ಮಮತಾ ಬ್ಯಾನರ್ಜಿ ಅವರು ಕಿರಿಯ ವೈದ್ಯರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ನಡೆಸಿದರು.
ಪ್ರತಿಭಟನೆನಿರತ ವೈದ್ಯರ ಬೇಡಿಕೆಗಳನ್ನು ಪರಿಶೀಲಿಸುವ ಮತ್ತು ಯಾರಾದರೂ ತಪ್ಪಿತಸ್ಥರು ಎಂಬುದು ಸಾಬೀತಾದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
‘ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ದೀದಿಯಾಗಿ (ಅಕ್ಕ)
ನಿಮ್ಮ ಬಳಿ ಬಂದಿದ್ದೇನೆ. ಬಿಕ್ಕಟ್ಟು ಬಗೆಹರಿಸಲು ನನ್ನ ಕೊನೆಯ ಪ್ರಯತ್ನದ ಭಾಗವಾಗಿ ಇಲ್ಲಿದ್ದೇನೆ. ನಿಮಗೆ ಅನ್ಯಾಯ ಉಂಟಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.
‘ನೀವು ಪ್ರತಿಭಟನೆ ಆರಂಭಿಸಿದ ದಿನದಿಂದಲೂ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ. ಏಕೆಂದರೆ, ನೀವು ಬೀದಿಯಲ್ಲಿರುವಾಗ ನಿಮ್ಮ ರಕ್ಷಣೆಗಾಗಿ ನಾನು ಎಚ್ಚರದಿಂದಿರಬೇಕಾಗುತ್ತದೆ’ ಎಂದರು.
ದಾಳಿಗೆ ಸಂಚು ಆರೋಪ: ಸಿಪಿಎಂ ಮುಖಂಡನ ಬಂಧನ
ಪ್ರತಿಭಟನೆನಿರತ ವೈದ್ಯರ ಮೇಲೆ ದಾಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಸಿಪಿಎಂ ಮುಖಂಡ ಕೊಲಾತನ್ ದಾಸ್‌ಗುಪ್ತಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತ ಪೊಲೀಸರು ಶನಿವಾರ ಹೇಳಿದ್ದಾರೆ.