ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ನಡೆಸಿ, ಬಿಜೆಪಿ ‘ಹೆಮ್ಮರ’ವಾಗಿ ಬೆಳೆಯಲು ಕಾರಣರಾದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ವನ್ನು ನೀಡಲು ನಿರ್ಧರಿಸಲಾಗಿದೆ. ಬಿಹಾರದ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರನ್ನು ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಿದ ಹತ್ತು ದಿನಗಳಲ್ಲೇ ಈ ಘೋಷಣೆ ಹೊರಬಿದ್ದಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶನಿವಾರ ಈ ನಿರ್ಧಾರವನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಅಡ್ವಾಣಿ ಅವರು ನಮ್ಮ ಕಾಲಾವಧಿಯ ಅತ್ಯಂತ ಗೌರವಾನ್ವಿತ ರಾಜಕಾರಣಿ. ದೇಶದ ಬೆಳವಣಿಗೆಗೆ ಅವರ ಕೊಡುಗೆ ಬಹುಕಾಲ ನೆನಪಿನಲ್ಲಿ ಇರುವಂತಹುದು’ ಎಂದು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಸಾಕಾರಗೊಂಡು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ 11 ದಿನಗಳಲ್ಲೇ ಈ ಹೋರಾಟದ ಪ್ರಮುಖ ನೇತಾರ ಅಡ್ವಾಣಿ ಅವರಿಗೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. ‘ಮಂಡಲ್’ ರಾಜಕಾರಣದ ಮೂಲಕ ಛಾಪು ಮೂಡಿಸಿರುವ ಠಾಕೂರ್ ಹಾಗೂ ‘ಕಮಂಡಲ’ ರಾಜಕಾರಣದ ನೇತಾರ ಅಡ್ವಾಣಿ ಅವರಿಗೆ ಲೋಕಸಭೆ ಚುನಾವಣೆ ಹತ್ತಿರವಾಗಿರುವಾಗಲೇ ‘ಭಾರತರತ್ನ’ ಪ್ರಶಸ್ತಿ ಘೋಷಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಅವರನ್ನು ‘ವಿಕಾಸಪುರುಷ’ನೆಂದೂ, ಅಡ್ವಾಣಿ ಅವರನ್ನು ‘ಲೋಹಪುರುಷ’ನೆಂದೂ ಬಿಜೆಪಿ ಪಾಳಯದಲ್ಲಿ ಬಣ್ಣಿಸಲಾಗುತ್ತದೆ. ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯ ಬಲ ಹೊಂದಿದ್ದ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷವನ್ನಾಗಿ ರೂಪಿಸಿದ ಶ್ರೇಯಸ್ಸಿನ ಸಿಂಹಪಾಲು ಕಟ್ಟರ್ ಹಿಂದೂವಾದಿ ನಾಯಕ ಅಡ್ವಾಣಿ ಅವರಿಗೆ ಸಲ್ಲಬೇಕು ಎಂದೇ ವ್ಯಾಖ್ಯಾನಿಸಲಾಗುತ್ತದೆ. ಕಮಲ ಪಾಳಯದಲ್ಲಿ ಪ್ರಧಾನಿ ಮೋದಿ ‘ಕೇಂದ್ರಬಿಂದು’ವಾದ ಬಳಿಕ ಅಡ್ವಾಣಿ ಅವರು ಪಕ್ಷದ ಚಟುವಟಿಕೆಗಳಿಂದ ತೆರೆಮರೆಗೆ ಸರಿದಿದ್ದರು.

ಹಲವು ಅವಧಿಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅಪಾರ ಅನುಭವ ಹೊಂದಿರುವ 96 ವರ್ಷಗಳ ಹಿರೀಕ ಅಡ್ವಾಣಿ, ‘ಭಾರತರತ್ನ’ ಪಡೆದ 50ನೇ ವ್ಯಕ್ತಿಯಾಗಲಿದ್ದಾರೆ. ಸುದೀರ್ಘ ರಾಜಕಾರಣದಲ್ಲಿದ್ದು ಪಕ್ಷ ಕಟ್ಟಿ ಬೆಳೆಸಿದ್ದರೂ ಅಡ್ವಾಣಿ ಅವರ ಪಾಲಿಗೆ ಪ್ರಧಾನಿ ಹುದ್ದೆ ‘ಮಾಯಾಜಿಂಕೆ’ಯೇ ಆಗಿದ್ದು ಈಗ ಇತಿಹಾಸ.

ಅಡ್ವಾಣಿ ಅವರನ್ನು ಶ್ಲಾಘಿಸಿರುವ ಮೋದಿ, ‘ತಳಮಟ್ಟದಿಂದ ದೇಶದ ಸೇವೆ ಆರಂಭಿಸಿದ ಅವರು, ಉಪ ಪ್ರಧಾನಿಯಾಗಿಯೂ ದುಡಿದಿದ್ದಾರೆ. ಜತೆಗೆ ಗೃಹ ಸಚಿವ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ಸಂಸದೀಯ ಚರ್ಚೆಗಳಲ್ಲಿ ಅವರು ನೀಡುತ್ತಿದ್ದ ಅಭಿಪ್ರಾಯಗಳು ಯಾವಾಗಲೂ ದೂರದೃಷ್ಟಿತ್ವ ಹೊಂದಿರುತ್ತಿದ್ದವು’ ಎಂದಿದ್ದಾರೆ.

‘ಅಡ್ವಾಣಿ ಅವರ ಹಲವು ದಶಕಗಳ ಸಾರ್ವಜನಿಕ ಸೇವೆಯು ಪಾರದರ್ಶಕತೆ ಹಾಗೂ ಸಮಗ್ರತೆ ಕುರಿತು ಅವರಿಗಿದ್ದ ಬದ್ಧತೆಗೆ ಸಾಕ್ಷಿಯಾಗಿದೆ. ಅವರು ರಾಜಕೀಯ ನೈತಿಕತೆಗೆ ಅಪರೂಪದ ಮಾನದಂಡ ರೂಪಿಸಿ ಕೊಟ್ಟಿದ್ದಾರೆ. ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಅವರು ಅಪ್ರತಿಮ ಕೊಡುಗೆ ನೀಡಿದ್ದಾರೆ. ಅವರಿಗೆ ಭಾರತರತ್ನ ಪ್ರಶಸ್ತಿ ನೀಡುತ್ತಿರುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ’ ಎಂದು ಮೋದಿ ಹೇಳಿದ್ದಾರೆ. ಅವರೊಂದಿಗೆ ಸಂವಹನ ನಡೆಸಲು ಹಾಗೂ ಅವರಿಂದ ಕಲಿಯಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಅವರು ಹೇಳಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಅಡ್ವಾಣಿ ಹಾಗೂ ಮೋದಿ ಅವರು ಗುರು–ಶಿಷ್ಯ ಜೋಡಿಯೆಂದೇ ಪ್ರಖ್ಯಾತರಾಗಿದ್ದವರು. 2014ರಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಅಡ್ವಾಣಿ ಸಿಡಿದೆದ್ದಿದ್ದರು. ಪ್ರಧಾನಿ ಹುದ್ದೆಗಾಗಿ ಜಂಗೀಕುಸ್ತಿ ನಡೆಸಿದ್ದರು. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಜಾತ್ಯತೀತವಾದಿ ಎಂದು ಹೊಗಳುವ ಮೂಲಕ ಆರ್ಎಸ್ಎಸ್ ಹಾಗೂ ಪಕ್ಷದ ಕಟ್ಟರ್ವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬೆಳವಣಿಗೆಗಳು ಅವರ ರಾಜಕೀಯ ಜೀವನದ ಇಳಿಹಾದಿಗೆ ಕಾರಣವಾಗಿದ್ದವು. ಇದೀಗ ‘ಭಾರತರತ್ನ’ ಘೋಷಿಸುವ ಮೂಲಕ ಮೋದಿ ಅವರು ಮತ್ತೊಂದು ‘ಉದಾರವಾದಿ’ ಹೆಜ್ಜೆ ಇಟ್ಟಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅಡ್ವಾಣಿ ನೇತೃತ್ವದಲ್ಲಿ ಕಮಂಡಲ ಆಂದೋಲನವು ಬಿಜೆಪಿ ಅಧಿಕಾರಕ್ಕೆ ಬರಲು ಮೂಲಕಾರಣವಾಗಿತ್ತು. ಅಡ್ವಾಣಿ ಅವರು ಗ್ರಾಮ ಭಾರತಕ್ಕೆ ರಾಮರಥವನ್ನು ನುಗ್ಗಿಸಿ ರಾಮಭಕ್ತರ ಭಾವನೆಗಳನ್ನು ಬಡಿದೆಬ್ಬಿಸಿದ್ದರು. ದೇಶದಲ್ಲಿ ಕೋಮುಗಲಭೆಗಳನ್ನು ಹರಡಿದ ಆರೋಪಕ್ಕೂ ಪಕ್ಷ ತುತ್ತಾಗಿತ್ತು. ಬಾಬರಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸುವಾಗ ಹಿರಿಯ ನಾಯಕರೊಂದಿಗೆ ಅಡ್ವಾಣಿ ಕೂಡ ಸ್ಥಳದಲ್ಲಿ ಹಾಜರಿದ್ದರು. ಪಕ್ಷ ಸಂಘಟನೆಗಾಗಿ ಅಡ್ವಾಣಿ ಹಾಗೂ ವಾಜಪೇಯಿ ಅವರು ಜತೆಗೂಡಿ ಕೆಲಸ ಮಾಡಿದ್ದರು. ವಾಜಪೇಯಿ ಅವರಿಗೂ ಮೋದಿ ನೇತೃತ್ವದ ಸರ್ಕಾರ ಈಗಾಗಲೇ ‘ಭಾರತರತ್ನ’ ಪ್ರಶಸ್ತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.