ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಹಗರಣ | ಕೇಜ್ರಿವಾಲ್‌ ಜಾಮೀನು ಅರ್ಜಿ: ವಿಚಾರಣೆ ಮುಂದೂಡಿದ ಕೋರ್ಟ್

Published 14 ಜೂನ್ 2024, 9:16 IST
Last Updated 14 ಜೂನ್ 2024, 9:16 IST
ಅಕ್ಷರ ಗಾತ್ರ

ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಇದೇ 19ಕ್ಕೆ (ಬುಧವಾರ) ನಿಗದಿಪಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಜಾರಿ ನಿರ್ದೇಶನಾಲಯ (ಇ.ಡಿ) ಕಾಲಾವಕಾಶ ಕೋರಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮುಖೇಶ್ ಕುಮಾರ್ ವಿಚಾರಣೆಯನ್ನು ಮುಂದೂಡಿದರು. ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಇದೇ 19ರವರೆಗೆ ವಿಸ್ತರಿಸಿದರು. 

ತಮ್ಮ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯನ್ನು ನಿರ್ಧರಿಸಲು ರಚಿಸಲಾಗಿರುವ ವೈದ್ಯಕೀಯ ಮಂಡಳಿಯ ಪ್ರಕ್ರಿಯೆಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪಾಲ್ಗೊಳ್ಳಲು ತಮ್ಮ ಪತ್ನಿಗೆ ಅವಕಾಶ ನೀಡಲು ನಿರ್ದೇಶನ ನೀಡುವಂತೆ ಕೋರಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ಶನಿವಾರಕ್ಕೆ ನಿಗದಿಪಡಿಸಿದರು. ಅಲ್ಲದೆ, ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೂ ನ್ಯಾಯಾಧೀಶರು ಸೂಚಿಸಿದರು.

‘ಆರೋಪಿ ತನ್ನ ಪತ್ನಿಯನ್ನು ವೈದ್ಯಕೀಯ ಮಂಡಳಿಗೆ ಸೇರಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ಆದೇಶ ನೀಡುವ ಮೊದಲು ಸಂಬಂಧಪಟ್ಟ ಜೈಲು ಅಧೀಕ್ಷಕರಿಂದ ಪ್ರತಿಕ್ರಿಯೆ ಪಡೆಯುವುದು ಸೂಕ್ತವೆಂಬುದು ನನ್ನ ಭಾವನೆ. ಹಾಗಾಗಿ ಈ ಅರ್ಜಿಯನ್ನು ಶನಿವಾರ (ಜೂ.15) ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಾಧೀಶರು ಹೇಳಿದರು.

ವಿಚಾರಣೆಯ ಸಂದರ್ಭದಲ್ಲಿ, ಪ್ರಕರಣವನ್ನು ಜೂ.25ಕ್ಕೆ ಮುಂದೂಡುವಂತೆ ಇ.ಡಿ ನ್ಯಾಯಾಲಯಕ್ಕೆ ಮನವಿ ಮಾಡಿತು. ಆಗ ನ್ಯಾಯಾಧೀಶರು, ಮುಂದಿನ ವಿಚಾರಣೆಯ ದಿನಾಂಕಕ್ಕೆ ನಿಮ್ಮ ಅನುಕೂಲವನ್ನಲ್ಲ, ಆರೋಪಿಯ ಅನುಕೂಲ ಪರಿಗಣಿಸಲಾಗುವುದು ಎಂದು ಇ.ಡಿಗೆ ಹೇಳಿದರು.

‘ಆರೋಪಿಯು ನಿಮ್ಮ ಕಸ್ಟಡಿಯಲ್ಲಿ ಇಲ್ಲ, ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಸ್ವಲ್ಪ ಅನುಕೂಲ ಬಯಸಿದರೆ ನಿಮಗೆ ಏನು ಕಷ್ಟ, ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ನಾನು ಅವರ ಅನುಕೂಲ ಪರಿಗಣಿಸುತ್ತೇನೆ, ನಿಮ್ಮ ಅನುಕೂಲವನ್ನಲ್ಲ’ ಎಂದು ನ್ಯಾಯಾಧೀಶರು ಹೇಳಿದರು.

ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯವು ಜೂನ್ 5ರಂದು ವಜಾಗೊಳಿಸಿತ್ತು. ಆದರೆ, ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್ ಅವರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವಂತೆ ನ್ಯಾಯಾಧೀಶರು ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT