಾಡ ಸೀರೆ, ಮೊಳಕಾಲ್ಮೂರು ಸೀರೆಯಂತೆ ಉಡುಪಿ ಸೀರೆಯೂ ಇದೆ. ಅಂದದ ವಿನ್ಯಾಸ, ವೈಶಿಷ್ಟ್ಯದ ಈ ಸೀರೆ ನೇಪಥ್ಯಕ್ಕೆ ಸರಿದಿತ್ತು. ಆದರೆ ಈಗ ಮತ್ತೆ ಉಡುಪಿ ಸೀರೆಗೆ ಜೀವ ತುಂಬುವ ಕೆಲಸ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಅನ್ನೋ ಪುಟ್ಟ ಊರಿನಲ್ಲಿರುವ ತಾಳಿಪ್ಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಹೊಕ್ಕಾಗ, ಕೋಣೆಯೊಂದರಿಂದ ಸಣ್ಣಗೆ ಕೈಮಗ್ಗದ ಸದ್ದು ಕೇಳುತ್ತಿತ್ತು. ಆ ಕೋಣೆಗೆ ಹೋಗಿ ನೋಡಿದರೆ, ಕೆಂಪು ಬಣ್ಣದ ನೂಲುಗಳನ್ನು ಜೋಡಿಸುತ್ತಾ, ನೇಯ್ಗೆಗೆ ಸಿದ್ಧರಾಗುತ್ತಿದ್ದರು. ಮಗ್ಗಗಳು ಒಂದೇ ಲಯದಲ್ಲಿ ಹೊಡೆದುಕೊಳ್ಳುತ್ತಿದ್ದವು. ಕೊನೆಯ ಮಗ್ಗ, ಬಿಡಿ ಬಿಡಿಯಾಗಿದ್ದ ನೂಲನ್ನು ಸೆಳೆದುಕೊಂಡು ಅಂದದ ಸೀರೆಯಾಗಿಸಿ ಹೊರಗೆ ಹಾಕುತ್ತಿತ್ತು. ಆ ಸೀರೆ ಮೇಲ್ನೋಟಕ್ಕೆ ಇಳಕಲ್, ಧಾರವಾಡದ ಸೀರೆಯಂತೆ ಕಾಣುತ್ತಿತ್ತು. ಆದರೆ, ಸೀರೆಯ ಬಾರ್ಡರ್, ತುದಿಯಲ್ಲಿದ್ದ ಚಿತ್ತಾರ, ‘ಇದು ಅದಲ್ಲ, ಇದು ಉಡುಪಿ ಸೀರೆ’ ಎಂದು ಒತ್ತಿ ಹೇಳುತ್ತಿತ್ತು!

ನಿಜ, ಉಡುಪಿ ಕೈಮಗ್ಗದ ಸೀರೆಗಳ ಅಂದ, ವಿನ್ಯಾಸ ವೈಶಿಷ್ಟ್ಯವೇ ಅಂಥದ್ದು. ಈ ಸೀರೆಗಳು ಯಾವುದೋ ಕಾರ್ಖಾನೆಗಳಲ್ಲಿ, ಕಂಪೆನಿಗಳಲ್ಲಿ ತಯಾರಾಗುವುದಿಲ್ಲ. ಬದಲಿಗೆ, ನೇಕಾರರ ಸಹಕಾರ ಸಂಘಗಳಲ್ಲಿ ಸಿದ್ಧಗೊಳ್ಳುತ್ತವೆ. ಅಂಥ ಸಹಕಾರ ಸಂಘಗಳಲ್ಲಿ ಕಿನ್ನಿಗೋಳಿಯ ತಾಳಿಪ್ಪಾಡಿ ಸಹಕಾರ ಸಂಘವೂ ಒಂದು.

ಒಂದು ಕಾಲದಲ್ಲಿ ಹೆಂಗಳೆಯರ ಅಚ್ಚುಮೆಚ್ಚಿನ ವಸ್ತ್ರವಾಗಿದ್ದ ಉಡುಪಿ ಸೀರೆ, ಆಧುನಿಕ ಸೀರೆಗಳ ಗೌಜು, ಗದ್ದಲದಲ್ಲಿ ನೇಪಥ್ಯಕ್ಕೆ ಸರಿದಿತ್ತು. ಆದರೆ, ತಾಳಿಪ್ಪಾಡಿ ಸಂಘದ ಮೂಲಕ ಈಗ ಆ ಸೀರೆ ಮರುಹುಟ್ಟು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಕದಿಕೆ ಟ್ರಸ್ಟ್ ‘ಉಡುಪಿ ಸೀರೆ ಉಳಿಸಿ’ ಎಂಬ ಅಭಿಯಾನ ಶುರು ಮಾಡುವ ಮೂಲಕ ಸೀರೆ ಮತ್ತು ನೇಕಾರರಿಗೂ ನೆರವಾಗುವ ಮಹತ್ವದ ಕಾರ್ಯಕ್ಕಿಳಿದಿದೆ. ವರ್ಷದ ಆರಂಭದಿಂದ ನಡೆಯುತ್ತಿರುವ ಅಭಿಯಾನ, ತಕ್ಕಮಟ್ಟಿಗೆ ಯಶಸ್ಸಿನ ಹಾದಿಯಲ್ಲಿದೆ.

ಉಡುಪಿ ಸೀರೆಯ ಅಂದ–ಚಂದ

ಕರಾವಳಿಯ ಮಣ್ಣಿನ ಪರಿಮಳದಲ್ಲಿ ಹುಟ್ಟಿದ ಉಡುಪಿ ಸೀರೆ, ಅಸಹಜ ಬಣ್ಣದ್ದಲ್ಲ. ಇದರ ಸಹಜತೆ, ಸರಳತೆ, ಕಲಾತ್ಮಕ ಬಣ್ಣ ನಮ್ಮೊಳಗೆ ಉಂಟು ಮಾಡುವ ಆಪ್ತತೆಯೇ ಬೇರೆ. ಈ ಸೀರೆಯ ಸೆರಗು ಒಂದಷ್ಟು ಗಾಢ ಬಣ್ಣ, ಅಂಚು ತಿಳಿ ಬಣ್ಣ. ಕೃತಕ ನೂಲುಗಳಿಲ್ಲದ, ಕೃತಕ ಬಣ್ಣಗಳಿಲ್ಲದ, ಶುದ್ಧ ಕೈಮಗ್ಗದ ಹತ್ತಿ ನೂಲುಗಳಿಂದ ತಯಾರಿಸಿದ ಉತ್ಪನ್ನ. ಇದನ್ನು ಧರಿಸಿದಾಗ ಸಿಗುವ ಸಂತಸ ಮತ್ತು ಆರಾಮದ ಅನುಭವ ಬೇರೆ ಯಾವ ಸೀರೆಗಳಿಂದಲೂ ಸಿಗುವುದಿಲ್ಲ ಎನ್ನುವುದು ಗ್ರಾಹಕರ ಅಭಿಪ್ರಾಯ. ‘ಮಳೆಗಾಲದಲ್ಲಿ ಬೆಚ್ಚಗಿನ ಹಾಗೂ ಬೇಸಿಗೆಯಲ್ಲಿ ತಂಪಿನ, ಹಿತವಾದ ಅನುಭವ ನೀಡುತ್ತದೆ. ಮಾತ್ರವಲ್ಲ, ತೊಟ್ಟು ಹಳೆಯದಾದರೂ ಬಳಕೆಗೆ ಬರುವ ಈ ಸೀರೆ ನಿಜವಾಗಿಯೂ ನಮ್ಮ ಸಾತ್ವಿಕ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸುತ್ತದೆ’ ಎನ್ನುತ್ತಾರೆ ಪುತ್ತೂರಿನ ಅಡ್ಯನಡ್ಕದ ವಾಣಿ ಜ್ಯೋತಿ.

ಇಲ್ಲಿನ ಕೈಮಗ್ಗಗಳಲ್ಲಿ 80 ಕೌಂಟ್(ನೂಲಿನ ದಪ್ಪ) ಮತ್ತು 60 ಕೌಂಟ್ನ ಉಡುಪಿ ಸೀರೆಗಳು ತಯಾರಾಗುತ್ತಿವೆ. ಅಂದ ಹಾಗೆ ಈ ಸೀರೆ ತಯಾರಿಸೋದು ಭಾರೀ ತ್ರಾಸದ ಕೆಲಸ. ಇದಕ್ಕೆ ವಿಶೇಷ ಕೌಶಲವೂ ಬೇಕು. 80 ಕೌಂಟ್ ಸೀರೆಯ ತಯಾರಿಯಲ್ಲಿ ಏಳರಿಂದ ಎಂಟು ನೇಕಾರರು, 60 ಕೌಂಟ್ ಸೀರೆಗೆ ಸುಮಾರು 42 ಮಂದಿ ನೇಕಾರರು ಶ್ರಮಿಸುತ್ತಿದ್ದಾರೆ. 60 ಕೌಂಟ್ ಸೀರೆಯ ಬೆಲೆ ₹700 ರಿಂದ ₹900, 80 ಕೌಂಟ್ ಸೀರೆ ದರ ₹1400 ರಿಂದ ₹1800. ಸಹಜ ಬಣ್ಣದ ಸೀರೆಗೆ ₹1400 ರಿಂದ ₹2500 ದರವಿದೆ. ಮಗ್ಗದಲ್ಲಿ ನೇಕಾರರ ಪರಿಶ್ರಮ ನೋಡಿದಾಗ, ಈ ಸೀರೆಗಿಟ್ಟಿರುವ ಬೆಲೆ ನಿಜಕ್ಕೂ ಕಡಿಮೆ.

ಅಂದಹಾಗೆ, ಉಡುಪಿ ಸೀರೆ ತಯಾರಕ ಸಂಘಗಳು, ಇತ್ತೀಚೆಗೆ ಹೆಗ್ಗೋಡಿನ ಚರಕ ಸಂಸ್ಥೆಯ ಸಹಕಾರದಲ್ಲಿ, ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಸೀರೆಗಳನ್ನು ತಯಾರಿಸುತ್ತಿವೆ. ಭವಿಷ್ಯದಲ್ಲಿ ಸೀರೆ ತಯಾರಿಕೆ ಪರಿಪೂರ್ಣ ಪರಿಸರ ಸ್ನೇಹಿಯಾಗಬೇಕು ಎನ್ನುವುದು ಕದಿಕೆ ಟ್ರಸ್ಟ್ನ ಕನಸು.

ಸಂಘಗಳನ್ನು ಉಳಿಸುವ ಶ್ರಮ

ಕೆಲವು ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4ಸಾವಿರ ಮಂದಿ ನೇಕಾರಿಕೆಯಲ್ಲಿ ತೊಡಗಿದ್ದರು. 8 ನೇಕಾರರ ಸಂಘಗಳಿದ್ದವು. ಈಗ ಉಡುಪಿ ನೇಕಾರ ಸಂಘ, ಶಿವಳ್ಳಿ ನೇಕಾರ ಸಂಘ, ಪಡುಪಣಂಬೂರು, ಬ್ರಹ್ಮಾವರ, ತಾಳಿಪ್ಪಾಡಿ, ಪ್ರಿಯದರ್ಶಿನಿ ಸಂಘಗಳಷ್ಟೇ ಉಳಿದಿವೆ.

ಉಡುಪಿಯ ಸೀರೆ ತಯಾರಿಕೆಯಲ್ಲಿ ಈ ಸಂಘಗಳ ಪಾತ್ರ ದೊಡ್ಡದು. ಈ ಸೀರೆ ನೇಯುವವರು ಯಾವುದಾದರೂ ನೇಕಾರ ಸಂಘ ಅಥವಾ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಸದಸ್ಯರಾಗಿರುತ್ತಾರೆ. ಈ ಸಂಘಗಳು ಬಣ್ಣ ಹಾಕಿದ ದಾರವನ್ನು ನೇಕಾರರಿಗೆ ಪೂರೈಸುತ್ತವೆ. ನೇಕಾರರು ನೇಯ್ದ ಸೀರೆಗಳಿಗೆ, ಮೀಟರ್ ಲೆಕ್ಕದಲ್ಲಿ ವೇತನ ನೀಡುತ್ತವೆ. ನೇಕಾರ ಸಹಕಾರ ಸಂಘಗಳು ತಮ್ಮ ಮಳಿಗೆಗಳ ಮೂಲಕ ಸೀರೆಯನ್ನು ಮಾರಾಟ ಮಾಡುತ್ತವೆ.

ಈಗ ಕದಿಕೆ ಟ್ರಸ್ಟ್, ನೇಕಾರರನ್ನು ಪ್ರೋತ್ಸಾಹಿಸುತ್ತಾ, ಇಲ್ಲಿನ ಸೀರೆಯ ಭವ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ತಲ್ಲೀನವಾಗಿದೆ.

ಮಾತ್ರವಲ್ಲ, ನೇಕಾರಿಕೆಯನ್ನು ಮುಂದಿನ ಪೀಳಿಗೆಗೂ ದಾಟಿಸಲು ಪ್ರಯತ್ನಿಸುತ್ತಿದೆ. ಗ್ರಾಹಕರಲ್ಲಿ ಉಡುಪಿ ಸೀರೆ ಬಗ್ಗೆ ಪ್ರೀತಿ ಮೂಡಿಸುವಲ್ಲೂ ಟ್ರಸ್ಟ್ ಶ್ರಮಿಸುತ್ತಿದೆ. ಇದಕ್ಕಾಗಿ ನವ ನೇಕಾರರಿಗೆ ತರಬೇತಿ, ಉತ್ತಮ ನೇಕಾರ ಪ್ರಶಸ್ತಿ ನೀಡುವಂತಹ ಚಟುವಟಿಕೆಗಳನ್ನು ನಡೆಸುತ್ತಿದೆ. ಜತೆಗೆ, ಸೀರೆಗಳಿಗೆ ಯೋಗ್ಯ ದರ ಮತ್ತು ಮಾರುಕಟ್ಟೆ ಒದಗಿಸಿ, ನೇಕಾರರ ಸಂಭಾವನೆಯನ್ನೂ ಹೆಚ್ಚಿಸಲಾಗಿದೆ.

ಉಡುಪಿ ಸೀರೆಗೆ 2016 ರಲ್ಲಿ ಭೌಗೋಳಿಕ ಗುರುತಿಸುವಿಕೆ (Geographical Indicator) ಟ್ಯಾಗ್ ಸಿಕ್ಕಿದೆ. ಈಗ ಅದನ್ನು ಬಳಸಲು ತಾಳಿಪ್ಪಾಡಿ ಸಂಘ ಟ್ರಸ್ಟ್ ಮೂಲಕ ಅರ್ಜಿ ಹಾಕಿದೆ. ಉಳಿದ ಸಂಘಗಳಿಗೂ ಈ ನಿಟ್ಟಿನಲ್ಲಿ ಉತ್ತೇಜನ ಕೊಡಲಾಗುತ್ತಿದೆ.

ನೇಕಾರರಲ್ಲಿ ಹೆಚ್ಚಿದ ಉಮೇದು

ಉಡುಪಿ ಸೀರೆ ಕುರಿತು ಇಷ್ಟೆಲ್ಲ ಮಾಹಿತಿ ಸಂಗ್ರಹಿಸುತ್ತಾ, ಮಗ್ಗಗಳ ಕೋಣೆಗಳಲ್ಲಿ ಸುತ್ತಾಡುತ್ತಿದ್ದಾಗ, ಉಮೇದಿನಿಂದ ನೇಯ್ಗೆಯಲ್ಲಿ ತೊಡಗಿದ್ದ ನೇಕಾರರು ಮಾತಿಗೆ ಸಿಕ್ಕರು. ‘ನಾನು 15ನೇ ವಯಸ್ಸಿನಲ್ಲಿ ನೇಯ್ಗೆ ಕೆಲಸ ಶುರುಮಾಡಿದೆ. ಸುಮಾರು 47 ವರ್ಷಗಳಿಂದ ಕೈಮಗ್ಗದ ವೃತ್ತಿಯಲ್ಲಿದ್ದೇನೆ. ಕದಿಕೆ ಟ್ರಸ್ಟ್ ನಮ್ಮ ಕೆಲಸ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಒಂದು ಸೀರೆ ನೇಯ್ದು, ಅದರ ಮೇಲೆ ಒಮ್ಮೆ ಕಣ್ಣಾಡಿಸುತ್ತಿದ್ದಾಗ, ಏನೋ ಒಂದು ತೃಪ್ತಿ ಎನಿಸುತ್ತದೆ’ ಎನ್ನುತ್ತಾ ನೇಯ್ಗೆಯಲ್ಲಿ ನಿರತರಾದರು ಹಿರಿಯ ನೇಕಾರ ಆನಂದ ಶೆಟ್ಟಿಗಾರ್. ಅವರೆಲ್ಲ ಈ ನೇಕಾರಿಕೆಯನ್ನು ಒಂದು ವ್ರತದಂತೆ ಮಾಡುತ್ತಿದ್ದಾರೆ. ಇಂತಹ ಹಿರಿಯ ನೇಕಾರರಿಂದಲೇ ಉಡುಪಿ ಸೀರೆ ಹೊಳಪು ಕಾಣುತ್ತಾ, ಗ್ರಾಹಕರನ್ನು ಆಕರ್ಷಿಸುತ್ತಿದೆ.

ಪರಿಸರ ಸ್ನೇಹಿ ಉದ್ದಿಮೆ ರಕ್ಷಿಸಿ

ಇದೊಂದು ಪರಿಸರ ಸ್ನೇಹಿ ಉದ್ಯಮ. ಪರಿಸರಕ್ಕೆ ಹಾನಿಯಾಗದಂತೆ ನೇಕಾರರು ಕೆಲಸ ಮಾಡುತ್ತಿದ್ದಾರೆ. ‘ಅವರ ಪರಿಶ್ರಮಕ್ಕೆ ಸೂಕ್ತ ಗೌರವ ಮತ್ತು ಸಂಭಾವನೆ ದೊರಕಿಸುವ ಮೂಲಕ, ಕರಾವಳಿಯ ಪರಂಪರೆ ಸಂಕೇತವಾಗಿರುವ ಪರಿಸರ ಸ್ನೇಹಿ ಉಡುಪಿ ಸೀರೆಯನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಕದಿಕೆ ಟ್ರಸ್ಟ್ ಶ್ರಮಿಸುತ್ತಿದೆ’ ಎನ್ನುತ್ತಾರೆ ಕದಿಕೆ ಟ್ರಸ್ಟ್ನ ಮಮತಾ ರೈ. ಇದಕ್ಕೆ ಪೂರಕ ಎನ್ನುವಂತೆ ಟ್ರಸ್ಟ್ ಕೆಲವು ಸಂಘಗಳಿಗೆ ‘ಉಡುಪಿ ಸೀರೆ ಉಳಿಸಿ’ ಅಭಿಯಾನದ ಅಂಗವಾಗಿ ದೇಶದಾದ್ಯಂತ ಮಾರುಕಟ್ಟೆ ಕಲ್ಪಿಸಿಕೊಟ್ಟಿದೆ.

ಅಭಿಯಾನದ ಮೂಲಕ ಪುನಶ್ಚೇತನ ಕಾಣುತ್ತಿರುವ ಉಡುಪಿ ಸೀರೆಗೆ ಗ್ರಾಹಕರ ಸ್ಪಂದನೆ ಉತ್ತಮವಾಗಿದೆ. ಸ್ಥಳೀಯರು ನೇಕಾರ ಸಂಘಗಳಿಗೆ ಹೋಗಿ ನೇರವಾಗಿ ಸೀರೆ ಖರೀದಿಸುತ್ತಾರೆ. ಪ್ರಿಯಯದರ್ಶಿನಿ ಮಳಿಗೆಗಳಲ್ಲೂ ಈ ಸೀರೆ ಮಾರಾಟವಾಗುತ್ತಿದೆ. ಕದಿಕೆ ಟ್ರಸ್ಟ್ ಕೂಡ, ಆನ್ಲೈನ್ ಮೂಲಕ ಗ್ರಾಹಕರಿಗೆ ತಲುಪಿಸುವಲ್ಲಿ ಮುಂದಾಗಿದೆ.

ಇದನ್ನೂ ಓದಿ:ಉಡುಪಿ ಸೀರೆ ಜಾಗೃತಿಗೆ 1₹ ಕೋಟಿ ವೆಚ್ಚ

ಇಂಥ ಪ್ರಯತ್ನಗಳ ನಡುವೆ ಉಡುಪಿ ಸೀರೆ ಉಳಿದರೆ, ನೇಕಾರಿಕೆಯೂ ಉಳಿಯುತ್ತದೆ. ಸಂಘಗಳ ಮಾದರಿಯಲ್ಲಿ ನಡೆಯುತ್ತಿರುವ ಈ ಪರಿಸರ ಸ್ನೇಹಿ ಉದ್ದಿಮೆ ಬೆಳವಣಿಗೆಗೆ ಎಲ್ಲ ಗ್ರಾಹಕರೂ ಜೊತೆಯಾಗಬೇಕಿದೆ. ಉಡುಪಿ ಸೀರೆ ಕುರಿತ ಮಾಹಿತಿಗಾಗಿ ಕದಿಕೆ ಟ್ರಸ್ಟ್ನ ಮಮತಾ ರೈ ಅವರ ಸಂಪರ್ಕ ಸಂಖ್ಯೆ: 98808 35299.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.