ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೇಹ್‌ನಿಂದ ದೆಹಲಿ ಗಡಿ ತಲುಪಿದ್ದ ಪಾದಯಾತ್ರೆ: ವಾಂಗ್ಚುಕ್‌ ಪೊಲೀಸ್‌ ವಶಕ್ಕೆ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments
‘ಹಟ ಮಾಡಿದರು’:
ಪ್ರತಿಭಟನೆ ನಡೆಸದಂತೆ, ಐದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 163ರ ಅಡಿಯಲ್ಲಿ ದೆಹಲಿಯಾದ್ಯಂತ ಪೊಲೀಸರು ಸೋಮವಾರವೇ ನಿಷೇಧಾಜ್ಞೆ ಹೇರಿದ್ದರು. ಸೋಮವಾರ ರಾತ್ರಿ ವೇಳೆಗೆ ಪ್ರತಿಭಟನಕಾರರು ದೆಹಲಿ ಗಡಿ ತಲುಪಿದರು. ‘ದೆಹಲಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ನೀವು ಮರಳಿ ಎಂದು ಅವರಿಗೆ ಹೇಳಿದೆವು. ಆದರೆ, ಅವರು ಇದನ್ನು ಒಪ್ಪಲಿಲ್ಲ, ಹಟ ಮಾಡಿದರು. ಆದ್ದರಿಂದ ಅವರನ್ನು ವಶಕ್ಕೆ ಪಡೆಯಲಾಯಿತು’ ಎಂದು ಪೊಲೀಸರು ಹೇಳಿದರು.
‘ಪ್ರಧಾನಿಗೆ ಇ–ಮೇಲ್‌ ಮಾಡಿದ್ದರು’:
‘ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿತ್ತು. ಜೊತೆಗೆ, ಅನುಮತಿ ಕೋರಿ, ವಾಂಗ್ಚುಕ್‌ ಸೇರಿದಂತೆ ಇತರ ಪ್ರತಿಭಟನಕಾರರು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೂ ಇ–ಮೇಲ್‌ ಮಾಡಿದ್ದರು. ಈ ಮಾಹಿತಿಯನ್ನೇ ಪಡೆದುಕೊಂಡು ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪಾದಯಾತ್ರೆ ಆಯೋಜಿಸಿದ್ದ ಸಂಸ್ಥೆಯ ಪ್ರತಿನಿಧಿಗಳು ಆರೋಪಿಸಿದ್ದಾರೆ.
ಪ್ರತಿಭಟನಕಾರರಲ್ಲಿ 30 ಮಹಿಳೆಯರಿದ್ದರು. ಇವರನ್ನೂ ವಶಕ್ಕೆ ಪಡೆಯಲಾಗಿದೆ. ಪುರುಷ ಪ್ರತಿಭಟನಕಾರರ ಜೊತೆಯಲ್ಲಿಯೇ ಮಹಿಳೆಯರನ್ನೂ ಠಾಣೆಯಲ್ಲಿ ಇರಿಸಿಕೊಳ್ಳಲಾಗಿದೆ
ಮೊಹಮ್ಮದ್‌ ಹನೀಫಾ ಲಡಾಖ್‌ ಸಂಸದ
ದೆಹಲಿಯಲ್ಲಿ ಲಡಾಖ್‌ ಭವನ ಹಾಗೂ ಲಡಾಖ್‌ ವಿದ್ಯಾರ್ಥಿಗಳು ನೆಲಸಿರುವ ಪ್ರದೇಶಗಳಲ್ಲೂ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ
ಸೋನಮ್‌ ವಾಂಗ್ಚುಕ್‌ ಪರಿಸರ ಹೋರಾಟಗಾರ
ರೈತರನ್ನು ನಡೆಸಿಕೊಂಡ ಹಾಗೆಯೇ ಇವರನ್ನು ನಡೆಸಿಕೊಳ್ಳಲಾಗುತ್ತಿದೆ. ಪ್ರತಿಭಟನಕಾರರೊಂದಿಗೆ ಮಾತನಾಡುವ ಬದಲು ಅವರನ್ನು ವಶಕ್ಕೆ ಪಡೆಯಲಾಗಿದೆ. ವಾಂಗ್ಚುಕ್‌ ಅವರನ್ನು ಬೆಂಬಲಸಿ ಒಂದು ದಿನ ಉಪವಾಸ ಮಾಡುತ್ತೇನೆ
‌ಮೇಧಾ ಪಾಟ್ಕರ್‌ ಪರಿಸರ ಹೋರಾಟಗಾರ್ತಿ
ದೆಹಲಿಗೆ ಬರುತ್ತಿದ್ದ ಶಾಂತಿಯುತ ಪಾದಯಾತ್ರೆಯನ್ನು ತಡೆಯುವುದರಿಂದ ಬಿಜೆಪಿ ಸರ್ಕಾರವು ಏನನ್ನೂ ಸಾಧಿಸುವುದಿಲ್ಲ. ನಮ್ಮ ಗಡಿ ಪ್ರದೇಶಕ್ಕೆ ಕೇಂದ್ರವು ಕಿವಿಯಾಗುವುದಿಲ್ಲ ಎನ್ನುವುದು ರಾಜಕೀಯ ಕಿವುಡುತನ
ಅಖಿಲೇಶ್‌ ಯಾದವ್‌ ಸಂಸದ ಎಸ್‌ಪಿ ಮುಖ್ಯಸ್ಥ
ಮೋದಿ ಅವರೇ ರೈತರ ವಿಷಯದಲ್ಲಿ ಆದಂತೆಯೇ ಈ ‘ಚಕ್ರವ್ಯೂಹ’ವು ಒಡೆದು ಹೋಗುತ್ತದೆ. ಇದರೊಂದಿಗೆ ನಿಮ್ಮ ಅಹಂಕಾರ ಕೂಡ. ಲಡಾಖ್‌ನ ದನಿಗೆ ಕಿವಿಯಾಗಿ
ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ
ನನಗೆ ಪಾದಯಾತ್ರೆ ಕುರಿತು ಮಾಹಿತಿ ಇಲ್ಲ. ಆದರೆ ಕೋಲ್ಕತ್ತದಲ್ಲಿ ವ್ಯಂಗ್ಯಚಿತ್ರಕಾರರನ್ನು ತಮಿಳುನಾಡಿನಲ್ಲಿ ಹಾಸ್ಯಕಲಾವಿದನನ್ನು ಬಂಧಿಸಿದಾಗ ರಾಹುಲ್‌ ಗಾಂಧಿ ಮೌನವಹಿಸಿದ್ದರು. ವಾಂಗ್ಚುಕ್‌ಗೆ ನೀಡುತ್ತಿರುವ ಬೆಂಬಲವು ಕಾಂಗ್ರೆಸ್‌ನ ಬೂಟಾಟಿಕೆಯಷ್ಟೆ
ರವಿಶಂಕರ್‌ ಪ್ರಸಾದ್‌ ಬಿಜೆಪಿ ವಕ್ತಾರ
ವಶಕ್ಕೂ ಮುನ್ನ ವಾಂಗ್ಚುಕ್‌ ಹೇಳಿದ್ದೇನು?
‘ದೆಹಲಿ ಹಾಗೂ ಹರಿಯಾಣ ಪೊಲೀಸರು ನಮ್ಮ ಬಸ್‌ಗಳನ್ನು ಹಿಂಬಾಲಿಸುತ್ತಿದ್ದರು. ಪೊಲೀಸರು ನಮಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ನಾವು ಶುರುವಿನಲ್ಲಿ ಭಾವಿಸಿದೆವು. ಆದರೆ, ಅವರು ನಮ್ಮ ರಕ್ಷಣೆ ಮಾಡುತ್ತಿರಲಿಲ್ಲ. ನಮ್ಮನ್ನು ವಶಕ್ಕೆ ಪಡೆಯಲು ನಮ್ಮನ್ನು ಹಿಂಬಾಲಿಸುತ್ತಿದ್ದರು ಎಂದು ದೆಹಲಿ ಗಡಿಗೆ ತಲುಪುತ್ತಿದ್ದಂತೆಯೇ ನಮಗೆ ತಿಳಿಯಿತು. ಗಡಿಯಲ್ಲಿ ಸುಮಾರು 1000 ಮಂದಿ ಪೊಲೀಸರು ನಿಂತಿದ್ದಾರೆ’ ಎಂದು ವಾಂಗ್ಚುಕ್‌ ವಿಡಿಯೊವೊಂದಲ್ಲಿ ಹೇಳಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಮುನ್ನ ವಾಂಗ್ಚುಕ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೊ ಪೋಸ್ಟ್‌ ಮಾಡಿದ್ದರು.
ಹಕ್ಕು ಮರಳಿ ಪಡೆಯಲು ಸತ್ಯಾಗ್ರಹ
ಸೋನಮ್‌ ವಾಂಗ್ಚುಕ್‌ ಸೇರಿದಂತೆ ಲಡಾಖ್‌ನ ಜನರು ನಾಲ್ಕು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನ ವಾಂಗ್ಚುಕ್‌ ಅವರು 21 ದಿನಗಳ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು. ‌ಲಡಾಖ್‌ನ ಪ್ರದೇಶ ಗಳನ್ನು ಚೀನಾ ಆಕ್ರಮಿಸಿ ಕೊಂಡಿದ್ದು, ಆ ಪ್ರದೇಶಗಳನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ಘೋಷಿಸಿದ್ದ ಅವರು ‘ಗಡಿಯತ್ತ ನಡಿಗೆ’ ಎಂಬ ಒಂದು ದಿನದ ಮೆರವಣಿಗೆಯನ್ನೂ ಘೋಷಿಸಿದ್ದರು. ಆದರೆ, ಆ ಮೆರವಣಿಗೆ ನಡೆಯಲಿಲ್ಲ. ಲಡಾಖ್‌ಗೆ ರಾಜ್ಯದ ಸ್ಥಾನ ನೀಡಬೇಕು ಮತ್ತು ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್‌ ಅನ್ನು ಸೇರಿಸಬೇಕು ಎನ್ನುವುದು ಪ್ರತಿಭಟನ ಕಾರರ ಮುಖ್ಯ ಬೇಡಿಕೆ.
ಲಡಾಖ್‌ನಲ್ಲಿ ಪ್ರತಿಭಟನೆ
ಸೋನಮ್‌ ವಾಂಗ್ಚುಕ್‌ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದನ್ನು ವಿರೋಧಿಸಿ ಲಡಾಖ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಭಟನಕಾರರು ‘ದೆಹಲಿ ಪೊಲೀಸರೇ, ಶೇಮ್‌, ಶೇಮ್‌’ ಎಂದು ಘೋಷಣೆ ಕೂಗುತ್ತಿದ್ದಾರೆ. ತಕ್ಷಣವೇ ವಾಂಗ್ಚುಕ್‌ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಪಾದಯಾತ್ರೆಯನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT