ಥಾಯ್ಲೆಂಡಿನ ರಾಜಧಾನಿ ಬ್ಯಾಂಕಾಕ್‍ನ ವಿಪರೀತ ಜನಜಂಗುಳಿ ಇರುವ ಮುಖ್ಯ ಸ್ಥಳದಲ್ಲಿ ನಮ್ಮ ಶಾಪಿಂಗ್ ನಡೆದಿತ್ತು. ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಬಂಗಾರ ಬಣ್ಣದ ಪುಟ್ಟ ಗುಡಿಯ ಎದುರು ಭಾರತೀಯರು ಮಾತ್ರವಲ್ಲ, ಚೀನಿ ಚಹರೆಯ ಜನರೂ ಮೊಣಕಾಲೂರಿ ಕೈಗಳಲ್ಲಿ ಚೆಂಡು ಹೂವು, ಸುಗಂಧ ಬತ್ತಿ ಹಿಡಿದು, ತಲೆ ತಗ್ಗಿಸಿ ಪ್ರಾರ್ಥಿಸುತ್ತಿದ್ದರು.

ಪಕ್ಕದಲ್ಲಿದ್ದ ಚಕ್ರಿಯನ್ನು ‘ಅದೇನು’ ಎಂದು ಕೇಳಿದೆ. ಆತ ‘ಅದು ಇರವಾನ್ ಗುಡಿ’ ಎಂದ. ‘ನಮ್ಮ ಮುರುಗನ್ ಇರಬಹುದಾ’ ಎಂದು ಯೋಚಿಸುತ್ತಿದ್ದೆ, ಅಷ್ಟರಲ್ಲಿ ಇರವಾನ್ ಅಂದರೆ ಬ್ರಹ್ಮ ಎಂದು ಉತ್ತರ ಬಂತು. ನಾನು ಏನನ್ನೂ ಹೇಳುವ ಮುಂಚೆಯೇ ಮಕ್ಕಳು ‘ಅರೆ! ಸುಳ್ಳು ಹೇಳಿದ ಕಾರಣ, ಬ್ರಹ್ಮನಿಗೆ ಜಗತ್ತಿನಲ್ಲಿ ಎಲ್ಲೂ ದೇವಸ್ಥಾನದಲ್ಲಿ ಪೂಜೆ ಸಲ್ಲದು ಎಂದು ಶಾಪ ಸಿಕ್ಕಿತು. ಆದರೂ ಆತ ಪಶ್ಚಾತ್ತಾಪ ಪಟ್ಟಿದ್ದಕ್ಕೆ ಕೇವಲ ರಾಜಸ್ತಾನದ ಪುಷ್ಕರದಲ್ಲಿ ಮಾತ್ರ ಬ್ರಹ್ಮ ದೇವಸ್ಥಾನ ಇದೆ ಎಂದು ಅಲ್ಲಿಗೆ ಹೋದಾಗ ಹೇಳಿದ್ದರು. ಈಗ ನೋಡಿದರೆ ಇಲ್ಲಿ ಗುಡಿ ಕಟ್ಟಿ ಜೋರಾಗಿ ಪೂಜೆ ನಡೆಯುತ್ತಾ ಇದೆ’ ಎಂದು ಆಶ್ಚರ್ಯಪಟ್ಟರು. ನನಗೂ ಹಾಗನಿಸಿದ್ದು ನಿಜವೇ. ಶಾಪಿಂಗ್ ನಿಲ್ಲಿಸಿ ಬ್ರಹ್ಮ ದರ್ಶನಕ್ಕೆ ನಡೆದೆವು.

ಎಲ್ಲಿದೆ? ಹೇಗಿದೆ?

ತೆರೆದ ಜಾಗದಲ್ಲಿ ಇರುವ ಪುಟ್ಟ ಗುಡಿಯಲ್ಲಿದ್ದಾನೆ ಬ್ರಹ್ಮದೇವ. ಸಾನ್ ಥಾವೋ ಮಹಾ ಪ್ರಾಮ್ ಈ ಗುಡಿಯ ಹೆಸರು.

ಬ್ಯಾಂಕಾಕ್‍ನ ಶಾಪಿಂಗ್ ಸ್ವರ್ಗ ಎನಿಸಿರುವ ಪಾಥುಮ್ ವಾನ್ ಪ್ರದೇಶದಲ್ಲಿ, ಪ್ರಸಿದ್ಧ ಐಷಾರಾಮಿ ಹೋಟೆಲ್ ಗ್ರಾಂಡ್ ಹಯಾತ್ ಇರವಾನ್ ಹೊಟೆಲ್ ಆವರಣದಲ್ಲಿ ಉತ್ತರ ದ್ವಾರದ ಬಳಿಯಲ್ಲಿದೆ. ಗುಡಿಗೆ ಪ್ರವೇಶ ಧನ ಇಲ್ಲ. ಬೆಳಿಗ್ಗೆ 6ರಿಂದ ರಾತ್ರಿ 11ರ ವರೆಗೆ ತೆರೆದಿರುತ್ತದೆ. ಆದರೆ ಮಧ್ಯಾಹ್ನ ಮತ್ತು ಸಂಜೆ ಜನಜಂಗುಳಿ ಬಹಳ ಹೆಚ್ಚು. ನಸುಕಿನಲ್ಲಿ ಅಥವಾ ರಾತ್ರಿ ಸಂದರ್ಶಿಸುವುದು ಉತ್ತಮ.

ಗುಡಿಯ ಹಿಂದಿನ ಕತೆ

ದೈವ ಶ್ರದ್ಧೆ ಬಹಳವಾಗಿರುವ ಈ ದೇಶದಲ್ಲಿ ಯಾವುದೇ ಪ್ರಮುಖ ಕಟ್ಟಡ ಕಟ್ಟುವಾಗ ಸುತ್ತಲಿರುವ ಚೇತನಗಳಿಗೆ ಸಂತೃಪ್ತಿಯಾಗಲು ಗುಡಿ ಕಟ್ಟಿಸುವ ಪದ್ಧತಿಯಿದೆ. 1956 ರಲ್ಲಿ ಸರ್ಕಾರದಿಂದ ಇರವಾನ್ ಹೊಟೆಲ್ ಕಟ್ಟಿಸುವಾಗ ಪದೇ ಪದೇ ವಿಘ್ನಗಳು ಎದುರಾದವು. ಕಟ್ಟಡ ಕುಸಿತ, ಕೆಲವೊಮ್ಮೆ ಜೀವಹಾನಿಯಾಗಿ ಕಾಮಗಾರಿ ಕುಂಟುತ್ತಿತ್ತು. ಆಗ ಜ್ಯೋತಿಷಿಗಳನ್ನು ಕೇಳಿದಾಗ, ಹೋಟೆಲ್ ಅಡಿಪಾಯ ಹಾಕಿದ ಸಮಯ ಸರಿ ಇಲ್ಲ. ಅದನ್ನು ಸರಿದೂಗಿಸಲು ಸೃಷ್ಟಿಕರ್ತ ಬ್ರಹ್ಮನ ವಿಗ್ರಹ ಸ್ಥಾಪನೆಯಾಗಬೇಕು ಎಂದು ಸಲಹೆ ಕೊಟ್ಟರು. ಆಗಲೇ ಈ ಗುಡಿ ಸ್ಥಾಪಿಸಲಾಯಿತು. ಬ್ರಹ್ಮನಿಗೆ ತೃಪ್ತಿಯಾಯಿತೋ ಅಥವಾ ಕಾಕತಾಳೀಯವೋ ಅಂತೂ ಕಟ್ಟಡದ ನಿರ್ಮಾಣ ನಿರ್ವಿಘ್ನವಾಗಿ ಸಾಗಿತು. ಥಾಯ್ ಭಾಷೆಯಲ್ಲಿ ಬ್ರಹ್ಮನಿಗೆ ಸಾನ್ ಥಾವೋ ಮಹಾ ಪ್ರಾಮ್ ಎಂದು ಕರೆದರೂ ಉಚ್ಚರಿಸಲು ಕಷ್ಟ ಎಂಬ ದೃಷ್ಟಿಯಿಂದ ಇರವಾನ್ ಎಂಬ ಹೆಸರನ್ನು ಬಳಸಲಾಗುತ್ತದೆ. ಇರವಾನ್ ಎಂದರೆ ಮೂರು ತಲೆಯ ಆನೆ, ಐರಾವತ. ಇದು ಥಾಯ್ ಸಂಸ್ಕೃತಿಯಲ್ಲಿ ಬ್ರಹ್ಮನ ವಾಹನ. ಇದೇ ಕಾರಣಕ್ಕಾಗಿ ಇರವಾನ್ ಎಂದೂ ಆತನನ್ನು ಕರೆಯಲಾಗುತ್ತದೆ. ಹಾಗಾಗಿ ಇದು ಇರವಾನ್ ಗುಡಿಯಾಯಿತು!.

ಚತುರ್ಮುಖ ಬ್ರಹ್ಮ

ಕ್ರಿಸ್ತ ಪೂರ್ವ ಎರಡನೇ ಶತಮಾನದಲ್ಲಿ ಸಯಾಂ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶದಲ್ಲಿ ಬ್ರಹ್ಮನ ಆರಾಧನೆ ವ್ಯಾಪಕವಾಗಿತ್ತು. ನೆರೆಯ ದೇಶ ಕಾಂಬೋಡಿಯಾದಲ್ಲಿ ದಕ್ಷಿಣ ಭಾರತದ ಸಂಸ್ಕೃತಿ ಪ್ರಭಾವ ಬೀರಿತ್ತು. ಅಲ್ಲಿನ ಖ್ಮೇರ್ ರಾಜರು ಥಾಯ್ಲೆಂಡಿನಲ್ಲಿ ಆಳ್ವಿಕೆ ನಡೆಸಿದಾಗ ಇಲ್ಲಿಯೂ ಹಿಂದೂ ಧರ್ಮ ಪ್ರಬಲವಾಗಿತ್ತು ಎನ್ನಲಾಗುತ್ತದೆ. ಈಗ ಬೌದ್ಧ ಧರ್ಮೀಯರೇ ಹೆಚ್ಚಾದರೂ ಹಿಂದೂ ಧರ್ಮದ ಪ್ರಭಾವ ದಟ್ಟವಾಗಿದೆ. ಸೃಷ್ಟಿಕರ್ತ ಬ್ರಹ್ಮನನ್ನು ಕರುಣೆ, ದಯೆ, ಅಭಯ ಮತ್ತು ನ್ಯಾಯಪರತೆಯ ದೇವ ಎಂದು ಇಲ್ಲಿ ನಂಬುತ್ತಾರೆ. ಗುಡಿಯಲ್ಲಿರುವ ಬಂಗಾರ ಬಣ್ಣದ ಮೂರ್ತಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ತಲೆಗಳಿದ್ದು ಇವು ಪ್ರಪಂಚದ ಎಲ್ಲಾ ಆಗುಹೋಗುಗಳನ್ನು ನೋಡುವ ಶಕ್ತಿಗೆ ಸಂಕೇತವಾಗಿದೆ. ತಲೆಗೆ ಉದ್ದ ಕಿರೀಟ, ಬ್ರಹ್ಮನ ಮೂರ್ತಿಯ ನಾಲ್ಕು ಕೈಗಳಲ್ಲಿ ದಂಡ, ಚಮಚ, ಮಣಿ ಸರ ಮತ್ತು ಪುಸ್ತಕಗಳಿವೆ. ಒಂದು ಕಾಲು ಮಡಚಿ ಕುಳಿತ ಬ್ರಹ್ಮನ ತೊಡೆಯ ಮೇಲೆ ಕಲಶವೂ ಇದೆ. ಬಂಗಾರ ಬಣ್ಣದ ಚೆಂಡು ಹೂವಿನ ಮಾಲೆ, ಸುಗಂಧ ಬತ್ತಿ ಮತ್ತು ದೀಪಗಳಿಂದ ಮೂರ್ತಿಯ ಪೂಜೆ ಸಲ್ಲುತ್ತದೆ.

ಹರಕೆ ಒಪ್ಪಿಸುವುದು

ಪ್ರಯಾಣದ ಸುರಕ್ಷತೆಗಾಗಿ, ಕೆಲಸ ಪೂರ್ಣವಾಗಲು, ಸಂತಾನ ಪ್ರಾಪ್ತಿಯಾಗಲು ಇಲ್ಲಿ ಜನರು ಪಾರ್ಥಿಸುತ್ತಾರೆ. ನಂತರ ಹರಕೆ ತೀರಿಸಲು ಬೀಟೆ ಮರದಲ್ಲಿ ಕೆತ್ತಿದ ಆನೆಗಳನ್ನು ತಂದೊಪ್ಪಿಸುವುದು ರೂಢಿ. ಹಾಗಾಗಿ ಗುಡಿಯ ಸುತ್ತ ಕಲಾತ್ಮಕ ಕೆತ್ತನೆಯ ಆನೆ ಬೊಂಬೆಗಳನ್ನು ಮಾರುವ ಅನೇಕ ಅಂಗಡಿಗಳಿವೆ. ಇದಲ್ಲದೇ ಗುಡಿಯ ಸುತ್ತ ಸಾಂಪ್ರದಾಯಿಕ ಉಡುಪಿನಲ್ಲಿ ಯುವತಿಯರು ಸಾಂಪ್ರದಾಯಿಕ ಥಾಯ್ ಅಥವಾ ಚೀನಿ ಹುಲಿನೃತ್ಯ ಸೇವೆ ಸಲ್ಲಿಸುತ್ತಾರೆ. ಇದು ಬ್ರಹ್ಮನ ಪ್ರೀತ್ಯರ್ಥ ಭಕ್ತರು ಮಾಡಿಸುವ ಸೇವೆ.

ಇರವಾನ್ ಗುಡಿ ಹಿಂದೂ, ಬೌದ್ಧ, ಮತ್ತು ಚೀನಿಯರಿಗೆ ಪ್ರಮುಖ ಧಾರ್ಮಿಕ ಸ್ಥಾನ. ದಿನವೂ ಕೈ ಮುಗಿದು ಕೆಲಸಕ್ಕೆ ತೆರಳುವವರು ಸಾವಿರಾರು ಜನ. ನಗರದ ಹೃದಯ ಭಾಗದಲ್ಲಿರುವ ಇದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು. 2015ರಲ್ಲಿ ಇರವಾನ್ ಗುಡಿಯ ಮೇಲೆ ಉಗ್ರರ ಬಾಂಬ್ ದಾಳಿ ಮಾಡಿದ್ದು, ಅಲ್ಲಿ ಸೇರಿದ್ದ ಅನೇಕರು ಗಾಯಗೊಂಡಿದ್ದರು, ಸಾವೂ ಸಂಭವಿಸಿತ್ತು. ಬ್ರಹ್ಮನ ಮೂರ್ತಿಗೆ ಸ್ವಲ್ಪ ಹಾನಿಯಾಗಿತ್ತು. ಆದರೆ ಕೇವಲ ಎರಡೇ ದಿನಗಳಲ್ಲಿ ಅದನ್ನು ಸರಿಪಡಿಸಿ ಮತ್ತೆ ಸಾರ್ವಜನಿಕರ ವೀಕ್ಷಣೆ ಮತ್ತು ಪ್ರಾರ್ಥನೆಗೆ ಸಜ್ಜುಗೊಳಿಸಲಾಯಿತು.

‘ನಮ್ಮ ಸೃಷ್ಟಿಕರ್ತನಿಗೆ ಈ ತೆರೆದ ಗುಡಿ ಕಟ್ಟಿದ್ದೇವೆ. ನಮ್ಮನ್ನು ಕಾಯುವ ಹೊಣೆ ಆತನದ್ದು’ ಎಂದ ಭಕ್ತಿಯಿಂದ ಚಕ್ರಿ.

ಸಂಜೆ ಬಿಸಿಲಿನಲ್ಲಿ ಫಳ ಫಳ ಹೊಳೆಯುತ್ತಿದ್ದ ಬಂಗಾರ ಬಣ್ಣದ ನಾಲ್ಕು ತಲೆಯ ಬ್ರಹ್ಮ ಕಣ್ಮುಚ್ಚಿ ಧ್ಯಾನದಲ್ಲಿದ್ದ.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.