ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಜೋರಾಂಗೆ ಅಡಿಕೆ ಕಳ್ಳಸಾಗಣೆ ಆರೋಪ: CBI ತನಿಖೆಗೆ ಆದೇಶಿಸಿದ ಹೈಕೋರ್ಟ್

Published 20 ಜುಲೈ 2024, 10:18 IST
Last Updated 20 ಜುಲೈ 2024, 10:18 IST
ಅಕ್ಷರ ಗಾತ್ರ

ಐಜ್ವಾಲ್: ಮ್ಯಾನ್ಮಾರ್‌ನಿಂದ ಮಿಜೋರಾಂ ಅಡಿಕೆ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಗುವಾಹಟಿ ಹೈಕೋರ್ಟ್‌ನ ಐಜ್ವಾಲ್ ಪೀಠ ಶನಿವಾರ ಆದೇಶಿಸಿದೆ.

ರೌಟ್‌ಫೆಲಾ ನು ಎಂದೇ ಪ್ರಸಿದ್ಧರಾಗಿರುವ ಸಾಮಾಜಿಕ ಕಾರ್ಯಕರ್ತೆ ವನ್ರಮಾಚೌಂಗಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ಮಾಡಿದೆ.

ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಸಿಬಿಐ ತನಿಖೆ ಕೈಗೊಂಡರೆ ಮಾತ್ರ ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿರಲಿದೆ ಎಂದು ಕಳೆದ ಮಂಗಳವಾರ ನಡೆದಿದ್ದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಝೊಥಾನ್‌ಖುಮಾ ಹಾಘೂ ಮರ್ಲಿ ವಾಂಕುಂಗ್‌ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿತ್ತು.

ಮ್ಯಾನ್ಮಾರ್‌ ಮೂಲದಿಂದ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಕಳ್ಳಸಾಗಣೆಯ ಪ್ರಕರಣ ಇದಾಗಿರುವುದರಿಂದ ತಾವು ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ಆಧರಿಸಿ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆ.

‘ಈ ಪ್ರಕರಣದ ತನಿಖೆಯನ್ನು ನಡೆಸಿ ಪ್ರಕರಣ ದಾಖಲಿಸಿ. ಅಗತ್ಯ ಬಿದ್ದರೆ, ತಾರ್ಕಿಕ ತೀರ್ಮಾನ ತೆಗೆದುಕೊಳ್ಳಿ’ ಎಂದು ನ್ಯಾಯಾಲಯ ಸಿಬಿಐಗೆ ನಿರ್ದೇಶಿಸಿದೆ.

‘ಒಣ ಅಡಿಕೆಯ ಕಳ್ಳಸಾಗಣೆ ತಡೆಗೆ ಮಿಜೋರಾಂ ಸರ್ಕಾರವು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಅವ್ಯಾಹತವಾಗಿ ದಕ್ಷಿಣ ಮಿಜೋರಾಂನ ಚಂಪೈ ಜಿಲ್ಲೆಯ ಮೂಲಕ ಮ್ಯಾನ್ಮಾರ್‌ನಿಂದ ಭಾರತವನ್ನು ಪ್ರವೇಶಿಸುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕು ಇರುವ ಸಾಧ್ಯತೆಯೂ ಇರುವುದರಿಂದ ಸಿಬಿಐ ಮೂಲಕ ತನಿಖೆ ನಡೆಸಬೇಕು’ ಎಂದು ರೌಡ್‌ಫೆಲಾ ನು ಕೋರಿದ್ದರು.

‘ಕಳೆದ ಕೆಲ ವರ್ಷಗಳಿಂದ ಬರ್ಮಸಿ ಅಡಿಕೆಯನ್ನು ಮಿಜೋರಾಂಗೆ ಕಳ್ಳಸಾಗಣೆ ಮೂಲಕ ಸಾಗಿಸಲಾಗುತ್ತಿದೆ. ಇದು ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಹಾಗೂ ಕಳ್ಳಸಾಗಣೆದಾರರ ನಡುವಿನ ಹೊಂದಾಣಿಕೆಯಿಂದ ಇದು ಅವ್ಯಾಹತವಾಗಿ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕಳ್ಳಸಾಗಣೆಯನ್ನು ತಡೆಯುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿರುವ ಸ್ಥಳೀಯ ಅಡಿಕೆ ಬೆಳಗಾರರು, ತಾವೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಾನೂನು ಕೈಗೆತ್ತಿಕೊಂಡಿದ್ದಾರೆ. ಇದರಿಂದ ಕಳ್ಳಸಾಗಣೆ ಮೂಲಕ ಬರುತ್ತಿರುವ ಅಡಿಕೆ ಹಾಗೂ ಸಾಗಿಸುವ ವಾಹನಗಳನ್ನು ಸುಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT