ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನಸಭಾ ಚುನಾವಣೆ: ಸಿಕ್ಕಿಂನಲ್ಲಿ ಎಸ್‌ಕೆಎಂಗೆ ಭಾರಿ ಗೆಲುವು

Published 2 ಜೂನ್ 2024, 23:58 IST
Last Updated 2 ಜೂನ್ 2024, 23:58 IST
ಅಕ್ಷರ ಗಾತ್ರ

ಇಟಾನಗರ/ ಗ್ಯಾಂಗ್ಟಕ್: ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದೆ. ಸಿಕ್ಕಿಂನಲ್ಲಿ 32 ಸ್ಥಾನಗಳಲ್ಲಿ 31 ಕ್ಷೇತ್ರ ಗೆದ್ದುಕೊಂಡ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಸತತ ಎರಡನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ.

ಏಪ್ರಿಲ್‌ 19ರಂದು ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ಜತೆಯಲ್ಲೇ ಈಶಾನ್ಯ ಭಾರತದ ಈ ಎರಡು ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆದಿದ್ದವು. ಮತ ಎಣಿಕೆ ಭಾನುವಾರ ನಡೆಯಿತು. 

ಅರುಣಾಚಲ ಪ್ರದೇಶದ 60 ಸ್ಥಾನಗಳಲ್ಲಿ ಬಿಜೆಪಿ 46ರಲ್ಲಿ ಗೆದ್ದಿದೆ. ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಬಿಜೆಪಿಯ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರಿಂದ, 50 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದರಲ್ಲಿ 36 ಸ್ಥಾನಗಳನ್ನು ಬಿಜೆಪಿ ಜಯಿಸಿದೆ. ಕಮಲ ಪಾಳಯವು 2019ರಲ್ಲಿ 41 ಸ್ಥಾನಗಳನ್ನು ಗೆದ್ದು
ಅಧಿಕಾರಕ್ಕೇರಿತ್ತು. ಈ ಬಾರಿ ತನ್ನ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. 

2016ರವರೆಗೂ ರಾಜ್ಯದ ಪ್ರಮುಖ ಪಕ್ಷವಾಗಿದ್ದ ಕಾಂಗ್ರೆಸ್‌ ಭಾರಿ ಮುಖಭಂಗ ಅನುಭವಿಸಿದ್ದು, ಕೇವಲ ಒಂದು ಸ್ಥಾನ ಗೆದ್ದಿದೆ. ಬಿಜೆಪಿಯ ಮಿತ್ರಪಕ್ಷಗಳಾದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) 5 ಮತ್ತು ಅಜಿತ್‌ ಪವಾರ್‌ ನೇತೃತ್ವದ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) 3 ಸ್ಥಾನಗಳನ್ನು ಗೆದ್ದುಕೊಂಡವು. 

ಇದು ಬಿಜೆಪಿಗೆ ಮತ್ತು ಅರುಣಾಚಲ ಪ್ರದೇಶಕ್ಕೆ ಐತಿಹಾಸಿಕ ಕ್ಷಣ. ಪ್ರಧಾನಿ ನರೇಂದ್ರ ಮೋದಿ ನೀಡಿದ ಕೊಡುಗೆಗಳಿಗೆ ರಾಜ್ಯದ ಜನರು ತಮ್ಮ ಋಣ ತೀರಿಸಿದ್ದಾರೆ
ಪೆಮಾ ಖಂಡು, ಅರುಣಾಚಲ ಪ್ರದೇಶ ಮುಖ್ಯಮಂತ್ರಿ
ಕಳೆದ ಐದು ವರ್ಷಗಳಲ್ಲಿ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲು ಸಾಧ್ಯವಾದದ್ದು ಹಾಗೂ ಪಕ್ಷದ ಕಾರ್ಯಕರ್ತರ ಶ್ರಮದಿಂದಾಗಿ ನಮಗೆ ಭಾರಿ ಗೆಲುವು ಲಭಿಸಿದೆ
ಪ್ರೇಮ್‌ ಸಿಂಗ್‌ ತಮಾಂಗ್, ಸಿಕ್ಕಿಂ ಮುಖ್ಯಮಂತ್ರಿ

ಪ್ರಮುಖ ಅಂಶಗಳು

ಅರುಣಾಚಲ ಪ್ರದೇಶ

* ಪೆಮಾ ಖಂಡು ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ

* 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ಗೆ ದಕ್ಕಿದ್ದು ಒಂದು ಸ್ಥಾನ

* ಬಿಜೆಪಿ ಕಣಕ್ಕಿಳಿಸಿದ್ದ ನಾಲ್ವರು ಮಹಿಳಾ ಅಭ್ಯರ್ಥಿಗಳಿಗೆ ಗೆಲುವು

* ಬಿಜೆಪಿ ಮತಗಳಿಕೆ ಪ್ರಮಾಣ ಶೇ 54.57

* ಶಿಕ್ಷಣ ಸಚಿವ ತಬಾ ತೆದಿರ್‌ಗೆ 228 ಮತಗಳಿಂದ ಸೋಲು

ಸಿಕ್ಕಿಂ

* ಖಾತೆ ತೆರೆಯಲು ಬಿಜೆಪಿ, ಕಾಂಗ್ರೆಸ್‌ ವಿಫಲ

* 31 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ

* ನೋಟಾಗಿಂತಲೂ (ಶೇ.0.99) ಕಡಿಮೆ ಮತ ಗಳಿಸಿದ ಕಾಂಗ್ರೆಸ್ (ಶೇ 0.32)

* ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿ ಗೆದ್ದ ಮುಖ್ಯಮಂತ್ರಿ ಪ್ರೇಮ್‌ ಸಿಂಗ್ ತಮಾಂಗ್‌

* ಭಾರತ ಫುಟ್‌ಬಾಲ್‌ ತಂಡದ ಮಾಜಿ ನಾಯಕ ಭೈಚುಂಗ್‌ ಭುಟಿಯಾಗೆ ಸೋಲು

ಪ್ರಧಾನಿ ಮೋದಿ ಆಭಿನಂದನೆ
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ‘ಅರುಣಾಚಲ ಪ್ರದೇಶಕ್ಕೆ ಧನ್ಯವಾದಗಳು! ಈ ರಾಜ್ಯದ ಜನರು ಅಭಿವೃದ್ಧಿಯ ರಾಜಕಾರಣದ ಪರ ಸ್ಪಷ್ಟ ಜನಾದೇಶ ನೀಡಿದ್ದಾರೆ. ಬಿಜೆಪಿ ಮೇಲೆ ಮತ್ತೆ ನಂಬಿಕೆಯಿಟ್ಟದ್ದಕ್ಕೆ ಕೃತಜ್ಞತೆಗಳು. ನಮ್ಮ ಪಕ್ಷ ಇನ್ನಷ್ಟು ಹುಮ್ಮಸ್ಸಿನಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದೆ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ. ‘ಚುನಾವಣಾ ಪ್ರಚಾರದ ಅವಧಿಯಲ್ಲಿ ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರು ತೋರಿದ ಅವಿರತ ಶ್ರಮವನ್ನು ಪ್ರಶಂಸಿಸುತ್ತೇನೆ’ ಎಂದಿದ್ದಾರೆ. ಸಿಕ್ಕಿಂನಲ್ಲಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್ ನೇತೃತ್ವದ ಎಸ್‌ಕೆಎಂ ಪಕ್ಷಕ್ಕೂ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ. ‘ಮುಂಬರುವ ದಿನಗಳಲ್ಲಿ ಸಿಕ್ಕಿಂನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT