ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ರಶೀದ್‌ಗೆ 2 ಗಂಟೆಗಳ ಕಸ್ಟಡಿ ಪೆರೋಲ್‌

Published 2 ಜುಲೈ 2024, 12:45 IST
Last Updated 2 ಜುಲೈ 2024, 12:45 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಲು ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರಿಗೆ ಇಲ್ಲಿನ ನ್ಯಾಯಾಲಯ ಮಂಗಳವಾರ ಎರಡು ಗಂಟೆಗಳ ಕಸ್ಟಡಿ ಪೆರೋಲ್ ನೀಡಿದೆ.

ಎಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಇವರು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು.

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಅವರು ಜೈಲಿನಲ್ಲಿದ್ದಾರೆ. ಪ್ರಮಾಣ ವಚನ ಸ್ವೀಕರಿಸಲು ಮತ್ತು ತಮ್ಮ ಸಂಸದೀಯ ಕೆಲಸಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪರ್ಯಾಯವಾಗಿ ಕಸ್ಟಡಿ ಪೆರೋಲ್ ಕೋರಿ ರಶೀದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು ಪ್ರಮಾಣವಚನ ಸ್ವೀಕರಿಸಲು ಜುಲೈ 5ರಂದು 2 ಗಂಟೆಗಳ ಕಾಲ ಕಸ್ಟಡಿ ಪೆರೋಲ್‌ಗೆ ಅನುಮತಿ ನೀಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಎನ್‌ಐಎ ವಕೀಲರು, ರಶೀದ್ ಪ್ರಮಾಣವಚನ ಸ್ವೀಕಾರ ಕೆಲವು ಷರತ್ತುಗಳಿಗೆ ಒಳಪಟ್ಟಿದೆ. ಮಾಧ್ಯಮಗಳ ಜೊತೆ ಮಾತನಾಡಬಾರದು ಸೇರಿದಂತೆ ಕೆಲವು ನಿಬಂಧನೆಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎ ರಶೀದ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಿಂದ ಅವರು ಜೈಲಿನಲ್ಲಿದ್ದಾರೆ.

ಈ ಪ್ರಕರಣದಲ್ಲಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾವುದ್ದೀನ್ ಸೇರಿದಂತೆ ಹಲವರ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT