ಡಾ.ಯು.ಆರ್. ಅನಂತಮೂರ್ತಿಯವರು ಬರೆದ `ಬರ' ಎಂಬ ಕಥೆಯ ನಾಟಕರೂಪವನ್ನು ಸಂಚಯ ತಂಡದವರು ಇತ್ತೀಚೆಗೆ ರಂಗಶಂಕರದಲ್ಲಿ ಪ್ರದರ್ಶಿಸಿದರು. ಕಥೆಗೆ ರಂಗರೂಪ ಕೊಟ್ಟವರು ಕೆ.ಆರ್. ಗಣೇಶ್. ಇದರ ವಿನ್ಯಾಸ, ನಿರ್ದೇಶನ ಶಶಿಧರ ಭಾರಿಘಾಟ್ ಅವರದು.

1976ರ ತುರ್ತುಪರಿಸ್ಥಿತಿಯಲ್ಲಿ ಬರೆದ ಕಥೆಯ ವಸ್ತು ಹೆಸರೇ ಸೂಚಿಸುವಂತೆ ಬರದ ಕುರಿತಾದದ್ದು. ಕಥಾನಾಯಕ ಸತೀಶ ಐ.ಎ.ಎಸ್. ಪಾಸು ಮಾಡಿಕೊಂಡು ಜಿಲ್ಲಾಧಿಕಾರಿಯಾಗಿ ತನ್ನ ಸ್ವಇಚ್ಛೆಯಿಂದ ಕುಟುಂಬ ಸಮೇತ ಬರದ ಬೆಂಗಾಡಿನ ಹಳ್ಳಿಗೆ ಬಂದಿದ್ದಾನೆ. ಅವನು ಬೇಕಿದ್ದರೆ ವಿಧಾನಸೌಧದ ತಣ್ಣನೆಯ ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಹುದಿತ್ತು.

ಅವನ ಭಾವ ಜಯನ್ ದೇಶದ ಪ್ರಸಿದ್ಧ `ಲೆಫ್ಟಿಸ್ಟ್ ಥಿಯರಿಟಿಶನ್'. ಅಲ್ಲಿ ಅವನು ಎದುರಿಸುವ ರೈತರ ಬರ, ಸ್ಥಳೀಯ ರಾಜಕೀಯದ ಜೊತೆಗೆ ಅವನ ಗುದ್ದಾಟ, ತನ್ನ ಅಂತರಂಗದ ಆದರ್ಶಗಳೊಂದಿಗೆ ಅವನ ತಾಕಲಾಟ, ಅಧಿಕಾರದ ಸದ್ಬಳಕೆ, ಸಾಚಾ ಮನುಷ್ಯನಾದರೂ ಎಫಿಶಿಯಂಟ್ (ಕರಪ್ಟ್ ಆಗದೆ ಎಫಿಶಿಯಂಟ್ ಆಗಲು ಬರುವುದಿಲ್ಲ!)

ಆಗದಿರುವ ತನ್ನ ಲೆಫ್ಟಿಸ್ಟ್ ಪ್ರಭಾವ, ಆ ಬರದ ಹಳ್ಳಿಯಲ್ಲೂ ಬಿಎ ಎಲ್ಎಲ್ಬಿ ಓದಿಕೊಂಡು ರೈತಮುಖಂಡನಾಗಿ ಹೋರಾಡುತ್ತಿರುವ ಭೀಮೋಜಿ, ಜಿಲ್ಲೆಯ ಮಂತ್ರಿ ರುದ್ರಯ್ಯ, ಬರದಲ್ಲೂ ರೈತರ ದವಸಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವ ಮಂತ್ರಿಯ ಗೆಳೆಯ ಗಂಗಾಧರ ಸ್ವಾಮಿ, ಅಂಥ ಬರದ ಊರಿನಲ್ಲೂ ನವಾಬರ ಕಾಲದ ಲೋಹದ ಕುಸುರಿಕೆಲಸ ಮಾಡುವ ಸುಲೇಮಾನ್, ಮಂತ್ರಿಯ ಪಟ್ಟ ಶಿಷ್ಯ ಎಸ್.ಪಿ. ನಾಗರಾಜ್, ಮನುಷ್ಯರೇ ಹಸಿವಿನಿಂದ ಸಾಯುವಾಗ ಗೋರಕ್ಷಣೆಯನ್ನು ಮಾಡುವ ಸಲುವಾಗಿ ಊರೆಲ್ಲ ಓಡಾಡುವ ಗೋರಕ್ಷಕ ಗೋವಿಂದಸ್ವಾಮಿ, ಕ್ರಾಂತಿ, ಬದಲಾವಣೆ, ಹಿಂದು ಮುಸ್ಲಿಂ ಘರ್ಷಣೆ,

ಇದರ ಸಲುವಾಗಿ ಒಲ್ಲದ ಮನಸ್ಸಿನಿಂದಲೆ ನೀಡಬೇಕಾದ ಫೈರಿಂಗ್ ಆರ್ಡರ್, ಗುಂಡುಗಳಿಗೆ ಬಲಿಯಾದ ನೂರಾರು ಜನ, ಇದಕ್ಕೆಲ್ಲ ಮುಖಾಮುಖಿಯಾಗುವ ಕಥಾನಾಯಕ ಸತೀಶನ ಮನದೊಳಗೆ ಏರ್ಪಡುವ ಆದರ್ಶ- ಸಿದ್ಧಾಂತಗಳ ಘರ್ಷಣೆ, ಮತ್ತದರ ಬರದ ಸ್ಥಿತಿ ಮತ್ತು ಕಥೆಯ ಕೊನೆಗೆ ಈ ಹಿಂದುಮುಸ್ಲಿಂ ಘರ್ಷಣೆಯಲ್ಲಿ ಶಾಲೆಯಿಂದ ಕಾಣೆಯಾಗಿದ್ದ ತನ್ನ ಮಗುವನ್ನು ಮುಸ್ಲಿಂ ರಿಕ್ಷಾಚಾಲಕ ಸುರಕ್ಷಿತವಾಗಿ ಮನೆಗೆ ತಲುಪಿಸುವ ಮಾನವೀಯ ಪ್ರಕ್ರಿಯೆಗಳೊಂದಿಗೆ ಕಥೆ ಮುಕ್ತಾಯವಾಗುತ್ತದೆ. ಅವನ ಭಾವ ಜಯನ್ ಹೇಳುತ್ತಿದ್ದ ಮಾತು ಇಲ್ಲಿ ನಿಜ ಎನಿಸುತ್ತದೆ: ಕ್ರಾಂತಿಯನ್ನು ಹೊತ್ತು ಹೆರುವವರು ಈ ದೇಶದ ಸಾಮಾನ್ಯ ಜನ. ನಾನು ನೀನು ಸೂಲಗಿತ್ತಿಯರು- ಅಷ್ಟೆ.

1988ರಲ್ಲಿ ಆರಂಭವಾದ ಸಂಚಯದ ರಂಗ ಚಟುವಟಿಕೆಗಳು ಇಂದಿಗೂ ನಿರಂತರವಾಗಿ ನಡೆದುಬಂದಿವೆ. `ವಲ್ಲಭಪುರಿಯ ದಂತಕತೆ', `ಅಂಧಯುಗ', `ಮಹಾರಾತ್ರಿ', `ಚೂರಿಕಟ್ಟೆ', `ಅಂಕೆತಪ್ಪಿದ ಶಂಕರಲಾಲ್', `ಬಾಕಿ ಇತಿಹಾಸ', `ಹಾವುಹೊಕ್ಕ ಮನಗಳು', `ಬಹುಮುಖಿ', `ಇರುವುದೆಲ್ಲವ ಬಿಟ್ಟು', `ತದ್ರೂಪಿ' ಮುಂತಾದ ನಾಟಕಗಳನ್ನು ರಂಗಕ್ಕೆ ತಂದಿದೆ. ಸಿ.ಜಿ.ಕೆ, ಆರ್.ನಾಗೇಶ್, ಇಕ್ಬಾಲ್ ಅಹಮದ್, ಸುರೇಂದ್ರನಾಥ್, ಸುರೇಶ್ ಆನಗಳ್ಳಿ ಮೊದಲಾದ ನಿರ್ದೇಶಕರು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನಾಟಕದಲ್ಲಿನ ರೂಪಕಗಳು
ಪ್ರಸ್ತುತ ಬರ ಕಥೆಯನ್ನು ಯಥಾವತ್ ಅದರ ನಿರೂಪಣಾಸಹಿತ ರಂಗಕ್ಕೆ ತರದೆ, ಇಡೀ ಕಥೆಯನ್ನು ನಾಟಕರೂಪ ಮಾಡಿಕೊಂಡು ರಂಗಕ್ಕೆ ಅಳವಡಿಸಿರುವುದು ಬಹಳ ಒಳ್ಳೆಯ ವಿಷಯ ಮತ್ತು ಆ ನಾಟಕರೂಪವೂ ಸಾಕಷ್ಟು ಚೆನ್ನಾಗಿಯೇ ಇದೆ. ಆದರೂ ಕೆಲವು ಮುಖ್ಯವಾದ ವಿಷಯಗಳು ಬಿಟ್ಟುಹೋಗಿವೆ.

ಸತೀಶನ ಹವ್ಯಾಸಗಳು, ಬಂಗಲೆಯಲ್ಲಿ ತೂಗುಹಾಕಿದ್ದ ಅವನಿಗೆ ಪ್ರಿಯವಾದ ವ್ಯಾನ್ಗಾಗ್ನ ಉರಿವ ಮುಖದ ಕ್ಯಾಕ್ಟಸ್, ಹೀಗೆ ಇವೆಲ್ಲವನ್ನೂ ಬಳಸಿಕೊಂಡಿದ್ದರೆ ಪ್ರಯೋಗಕ್ಕೆ ಇನ್ನೂ ಹೆಚ್ಚಿನ ಘನತೆಯನ್ನು ತಂದುಕೊಡುತ್ತಿತ್ತು. ಬರದ ಕುರಿತ ಹಾಡುಗಳು ಈ ನಾಟಕಕ್ಕೆ ಅಗತ್ಯವಿರಲಿಲ್ಲವಾದರೂ ಅದನ್ನು ಜೀವಂತಿಕೆಯಿಂದ ನಟಿಸಿದ್ದರೆ ಮಾತ್ರ ಹಾಡುಗಳು ಉದ್ದೀಪನವಾಗಿ ಕೆಲಸಮಾಡುತ್ತಿದ್ದವು. ಬರಿದೆ ಭಾವಸೂಚಕಗಳಾಗಿ ಹಾಡುಗಳು ಬಳಕೆಯಾದರೆ ಅವು ತಮ್ಮ ಪಾಡಿಗೆ ತಾವಿರುತ್ತವೆಯೇ ಹೊರತು ಪ್ರಯೋಗಕ್ಕೆ ಯಾವುದೇ ಕಾಣಿಕೆ ಸಲ್ಲಿಸುವುದಿಲ್ಲ.

ರಂಗವನ್ನು ಬಹಳ ಮಿತವಾದ ಸಜ್ಜಿಕೆಯೊಂದಿಗೆ ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಆದರೆ ಪರಿಕರ ಮತ್ತು ವಸ್ತ್ರವಿನ್ಯಾಸ, ವಸ್ತು-ಸಂಘರ್ಷಗಳಿಂದ ಪ್ರೇಕ್ಷಕರನ್ನು ವಿಮುಖಗೊಳಿಸುತ್ತದೆ. ಹಳ್ಳಿಯ ಜನರ ವೇಷಭೂಷಣಗಳು ಅಚ್ಚ ಬಿಳುಪಿನದಾಗಿದ್ದು, ಯಾವುದೋ ಮಠದಲ್ಲಿ ಪ್ರವಚನ ಕೇಳಲು ಬಂದಿರುವ ಭಕ್ತರಂತೆ ಕಾಣುತ್ತಾರೆ.

ಇನ್ನು ಪರಿಕರಗಳ ಬಗ್ಗೆ- ಒಂದು ಮೂಟೆಯಲ್ಲಿ ಪೇಪರು ತುಂಬಿ ತಂದು, ಇದು ಅಕ್ಕಿಯ ಮೂಟೆ ಎಂದರೆ ಪ್ರೇಕ್ಷಕ ನಂಬಲಾರ; ಅವನನ್ನು ನಂಬಿಸಲು ಇರುವ ಏಕೈಕ ದಾರಿಯೆಂದರೆ ಅಭಿನಯ. ಅದು ಸಶಕ್ತವಾಗಿದ್ದರೆ ಪೇಪರನ್ನೇ ರೊಟ್ಟಿಯೆಂದೂ, ಬಲೂನನ್ನೇ ಕಲ್ಲುಗುಂಡೆಂದೂ ನಂಬಿಸಬಹುದು. ಒಂದು ಕಡೆ ಗಂಜಿಕೇಂದ್ರದಲ್ಲಿ ನಿಜವಾದ ಡಬರಿ, ಸೌಟುಗಳು, ತಟ್ಟೆಗಳನ್ನು ತಂದು ಗಂಜಿಯೇ ಇಲ್ಲದೆ ಗಂಜಿಯನ್ನು ಹಾಕುವಂತೆ ಅಭಿನಯಿಸಲಾಗುತ್ತದೆ, ಮತ್ತೊಂದು ಕಡೆ ಹುಟ್ಟುಹಬ್ಬದ ಆಚರಣೆಯಲ್ಲಿ ಬಾಕ್ಸಿನಲ್ಲಿ ನಿಜವಾದ ಕೇಕನ್ನೇ ತಂದು ಕತ್ತರಿಸಲಾಗುತ್ತದೆ!

ದೇಶ-ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದ ಕಥಾನಾಯಕನಿಗೆ ಸ್ವಂತ ವ್ಯಕ್ತಿತ್ವಕ್ಕೂ, ಸಾಮಾಜಿಕ, ರಾಜಕೀಯ ವ್ಯಕ್ತಿತ್ವಕ್ಕೂ ನಡುವೆ ಯಾವ ಅಂತರವೂ ಇಲ್ಲ. ಅಲ್ಲಿ `ಸ್ವಕೇಂದ್ರಿತ'ಕ್ಕಿಂತ `ಸಮಷ್ಟಿ'ಯಲ್ಲಿ ಅಭಿವ್ಯಕ್ತವಾಗುವ ವ್ಯಕ್ತಿತ್ವವೇ ಮುಖ್ಯವಾಗಿತ್ತು; ಮತ್ತದು ಆ ಕಾಲದ ರಾಜಕೀಯ ಪರಿಸ್ಥಿಗೆ ಲೇಖಕನೊಬ್ಬನ ಅಭಿವ್ಯಕ್ತಿಯ ತುರ್ತಾಗಿತ್ತು.

ಇಂತಹ ತುರ್ತನ್ನು ಅಭಿವ್ಯಕ್ತಗೊಳಿಸುವ ರೂಪಕಗಳು ಕಥೆಯಲ್ಲಿ ಯಥೇಚ್ಛವಾಗಿವೆ. ಅಂತಹ ರೂಪಕಗಳನ್ನು ನಾಟಕದಲ್ಲಿ ಹಲವು ಕಡೆ ಬಳಸಿಕೊಂಡೂ ಇದ್ದಾರೆ. ಅದನ್ನು ಇನ್ನಷ್ಟು ಕೇಂದ್ರೀಕರಿಸಿದ್ದರೆ ಚೆನ್ನಿತ್ತು. ಉದಾಹರಣೆಗೆ- ಇಡೀ ರಂಗಸಜ್ಜಿಕೆಯಲ್ಲಿ ನಾಯಕನ ಮನೆಯ ಮುಂದಿರುವ ದೊಡ್ಡ ಪಾಟಿನಲ್ಲಿ ಗರಿಕೆಗಾತ್ರದ ಗಿಡವೊಂದು ಒಳ್ಳೆಯ ಪ್ರತಿಮೆಯಾಗಬಹುದಿತ್ತು.

ಇನ್ನು ನಟನೆಯಲ್ಲಿ ಹಳೆಬೇರು ಹೊಸಚಿಗುರು ಎಂಬಂತೆ ಹಳೆ ಹೊಸ, ನುರಿತ, ಕಲಿಯುತ್ತಿರುವ ನಟನಟಿಯರು ಸೇರಿರುವುದು ಒಳ್ಳೆಯ ಪ್ರಕ್ರಿಯೆ. ರಂಗದ ಮೇಲೆ ನರೇಶ್, ರಾಘವೇಂದ್ರ, ತ್ಯಾಗರಾಜ್, ಮುಕುಂದ, ಮಂಜುಳಾ, ಲತಾ ಮಂಜುನಾಥ್, ದೀಪಿಕಾ, ಶಿವಕುಮಾರ್, ಭರತ್, ನಂದನ್, ಮನೋಹರ್, ಶ್ಯಾಮ್ಸುಂದರ್, ವಿಕ್ರಮ್, ಶ್ರಿಕಾಂತ್, ಹನುಮಂತ್, ಸ್ಟ್ಯಾನ್ಲಿ, ನಾಗೇಶ್ ಅಭಿನಯಿಸಿದರು. ಕಥಾನಾಯಕ ಸತೀಶನ ಪಾತ್ರದಲ್ಲಿ ಕೀರ್ತಿಭಾನು, ಮಂತ್ರಿ ರುದ್ರಪ್ಪನಾಗಿ ರಾಜಶೇಖರ್ ನಿಲೋಗಲ್ಮಠ್, ಭೀಮೋಜಿಯಾಗಿ ಅಲಕಾನಂದ ಸಶಕ್ತವಾಗಿ ಅಭಿನಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.