ವರ್ಷಗಟ್ಟಲೆ, ದಶಕಗಟ್ಟಲೆ ಬೆಂಗಳೂರನ್ನು ಕಂಡವರಿಗೆ ಈ ನಗರವು ಆಪ್ತವಾದ ಯಾವುದೋ ಜಾಗವನ್ನು ಕೊಡುಗೆಯಾಗಿ ಕೊಟ್ಟಿರುತ್ತದೆ. ಆ ಜಾಗದೊಟ್ಟಿಗೆ ಬೆಸೆದುಕೊಂಡ ನೆನಪುಗಳ ಮಾತು ಮಧುರವೂ ಹೌದು, ಮರೆಯಲಾಗದವೂ ಹೌದು. ವಿವಿಧ ಕ್ಷೇತ್ರಗಳ ದಿಗ್ಗಜರು ವಾರಕ್ಕೊಮ್ಮೆ ಅಂಥ ನೆನಪುಗಳ ಮೆಲುಕು ಹಾಕುವ ಜಗಲಿ ಇದು. ಈ ವಾರ ಜಗಲಿಯ ಮೇಲೆ ಹಿರಿಯ ನಟ ಎಸ್. ಶಿವರಾಂ

ನಾನು ಹುಟ್ಟಿದ್ದು ಬೆಂಗಳೂರಿನಿಂದ 60 ಕಿ.ಮೀ ದೂರದ ಚೂಡಸಂದ್ರ ಎಂಬ ಹಳ್ಳಿಯಲ್ಲಿ. ಬೆಳೆದಿದ್ದು ಮಾತ್ರ ನಗರದ ಧರ್ಮರಾಯಸ್ವಾಮಿ ದೇವಾಲಯ ಹಾಗೂ ನಗರ್ತಪೇಟೆಯ ಪ್ರದೇಶದಲ್ಲಿ.

ವಿದ್ಯಾಭ್ಯಾಸಕ್ಕೆಂದು ಅಣ್ಣಂದಿರೊಂದಿಗೆ ಹಳ್ಳಿಯಿಂದ ಬೆಂಗಳೂರಿಗೆ ಬಂದೆ. ಆಗ ನನಗೆ ನಾಲ್ಕೈದು ವರ್ಷವಿರಬೇಕು. ಅಪ್ಪ–ಅಮ್ಮ ಹಳ್ಳಿಯಲ್ಲೇ ಇರುತ್ತಿದ್ದರು. ಶಾರದಾ ಟಾಕೀಸ್ ಬಳಿ ಸಂಪನ್ನಪ್ಪ ಬಂಗಲೆ ಪಕ್ಕದಲ್ಲಿದ್ದ ಚಿಕ್ಕ ಮನೆಯಲ್ಲಿಯೇ ನಮ್ಮ ವಾಸ. ಅಲ್ಲೇ ಇದ್ದ ಪ್ರಾಥಮಿಕ ಶಾಲೆಯಲ್ಲೇ ವಿದ್ಯಾಭ್ಯಾಸ ಆರಂಭ.

ಈಗ ಕೆ.ಜಿ. ರಸ್ತೆಯ ಅಲಂಕಾರ್ ಪ್ಲಾಜಾ ಇದೆಯಲ್ಲ. ಅಲ್ಲಿ ಮೊದಲು ಆರ್ಯ ವಿದ್ಯಾ ಶಾಲೆ ಇತ್ತು. ಅಲ್ಲಿಯೇ ಮಾಧ್ಯಮಿಕ ಶಿಕ್ಷಣ ಪಡೆದೆ. ವಿಶಾಲವಾದ ಖಾಲಿ ಸ್ಥಳದ ಒಂದು ಮೂಲೆಯಲ್ಲಿ ಸೌದೆ ಮಂಡಿ ಜೊತೆಗೆ ಹಳೆಯ ಕಲ್ಲಿನ ಕಟ್ಟಡವಿತ್ತು. ಅದೇ ನಮ್ಮ ಶಾಲೆ. ಇಡೀ ಪ್ರದೇಶಕ್ಕೆ ದೊಡ್ಡ ಕಾಂಪೌಂಡ್ ಸಹ ಇತ್ತು.

ನಿತ್ಯ ಮನೆಯಿಂದ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೋಗುವವರೆಗೂ ನಗರದ ಖಾಲಿ ರಸ್ತೆಯ ಫುಟ್ಪಾತ್ನಲ್ಲಿ ಬಚ್ಚಾ ಆಟ ಆಡುತ್ತಾ ಹೋಗುತ್ತಿದ್ದೆ. ಆಗ ಮನೆ ನಗರ್ತಪೇಟೆಯಲ್ಲಿತ್ತು. ಶಾಲೆಗೆ ಹೊರಟಾಗ ಆರಂಭವಾಗುತ್ತಿದ್ದ ಬಚ್ಚಾ ಆಟ ಶಾಲೆಯ ಆವರಣದಲ್ಲೇ ಕೊನೆಗೊಳ್ಳುತ್ತಿದ್ದುದು.

ರಸ್ತೆಗಳಲ್ಲಿ ಆಗೊಂದು– ಈಗೊಂದು ಬಸ್ ಬಿಟ್ಟರೆ, ಎಲ್ಲೊ ಒಂದೊಂದು ಸೈಕಲ್ ಹಾಗೂ ಕುದುರೆ ಗಾಡಿಗಳು ಕಾಣಿಸಿಕೊಳ್ಳುತ್ತಿದ್ದವು. ಜನ ಎಲ್ಲೇ ಹೋಗುವುದಾದರೂ ನಡೆದೇ ಹೋಗುತ್ತಿದ್ದರು. ತುಂಬಾ ದೂರದ ಪ್ರಯಾಣಕ್ಕೆ ಮಾತ್ರ ಕುದುರೆ ಗಾಡಿಗಳನ್ನು ಬಳಸುತ್ತಿದ್ದರು.

ಆಗಿನ ಬಸ್ಗಳು ಉಗಿಯಿಂದ (ಸ್ಟೀಮ್ ಎಂಜಿನ್) ಓಡುತ್ತಿದ್ದವು. ರಸ್ತೆಯಲ್ಲಿ ನಡೆದುಕೊಂಡು ಹೋಗುವವರೂ ಈ ಬಸ್ಗಳನ್ನು ಓವರ್ಟೇಕ್ ಮಾಡುತ್ತಿದ್ದರು! ಬಸ್ ಏನಾದರೂ ಕೆಟ್ಟರೆ ರಾತ್ರಿಯೆಲ್ಲ ರಸ್ತೆಯಲ್ಲೇ ಕಳೆಯಬೇಕಿತ್ತು. ಒಮ್ಮೆ ನಮ್ಮ ಹಳ್ಳಿಯಿಂದ ಬೆಂಗಳೂರಿಗೆ ಬರುವಾಗ ಇಡೀ ದಿನ ಬಸ್ನಲ್ಲೇ ಕಳೆದ ನೆನಪು ಇದೆ.

ಕು.ರಾ.ಸೀತಾರಾಮಶಾಸ್ತ್ರಿ ಅವರ ಭಾವ ಜಿ.ಎನ್.ಜೋಶಿ ಅವರು ಆರ್ಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾನು ಅವರಿಗೆ ಅವರ ಮನೆಯಿಂದ ಮಧ್ಯಾಹ್ನದ ಊಟ ತಂದು ಕೊಡುತ್ತಿದ್ದೆ. ಅದಕ್ಕಾಗಿ ಅವರು ನನಗೆ ತೂತು ಕಾಸು (ಮೂರು ಅಥವಾ ಆರು ಕಾಸು) ಮತ್ತು ಸ್ವಲ್ಪ ತಡವಾಗಿ ಬಂದರೂ ಹಾಜರಾತಿ ನೀಡುತ್ತಿದ್ದರು.

ಆ ಹಣದಲ್ಲಿಯೇ ಶಾಲೆಯ ಮುಂದೆ ಕಡಲೆಕಾಯಿ, ಕೊಬ್ಬರಿ ಕಾಯಿ ಅಥವಾ ಕಿತ್ತಳೆ ಹಣ್ಣು ಖರೀದಿಸಿ ತಿನ್ನುತ್ತಿದ್ದೆ. ಅದರಲ್ಲೂ ಕಿತ್ತಳೆಯನ್ನು ಕತ್ತರಿಸಿ ಅದಕ್ಕೆ ಉಪ್ಪುಖಾರ ಹಾಕಿಸಿಕೊಂಡು ಚೀಪುತ್ತಾ ಹೋಗುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ.

ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ನಾಗವೇಣಮ್ಮ ಅವರಿಗೂ ಆಗಾಗ ಅವರ ಮನೆಯಿಂದ ಕಾಫಿ ತಂದುಕೊಡುತ್ತಿದ್ದೆ. ನಾನು ಶಾಲೆಗೆ ಹೋಗುವಾಗ ಮಹಾರಾಜರ ವರ್ಧಂತಿಯನ್ನು ಕ್ಯಾಲೆಂಡರ್ಗಳಲ್ಲಿ ಮುದ್ರಿಸಲಾಗುತ್ತಿತ್ತು. ಅಂದು ಶಾಲೆಗಳಲ್ಲಿ ಸಿಹಿ ಬೂಂದಿ ಸಹ ಹಂಚುತ್ತಿದ್ದರು.

ರಂಗಭೂಮಿಯ ಗಂಧ ಗಾಳಿ
ನಾನು ರಂಗಭೂಮಿಗೆ ಬರಲು ಪ್ರೇರಣೆ ನೀಡಿದ್ದು, ನನ್ನ ಶಾಲೆ ಇದ್ದ ಕೆ.ಜಿ.ರಸ್ತೆಯ ಸುತ್ತಮುತ್ತಲ ಪ್ರದೇಶ. ಶಾಲೆಯ ಸುತ್ತಲೂ ಚಿತ್ರಮಂದಿರಗಳು ಹಾಗೂ ರಂಗಮಂದಿರಗಳೇ ಇದ್ದವು. ಶಾಲೆಗೆ ಹತ್ತಿರದಲ್ಲಿದ್ದ ಕೆರೆ ಮೈದಾನದಲ್ಲಿ ಉತ್ತರ ಕರ್ನಾಟಕದಿಂದ ಬರುತ್ತಿದ್ದ ಕಲಾವಿದರು ಟೆಂಟ್ ಹಾಕಿ ನಾಟಕಗಳನ್ನು ಆಡುತ್ತಿದ್ದರು.

ಸುಬ್ಬಯ್ಯನಾಯ್ಡು, ಮಾಸ್ಟರ್ ಹಿರಣ್ಣಯ್ಯ ಅವರ ತಂದೆ ಕೆ.ಹಿರಣ್ಣಯ್ಯ ಹಾಗೂ ಗುಬ್ಬಿವೀರಣ್ಣ ಅವರ ರಂಗಮಂದಿರಗಳೂ ಇದ್ದವು. ಜೊತೆಗೆ ಹಿಮಾಲಯ, ಮೇನಕಾ, ಸೆಲೆಕ್ಟ್, ಸಾಗರ್ ಸೇರಿದಂತೆ ಹಲವು ಚಿತ್ರಮಂದಿರಗಳೂ ಇದ್ದವು.

ನಗರೀಕರಣದ ಭರದಲ್ಲಿ ಆರ್ಯ ವಿದ್ಯಾ ಶಾಲೆಯನ್ನು ಕೆಡವಿ, ಅಲಂಕಾರ್ ಚಿತ್ರಮಂದಿರ ಮಾಡಿದರು. ನಂತರ ಅದನ್ನು ಬೀಳಿಸಿ ಅಲಂಕಾರ್ ಪ್ಲಾಜಾ ನಿರ್ಮಿಸಿದ್ದನ್ನೂ ನೋಡಿದ್ದೇನೆ. ಇಂತಹ ಸಾಕಷ್ಟು ಬದಲಾವಣೆಗಳಿಗೆ ನಾನೇ ಪ್ರತ್ಯಕ್ಷ ಸಾಕ್ಷಿ.

ಆದರೆ ಸಂಪನ್ನಪ್ಪ ಬಂಗಲೆ ಪ್ರದೇಶ, ನಗರ್ತಪೇಟೆ, ಚಿಕ್ಕಣ್ಣಮ್ಮ ದೇವಾಲಯದ ರಸ್ತೆ, ಗಂಗಮ್ಮ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ರಾಮ ದೇವಾಲಯ ಹಾಗೂ ಹಲಸೂರು ಪೇಟೆ ಪ್ರದೇಶಗಳು ಮಾತ್ರ ಇನ್ನೂ ಹಾಗೇ ಉಳಿದುಕೊಂಡಿವೆ.

ಗುಂಡಪ್ಪ ಹೋಟೆಲ್ ದಮ್ರೂಟ್
ಧರ್ಮರಾಯ, ವೇಣುಗೋಪಾಲಸ್ವಾಮಿ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಆಗಾಗ ಸುಣ್ಣಬಣ್ಣ ಮಾಡಿಸುವುದು ಬಿಟ್ಟರೆ ಯಾವ ಬದಲಾವಣೆಯೂ ಆಗಿಲ್ಲ. ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಹೋಗುವಮುನ್ನ ಸಿಗುವ ಗುಂಡಪ್ಪ ಹೋಟೆಲ್ ಇನ್ನೂ ಇದೆ. ಆಗ ಅದು ದಮ್ರೂಟ್ ಮತ್ತು ಚೌಚೌಗೆ ಪ್ರಸಿದ್ಧಿಯಾಗಿತ್ತು. ಅದರ ರುಚಿ ಇನ್ನೂ ನಾಲಿಗೆ ಮೇಲಿದೆ.

ಆಗ ಮನೆಗಳಿಗೆ ಗಾಳಿ, ಬೆಳಕು ಬರಲೆಂದು ಗವಾಕ್ಷಿ ವ್ಯವಸ್ಥೆ ಮಾಡಲಾಗುತ್ತಿತ್ತು. ಮಳೆ ಬಂದಾಗ ಅದರಿಂದ ನೀರು ಒಳಗೆ ಸುರಿಯುತ್ತಿತ್ತು. ಅದರಲ್ಲೂ ಆಟವಾಡುತ್ತಿದ್ದೆವು. ಮಳೆ ಮೋಡ ಕವಿದಾಗ ಅಮ್ಮನ ಆಜ್ಞೆಯಂತೆ ಅದಕ್ಕೆ ತಗಡನ್ನು ಮುಚ್ಚಿ ಬರುತ್ತಿದ್ದೆ. ಆದರೆ ಈಗ ಕಳ್ಳಕಾಕರ ಭಯದಿಂದ ಗವಾಕ್ಷಿಗಳು ಇಲ್ಲದಂತಾಗಿವೆ. ಒಂದುವೇಳೆ ಇದ್ದರೂ ಅದಕ್ಕೆ ಗಟ್ಟಿಯಾದ ಗಾಜಿನ ಹೊದಿಕೆ ಇರುತ್ತದೆ.

ವೇಣುಗೋಪಾಲಸ್ವಾಮಿ ದೇವಾಲಯದ ಪಕ್ಕದಲ್ಲೇ ನಿರ್ದೇಶಕ ಕು.ರಾ.ಸೀತಾರಾಮಶಾಸ್ತ್ರಿ ಅವರ ಮನೆ ಇತ್ತು. ನಾನು ಸಿನಿಮಾ ರಂಗಕ್ಕೆ ಪ್ರವೇಶ ಪಡೆಯಲು ಅವರೇ ಕಾರಣ.

ಮರೆಯಲಾಗದ ಊರಹಬ್ಬ
ಬೆಂಗಳೂರು ಕರಗವನ್ನು ಮೊದಲಿನಿಂದಲೂ ಊರಹಬ್ಬದಂತೆ ಆಚರಿಸಲಾಗುತ್ತಿದೆ. ಇಡೀ ರಾತ್ರಿ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ಕರಗ ಮತ್ತು ಶಿವರಾತ್ರಿಯಲ್ಲಿ ಚಿತ್ರಮಂದಿರಗಳಲ್ಲಿ ಐದು ಪ್ರದರ್ಶನಗಳು ನಡೆಯುತ್ತಿದ್ದವು.

ಯಾವ ಭಾಷೆ ಎಂದು ನೋಡದೆ, ಸ್ನೇಹಿತರೊಂದಿಗೆ ಇಡೀ ದಿನ ಸಿನಿಮಾ ನೋಡುತ್ತಿದ್ದೆ. ರಾತ್ರಿ ಗಂಗಮ್ಮನ ಗುಡಿಯಿಂದ ಹೊರಡುತ್ತಿದ್ದ ಪಲ್ಲಕ್ಕಿಯಲ್ಲಿ ಸ್ನೇಹಿತ ಭೋಜನೊಂದಿಗೆ ಕುಳಿತು ಮೆರವಣಿಗೆಗೆ ಹೋಗುತ್ತಿದ್ದೆ. ಆಗ ಭಕ್ತಾದಿಗಳು ಪೂಜೆಗೆ ಕೊಡುವ ತೆಂಗಿನಕಾಯಿ ಒಡೆದು ಕೊಡುವುದು ಹಾಗೂ ಪ್ರಸಾದ ಹಂಚುವ ಕೆಲಸ ಮಾಡುತ್ತಿದ್ದೆ.

ಇತ್ತೀಚೆಗೆ ಕರಗ ನೋಡಲೆಂದು ಮತ್ತೆ ಧರ್ಮರಾಯನ ಗುಡಿಗೆ ಹೋಗಿದ್ದೆ. ಅಲ್ಲಿ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಜನಜಂಗುಳಿ. ಹತ್ತಿರದಿಂದ ಕರಗ ತೋರಿಸುತ್ತೇನೆ ಎಂದು ನನಗೆ ಆಹ್ವಾನ ನೀಡಿದ್ದವರೂ ಅಂದು ಸಿಗಲಿಲ್ಲ.

ಸಾಹಿತ್ಯ ಪರಿಷತ್ತಿನ ನಂಟು
ಚಾಮರಾಜಪೇಟೆ ಎಂದ ಕೂಡಲೇ ಕಣ್ಮುಂದೆ ಬರುವುದು ಕನ್ನಡ ಸಾಹಿತ್ಯ ಪರಿಷತ್ತು. ಹವ್ಯಾಸಿ ರಂಗಭೂಮಿಗೆ ಪ್ರವೇಶ ಪಡೆದಾಗ ಮೊದಲ ಬಾರಿಗೆ ವೇದಿಕೆ ಏರಿದ್ದೇ ಇಲ್ಲಿ.

ಪುರಭವನದಲ್ಲಿ ನಾಟಕ ಪ್ರದರ್ಶನ ನೀಡಲು ವೇದಿಕೆ ಸರಿಯಾಗಿರಲಿಲ್ಲ. ಮುಂದೆ ಕುಳಿತವರಿಗೆ ವೇದಿಕೆ ಮೇಲಿರುವವರು ಸರಿಯಾಗಿ ಕಾಣುತ್ತಿರಲಿಲ್ಲ. ಯಾಕೆಂದರೆ, ಅದನ್ನು ನಿರ್ಮಿಸಿದ್ದೇ ಸಭೆ ಸಮಾರಂಭಕ್ಕಾಗಿ. ಹೀಗಾಗಿ ಹೆಚ್ಚಾಗಿ ನಾಟಕ ಪ್ರದರ್ಶನ ಮಾಡಲು ಸಿಗುತ್ತಿದ್ದ ಜಾಗ ಕನ್ನಡ ಸಾಹಿತ್ಯ ಪರಿಷತ್ತು. ನಂತರದ ದಿನಗಳಲ್ಲಿ ಪುರಭವನದ ವೇದಿಕೆ ಸಿಕ್ಕಿತು.

ಸಾಹಿತಿ ಡಿ.ವಿ.ಗುಂಡಪ್ಪ ನಮ್ಮ ಸಂಬಂಧಿಕರು. ಸಾಹಿತಿಗಳ ಒಡನಾಟಕ್ಕೂ ಒಂದು ರೀತಿ ಅವರು ಕಾರಣ. ರಂಗಭೂಮಿಗೆ ಕಾಲಿಡುತ್ತಿದ್ದಂತೆ ಸಾಹಿತಿಗಳ ಜೊತೆಗಿನ ಸಂಬಂಧ ಮತ್ತಷ್ಟು ಗಟ್ಟಿಯಾಗತೊಡಗಿತು.

ನಾನು ‘ಚಿತ್ರ ಕಲಾವಿದರು’ ತಂಡದಲ್ಲಿದ್ದೆ. ನಾಟಕವಾಡಲು ಅಭಿಮಾನಿಗಳು ಸಹಾಯ ಮಾಡುತ್ತಿದ್ದರು. ವರ್ಷಕ್ಕೆ ಐದು ರೂಪಾಯಿ ಕೊಡುತ್ತಿದ್ದರು. ಅವರಿಗಾಗಿ 4–5 ನಾಟಕಗಳನ್ನು ಪ್ರದರ್ಶಿಸುತ್ತಿದ್ದೆವು.

ಗಾಂಧಿ ಸಾವಿನ ಸೂತಕದ ಛಾಯೆ
ಸ್ವಾತಂತ್ರ್ಯ ಬಂದಾಗ ನಾವಿದ್ದ ನಗರ್ತಪೇಟೆಯಲ್ಲಿ ಹಬ್ಬದಂತೆ ಅದನ್ನು ಆಚರಿಸಿದ್ದೆವು. ಆದರೆ ಆ ಸಂತೋಷ ತುಂಬಾ ದಿನ ಉಳಿಯಲಿಲ್ಲ. ಒಂದೆಡೆರಡು ತಿಂಗಳಿನಲ್ಲೇ ಹಿಂದೂ– ಮುಸ್ಲಿಂ ಗಲಾಟೆಯಿಂದಾಗಿ ರಕ್ತಪಾತವಾಗಿ ಕರ್ಫ್ಯೂ ಜಾರಿಯಾಗಿತ್ತು.

ಗಾಂಧಿ ಅವರ ಪಾರ್ಥೀವ ಶರೀರದ ಮೆರವಣಿಗೆಯ ಬಗ್ಗೆ ಮೆಲ್ವಿನ್ ಡಿಮೆಲೊ ಅವರು ರೇಡಿಯೊದಲ್ಲಿ ಅದರ ವಿವರಣೆ ನೀಡುತ್ತಿದ್ದರು. ಅವರ ಧ್ವನಿಯಲ್ಲಿದ್ದ ಗಾಂಭೀರ್ಯ, ಏರಿಳಿತಗಳು ಕೇಳುಗರನ್ನು ಭಾವುಕಗೊಳಿಸಿದ್ದವು.

ಅಭಿನಯ ಜಗದ ಮೇರು ಶಿಖರ
ಹಿರಿಯ ನಟ ಎಸ್.ಶಿವರಾಂ (ಜನನ: 1938) ಅವರದು ಆನೇಕಲ್ ತಾಲ್ಲೂಕಿನ ಚೂಡಸಂದ್ರ. ಮೊದಲ ಚಿತ್ರ ‘ಬೆರೆತ ಜೀವ’. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ರಾಶಿ ಸಹೋದರರು’ ಹೆಸರಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿದ್ದಾರೆ.

ರಾಜಕುಮಾರ್ ಹಾಗೂ ಭಾರತಿ ಅಭಿನಯದ ‘ಹೃದಯ ಸಂಗಮ’ ಚಿತ್ರದ ನಿರ್ದೇಶನ ಇವರದೇ. ಸದ್ಯಕ್ಕೆ ಹಿಂದಿಯ ‘ಓ ಮೈ ಗಾಡ್‘ ಚಿತ್ರದ ರಿಮೇಕ್ ಚಿತ್ರದಲ್ಲಿ ಸ್ವಾಮೀಜಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ತಾಯಿ ಸಾಹೇಬ’ ಸಿನಿಮಾದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ‘ಆಜೀವ ಸೇವಾ ಪ್ರಶಸ್ತಿ’ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.