-ಸೋ.ಸೋ. ಮೋಹನ್ ಕುಮಾರ್

ಈ ಗ್ರಾಮಕ್ಕೆ ಸಮುದ್ರದ ಉಪ್ಪು ನೀರಿನ ಅವಾಂತರವೇ ಹೆಚ್ಚು. ಆದರೂ ಇಲ್ಲಿನವರು ಛಲಬಿಡದವರಂತೆ ಕ್ಷಾರಭೂಮಿಯಲ್ಲಿಯೇ ವಿಶಿಷ್ಟವಾದ ಕಗ್ಗ ಭತ್ತವನ್ನು ಬೆಳೆಯುತ್ತಾರೆ. ಇಂದಿಗೂ ಈ ಗ್ರಾಮದಲ್ಲಿ ಎಲ್ಲ ರೈತರು ಸಂಘಟಿತರಾಗಿ ಸಾಮೂಹಿಕವಾಗಿ, ಜಾತಿಭೇದವಿಲ್ಲದೆ ಸಹಕಾರಿ ಪದ್ಧತಿಯಲ್ಲಿ ಒಟ್ಟಾಗಿ ಬೇಸಾಯ ಮಾಡುತ್ತಾರೆ! ಜೊತೆಗೆ ಈ ರೈತ ಒಕ್ಕೂಟವು ಸೀಗಡಿ ಹಾಗೂ ಮೀನು ಮಾರಾಟದಿಂದ ಬಂದ ಹಣದಿಂದ ಉಪ್ಪು ನೀರಿನ ತಡೆಗೋಡೆ, ಬದುಗಳ ಸಣ್ಣಪುಟ್ಟ ರಿಪೇರಿಯನ್ನು ಸ್ವತಃ ಮಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕುಮಟ ತಾಲ್ಲೂಕಿನ ಮಾಣಿಕಟ್ಟವೇ ಈ ಗ್ರಾಮ.

ಬಯಲು ಸೀಮೆ, ಮಲೆನಾಡಿನಲ್ಲಿ ಮಾಡುವ ಕೃಷಿಗಿಂತ ಕರಾವಳಿ ತೀರದ ಬೇಸಾಯ ಅತ್ಯಂತ ವಿಶಿಷ್ಟವಾದದ್ದು. ಅದರಲ್ಲಿಯೂ ಸಮುದ್ರದ ತಟದ ಗಜನಿ (ಅಚ್ಚುಕಟ್ಟು ಪ್ರದೇಶ) ಗಳಲ್ಲಿ ಬೇಸಾಯ ಮಾಡುವ ಕ್ರಮ ಅತ್ಯಂತ ಕ್ಲಿಷ್ಟಕರ. ಸಮುದ್ರದ ಭರತ-ಇಳಿತದ ಲೆಕ್ಕಾಚಾರದಲ್ಲಿಯೇ ಇಲ್ಲಿ ಕೃಷಿ ಮಾಡಬೇಕಾಗುತ್ತದೆ.

ಒಂದೆಡೆ ನದಿಗಳು ಸಮುದ್ರ ಸೇರುವ ತವಕದಲ್ಲಿರುತ್ತವೆ, ಮತ್ತೊಂದೆಡೆ ಸಮುದ್ರದ ನೀರಿನ ಆರ್ಭಟ. ಅದಲ್ಲದೆ ಮೇಲ್ಭಾಗದ ತರಿ ಜಮೀನು ಹಾಗೂ ಭಾಗಾಯತ್ ಜಮೀನಿನ ಮಳೆ ನೀರು ಸಹ ಈ ಭಾಗದ ಮೂಲಕವೇ ಹರಿದು ಸಮುದ್ರ ಸೇರುತ್ತಿರುತ್ತದೆ. ಇಂತಹ ಪ್ರದೇಶದಲ್ಲಿ ಕೃಷಿ ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಮಾಣಿಕಟ್ಟದ ರೈತರು ಒಗ್ಗಟ್ಟಿನಲ್ಲಿ ಕೃಷಿ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಈ ರೀತಿಯ ಕೃಷಿ ಪ್ರದೇಶವು ರಾಜ್ಯದಲ್ಲಿ 6ಸಾವಿರ ಹೆಕ್ಟೇರ್ಗೂ ಹೆಚ್ಚಿದ್ದು, ಇದರಲ್ಲಿ 3,500ಹೆಕ್ಟೇರ್ ಕ್ಷೇತ್ರವು ಕುಮಟ ತಾಲ್ಲೂಕಿನ ಅಘನಾಶಿನಿ ನದಿಯ ಹಿನ್ನೀರಿನ ಪ್ರದೇಶದಲ್ಲಿದೆ.

ಏನಿದು ಸಹಕಾರ ಕೃಷಿ ಪದ್ಧತಿ

ಮಾಣಿಕಟ್ಟದ 2ನೇ ಸರ್ವೆ ನಂಬರಿನಿಂದ 146ನೇ ಸರ್ವೆ ನಂಬರಿನವರೆಗೆ ಒಟ್ಟು 450ಎಕರೆಯಷ್ಟು ಜಮೀನಿದ್ದು 350ರಿಂದ 400 ಜನ ರೈತರಿದ್ದಾರೆ. ಇವರು, ಇದು ನಮ್ಮ ಜಾಗ ಎಂದು ಹಾಳೆ ಅಥವಾ ಭಾಗಗಳನ್ನು ಮಾಡಿ ತಮ್ಮ ಜಮೀನುಗಳನ್ನು ಗುರುತಿಸಿಕೊಂಡಿಲ್ಲ. ಬದಲಾಗಿ ಬೇಸಾಯದ ಸಮಯ ಬಂದಾಗ ಎಲ್ಲ ರೈತರು ಹಗ್ಗ ಹಿಡಿದು ಭಾಗ ಮಾಡಿಕೊಂಡು ಬಿತ್ತುತ್ತಾರೆ. ಬೆಳೆ ಬಂದಾಗಲೂ ಹಗ್ಗ ಹಿಡಿದು ಕಟಾವು ಮಾಡಲಾಗುತ್ತದೆ. ಬಿತ್ತುವಾಗ ಮತ್ತು ಕಟಾವು ಮಾಡುವಾಗ ಎಲ್ಲ ರೈತರು ಒಟ್ಟಿಗೆ ಭಾಗವಹಿಸಬೇಕು, ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ.

(ಮಾಣಿಕಟ್ಟ ಒಕ್ಕೂಟದ ರೈತರು ಚರ್ಚೆಯಲ್ಲಿ ತೊಡಗಿರುವುದು)

ಮಾಣಿಕಟ್ಟದ ಒಟ್ಟು ಗಜನಿ ಪ್ರದೇಶವು 48 ಹಸಗಿಯ ರೂಪದಲ್ಲಿದೆ. ಪ್ರತಿ ಹಸಗಿಯು ಕುಟುಂಬದ ವ್ಯಾಪ್ತಿಯಲ್ಲಿ ಹಂಚಿಕೆಯಾಗುತ್ತಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೂ ಈ ಆಸ್ತಿಯ ಮೇಲೆ ಸಮಾನವಾದ ಹಕ್ಕು ಇರುತ್ತದೆ. ಸರ್ವೆ ನಂಬರ್ 2ರಿಂದ 149 ಸರ್ವೆ ನಂಬರಿನವರೆಗೆ ಎಲ್ಲವೂ ಜಂಟಿ ಖಾತೆಯಲ್ಲಿರುತ್ತದೆ. ಎಲ್ಲ ಸರ್ಕಾರಿ ದಾಖಲೆಗಳಿಗೂ ಎಲ್ಲರೂ ಹಕ್ಕುದಾರರಾಗಿರುತ್ತಾರೆ. ಯಾರಾದರೂ ಒಬ್ಬರು ತಮ್ಮ ಜಮೀನನ್ನು ಮಾರಾಟ ಮಾಡಬೇಕೆಂದಿದ್ದರೆ ಸರ್ವ ಸದಸ್ಯರ ಒಪ್ಪಿಗೆ ಅಗತ್ಯವಾಗಿರುತ್ತದೆ.

ಇಲ್ಲಿ ಇಡೀ ಗಜನಿ ಪ್ರದೇಶವು ಸಾರ್ವತ್ರಿಕ ಸ್ವತ್ತಿದ್ದಂತೆ. ಕೃಷಿಗೆ ಸೀಮಿತವಾಗುವ ಪ್ರಮಾಣದ ಜಮೀನನ್ನು ಅಚ್ಚುಕಟ್ಟು ಪ್ರದೇಶದ ಎಲ್ಲರಿಗೂ ಅವರವರ ಸ್ವಂತ ಜಮೀನುಗಳ ಪ್ರಮಾಣಕ್ಕೆ ಅನುಗುಣವಾಗಿ ವಿಂಗಡಿಸಿ ಹಂಚಲಾಗುತ್ತದೆ. ಇದಕ್ಕೆ ಯಾರ ತಕರಾರು ಇರುವುದಿಲ್ಲ. ಹೀಗೆ ಫಲಾನುಭವಿಗಳು ತಮಗೆ ದಕ್ಕಿದ ಜಮೀನುಗಳಿಗೆ ತಾತ್ಕಾಲಿಕ ಬಳ್ಳಿಗಳನ್ನು ನೆಟ್ಟು ಗುರುತು ಮಾಡುತ್ತಾರೆ. ಆದರೆ ಮೂಲ ಒಡೆಯರನ್ನು ಬಿಟ್ಟು ಈ ಜಮೀನು ತುಂಡುಗಳ ಮೇಲೆ ಯಾರ ಒಡೆತನದ ಹಕ್ಕು ಸಾಧಿಸುವಂತಿಲ್ಲ. ಏನಿದ್ದರೂ ಆ ಅವಧಿಗೆ ಬೆಳೆ ಬೆಳೆದುಕೊಳ್ಳಲು ಮಾತ್ರ ಅವಕಾಶವಿರುತ್ತದೆ.

ಬಿತ್ತನೆ ಮಾಡುವುದಕ್ಕಿಂತ ಮೊದಲು ಒಕ್ಕೂಟದ ಸಭೆ ನಡೆಸಲಾಗುತ್ತದೆ. ಇಲ್ಲಿ ಬಿತ್ತನೆ ಮಾಡುವ ದಿನಾಂಕ, ರೈತರು ಭಾಗವಹಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಗಜನಿಯಲ್ಲಿ ಮುಂಗಾರು ಬೆಳೆಯಾಗಿ ಕಗ್ಗ ಭತ್ತ ಮತ್ತು ಹಿಂಗಾರು ಬೆಳೆಯಾಗಿ ಸೀಗಡಿಯನ್ನು ಬೆಳೆಯಲಾಗುತ್ತದೆ. ಕಗ್ಗ ಭತ್ತವನ್ನು ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಬಿತ್ತನೆ ಮಾಡಲಾಗುತ್ತದೆ. ಮೇ, ಜೂನ್ ತಿಂಗಳಿನಲ್ಲಿ ಗಜನಿಯಲ್ಲಿ 35 ಡಿಗ್ರಿಗಿಂತಲೂ ಹೆಚ್ಚಿನ ಉಪ್ಪಿನಾಂಶ ಹಾಗೂ 9ರಷ್ಟು ಪಿ.ಎಚ್ ಇರುತ್ತದೆ. ಉಪ್ಪಿನಾಂಶ ಹೆಚ್ಚಾಗಿದ್ದಾಗ ಕಗ್ಗ ಭತ್ತವನ್ನು ಬಿತ್ತನೆ ಮಾಡುವುದಿಲ್ಲ. ಮೃಗಶಿರ ಮಳೆ ಬಿದ್ದನಂತರ ನದಿಯ ಒತ್ತಡ ಹೆಚ್ಚಾದಾಗ ಗಜನಿಯಲ್ಲಿದ್ದ ಉಪ್ಪಿನಾಂಶ ಕೊಚ್ಚಿಹೋಗುತ್ತದೆ. ಗಜನಿಯಲ್ಲಿ ‘0’ ಡಿಗ್ರಿಗಿಂತ ಉಪಿನಾಂಶ ಮತ್ತು ಪಿ.ಎಚ್ 1 ರಿಂದ 2ರಷ್ಟಿದ್ದಾಗ ಕಗ್ಗ ಭತ್ತದ ಬಿತ್ತನೆ ಆರಂಭಗೊಳ್ಳುತ್ತದೆ.

ಗಜನಿಯಲ್ಲಿನ ಕೃಷಿಗೆ ಬೇಕು ಅನುಭವ

ಕಗ್ಗ ಭತ್ತ ಬೆಳೆಯುವುದೆಂದರೆ ಅದು ಸಾಮೂಹಿಕ ಕೆಲಸ, ಎಲ್ಲರೂ ಒಂದಾದಾಗ ಮಾತ್ರ ಕಗ್ಗ ಬೆಳೆಯಲು ಸಾಧ್ಯ. ಕಗ್ಗವನ್ನು ಮೊಳಕೆ ತರಿಸುವುದು, ಮಣ್ಣಿನ ಹದಕ್ಕೆ ತಕ್ಕಂತೆ ಬಿತ್ತಲು ಮಣ್ಣಿನ ಬಗ್ಗೆ ಮತ್ತು ನೀರಿನ ಉಬ್ಬರ-ಇಳಿತದ ಬಗ್ಗೆ ತಿಳಿವಳಿಕೆ ಇರಬೇಕು. ಬಿತ್ತನೆಯಂತೆ ಭತ್ತದ ಕೊಯ್ಲು ಸಹ ವಿಶಿಷ್ಟವಾದದ್ದು. ಕಟಾವಿನ ಸಮಯದಲ್ಲಿ ಗಜನಿ ಭೂಮಿಯ ಸುತ್ತಲು ನೀರು ಆವರಿಸಿಕೊಂಡಿರುತ್ತದೆ. ಸೊಂಟ ಮಟ್ಟದ ನೀರಿನಲ್ಲಿಯೇ ಕೊಯ್ಲು ಮಾಡಬೇಕಾಗುತ್ತದೆ. ಕೇವಲ ಭತ್ತದ ತೆನೆಗಳನ್ನು ಕೊಯ್ದು ಅದನ್ನು ಸಣ್ಣ ಹೊರೆಗಳಾಗಿ ಕಟ್ಟಿ ದೋಣಿಯ ಮೂಲಕ ಭತ್ತದ ಕಣಗಳಿಗೆ ಒಯ್ಯಲಾಗುತ್ತದೆ. ಕೆಸರು ತುಂಬಿದ ಗದ್ದೆಯಲ್ಲಿ ಕೊಯ್ಲು ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಣಕ್ಕೆ ಸಾಗಿಸುವುದು ಸಹ ಅಷ್ಟೇ ಕ್ಲಿಷ್ಟಕರ. ಆದರೂ ಮಾಣಿಕಟ್ಟ ಗಜನಿಯ ಒಕ್ಕೂಟದ ರೈತರು ಮಾಣಿಕ್ಯದಂಥ ಗುಣವುಳ್ಳ ಕಗ್ಗ ಭತ್ತ ಬೆಳೆಯುವುದು ಮಾತ್ರ ನಿಲ್ಲಿಸಿಲ್ಲ. ಕಗ್ಗ ಭತ್ತವು ನೆರೆ ಬಂದರೂ ಕೊಳೆಯದೆ, ಮೊಳಕೆ ಹಾಳಾಗದಂತೆ ಇದ್ದು ನೆರೆ ಇಳಿದ ನಂತರ ಸದೃಢವಾಗಿ ಕ್ಷಾರಯುಕ್ತ ಜಮೀನಿನಲ್ಲಿ ಅರಳಬಲ್ಲ ಶಕ್ತಿ ಹೊಂದಿರುವ ಕಗ್ಗ ನಮ್ಮ ಪೂರ್ವಜರು ಅಭಿವೃದ್ಧಿಪಡಿಸಿದ ಅಪರೂಪದ ವಿಶಿಷ್ಟ ಭತ್ತದ ತಳಿ. ಕಗ್ಗ ಭತ್ತಕ್ಕೆ ಯಾವುದೇ ರೀತಿಯ ರಾಸಾಯನಿಕ ಅಥವಾ ಸಾವಯದ ಗೊಬ್ಬರ ಬೇಡ. ಪ್ರವಾಹದೊಂದಿಗೆ ಉಕ್ಕಿಬರುವ ಮಣ್ಣಿನಲ್ಲಿ ಸಿಗುವ ಪೋಷಕಾಂಶದಿಂದ ಕಗ್ಗ ಭತ್ತವು ಸಮೃದ್ಧವಾಗಿ ಬೆಳೆಯುತ್ತದೆ. ರೈತರು ಕಗ್ಗವನ್ನು ಬಿತ್ತನೆ ಮಾಡಿದ ನಂತರ ಕಟಾವಿನ ಸಮಯದವರೆಗೂ ಗಜನಿಗೆ ಬರುವ ಅವಶ್ಯಕತೆಯೇ ಇರುವುದಿಲ್ಲ. ಇಲ್ಲಿ ಕಳೆ ಕೀಳುವ ಹಾಗಿಲ್ಲ, ಔಷಧಿ ಹಾಕುವ ಹಾಗಿಲ್ಲ, ನೀರು ಹಾಯಿಸುವ ಹಾಗಿಲ್ಲ. ನಿರ್ವಹಣೆಯೇ ಇಲ್ಲದ ವಿಶೇಷ ತಳಿ ಈ ಕಗ್ಗ. ಈ ಭತ್ತವು ಹೊರಗಿನ ಯಾವುದೇ ಆಹಾರ ಹಾಗೂ ಗೊಬ್ಬರವಿಲ್ಲದೆಯೇ ಫಸಲನ್ನು ನೀಡುವ ಪ್ರಾಕೃತಿಕ ತಳಿ. ಈ ಕಾಡುಭತ್ತ ಕಗ್ಗ ನಾಲ್ಕೂವರೆ ತಿಂಗಳ ಬೆಳೆ. ಇಳುವರಿ ಕಡಿಮೆಯಾದರೂ ಯಾವುದೇ ಖರ್ಚು ಇಲ್ಲದೆ ಬೆಳೆ ಬರುವುದರಿಂದ ಇದು ಲಾಭದಾಯಕವೇ. ಜೊತೆಗೆ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಈ ಭತ್ತಕ್ಕೆ ಹೆಚ್ಚಿನ ಬೇಡಿಕೆ. ಬ್ರಿಟಿಷರು ಕಗ್ಗ ಭತ್ತದ ಊಟವನ್ನು ಇಷ್ಟಪಡುತ್ತಿದ್ದರಂತೆ. ಜೊತೆಗೆ ಈಗಲೂ ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಸಮುದಾಯದ ಸಹಭಾಗಿತ್ವ: ಮಾಣಿಕಟ್ಟಾದ ರೈತರು ಕಗ್ಗ ಭತ್ತ ಬೆಳೆದ ನಂತರ ಸಹಕಾರಿ ಪದ್ಧತಿಯಲ್ಲಿಯೇ ಹಿಂಗಾರು ಬೆಳೆಯಾಗಿ ಸೀಗಡಿ ಮತ್ತು ಮೀನುಗಳನ್ನು ಬೆಳೆಯುತ್ತಾರೆ. ಗಜನಿಯಲ್ಲಿ ನೋಗಲ್ಲಾ, ಕಾಗಳಸಿ, ಮಂಡ್ಲಿ, ಬೈಗೆ, ಮಡ್ಲೆ, ಹೂವಿನ ಸೆಳಕ, ಕೊಕ್ಕರೆ, ಕುರಡೆ, ಕೆಂಸ, ಯೇರಿ, ಪೇಡಿ, ನೆಪ್ಪೆ, ಹುಲಕಾ, ಒಣಕಾಂಡಿ, ಹೀಗೆ ವಿವಿಧ ರೀತಿ ಮೀನು ಸೀಗಡಿಯನ್ನು ಸಹಕಾರಿ ಪದ್ಧತಿಯಲ್ಲೇ ಬೆಳೆಸಲಾಗುತ್ತದೆ. ಈ ಸೀಗಡಿ ಮೀನು ಮಾರಾಟದಿಂದ ಬಂದ ಹಣವನ್ನು ಖಾರ್ಲ್ಯಾಂಡ್, ಬದುಗಳ ರಿಪೇರಿಗೆ ಬಳಸಿಕೊಳ್ಳುತ್ತಾರೆ.

(ಉಪ್ಪು ನೀರಿನ ತಡೆಗೋಡೆಗಳು, ಬದುಗಳು ಶಿಥಿಲಾವಸ್ಥೆಯಲ್ಲಿರುವುದು)

ಕಗ್ಗ ಭತ್ತವಿಲ್ಲದೆ ಒಕ್ಕೂಟ ಕೃಷಿ ಇಲ್ಲ... !

ಕ್ಷಾರಯುಕ್ತವಾದ ಗಜನಿ ಪ್ರದೇಶದಲ್ಲಿ ಕಗ್ಗ ಭತ್ತವನ್ನು ಬಿಟ್ಟು ಬೇರೆ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಏಕೆಂದರೆ ಈ ಕ್ಷಾರಯುಕ್ತ ಭೂಮಿಯಲ್ಲಿನ ನೀರು ಮತ್ತು ಮಣ್ಣಿನ ಗುಣ ಬೇರೆ ಬೆಳೆಗಳಿಗೆ ಪ್ರೋತ್ಸಾಹಿಸುವುದಿಲ್ಲ. ಆದರೆ ಕಗ್ಗ ಭತ್ತದ ಬೆಳೆಗೂ ಈಗ ಕಂಟಕ ಬಂದೊದಗಿದೆ. ಕಾರಣ ಸರ್ಕಾರ 35 ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಖಾರ್ಲ್ಯಾಂಡ್ ಕಟ್ಟಡಗಳು, ಬದುಗಳು, ಅವಸಾನದ ಅಂಚಿನಲ್ಲಿವೆ. ಹೆಚ್ಚಿದ ನೆರೆ ಹಾವಳಿಯಿಂದಾಗಿ ಭೂಮಿಗೆ ಹಾಕಿದ ಬೀಜವೂ ಸಿಗದೆ ಕೊಚ್ಚಿಹೋಗುತ್ತಿವೆ. ಇದರಿಂದಾಗಿ ಕಗ್ಗ ಭತ್ತ ಬೆಳೆಯುವುದು ಸಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 400–500 ಎಕರೆಗೆ ಬೇಕಾಗುವಷ್ಟು ಬಿತ್ತನೆ ಬೀಜವು ರೈತರಲ್ಲಿ ಈಗ ಇಲ್ಲವಾಗಿದೆ. ಎಲ್ಲಾ ರೈತರು ಸಮಾನ ಮನಸ್ಕರಾಗಿ ಮಾಡುತ್ತಿದ್ದ ಸಹಕಾರಿ ಪದ್ಧತಿಯ ಸಾಂಪ್ರದಾಯಿಕ ಕೃಷಿಗೂ ಇದರಿಂದ ಧಕ್ಕೆ ಬಂದಿದೆ. ಆದರೂ ಮಾಣಿಕಟ್ಟ ರೈತರು ಒಕ್ಕೂಟ ವ್ಯವಸ್ಥೆ ಹಾಗೂ ಕಗ್ಗ ಭತ್ತದ ನಂಟನ್ನು ಕಳೆದುಕೊಂಡಿಲ್ಲ. ಈಗಲೂ ಎಲ್ಲ ರೈತರು ಒಂದಾಗಿ ಬದುಗಳು ಹಾಗೂ ಕಟ್ಟಡಗಳನ್ನು ಸರಿಪಡಿಸಿಕೊಳ್ಳುತ್ತಾ ಕಗ್ಗ ಭತ್ತವನ್ನು ಉಳಿಸಿಕೊಳ್ಳುವತ್ತ ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರ ಮುಂದಾಗಿ ಉಪ್ಪುನೀರಿನ ತಡೆಗೋಡೆಗಳನ್ನ ನಿರ್ಮಾಣ ಮಾಡಿಕೊಡುವ ಮೂಲಕ ಕ್ಷಾರ ಸಂಜೀವಿನಿ ಕಗ್ಗ ಭತ್ತ ಮತ್ತು ಗ್ರಾಮಸ್ಥರ ಒಕ್ಕೂಟ ಕೃಷಿ ಪದ್ಧತಿಯನ್ನು ಉಳಿಸಬೇಕಿದೆ.

ಬರಡಾಗುತ್ತಿದೆ ಗಜನಿ ಪ್ರದೇಶ

ಉಪ್ಪು ನೀರಿನ ತಡೆಗೋಡೆಗಳು, ಬದುಗಳ ಶಿಥಿಲಾವಸ್ಥೆ, ಕೋಡಿಯಲ್ಲಿ ತುಂಬಿರುವ ಹೂಳು, ಏರಿಗೆ ಪಿಚ್ಚಿಂಗ್ ಇಲ್ಲದಿರುವುದು, ಜಂತ್ರಡಿ (ಗೇಟ್)ಗಳು ಹಾಳಾಗಿರುವುದರಿಂದ ಉಪ್ಪು ನೀರು ಹಾಗೂ ಹೆಚ್ಚಿದ ನೆರೆಹಾವಳಿಯಿಂದಾಗಿ ನೀರು ಗಜನಿ ಪ್ರದೇಶಕ್ಕೆ ನುಗ್ಗಿ ಇಡೀ ಪ್ರದೇಶವೇ ಹಾಳಾಗುತ್ತಿದೆ. ಇದರಿಂದಾಗಿ ಇಲ್ಲಿ ಬೆಳೆಯಲಾಗುತ್ತಿದ್ದ ಕಗ್ಗ ಭತ್ತಕ್ಕೂ ಕಂಟಕ ಬಂದಿದೆ. ಜೊತೆಗೆ ಸೀಗಡಿಯನ್ನು ಸಹ ಬೆಳೆಯಲಾಗುತ್ತಿಲ್ಲ. ಈಗಾಗಲೇ ಯಾವುದೇ ಬೆಳೆ ಬೆಳೆಯಲಾಗದೆ ತಾಲ್ಲೂಕಿನ ಮಾಸೂರು, ತುಮಲಿಕಟ್ಟೆ, ಕಲ್ಕಟ್ಟ, ಕಾಗಲಗಜನಿ, ಬರಗಿಗಜನಿ, ಕಿಮ್ಮಾನಿ, ಮಿಡಲಗಜನಿಯ ಪ್ರದೇಶವು ಬರಡಾಗಿ ಹೋಗಿದೆ. ಆದರೆ ಮಾಣಿಕಟ್ಟದ ರೈತರ ಒಗ್ಗಟ್ಟಿನ ಮಂತ್ರದಿಂದಾಗಿ ಅಲ್ಪಸ್ವಲ್ಪ ಭೂಮಿ ಉಳಿದಿದೆ.

ಪ್ರತಿ ವರ್ಷವು ಕಗ್ಗ ತಳಿಯ ಬೀಜವನ್ನು ಉಳಿಸಿಕೊಳ್ಳಲು ನಾವು ಪ್ರಯತ್ನ ನಡೆಸುತ್ತಲೇ ಇದ್ದೇವೆ. ಈ ತಳಿ ನಾಶಗೊಂಡರೆ ಮುಂದಿನ ದಿನಗಳಲ್ಲಿ ಇಂತಹ ತಳಿ ನಮಗೆ ಸಿಗುವುದಿಲ್ಲ ಎನ್ನುತ್ತಾರೆ ಮಾಣಿಕಟ್ಟ ಗ್ರಾಮದ ರೈತ ನಾರಾಯಣ ಪಟಗಾರ್.

(ಸೊಂಟ ಮಟ್ಟದ ನೀರಿನಲ್ಲಿಯೇ ಕಗ್ಗ ಭತ್ತದ ಕೊಯ್ಲು ಮಾಡುತ್ತಿರುವುದು)

ಪೇಟೆಂಟ್ಗಾಗಿ ಹೊಂಚು

ಇಂದಿನ ವಾತಾವರಣ ಬದಲಾವಣೆಯಿಂದಾಗಿ ಕ್ಷಾರಯುಕ್ತ ಭೂಮಿಯ ಪ್ರದೇಶವು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರದೇಶಗಳಲ್ಲಿ ಸೂಕ್ತವಾಗಿ ಬೆಳೆಯುವ ತಳಿಗಳ ಅವಶ್ಯಕತೆಯು ಹೆಚ್ಚಲಿದೆ.

ಹೀಗಾಗಿ ಬಹುರಾಷ್ಟ್ರೀಯ ಕಂಪೆನಿಗಳು ಈ ತಳಿಯನ್ನು ಹುಡುಕಿ ತಮ್ಮದಾಗಿಸಿಕೊಳ್ಳಲು (ಪೇಟೆಂಟ್ ಹಕ್ಕು) ಪ್ರಯತ್ನಿಸುತ್ತಿವೆ. ಕ್ಷಾರಯುಕ್ತ ನೀರಿನಲ್ಲಿ ಬೆಳೆಯ ಬಹುದಾದ ಕುಲಾಂತರ ತಳಿಗಳನ್ನೂ ಸೃಷ್ಟಿಸುವ ಕಾರ್ಯದಲ್ಲಿ ಕೊಟ್ಯಂತರ ಡಾಲರ್ ಬಂಡವಾಳ ಹಾಕಿ ನೂರು ಪಟ್ಟು ಹಣಗಳಿಸಲು ಹೊರಟಿವೆ. ಆದರೆ ಕೋಟ್ಯಂತರ ಬಂಡವಾಳ ಬೇಡದ ವಾತಾವರಣ ಬದಲಾವಣೆಗೆ ಉತ್ತರ ನೀಡಬಲ್ಲ ಮುತ್ತಿನಂಥ ಕಗ್ಗ ಭತ್ತ ಈಗಾಗಲೇ ಮಾಣಿಕಟ್ಟ ಗ್ರಾಮದಲ್ಲಿದೆ. ನಿರ್ಲಕ್ಷಿಸದೆ ಇಂತಹ ತಳಿಗಳನ್ನು ಉಳಿಸಬೇಕಿದೆ ಅಷ್ಟೆ.

ನಮ್ಮ ಗಜನಿ ಪ್ರದೇಶದಲ್ಲಿ ಒಕ್ಕೂಟದ ಕೃಷಿ ಮಾಡುತ್ತಿರುವುದರಿಂದ ಗ್ರಾಮದ ಎಲ್ಲಾ ರೈತರಲ್ಲಿ ಒಗ್ಗಟ್ಟು ಮೂಡಿದೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವಾಗಬೇಕಾದರೂ ರಾಜಕೀಯ ಬಿಟ್ಟು ಎಲ್ಲರೂ ಒಂದಾಗುತ್ತೇವೆ. ನಾವು ಸಹಕಾರಿ ಪದ್ಧತಿಯಲ್ಲಿ ಕೃಷಿ ಮಾಡುವುದರಿಂದ ಜಮೀನುಗಳು ಭಾಗ ಹಾಗೂ ತುಂಡುಗಳಾಗಿ ಹಂಚಿಹೋಗದೆ ಅಖಂಡವಾಗಿದ್ದು ಭೂಮಿ ವ್ಯಯವಾಗುವುದು ತಪ್ಪಿದೆ. ಇದರಿಂದ ಬೆಳೆಯು ಅಧಿಕವಾಗುತ್ತದೆ. ಇಂದು ಕೃಷಿಕಾರ್ಮಿಕರ ಸಮಸ್ಯೆ ಹೆಚ್ಚಾಗಿರುವುದರಿಂದ ನಾವುಗಳು ಜಂಟಿಯಾಗಿ ಕೃಷಿ ಮಾಡುವುದರಿಂದ ಕೂಲಿ ಕಾರ್ಮಿಕರ ಸಮಸ್ಯೆ ನಮಗೆ ತಲೆದೋರುತ್ತಿಲ್ಲ.

-ಸಿ.ಆರ್.ನಾಯ್ಕ್, ರೈತ ಒಕ್ಕೂಟದ ಅಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.