ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತ ಹೈಕೋರ್ಟ್

Published : 13 ಆಗಸ್ಟ್ 2024, 10:54 IST
Last Updated : 13 ಆಗಸ್ಟ್ 2024, 16:06 IST
ಫಾಲೋ ಮಾಡಿ
Comments

ಕೋಲ್ಕತ್ತ: ನಗರದ ಸರ್ಕಾರಿ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪ ಕುರಿತ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿ ಕಲ್ಕತ್ತ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಶಿವಜ್ಞಾನಂ ಹಾಗೂ ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರು ಇದ್ದ ವಿಭಾಗೀಯ ಪೀಠವು, ಕೇಸ್‌ ಡೈರಿಯನ್ನು ಸಂಜೆ ಒಳಗೆ ಹಾಗೂ ಇತರ ಎಲ್ಲ ದಾಖಲೆಗಳನ್ನು ಬುಧವಾರ ಬೆಳಿಗ್ಗೆ 10ರೊಳಗೆ ಸಿಬಿಐಗೆ ಹಸ್ತಾಂತರಿಸುವಂತೆ, ತನಿಖೆ ನಡೆಸುತ್ತಿರುವ ಕೋಲ್ಕತ್ತ ಪೊಲೀಸರಿಗೆ ನಿರ್ದೇಶಿಸಿತು.

ಹೈಕೋರ್ಟ್‌ ನಿರ್ದೇಶನ ಪ್ರಕಾರ, ರಾಜ್ಯ ಸರ್ಕಾರ ಮಧ್ಯಾಹ್ನ 1ಕ್ಕೆ ಕೇಸ್‌ ಡೈರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ನಂತರ, ಪೀಠವು ವಿಚಾರಣೆಯನ್ನು ಮೂರು ವಾರ ಮುಂದೂಡಿತು. 

‘ಘಟನೆ ನಡೆದು ಐದು ದಿನಗಳು ಕಳೆದಿವೆ. ಕೋಲ್ಕತ್ತ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿ ಇಲ್ಲ’ ಎಂದು ಪೀಠ ಹೇಳಿದೆ.

ಇದಕ್ಕೂ ಮುನ್ನ, ‘ಪ್ರಕರಣ ಕುರಿತಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, 25ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸೂಕ್ತ ರೀತಿಯಲ್ಲಿಯೇ ತನಿಖೆ ನಡೆಸಲಾಗುತ್ತಿದೆ’ ಎಂದು ರಾಜ್ಯ ಸರ್ಕಾರ ಪರ ಹಾಜರಿದ್ದ ವಕೀಲರು ಪೀಠಕ್ಕೆ ತಿಳಿಸಿದರು.

‘ಘಟನೆ ಕುರಿತಂತೆ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಚಾರ್ಯ ಸಂದೀಪ್‌ ಘೋಷ್‌ ತ್ವರಿತವಾಗಿ ಕ್ರಮ ತೆಗೆದುಕೊಳ್ಳದಿದ್ದುದು ದುಃಖಕರ ಸಂಗತಿ’ ಎಂದು ಪೀಠ ಹೇಳಿತು.

ಘಟನೆ ಬೆನ್ನಲ್ಲೇ, ದೀರ್ಘ ರಜೆ ಮೇಲೆ ತೆರಳುವಂತೆ ಪ್ರಾಚಾರ್ಯ ಘೋಷ್‌ ಅವರಿಗೆ ಹೈಕೋರ್ಟ್‌ ಸೂಚಿಸಿತ್ತು. ನಂತರ, ಸೋಮವಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಘೋಷ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಅವರನ್ನು ಕಲ್ಕತ್ತ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರನ್ನಾಗಿ ಹೇಗೆ ನೇಮಕ ಮಾಡಲಾಯಿತು ಎಂದು ಪೀಠ ಪ್ರಶ್ನಿಸಿತು. 

ಸಂದೀಪ್‌ ಘೋಷ್‌ ಅವರ ರಾಜೀನಾಮೆ ಪತ್ರ ಹಾಗೂ ಅವರನ್ನು ಬೇರೆ ಕಾಲೇಜಿನ ಪ್ರಾಚಾರ್ಯರನ್ನಾಗಿ ನೇಮಕ ಮಾಡಿರುವುದಕ್ಕೆ ಸಂಬಂಧಿಸಿದ ನೇಮಕಾತಿ ಪತ್ರವನ್ನು ಹಾಜರುಪಡಿಸುವಂತೆ ಘೋಷ್‌ ಪರ ವಕೀಲರಿಗೆ ಪೀಠ ಸೂಚಿಸಿತು.

‘ಮಧ್ಯಾಹ್ನ 3 ಗಂಟೆ ಒಳಗಾಗಿ, ದೀರ್ಘ ರಜೆ ಮೇಲೆ ತೆರಳುವಂತೆ ಅವರಿಗೆ (ಸಂದೀಪ್‌ ಘೋಷ್‌) ಹೇಳಿ; ಇಲ್ಲದೇ ಹೋದರೆ ಸೂಕ್ತ ಆದೇಶ ನೀಡಲಾಗುವುದು’ ಎಂದು ಘೋಷ್ ಪರ ವಕೀಲರಿಗೆ ಪೀಠ ಹೇಳಿತು.

‘ತನಿಖೆ ಆರಂಭದಲ್ಲೇ ಕೊಲೆ ಪ್ರಕರಣ ಯಾಕೆ ದಾಖಲಿಸಲಿಲ್ಲ?’

ಕೋಲ್ಕತ್ತ(ಪಿಟಿಐ): ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಆರೋಪ ಕುರಿತು ತನಿಖೆಯ ಆರಂಭದಲ್ಲಿಯೇ ಯಾಕೆ ಕೊಲೆ ಪ್ರಕರಣ ದಾಖಲಿಸಲಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರವನ್ನು ಕಲ್ಕತ್ತ ಹೈಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ.

ಪ್ರಕರಣ ಕುರಿತು ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಕೊಲೆಯಾದ ವೈದ್ಯ ವಿದ್ಯಾರ್ಥಿನಿ ಪಾಲಕರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿತು. ‘ಕೊಲೆಗೆ ಸಂಬಂಧಿಸಿ ತಕ್ಷಣಕ್ಕೆ ಯಾವುದೇ ದೂರು ದಾಖಲಾಗಿರಲಿಲ್ಲ. ಹೀಗಾಗಿ ಅಸಹಜ ಸಾವು ಪ್ರಕರಣ ದಾಖಲಿಸಲಾಯಿತು’ ಎಂದು ಪಶ್ಚಿಮ ಬಂಗಾಳ ಸರ್ಕಾರ ಪರ ಹಾಜರಿದ್ದ ವಕೀಲರು ಪೀಠಕ್ಕೆ ತಿಳಿಸಿದರು.

‘ವೈದ್ಯ ವಿದ್ಯಾರ್ಥಿನಿಯ ಮೃತದೇಹ ರಸ್ತೆ ಪಕ್ಕದಲ್ಲಿ ಸಿಕ್ಕಿರಲಿಲ್ಲ. ಅಲ್ಲದೇ ಈ ಸಂಬಂಧ ಆಸ್ಪತ್ರೆಯ ಸೂಪರಿಂಟೆಂಡೆಂಟ್‌ ಅಥವಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ದೂರು ದಾಖಲಿಸಬಹುದಿತ್ತು’ ಎಂದು ಪೀಠ ಹೇಳಿತು.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹಲವರಿಂದ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ವಿಚಾರಣೆ ನಡೆಸಿದ ಪೀಠ ‘ತನಿಖಾ ಪ್ರಕ್ರಿಯೆಯಲ್ಲಿ ಏನೋ ನ್ಯೂನತೆ ಕಂಡುಬರುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.

ಇದಕ್ಕೂ ಮುನ್ನ ‘ಸರ್ಕಾರಿ ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿಂದಿನ ಪ್ರಾಚಾರ್ಯ ಸಂದೀಪ್‌ ಘೋಷ್‌ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆಯೇ’ ಎಂಬ ಪೀಠದ ಪ್ರಶ್ನೆಗೆ ಇಲ್ಲ ಎಂದು ಸರ್ಕಾರಿ ವಕೀಲರು ಉತ್ತರಿಸಿದರು.

‘ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಗುರುತರ ಜವಾಬ್ದಾರಿ ವೈದ್ಯರ ಮೇಲಿದೆ’ ಎಂದ ಪೀಠ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ರಾಜ್ಯದ ವೈದ್ಯರಿಗೆ ಹೇಳಿತು. ಮುಷ್ಕರ ನಡೆಸುತ್ತಿರುವ ವೈದ್ಯರೊಂದಿಗೆ ಮಾತುಕತೆ ನಡೆಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪೀಠ ಸೂಚಿಸಿತು. 

ಇಬ್ಬರು ರೋಗಿಗಳ ಮೇಲೆ ‘ಅತ್ಯಾಚಾರ’: ವೈದ್ಯನ ವಿರುದ್ಧ ಪ್ರಕರಣ

ಕಟಕ್‌(ಒಡಿಶಾ): ನಗರದ ಎಸ್‌.ಸಿ.ಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಬ್ಬರು ಮಹಿಳಾ ರೋಗಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ. ಈ ಘಟನೆ ಭಾನುವಾರ ನಡೆದಿದೆ. ಪರೀಕ್ಷೆಗಾಗಿ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಈ ಮಹಿಳೆಯರು ಬಂದಿದ್ದಾಗ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ‘ಸಂತ್ರಸ್ತ ಮಹಿಳೆಯರು ನೀಡಿರುವ ದೂರು ಆಧರಿಸಿ ಮಂಗಲಬಾಗ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಎಂದು ಕಟಕ್‌ನ ಹೆಚ್ಚುವರಿ ಡಿಸಿಪಿ ಅನಿಲ್‌ ಮಿಶ್ರಾ ತಿಳಿಸಿದ್ದಾರೆ. ವೈದ್ಯನ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ರೋಗಿಗಳ ಕೆಲ ಸಂಬಂಧಿಕರು ಆರೋಪಿಯನ್ನು ಥಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ/ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಮಂಗಳವಾರ ಕೈಗೆತ್ತಿಕೊಂಡಿದೆ. ಕಲ್ಕತ್ತ ಹೈಕೋರ್ಟ್‌ ಅದೇಶಿಸಿದ ಬೆನ್ನಲ್ಲೇ ತನಿಖೆ ಆರಂಭಿಸುವುದಕ್ಕೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಸಿಬಿಐ ತ್ವರಿತವಾಗಿ ಪೂರ್ಣಗೊಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳ ತಂಡವೊಂದು ವಿಧಿವಿಜ್ಞಾನ ವಿಜ್ಞಾನಿಗಳು ಹಾಗೂ ವೈದ್ಯಕೀಯ ತಜ್ಞರೊಂದಿಗೆ ದೆಹಲಿಯಿಂದ ಹೊರಡಲಿದ್ದು ಕೋಲ್ಕತ್ತಕ್ಕೆ ಬುಧವಾರ ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT