ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಜೆಐ ಮನೆಯ ಗಣಪತಿ ಪೂಜೆಯಲ್ಲಿ ಮೋದಿ: ನಮಗೆ ನ್ಯಾಯ ಸಿಗುತ್ತದೆಯೇ ಎಂದ ರಾವುತ್

Published : 12 ಸೆಪ್ಟೆಂಬರ್ 2024, 6:56 IST
Last Updated : 12 ಸೆಪ್ಟೆಂಬರ್ 2024, 6:56 IST
ಫಾಲೋ ಮಾಡಿ
Comments

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯ ಗಣಪತಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ಸಿಜೆಐ ನಮ್ಮ ಪಕ್ಷದ ಪ್ರಕರಣದಲ್ಲಿ ನ್ಯಾಯಸಮ್ಮತವಾಗಿ ತೀರ್ಪು ನೀಡುವರೇ ಎಂದು ಪ್ರಶ್ನಿಸಿದ್ದಾರೆ.

ಇದೇ ಪ್ರಕರಣದಲ್ಲಿ ಪಾರ್ಟಿ ಆಗಿರುವ ಮೋದಿ, ಸಿಜೆಐ ಮನೆಗೆ ಭೇಟಿ ಕೊಟ್ಟ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

ಎಎನ್‌ಐ ಜೊತೆ ಮಾತನಾಡಿರುವ ರಾವುತ್, ‘ಗಣಪತಿ ಪೂಜೆ ಎಲ್ಲೆಡೆ ನಡೆಯುತ್ತಿದೆ. ಜನರು ಪರಸ್ಪರರ ಮನೆಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರು ಸಿಜೆಐ ಮನೆಗೆ ಮಾತ್ರ ಭೇಟಿ ನೀಡಿದ್ದು, ಇಬ್ಬರು ಒಟ್ಟಿಗೆ ಆರತಿ ಮಾಡಿದ್ದಾರೆ’ಎಂದು ರಾವುತ್ ವ್ಯಂಗ್ಯ ಮಾಡಿದ್ದಾರೆ.

ಬುಧವಾರ ರಾತ್ರಿ ಸಿಜೆಐ ಡಿ.ವೈ. ಚಂದ್ರಚೂಡ್ ಅವರ ಮನೆಗೆ ಭೇಟಿ ನೀಡಿದ್ದ ಮೋದಿ, ಗಣಪತಿ ಪೂಜೆಯಲ್ಲಿ ಭಾಗವಹಿಸಿದ್ದರು.

ಸಂವಿಧಾನದ ಪಾಲಕರನ್ನು ರಾಜಕಾರಣಿ ಭೇಟಿಯಾದಾಗ ಜನರ ಮನದಲ್ಲಿ ಸಂಶಯ ಮೂಡುತ್ತದೆ ಎಂದು ರಾವುತ್ ಹೇಳಿದ್ದಾರೆ.

‘ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮಾರ್ತಿಗಳು ಈ ಪ್ರಕರಣದಿಂದ ದೂರವಿರಬೇಕು. ಏಕೆಂದರೆ, ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಗೋಚರಿಸುತ್ತಿದೆ’ಎಂದು ರಾವುತ್ ಹೇಳಿದ್ದಾರೆ.

ಈ ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

‘ನಮ್ಮ ಪ್ರಕರಣವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಸರ್ಕಾರ ನಡೆಯುತ್ತಿದೆ ಶಿವಸೇನೆ ಮತ್ತು ಎನ್‌ಸಿಪಿ ತತ್ತರಿಸುತ್ತಿವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದ ಅಕ್ರಮ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ’ಎಂದು ಕಿಡಿಕಾರದ್ದಾರೆ.

ಪ್ರಧಾನಮಂತ್ರಿ ಮತ್ತು ಸಿಜೆಐ ನಡುವಿನ ನಂಟಿನಿಂದ ಮಹಾರಾಷ್ಟ್ರದ ಜನರ ಮನಸ್ಸಿನಲ್ಲಿ ಒಂದು ಸಂದೇಹ ರೂಪುಗೊಂಡಿದೆ ಎಂದು ರಾವುತ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT