ಅನ್ಷುಲ್ ಕಾಂಬೋಜ್ 10 ವಿಕೆಟ್ ದಾಖಲೆ
ಲಾಹ್ಲಿ ಹರಿಯಾಣ : ಹರಿಯಾಣದ ಯುವ ಬೌಲರ್ ಅನ್ಷುಲ್ ಕಾಂಭೋಜ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಗಳಿಸಿದರು. ಟೂರ್ನಿಯ ಇತಿಹಾಸದಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಅವರಾಗಿದ್ದಾರೆ. ಬಂಗಾಳದ ಪ್ರೇಮಾಂಗ್ಸು ಚಟರ್ಜಿ ಮತ್ತು ರಾಜಸ್ಥಾನದ ಪ್ರದೀಪ್ ಸುಂದರಮ್ ಅವರು ಕೂಡ ಈ ಹಿಂದೆ 10 ವಿಕೆಟ್ ಸಾಧನೆ ಮಾಡಿದ್ದರು ಎಂದು ‘ಕ್ರಿಕ್‌ಇನ್ಫೋ ಡಾಟ್ ಕಾಮ್’ ವರದಿ ಮಾಡಿದೆ. ಸಿ ಗುಂಪಿನ ಈ ಪಂದ್ಯದಲ್ಲಿ ಅನ್ಷುಲ್ (30.1–9–49–10) ಬೌಲಿಂಗ್ ಮುಂದೆ ಕೇರಳ ತಂಡವು 116.1 ಓವರ್‌ಗಳಲ್ಲಿ 291 ರನ್‌ಗಳಿಗೆ ಕುಸಿಯಿತು. ಆದರೆ ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಹರಿಯಾಣ ತಂಡದ ಬ್ಯಾಟರ್‌ಗಳೂ ವೈಫಲ್ಯ ಅನುಭವಿಸಿದರು. ಶುಕ್ರವಾರ ದಿನದಾಟದ ಅಂತ್ಯಕ್ಕೆ 61 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 139 ರನ್ ಗಳಿಸಿತು. ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ಇನ್ನೂ 152 ರನ್‌ಗಳ ಅಗತ್ಯವಿದೆ. ಪಂದ್ಯದ ಎರಡನೇ ದಿನವಾದ ಗುರುವಾರ ಅನ್ಷುಲ್ ಅವರು ಎರಡು ವಿಕೆಟ್ ಗಳಿಸಿದ್ದರು. ಮೂರನೇ ದಿನದಾಟದಲ್ಲಿ ಉಳಿದ ಎಂಟೂ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. ಅವರ ದಾಳಿಯ ನಡುವೆಯೂ ಕೇರಳದ ಕುನ್ನುಮಾಳ್ ಸಚಿನ್ ಬೇಬಿ ಅಕ್ಷಯ್ ಚಂದ್ರನ್ ಮತ್ತು ಅಜರುದ್ದೀನ್ ಅವರು ತಲಾ ಒಂದು ಅರ್ಧಶತಕ ಗಳಿಸಿದರು. ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೇರಳ: 116.1 ಓವರ್‌ಗಳಲ್ಲಿ 291 (ಅಜರುದ್ದೀನ್ 53 ಶೌನ್ ರೋಜರ್ 42 ಅನ್ಷುಲ್ ಕಾಂಭೋಜ್ 49ಕ್ಕೆ10) ಹರಿಯಾಣ: 61 ಓವರ್‌ಗಳಲ್ಲಿ 7ಕ್ಕೆ139 (ಲಕ್ಷ್ಯಣ್ಯ ದಲಾಲ್ 21 ಯುವರಾಜ್ 20 ಅಂಕಿತ ಕುಮಾರ್ 27 ನಿಶಾಂತ್ ಸಿಂಧು ಬ್ಯಾಟಿಂಗ್ 29 ನಿಧೀಶ್ 37ಕ್ಕೆ3) (ಮೊಹಾಲಿ): ಬಿಹಾರ: 135 ಮತ್ತು 28.4 ಓವರ್‌ಗಳಲ್ಲಿ 98 (ಬಿಪಿನ್ ಸೌರಭ್ 33 ಗುರನೂರ್ ಬ್ರಾರ್ 14ಕ್ಕೆ5) ಪಂಜಾಬ್: 84.1 ಓವರ್‌ಗಳಲ್ಲಿ 300 (ಜಸ್ಕರಣವೀರ್ ಪಾಲ್ 65 ಸಲೀಲ್ ಅರೋರಾ 64 ಗುರನೂರ್ ಬ್ರಾರ್ 34 ಸಕೀಬ್ ಹುಸೇನ್ 114ಕ್ಕೆ4) : ಪಂಜಾಬ್ ತಂಡಕ್ಕೆ ಇನಿಂಗ್ಸ್ ಮತ್ತು 67 ರನ್ ಜಯ.