ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಲಸೆ ಕಾರ್ಮಿಕರ ವಿವರ ತಾಳೆ: 4 ವಾರಗಳಲ್ಲಿ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ

Published : 16 ಜುಲೈ 2024, 15:23 IST
Last Updated : 16 ಜುಲೈ 2024, 15:23 IST
ಫಾಲೋ ಮಾಡಿ
Comments

ನವದೆಹಲಿ: ಪಡಿತರ ಚೀಟಿಗಾಗಿ ಇ–ಶ್ರಮ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಲಸೆ ಕಾರ್ಮಿಕರ ವಿವರಗಳನ್ನು ತಾಳೆಮಾಡುವ ಕಾರ್ಯವನ್ನು ಪೂರ್ಣಗೊಳಿಸದ ರಾಜ್ಯಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ. ಈ ರಾಜ್ಯಗಳು ನಾಲ್ಕು ವಾರಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದೆ.

ವಲಸೆ ಕಾರ್ಮಿಕರ ವಿವರಗಳನ್ನು ತಾಳೆಮಾಡುವ ಕಾರ್ಯವನ್ನು ಪೂರ್ಣಗೊಳಿಸಿರುವ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ವಲಸೆ ಕಾರ್ಮಿಕರ ವಿವರ ತಾಳೆಮಾಡುವ ಕೆಲಸವನ್ನು ಪೂರ್ಣಗೊಳಿಸಿರುವ ರಾಜ್ಯಗಳು ಬಿಹಾರ ಮತ್ತು ತೆಲಂಗಾಣ ಮಾತ್ರ.

ತಾಳೆಮಾಡುವ ಕೆಲಸದಲ್ಲಿ ಆಗಿರುವ ವಿಳಂಬವು ‘ದುರದೃಷ್ಟಕರ’ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು, ನಿಗದಿ ಮಾಡಿರುವ ಕಾಲಮಿತಿಯನ್ನು ತಾಳೆಮಾಡುವ ಕೆಲಸ ಪೂರ್ಣಗೊಳ್ಳದೆ ಇದ್ದರೆ ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದೆ.

‘ತಾಳೆಮಾಡುವ ಕೆಲಸವನ್ನು ನಾಲ್ಕು ತಿಂಗಳಲ್ಲಿ ಏಕೆ ಪೂರ್ಣಗೊಳಿಸಲು ಆಗಲಿಲ್ಲ? ಇದು ಅತಿಯಾಯಿತು. ನಾಲ್ಕು ತಿಂಗಳ ನಂತರವೂ ನೀವು ಈ ಕೆಲಸವನ್ನು ಇನ್ನೂ ಮಾಡುತ್ತಲೇ ಇದ್ದೀರಿ, ಕೆಲಸ ಪೂರ್ತಿಗೊಳಿಸಲು ಇನ್ನೂ ಎರಡು ತಿಂಗಳು ಬೇಕು ಎನ್ನುವ ಧೈರ್ಯ ತೋರಿಸುತ್ತಿದ್ದೀರಿ...’ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

‘ಪಡಿತರ ಚೀಟಿಯನ್ನು ನೀಡಿದ್ದರೂ, ವಲಸೆ ಕಾರ್ಮಿಕರಿಗೆ ಪಡಿತರವನ್ನು ರಾಜ್ಯ ಸರ್ಕಾರಗಳು ವಿತರಿಸುತ್ತಿಲ್ಲ. ಇವರಿಗೆ ಕೊಡಲು ಬೇಕಿರುವ ಹೆಚ್ಚುವರಿ ಧಾನ್ಯವನ್ನು ಕೇಂದ್ರ ಸರ್ಕಾರವು ನೀಡಿಲ್ಲ ಎಂದು ರಾಜ್ಯಗಳು ಹೇಳುತ್ತಿವೆ’ ಎಂದು ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಿದೆ.

ಇ–ಶ್ರಮ ಪೋರ್ಟಲ್ ಮೂಲಕ ನೋಂದಣಿ ಆಗಿರುವ ಅಂದಾಜು ಎಂಟು ಕೋಟಿ ವಲಸೆ ಕಾರ್ಮಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿಗಳನ್ನು ಎರಡು ತಿಂಗಳಲ್ಲಿ ನೀಡಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.

ಅಂಜಲಿ ಭಾರದ್ವಾಜ್, ಹರ್ಷ್ ಮಂದರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ನಿಗದಿಪಡಿಸಿರುವ ಕೋಟಾ ಏನೇ ಇದ್ದರೂ ವಲಸೆ ಕಾರ್ಮಿಕರಿಗೆ ಪಡಿತರ ಸಿಗುವಂತೆ ವ್ಯವಸ್ಥೆ ಆಗಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT