ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂ ಕೇಜ್ರಿವಾಲ್ ಜೀವನದೊಂದಿಗೆ ಆಟವಾಡುತ್ತಿರುವ ಬಿಜೆಪಿ ಸರ್ಕಾರ: ಸಂಜಯ್‌ ಸಿಂಗ್‌

Published 13 ಜುಲೈ 2024, 9:49 IST
Last Updated 13 ಜುಲೈ 2024, 9:49 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಜೀವನದೊಂದಿಗೆ ಆಟವಾಡುತ್ತಿದೆ ಎಂದು ಎಎಪಿ ಸಂಸದ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮಾರ್ಚ್‌ 21ರಂದು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್‌ ಅವರನ್ನು ಬಂಧಿಸಿದಾಗ ಅವರ ತೂಕ 70 ಕೆ.ಜಿ ಇತ್ತು. ಆದರೆ, ಈಗ 61 ಕೆ.ಜಿಗೆ ಇಳಿಕೆಯಾಗಿದೆ. ಅವರ ಆರೋಗ್ಯ ಸ್ಥಿತಿ ಹೇಗಿದೆಯೆಂದರೆ, ಅವರನ್ನು ಶೀಘ್ರದಲ್ಲೇ ಜೈಲಿನಿಂದ ಹೊರತರದಿದ್ದರೆ, ವೈದ್ಯಕೀಯ ಆರೈಕೆ ನೀಡದಿದ್ದರೆ, ಅವರ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಉಂಟಾಗಬಹುದು’ ಎಂದು ತಿಳಿಸಿದ್ದಾರೆ.

‘ಕೇಜ್ರಿವಾಲ್‌ ಅವರ ನಿರಂತರ ತೂಕ ಇಳಿಕೆಗೆ ಕಾರಣ ಏನೆಂಬುದು ತಿಳಿದಿಲ್ಲ. ಏಕೆಂದರೆ ಯಾವುದೇ ವೈದ್ಯಕೀಯ ಪರೀಕ್ಷೆಗಳು ನಡೆದಿಲ್ಲ. ಆದರೆ, ತೂಕ ಇಳಿಕೆಯು ಗಂಭೀರ ಕಾಯಿಲೆಯ ಸಂಕೇತವಾಗಿದೆ. ಜೈಲಿನಲ್ಲಿರುವ ಕೇಜ್ರಿವಾಲ್‌ ಅವರ ಆರೋಗ್ಯ ಸ್ಥಿತಿ ಕುರಿತು ಅವರ ಕುಟುಂಬ, ಎಎಪಿ ಮತ್ತು ಅವರ ಹಿತೈಷಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಂಜಯ್‌ ಹೇಳಿದ್ದಾರೆ.

‘ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಇಡುವುದು ಮತ್ತು ಅವರ ಜೀವನದೊಂದಿಗೆ ಆಟವಾಡುವುದು ಕೇಂದ್ರ ಬಿಜೆಪಿ ಸರ್ಕಾರದ ಗುರಿಯಾಗಿದೆ. ಕೇಜ್ರಿವಾಲ್‌ ಅವರು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿ ಎಂದೇ ಅವರು ಸಂಚು ರೂಪಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಇದೇ ಹಗರಣದ ಪ್ರತ್ಯೇಕ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿತ್ತು. ಈ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯ ಜುಲೈ 25ರವರೆಗೆ ವಿಸ್ತರಿಸಿದೆ. ಹೀಗಾಗಿ, ಅವರು ಇನ್ನೂ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT