ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಸಲೇಖ ಮಾತಿನ ತಪರಾಕಿ

Published : 7 ಆಗಸ್ಟ್ 2015, 19:30 IST
ಫಾಲೋ ಮಾಡಿ
Comments

ಟಲ್‌ ಸಾಂಗ್, ಕೀಟಲೆ ಸಾಂಗ್‌, ಬಾಟಲ್ ಸಾಂಗ್ ಈಗ ಸಿನಿಮಾಗಳಲ್ಲಿ ಆದ್ಯತೆಯಾಗುತ್ತಿದೆ. ನಾಯಕ ಬರುತ್ತಾನೆ, ತಾನೇ ಎಲ್ಲಾ ಎಂಬಂತೆ ನಿಲ್ಲುತ್ತಾನೆ. ಆಗ ಬರುವುದೇ ಬ್ಯಾಟಲ್‌ ಸಾಂಗ್‌. ಹುಡುಗಿ ಎದುರಾದರೆ ಕೀಟಲೆ ಸಾಂಗ್‌. ಕೊನೆಯಲ್ಲಿ ಬಾಟಲ್‌ ಸಾಂಗ್. ಹೀಗೆ ವ್ಯಂಗ್ಯದ ಮಾತಿನ ಚಾಟಿ ಬೀಸುತ್ತಲೇ ದೊಡ್ಡದಾಗಿ ನಕ್ಕರು ಸಂಗೀತ ಸಂಯೋಜಕ ಮತ್ತು ಚಿತ್ರ ಸಾಹಿತಿ ಹಂಸಲೇಖ.

‘ಕುಚ್ಚಿಕೂ ಕುಚ್ಚಿಕು’ ಚಿತ್ರದ ಆಡಿಯೊ ಬಿಡುಗಡೆ ನಂತರ ಲೋಕಾಭಿರಾಮ ಮಾತನಾಡುತ್ತಾ ಹಂಸಲೇಖ ತಮ್ಮ ನಾಸ್ಟಾಲ್ಜಿಯಾ ಹಾಗೂ ಈಗಿನ ಹಾಡುಗಳ ಕುರಿತ ಬೇಸರವನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿದರು.
ಡಬ್ಬಿಂಗ್‌, ಕನ್ನಡ ಭಾಷೆ ಮತ್ತು ಚಿತ್ರ ಸಾಹಿತ್ಯದ ಬೆಳವಣಿಗೆ, ದೇಸಿ ಕಾಲೇಜಿನ ಸ್ಥಿತಿ, ತಮ್ಮ ಮುಂದಿನ ಸಿನಿಮಾ... ಹೀಗೆ ಎಲ್ಲವುಗಳ ಬಗ್ಗೆ ಅವರು ಮಾತನಾಡಿದರು.

‘ಕನ್ನಡಕ್ಕಾಗಿ ರಕ್ತ ಹರಿಸುವೆ ಎಂದು ಹಾಡಿ ಜೈಕಾರ ಹಾಕಿಸಿಕೊಂಡ ನಮ್ಮ ನಾಯಕ ನಟರು ಹಾಡಿದ್ದನ್ನು ಈಗ ಮಾಡಿ ತೋರಿಸಬೇಕಾಗಿದೆ. ಡಬ್ಬಿಂಗ್ ವಿರುದ್ಧ ಪಟ್ಟನ್ನು ಒಂದು ಶಕ್ತಿಯಾಗಿ ಬಳಸಿಕೊಳ್ಳಬೇಕು. ಇದು ಪ್ರಾದೇಶಿಕ ಭಾಷೆಯ ರಕ್ಷಣೆಯ ನೈತಿಕ ವಿಷಯ. ಡಬ್ಬಿಂಗ್ ವಿರುದ್ಧ ದೊಡ್ಡ ಮಟ್ಟದ ಹೋರಾಟವೇ ಆರಂಭವಾಗಬೇಕು.

ತುಂಬಾ ಜನ ಹೋರಾಟಗಾರರು ಡಬ್ಬಿಂಗ್ ಪರವಾಗಿದ್ದಾರೆ. ಕೆಲವರು ವೇಷ ಹಾಕಿಕೊಂಡಿದ್ದಾರೆ. ನಾಯಕ ನಟರು ಡಬ್ಬಿಂಗ್‌ನಿಂದ ಯಾರಿಗೆ ಅಪಾಯ–ಲಾಭ ಎನ್ನುವುದನ್ನು ಮನದಟ್ಟು ಮಾಡಿಕೊಡಬೇಕು. ನಮ್ಮ ಜನ ದ್ವಂದ್ವದಲ್ಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಪರಿಣಾಮ ಡಬ್ಬಿಂಗ್ ಬಂದರೆ ತಪ್ಪೇನು ಎನ್ನುತ್ತಿದ್ದಾರೆ. ರೀಮೇಕ್ ಮತ್ತು ಡಬ್ಬಿಂಗ್ ನಮ್ಮ ಮೇಲಿನ ದಾಳಿ. ರೀಮೇಕ್ ಸಹ ನಿಲ್ಲಬೇಕು’ ಎಂದು ಡಬ್ಬಿಂಗ್‌ಗೆ ವಿರೋಧ ವ್ಯಕ್ತಪಡಿಸಿದರು.

ಇನ್ನು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಿನಿಮಾ ಪ್ರೀತಿ ಮತ್ತು ಅದರೊಟ್ಟಿಗೆ ‘ಬಜರಂಗಿ ಭಾಯಿಜಾನ್’ ಚಿತ್ರದ ಗೆಲುವನ್ನು ತಾಳೆಯಾಗಿಟ್ಟು ನೋಡಿದರು ಸಂಗೀತ ಮಾಂತ್ರಿಕ. ‘ನನಗೆ ರಾಕ್‌ಲೈನ್ 20 ಕಥೆಗಳನ್ನು ಕೇಳಿಸಿದ್ದಾರೆ. ಆದರೆ ಅದ್ಯಾವುದನ್ನು ಜಾರಿ ಮಾಡಿಲ್ಲ. ಹೊಸದಾಗಿ ಏನನ್ನಾದರೂ ಮಾಡುವ ಹಂಬಲ ಅವರಿಗೆ ಇತ್ತು.

ಅವರು ಒಂದು ಕಥೆಯನ್ನಿಟ್ಟುಕೊಂಡು ಹೋದರೆ, ಅದಕ್ಕಿಂತ ರೀಮೇಕ್ ಚಿತ್ರಗಳತ್ತ ನಾಯಕರು ಒಲವು ತೋರುತ್ತಿದ್ದರು. ಯಾವ ನಟರೂ ನನಗೆ ಬೆಂಬಲ ನೀಡುತ್ತಿಲ್ಲ ಎಂದು ರಾಕ್‌ಲೈನ್ ಬೇಸರ ಪಟ್ಟುಕೊಳ್ಳುತ್ತಿದ್ದರು. ಸ್ವಮೇಕ್ ಮಾಡುವ ಹಟದ ಹಿನ್ನೆಲೆಯಲ್ಲಿ ಹುಟ್ಟಿದ್ದೇ ಬಜರಂಗಿ ಭಾಯಿಜಾನ್’ ಎಂದರು.

ಒಂದು ಸಮಯದಲ್ಲಿ ಸಾಲು ಸಾಲು ಚಿತ್ರಗಳಿಗೆ ಸಂಗೀತ ಹೊಸೆದವರು ಹಂಸಲೇಖ. ಸದ್ಯಕ್ಕೆ ಸಂಗೀತ ನಿರ್ದೇಶನಕ್ಕೆ ಅವರು ಒಂದು ಮಿತಿ ಹಾಕಿಕೊಂಡಂತೆ ಕಾಣುತ್ತಾರೆ ಹಂಸಲೇಖ. ಹೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳುವ ಗೊಡವೆಗೆ ಅವರು ಹೋಗುತ್ತಿಲ್ಲ. ಬಂದ ಅವಕಾಶಗಳನ್ನು ಶಿಷ್ಯರಿಗೆ ತೋರುತ್ತಿದ್ದಾರೆ. ಇದು ಅವರೇ ವಿಧಿಸಿಕೊಂಡ ಮಿತಿಯಂತೆ. ಒಳ್ಳೆಯ ಮತ್ತು ಇಷ್ಟವಾದ ಕಥೆಗಳಿಗೆ ಮತ್ತೆ ಟ್ಯೂನ್ ಸಂಯೋಜಿಸುವ ಆಸೆ ಸಹ ಇದೆ ಅವರಿಗೆ. ‘ರವಿಚಂದ್ರನ್ ಅವರು ಆಯೋಜಿಸಿದ್ದ ಹೊಸ ತಲೆಮಾರಿನ ಸಂಗೀತ ಸಂಯೋಜಕರ ಕಾರ್ಯಕ್ರಮಕ್ಕೆ ಹೋಗಿದ್ದೆ. 80 ಜನರು ಇದ್ದರು.

ನನ್ನೊಬ್ಬನನ್ನು ಇವರೆಲ್ಲ ಹಂಚಿಕೊಂಡಿದ್ದಾರಲ್ಲಾ ಎಂದುಕೊಂಡೆ (ನಗು). ನಮ್ಮ ಚಿತ್ರರಂಗದಲ್ಲಿ ಉತ್ಪನ್ನಗಳು ಹೆಚ್ಚುತ್ತಿದ್ದು, ಅವು ಸರಿಯಾದ ಹಾದಿಯಲ್ಲಿ ಬರಬೇಕು. ಕನ್ನಡದಲ್ಲಿ ಹೊಸ ತಲೆಮಾರಿನ ಸಂಗೀತ ನಿರ್ದೇಶಕರ ಹರಿವು ಅಪಾರವಾಗಿ ಇದೆ. ತಂತ್ರಜ್ಞಾನದ ಫಲವಾಗಿ ಯಾರು ಬೇಕಾದರೂ ಸಂಗೀತ ಸಂಯೋಜಿಸಬಹುದು ಎನ್ನುವಂತಾಗಿದೆ.

ಸಂಗೀತಕ್ಕೆ ಲಿಂಕೇಜ್ ಮತ್ತು ಪ್ಯಾಕೇಜ್ ಎನ್ನುವುದು ಬಂದಿದೆ. ಇದರಿಂದ ಸಿನಿಮಾ ಲೀಕೇಜ್ ಆಗುತ್ತದೆ (ನಗು). ಇವರಿಗೆ ಚಿತ್ರಕಥೆ ಬರೆಯುವವರು ನಾಡು–ನುಡಿ ಪರಂಪರೆಯ ಬಗ್ಗೆ ಮಾರ್ಗದರ್ಶನ ನೀಡಬೇಕು. ಭಾಷೆ ವಿದೂಷಕ ಸ್ಥಾನಕ್ಕೆ ಹೋದರೆ ಅದರ ಬೆಳವಣಿಗೆ ಕಷ್ಟ’ ಎನ್ನುವ ಅವರ ಮಾತಿನಲ್ಲಿ ಕಲೆ ಮತ್ತು ಸಾಹಿತ್ಯದ ಅಭಿರುಚಿ ಸಂಗೀತ ನಿರ್ದೇಶಕರಿಗೆ ಮುಖ್ಯ ಎನ್ನುವ ಭಾವ ಅಡಕವಾಗಿತ್ತು.

ತಾವು ಸ್ಥಾಪಿಸಿರುವ ದೇಸಿ ಕಾಲೇಜನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ಕೊಂಡೊಯ್ಯುವ ಮನಸ್ಸು ಅವರಿಗಿದೆ. ಈಗಾಗಲೇ ಅದಕ್ಕಾಗಿ ಜಾಗವನ್ನು ತೆಗೆದುಕೊಂಡಿದ್ದು, ಶೀಘ್ರ ಕೆಲಸ ಆರಂಭವಾಗಲಿದೆಯಂತೆ. ಮೋಹನ್ ಸೇರಿದಂತೆ ತಮ್ಮ ನಾಲ್ಕಾರು ವಿದ್ಯಾರ್ಥಿಗಳ ಮೇಲೆ ಅವರಿಗೆ ಭರವಸೆ ಇದೆ.

ನಿರ್ದೇಶನದ ಒಲವು
ಹಂಸಲೇಖ, ಶಿವರಾಜ್ ಕುಮಾರ್‌ಗೆ ‘ಬಾಗಿನ’ ಎನ್ನುವ ಸಿನಿಮಾ ನಿರ್ದೇಶಿಸುವರು ಎನ್ನುವ ಮಾತುಗಳು ಕೇಳಿಬಂದಿದ್ದವು. ಅದು ಕೈಗೂಡಲಿಲ್ಲ. ಈಗ ಮತ್ತೆ ಸಿನಿಮಾ ನಿರ್ದೇಶನದ ಬಗ್ಗೆ ಹೇಳುವ ಹಂಸಲೇಖ, ಚಿತ್ರದ ಬಗ್ಗೆ ಮಾತುಕತೆಯನ್ನು ಬಿಟ್ಟುಕೊಡುವುದಿಲ್ಲ. ಆದರೆ 10 ಹಾಡುಗಳಂತೂ ಇದ್ದೇ ಇರಲಿವೆ ಎನ್ನುವ ಮೂಲಕ ಸಂಗೀತ ಪ್ರಧಾನ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಹೇಳುವರು. ‘ಚಿತ್ರದಲ್ಲಿ ರೂಪಕಗಳನ್ನು ಹೆಚ್ಚಾಗಿ ಬಳಸಿಕೊಳ್ಳುವೆ’ ಎನ್ನುವರು. 

ಆಡಬಾರದ ಮಾತು...
‘ನನ್ನ ಸಾಹಿತ್ಯ ಆಡು ಮಾತಿನಲ್ಲಿರುತ್ತದೆ. ನಿರ್ದೇಶಕ ಕೆ.ಎಸ್‌.ಎಲ್. ಸ್ವಾಮಿ ಅವರು ಅಂದೇ, ಆಡು ಮಾತು ಆಡಬಾರದ ಮಾತು ಎಲ್ಲವೂ ಬರುತ್ತಿದೆ ಎಂದಿದ್ದರು. ಆದರೆ ಆಡಬಾರದ ಮಾತು ಈಗ ಬರುತ್ತಿದೆ. ಭಾಷೆ ಪರಿವರ್ತನೆಯಾಗಬೇಕು. ಉದಯಶಂಕರ್ ಅವರು ಬರೆದಹಾಗೆ ನಾನು ಬರೆಯಲಿಲ್ಲ. ನಾನು ಬರೆದ ಹಾಗೆ ಯೋಗರಾಜ್ ಬರೆಯಲಿಲ್ಲ’ ಎನ್ನುವ ಹಂಸಲೇಖ, ನಿರ್ದೇಶಕ ಶಶಾಂಕ್ ಅವರ ತಾಳ್ಮೆ ಮತ್ತು ಸಿನಿಮಾ ಶೈಲಿಗೂ ಬಿಚ್ಚು ಮನದ ಅಂಕ ನೀಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT