ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ‘ಇಂಡಿಯಾ’ದಲ್ಲಿ ಬಿರುಕು

Published : 9 ಅಕ್ಟೋಬರ್ 2024, 16:02 IST
Last Updated : 9 ಅಕ್ಟೋಬರ್ 2024, 16:02 IST
ಫಾಲೋ ಮಾಡಿ
Comments

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಸರಳ ಬಹುಮತ ಪಡೆಯುವಲ್ಲಿ ವಿಫಲವಾಗಿರುವಂತೆಯೇ, ಇತರ ಅಂಗಪಕ್ಷಗಳು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿವೆ.

‘ಮಿತ್ರ ಪಕ್ಷಗಳಿಗಿಂತ ತಾನೇ ಹೆಚ್ಚು’ ಎಂಬ ಧೋರಣೆ ತಳೆದಿದ್ದೇಕೆ ಎಂದು ‘ಇಂಡಿಯಾ’ ಅಂಗಪಕ್ಷಗಳು ಕಾಂಗ್ರೆಸ್‌ ಅನ್ನು ಪ್ರಶ್ನಿಸಿವೆ, ‘ತನಗೆ ಎದುರಾಗಿದ್ದ ತೊಂದರೆಗಳ ನಿವಾರಣೆಗೆ ನಮ್ಮ ಸ್ನೇಹಪರತೆಯನ್ನು ಬಳಸಿಕೊಂಡ ಕಾಂಗ್ರೆಸ್‌, ನಮ್ಮ ಸಾಮರ್ಥ್ಯವನ್ನು ಕಡೆಗಣಿಸಿತು’ ಎಂದೂ ದೂರಿವೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ, ‘ಇಂಡಿಯಾ’ ಕೂಟದ ‘ಮಿತ್ರ’ ಪಕ್ಷಗಳು, ಈಗ ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿವೆ. ಉತ್ತರ ಪ್ರದೇಶದ 6 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಮಾಜವಾದಿ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದು ಇದಕ್ಕೆ ತಾಜಾ ನಿದರ್ಶನ.

ಸೀಟು ಹಂಚಿಕೆ ವಿಚಾರವಾಗಿ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್‌ ಮಾತುಕತೆ ನಡೆಸುತ್ತಿದೆ. ತನಗೆ ಐದು ಸೀಟುಗಳನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆಯನ್ನೂ ಮಂಡಿಸಿದೆ. ಇದರ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಎಎಪಿ ಟೀಕೆ: ಮತ್ತೊಂದು ಮಿತ್ರ ಪಕ್ಷವಾದ ಆಮ್‌ ಆದ್ಮಿ ಪಕ್ಷ (ಎಎಪಿ) ಕೂಡ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದು, ‘ಅತಿಯಾದ ವಿಶ್ವಾಸ’ವೇ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಕಾರಣ ಎಂದಿದೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಾನು ಸಮರ್ಥ ಎಂದು ಹೇಳುವ ಮೂಲಕ, ಕಾಂಗ್ರೆಸ್‌ ಸಖ್ಯ ಅಗತ್ಯವಿಲ್ಲ ಎಂಬ ಸಂದೇಶವನ್ನೂ ಎಎಪಿ ರವಾನಿಸಿದೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ, 10 ಸೀಟುಗಳಿಗೆ ಎಎಪಿ ಬೇಡಿಕೆ ಮುಂದಿಟ್ಟಿತ್ತು. ಏಳು ಸೀಟು ನೀಡುವುದಾಗಿ ಕಾಂಗ್ರೆಸ್‌ ಹೇಳಿತ್ತು. ಇದಕ್ಕೆ ಒಪ್ಪಿಕೊಳ್ಳದ ಎಎಪಿ, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.

‘ಎಲ್ಲಿ ತಪ್ಪಾಗಿದೆ ಎಂಬ ಬಗ್ಗೆ ಕಾಂಗ್ರೆಸ್‌ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನ್ಯಾಷನಲ್‌ ಕಾಂಗ್ರೆಸ್‌ನ ಒಮರ್‌ ಅಬ್ದುಲ್ಲಾ ಹಾಗೂ ಶಿವಸೇನಾ (ಯುಬಿಟಿ) ಮುಖಂಡ ಸಂಜಯ್‌ ರಾವುತ್ ಹೇಳಿದ್ದಾರೆ.

‘ಜಾತಿ ಗಣತಿ ಹಾಗೂ ಕುತಂತ್ರದಿಂದ ಕೂಡಿದ ಕೋಮುವಾದಿ ಪ್ರಚಾರ’ದಂತಹ ವಿಷಯಗಳ ಆಚೆಗೂ ಇರುವ ಇತರ ಸಂಗತಿಗಳ ಬಗ್ಗೆ ಆತ್ಮಾವಲೋಕನ ನಡೆಸುವಂತೆ ಕಾಂಗ್ರೆಸ್‌ ಪಕ್ಷಕ್ಕೆ ಸಿಪಿಎಂ ಕಿವಿಮಾತು ಹೇಳಿದೆ.

‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರಿ ಸಾಧನೆ ಮಾಡಿದೆ ಎಂಬುದು ಭ್ರಮೆಯಷ್ಟೆ. ಬಿಜೆಪಿ ವಿರುದ್ಧ ನೇರ ಹಣಾಹಣಿ ಇದ್ದಲ್ಲಿ ಕಾಂಗ್ರೆಸ್‌ ಸೋಲುವುದು ನಿಶ್ಚಿತ’ ಎಂದು ‘ಇಂಡಿಯಾ’ದ ಕೆಲ ಮಿತ್ರಪಕ್ಷಗಳು ದೂರಿವೆ.

ಮಿತ್ರಪಕ್ಷಗಳು ಹೇಳಿದ್ದೇನು...

  •  ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಗೆದ್ದು ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ ಕಾಂಗ್ರೆಸ್‌ ಪಕ್ಷ ‘ಜೀವ ರಕ್ಷಕ’ ಸಾಧನ ನೀಡಿದಂತಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ ವಿಧಾನಸಭೆಗಳಿಗೆ
    ನಡೆಯಲಿರುವ ಚುನಾವಣೆ ವೇಳೆ ಕಾಂಗ್ರೆಸ್‌ ತನ್ನ ಮಿತ್ರ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು

  •  ಮಿತ್ರ ಪಕ್ಷಗಳ ನೆರವಿನಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ದ್ವಿಗುಣ ಮಾಡಿಕೊಂಡಿತು. ಆದರೆ, ಹರಿಯಾಣ ವಿಧಾನಸಭೆ ಚುನಾವಣೆ ವೇಳೆ ಮಿತ್ರಪಕ್ಷಗಳಾದ ಎಎಪಿ ಹಾಗೂ ಎಸ್‌ಪಿ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್‌ ಪುನಃ ತನ್ನ ‘ಅಹಂಕಾರ ಧೋರಣೆ’ ಮುಂದುವರಿಸಿದೆ

  • ತಾನು ದುರ್ಬಲವಾಗಿದ್ದ ಸಂದರ್ಭಗಳಲ್ಲಿ ಮಾತ್ರ ಕಾಂಗ್ರೆಸ್‌ ಔದಾರ್ಯ ತೋರಿಸುತ್ತದೆ. ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಚುನಾವಣೆಗಳ ಫಲಿತಾಂಶದಿಂದ ಇದು ಗೊತ್ತಾಗಿದೆ. ಈ ರಾಜ್ಯಗಳ ವಿಧಾನ ಸಭೆಗಳಿಗೆ ನಡೆದ ಚುನಾವಣೆಯಲ್ಲಿ ಮಿತ್ರಪಕ್ಷಗಳ ಬೇಡಿಕೆಗಳನ್ನು ಕಾಂಗ್ರೆಸ್ ತಿರಸ್ಕರಿಸಿತ್ತು.

ಹರಿಯಾಣ ಅನಿರೀಕ್ಷಿತ ಫಲಿತಾಂಶ ಪರಾಮರ್ಶೆ: ರಾಹುಲ್‌

ನವದೆಹಲಿ: ‘ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ‘ಅನಿರೀಕ್ಷಿತ’ ಫಲಿತಾಂಶ ಬಂದಿದ್ದು, ಈ ಕುರಿತು ಪರಾಮರ್ಶಿಸಿ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ತಿಳಿಸಿದ್ದಾರೆ.

‘ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಹರಿಯಾಣದ ಎಲ್ಲ ಜನರಿಗೆ ಹಾಗೂ ಅವಿರತ ದುಡಿದ ನಮ್ಮ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುವುದಾಗಿ’ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.‘ನಾವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಹಕ್ಕುಗಳು, ನಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತೇವೆ. ನಿಮ್ಮ ಧ್ವನಿಯಾಗಿ ದುಡಿಯುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದಿರುವ ಅವರು, ‘ಇಂಡಿಯಾ ಮೈತ್ರಿಯ ಈ ಗೆಲುವು ಸಂವಿಧಾನದ ಗೆಲುವು ಮತ್ತು ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವಾಗಿದೆ’ ಎಂದಿದ್ದಾರೆ. ಚುನಾವಣೆ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ‘ಹರಿಯಾಣದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದ್ದು, ತಳಮಟ್ಟದ ಕಾರ್ಯಕರ್ತರಿಂದ ಮಾಹಿತಿ ಪಡೆದು ಸಮಗ್ರವಾಗಿ ಪ್ರತಿಕ್ರಿಯಿಸುವುದಾಗಿ’ ಹೇಳಿದ್ದರು.

‘ಮತಎಣಿಕೆಗೂ ಮೊದಲೇ ಹಲವು ಇವಿಎಂಗಳಲ್ಲಿ ಶೇ 99ರಷ್ಟು ಬ್ಯಾಟರಿ ಚಾರ್ಜ್‌ ಇತ್ತು. ಎಲ್ಲೆಲ್ಲಿ ಶೇ 99ರಷ್ಟು ಚಾರ್ಜ್‌ ಇದೆಯೊ ಅಲ್ಲಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಶೇ 60 ಅಥವಾ ಶೇ 70ರಷ್ಟು ಬ್ಯಾಟರಿ ಚಾರ್ಜ್‌ ಇದ್ದ ಇವಿಎಂಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ’ ಎಂದು ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT