ನೇರಳೆ ಬಣ್ಣದ ಚೌಕಳಿ ಶರ್ಟ್, ಟೊಪ್ಪಿ ತೊಟ್ಟಿದ್ದ ಹಿರಿಯರೊಬ್ಬರು ಬೆಂಕಿಯಲ್ಲಿ ತಾಮ್ರದ ಪಾತ್ರೆ ತಳ ಕಾಯಿಸುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಕುಳಿತ ಬಿಳಿ ಷರ್ಟ್ ಧರಿಸಿದ್ದ ಮತ್ತೊಬ್ಬ ಹಿರಿಯರು ಬ್ಲೋಯೆರ್ನಲ್ಲಿ ಗಾಳಿ ಹಾಕುತ್ತಿದ್ದರು. ಇನ್ನೊಂದು ಕಡೆ ಸ್ವಾಮೀಜಿಯವರು ಕಾಯ್ದ ಪಾತ್ರೆಯನ್ನು ಇಕ್ಕಳದಲ್ಲಿ ಹಿಡಿದು ಪರಿಶೀಲಿಸಿದರು..!

ಉಡುಪಿಯ ಅದಮಾರು ಮಠದ ಆಶ್ರಯದಲ್ಲಿ ಆನಂದ ಸಮಿತಿ ಸಹಯೋಗದಲ್ಲಿ ಇತ್ತೀಚೆಗೆ ಮೂರು ದಿನಗಳ ಕಾಲ ನಡೆದ ಪುರಾತನ ಪಾಕ ಪಾತ್ರೆಗಳ ಪರಿಚಯದ ಕಾರ್ಯಾಗಾರದಲ್ಲಿ ಕಂಡು ಬಂದ ದೃಶ್ಯವಿದು. ಪ್ರತಿ ‘ಪರ್ಯಾಯ’ದ ಸಂದರ್ಭದಲ್ಲಿ ಹೀಗೆ ಪಾತ್ರೆಗಳನ್ನು ಪುನಶ್ಚೇತನಗೊಳಿಸುವುದು ವಾಡಿಕೆ. ಈ ಮೂಲಕ ಪಾಕ ಪಾತ್ರೆಗಳನ್ನು ಗುರುತಿಸುವುದು ಮತ್ತು ಅವುಗಳ ತಯಾರಿಕೆಯ ಕೌಶಲವನ್ನು ಪರಿಚಯಿಸುವುದು ಕಾರ್ಯಾಗಾರದ ಉದ್ದೇಶ.

ಉಡುಪಿಯ ಅಷ್ಟಮಠಗಳಲ್ಲಿ ಇನ್ನೂ ಪುರಾತನ ಪಾತ್ರೆಗಳೇ ಬಳಕೆಯಲ್ಲಿವೆ. ಉಡುಪಿಯ ಮಟ್ಟಿಗೆ ಪರ್ಯಾಯ ಎಂಬ ದೊಡ್ಡ ಉತ್ಸವದ ಸಂದರ್ಭದಲ್ಲಿ ಎಲ್ಲ ಪಾತ್ರೆಗಳನ್ನೂ ಉಪಯೋಗಿಸುತ್ತಾರೆ. ಶ್ರೀಕೃಷ್ಣದೇವರಿಗೆ ತಾಮ್ರದ ಪಾತ್ರೆಯಲ್ಲಿಯೇ ನೈವೇದ್ಯ ನೀಡಬೇಕೆಂಬ ನಂಬಿಕೆಯಿಂದಾಗಿ ಎಲ್ಲ ಮಠಗಳಲ್ಲೂ ತಾಮ್ರ, ಕಂಚು, ಹಿತ್ತಾಳೆಯಂತಹ ಲೋಹದ ಪಾತ್ರೆಗಳನ್ನು ಬಳಸುತ್ತಿದ್ದಾರೆ. ಪ್ರತಿಯೊಂದು ಪಾತ್ರೆಯ ಹಿಂದೆಯೂ ಒಂದೊಂದು ಕತೆ ಇದೆ. ಪುರಾತನ ಕಾಲದಿಂದ ಬಳುವಳಿಯಾಗಿ ಬಂದ ಪಾತ್ರೆಗಳು ಅಂದಿನ ಜೀವನಶೈಲಿಯನ್ನೂ ವಿವರಿಸಬಲ್ಲವು’ ಎಂದು ಪಾಕಶಾಸ್ತ್ರಜ್ಞ ವಿಷ್ಣುಮೂರ್ತಿ ಭಟ್ ಹೇಳುತ್ತಾರೆ.

ಶ್ರೀಮಠದಲ್ಲಿನ ಈ ಪಾತ್ರೆಗಳನ್ನು ತಯಾರಿಸುವವರು ಕ್ರಿಶ್ಚಿಯನ್ ಸಮುದಾಯದವರು, ಕಲಾಯಿಯಂತಹ ದುರಸ್ತಿ ಕಾರ್ಯ ಮಾಡಿಕೊಡುವವರು ಮುಸ್ಲಿಂ ಸಮುದಾಯದವರು ಎಂಬುದು ವಿಶೇಷ. 70ರ ಹರೆಯದ ಅಂಬಾಗಿಲಿನ ಪೀಟರ್ ಡಿಸೋಜ ಮೂವತ್ತು ವರ್ಷಗಳಿಂದ ಶ್ರೀಮಠದ ಪಾತ್ರೆಗಳ ತಯಾರಿಕೆ ಮತ್ತು ದುರಸ್ತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಪುರಾಣ ಪಾತ್ರೆಗಳ ಕಾರ್ಯಾಗಾರ ಸಂಯೋಜಿಸಿದವರು ಪುರುಷೋತ್ತಮ ಅಡ್ವಯರಾದರೆ, ಸಂಪನ್ಮೂಲ ವ್ಯಕ್ತಿಯಾಗಿದ್ದರು ಪೀಟರ್ ಡಿಸೋಜ. ಅವರೊಂದಿಗೆ ಸಿಪ್ರಿಯನ್ ಡಿಸಿಲ್ವ ಕೂಡ ಭಾಗವಹಿಸಿದ್ದರು.

ಪೀಟರ್ ಅವರು ರಾಮಕುಂಡಲ, ಲಕ್ಷ್ಮಣಕುಂಡಲ ಎಂಬ ಬೃಹತ್ ಕೊಪ್ಪರಿಗೆಗಳ ತಯಾರಿಕೆ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುತ್ತಾರೆ. ‘ತುಪ್ಪ ಬಡಿಸುವ ಮಿಳ್ಳೆ ತಯಾರಿಸುವಾಗ ಅದರ ಹಿಡಿಯನ್ನು ತುಸು ಸುಂದರವಾಗಿಸಬೇಕು. ಪಾತ್ರೆಗಳು ತಳ ಹಿಡಿಯದಂತೆ ಇರಬೇಕಾದರೆ ಅವುಗಳ ರಚನೆಯ ವಿಧಾನದಲ್ಲಿಯೇ ಜಾಗರೂಕತೆ ವಹಿಸಬೇಕು’ ಎಂದು ಪಾತ್ರೆ ಜತೆಗಿನ ಪಯಣದ ಅನುಭವ ತೆರೆದಿಡುತ್ತಾರೆ. ದೊಡ್ಡ ‘ಕಟಾರ’ದ ಹಿಡಿಗಳನ್ನು ಅಳವಡಿಸುವ ಚಾಕಚಕ್ಯತೆ ಎಲ್ಲರಿಗೂ ಸಿದ್ಧಿಸುವುದಿಲ್ಲ’ ಎನ್ನುವ ಪೀಟರ್, ‘ಪಂಕ್ತಿಯಲ್ಲಿ ಎರಡು ಸಾಲಿನಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ಬಡಿಸಲು ಬಳಸುವ ಚಿಕ್ಕ ಕಟಾರಗಳ ಅಂದಾಜು ಮಾಡುವುದು ಕೂಡ ಅನುಭವದಿಂದಲೇ ಬರುತ್ತದೆ’ ಎಂದು ಉಲ್ಲೇಖಿಸುವುದನ್ನು ಮರೆಯುವುದಿಲ್ಲ.

ಒಂದು ಚೆರಿಗೆಯಲ್ಲಿ ಎಷ್ಟು ಮುಡಿ ಅಕ್ಕಿಯ ಅನ್ನ ಮಾಡಬಹುದು, 5 ಮುಡಿ ಮತ್ತು 10 ಮುಡಿ ಅಕ್ಕಿಯ ಅನ್ನ ಮಾಡಬಲ್ಲ ಬೃಹತ್ ಕೊಪ್ಪರಿಗೆಯಲ್ಲಿ ಹೇಗೆ ಅನ್ನ ತಯಾರಿಸಬಹುದು ಎಂಬ ಮಾಹಿತಿ ಪೀಟರ್ಗಿದೆ. ಮಾತ್ರವಲ್ಲ, ‘ತಾಮ್ರದ ಭಾರೀ ದೊಡ್ಡ ಶೀಟುಗಳನ್ನು ಬಗ್ಗಿಸಿ ಪಾತ್ರೆ ಮಾಡಲು ನಾಲ್ಕು ಮಂದಿ ಕೆಲಸಗಾರರಿಗೆ ಒಂದು ವಾರ ಬೇಕಾಗುತ್ತದೆ’ ಎಂಬ ಪಾತ್ರೆಗಳ ಎಂಜಿನಿಯರಿಂಗ್ ಕುರಿತೂ ತುಂಬಾ ನಿಖರವಾಗಿ ಮಾತನಾಡುತ್ತಾರೆ.

‘ಅಣ್ಣನ ಜೊತೆಗೆ ನಾನು ಹತ್ತಾರು ವರ್ಷಗಳ ಕಾಲ ಕೆಲಸ ಮಾಡುತ್ತ ಪಾತ್ರೆ ರಚನೆಯ ಕೆಲಸ ಕಲಿತಿದ್ದೇನೆ. ಇದು ಕಷ್ಟದ ಕೆಲಸ. ಬೆಂಕಿ, ಬೂದಿಗಳ ನಡುವೆ ಕೆಲಸ ಮಾಡಲು ದೈಹಿಕ ಶಕ್ತಿಯೂ ಬೇಕು. ತಾಳ್ಮೆಯೂ ಬೇಕು. ‘ಬೆಸುಗೆ’(joint) ಸರಿಯಾಗಿ ನಿಲ್ಲದೇ ಇದ್ದಲ್ಲಿ ಪಾತ್ರೆ ತಯಾರು ಮಾಡುವವರ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಆದ್ದರಿಂದ ಬಹಳ ಶ್ರದ್ಧೆ ಇದ್ದರೆ ಮಾತ್ರ ಈ ಕೌಶಲ ಸಿದ್ಧಿಯಾಗುತ್ತದೆ’ ಎನ್ನುತ್ತಾರೆ ಸಿಪ್ರಿಯನ್ ಡಿಸಿಲ್ವ.

ಲೋಹದ ಪಾತ್ರೆಗಳ ತಯಾರಿಕೆ ಮತ್ತು ಬಳಕೆ ಬಗ್ಗೆ ಜ್ಞಾನ ಬಲ್ಲವರೇ ಕಡಿಮೆಯಾಗುತ್ತಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಡಿಸಿಲ್ವ ಸಹೋದದರು ಆತಂಕ ವ್ಯಕ್ತಪಡಿಸುತ್ತಾರೆ. ಹಾಗೆಯೇ, ‘ಈ ವಿದ್ಯೆಯನ್ನು ಮಕ್ಕಳಿಗೆ ಕಲಿಸಿಲ್ಲ. ಇದು ಬಹಳ ಕಷ್ಟದ ವಿದ್ಯೆ. ಆದರೆ ಇತ್ತೀಚೆಗೆ ಬೇಡಿಕೆ ತುಂಬಾ ಇದೆ’ ಎಂದೂ ಹೇಳುತ್ತಾರೆ.

ಆಯುರ್ವೇದ ವೈದ್ಯ ಡಾ. ಶ್ರೀಧರ ಬಾಯಿರಿ ಅವರ ಪ್ರಕಾರ ‘ಹಿಂದಿನವರು ಆಹಾರವನ್ನೇ ಔಷಧಿ ಎಂದು ಪರಿಭಾವಿಸಿ ಸತ್ವಯುತ ಆಹಾರ ಸೇವನೆ ಮೂಲಕ ರೋಗಗಳಿಂದ ದೂರವಿದ್ದರು. ಅದಕ್ಕಾಗಿ ಆಹಾರ ಸಿದ್ಧಪಡಿಸಲು ನಿಗದಿತ ಪಾತ್ರೆಗಳನ್ನು ಬಳಸುತ್ತಿದ್ದರು’.

ಈ ಪಾತ್ರೆಯ ಜ್ಞಾನ ಬಲ್ಲವರು. ಆದರೆ ಇತ್ತೀಚೆಗೆ ಪಾತ್ರೆ ಜ್ಞಾನಿಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಹೀಗಾಗಿ ಪಾತ್ರೆಗಳ ರಚನೆ ದುರಸ್ತಿಯ ಬಗ್ಗೆ ಸಂಸ್ಥೆಯನ್ನು ರೂಪಿಸುವ ಉದ್ದೇಶ ಅದಮಾರು ಮಠಕ್ಕೆ ಇದೆ. ಈ ಕೌಶಲವನ್ನು ಬಲ್ಲ ಕೆಲವೇ ಜನರು ನಮ್ಮ ನಡುವೆ ಇದ್ದಾರೆ. ಈ ಜ್ಞಾನವನ್ನು ಹೊಸತಲೆಮಾರಿಗೆ ತಿಳಿಸಬೇಕು ಎನ್ನುವುದು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಅವರ ಅಭಿಪ್ರಾಯ.

ಕಲಾಯಿ ಕೌಶಲ ಬಲ್ಲ ಇಸ್ಮಾಯಿಲ್ ಕಾಕ

ಉಡುಪಿ ಮಠದ ಪಾತ್ರೆಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಉಡುಪಿ ಕಂಬಳ ಕಟ್ಟೆಯ ನಿವಾಸಿ ಕೆ. ಇಸ್ಮಾಯಿಲ್ ಅವರಿಗೆ ಈಗ 75 ವರ್ಷ. ಪಾತ್ರೆಗಳು, ದೇವರ ಪೂಜಾಸಾಮಗ್ರಿಗಳ ಕೆಲಸಗಳನ್ನು ಅವರು ಬಲ್ಲರು. ಕಂಚಿನ ಪಾತ್ರೆಗಳಾದರೆ ಕಲಾಯಿ ಹಾಕುವ ಪದ್ಧತಿ ಇಲ್ಲ. ‘ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಉಡುಪಿ ಮಾತ್ರವಲ್ಲ ಕರಾವಳಿಯ ಹಲವಾರು ದೇವಸ್ಥಾನಗಳಿಂದ ವರ್ಷಂಪ್ರತಿ ನನ್ನನ್ನು ಕರೆಯುತ್ತಾರೆ. ಕೆಲವೊಮ್ಮೆ ಪಾತ್ರೆಗಳನ್ನು ಪಿಕಪ್ನಲ್ಲಿ ಹೇರಿಕೊಂಡು ಮನೆಗೆ ತಂದು ಕೆಲಸ ಮಾಡುತ್ತೇನೆ. ಇಸ್ಮಾಯಿಲ್ ಕಾಕ ಒಳ್ಳೆ ಕೆಲಸ ಮಾಡ್ತಾರೆ ಎಂಬ ನಂಬಿಕೆಯ ಮೇಲೆ, ದೇವಸ್ಥಾನದಲ್ಲಿ, ಬ್ರಾಹ್ಮಣರ ಮನೆಯಲ್ಲಿ ಇರುವ ಪಾತ್ರೆಗಳ ಕೆಲಸವನ್ನು ಶಂಕೆಯಿಲ್ಲದೆ ಕೊಡುತ್ತಾರೆ. ಕೈ ತುಂಬಾ ಕೆಲಸ ಇದೆ’ ಎನ್ನುತ್ತಾರೆ.

‘ಒಂಬತ್ತು ಮಂದಿ ಮಕ್ಕಳಿಗೆ ವಿದ್ಯೆ ನೀಡಿ ಸಲಹುವಷ್ಟು ಸಂಪಾದನೆ ಇದೇ ಉದ್ಯೋಗದ ಮೂಲಕ ಸಾಧ್ಯವಾಗಿದೆ. ಆದರೆ ಬಿಸಿಯ ಬಳಿ ಮಾಡುವ ಕೆಲಸ ಮಕ್ಕಳಿಗೆ ಇಷ್ಟವಾಗಲಿಲ್ಲ. ನನ್ನದೇನೂ ಒತ್ತಾಯವಿಲ್ಲ. ಇನ್ನೇನು ಕಾರ್ತಿಕ ಮಾಸ ಮುಗಿಯುತ್ತ ಬಂತಲ್ಲ. ಜಾತ್ರೆ ಕಾಲ ಹತ್ತಿರಾಗುತ್ತಿರುವಾಗ ದೇವಸ್ಥಾನಗಳ ಕೆಲಸಕ್ಕೆ ಸಿದ್ಧವಾಗುತ್ತಿದ್ದೇನೆ’ ಎನ್ನುವ ಅವರ ಉತ್ಸಾಹ ಎಂಥವರನ್ನೂ ಅಚ್ಚರಿಗೊಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.