ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Haryana Poll: ಯಾವುದೇ ಪಕ್ಷ ಬೆಂಬಲಿಸದಿರಲು ರೈತರ ನಿರ್ಧಾರ–ಕಿಸಾನ್ ಮಹಾಪಂಚಾಯತ್‌

Published : 16 ಸೆಪ್ಟೆಂಬರ್ 2024, 4:54 IST
Last Updated : 16 ಸೆಪ್ಟೆಂಬರ್ 2024, 4:54 IST
ಫಾಲೋ ಮಾಡಿ
Comments

ಜಿಂದ್ (ಹರಿಯಾಣ): ಮುಂಬರಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದಿರಲು ಅಥವಾ ವಿರೋಧಿಸದಿರಲು ನಿರ್ಧರಿಸಲಾಗಿದೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.

ಹರಿಯಾಣದ ಜಿಂದ್ ಜಿಲ್ಲೆಯ ಉಚ್ಚಾನಾದಲ್ಲಿ ಭಾನುವಾರ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‌ಭಾರತೀಯ ಕಿಸಾನ್ ನೌಜವಾನ್ ಒಕ್ಕೂಟದ ಆಶ್ರಯದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಹರಿಯಾಣ, ಪಂಜಾಬ್ ಮತ್ತು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿದ್ದರು. ರೈತ ಮುಖಂಡರಾದ ಜಗಜಿತ್ ಸಿಂಗ್ ಡಲ್ಲೇವಾಲ್‌, ಸರವಣ ಸಿಂಗ್‌ ಪಂಢೇರ್‌, ಅಭಿಮನ್ಯು ಕೊಹಾಡ್ ಹಾಜರಿದ್ದರು.

ಮಹಾಪಂಚಾಯತ್‌ನಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡರಾದ ಡಲ್ಲೇವಾಲ್‌, 'ನಮಗೂ (ರೈತ ಚಳವಳಿ) ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಚಳವಳಿಯನ್ನು ಬಲಗೊಳಿಸುವುದು ನಮ್ಮ ಉದ್ದೇಶ. ಚುನಾವಣೆಯಲ್ಲಿ ನಾವು ಯಾರನ್ನೂ ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ನಮ್ಮ ಆಂದೋಲನವನ್ನು ಬಲಪಡಿಸಲು ಸರ್ಕಾರದ ವೈಫಲ್ಯಗಳು ಮತ್ತು ರೈತರ ವಿರುದ್ಧ ಕೈಗೊಂಡ ನಿರ್ಧಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ' ಎಂದು ಹೇಳಿದ್ದಾರೆ.

'ಮುಂದಿನ ಮಹಾಪಂಚಾಯತ್ ಸೆ.22ರಂದು ಕುರುಕ್ಷೇತ್ರದ ಪಿಪ್ಲಿಯಲ್ಲಿ ನಡೆಯಲಿದೆ. ನಮ್ಮ ಬೇಡಿಕೆಗಳು ಕೇವಲ ಪಂಜಾಬ್, ಹರಿಯಾಣ ರೈತರದಲ್ಲ. ಇಡೀ ದೇಶದ ರೈತರ ಬೇಡಿಕೆ. ಈ ಆಂದೋಲನವನ್ನು ಬಲಪಡಿಸಲು ದೇಶದ ಮೂಲೆ ಮೂಲೆಗಳಲ್ಲಿ ಮಹಾಪಂಚಾಯತ್‌ಗಳನ್ನು ನಡೆಸಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ರೈತ ಮುಖಂಡ ಅಭಿಮನ್ಯು ಕೊಹಾಡ್ ಮಾತನಾಡಿ, ‘ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವಂತೆ ನಾವು ಮನವಿ ಮಾಡುವುದಿಲ್ಲ, ಆದರೆ ಅವರು ಮತ ​​ಕೇಳಲು ಬಂದಾಗ ಕಳೆದ ಹತ್ತು ವರ್ಷಗಳಲ್ಲಿ ರೈತರು, ಕೂಲಿಕಾರರ ಮೇಲೆ ನಡೆದಿರುವ ದೌರ್ಜನ್ಯವನ್ನು ನೆನಪಿಸಿಕೊಳ್ಳಿ' ಎಂದು ಖಂಡಿತಾ ಹೇಳುತ್ತೇವೆ ಎಂದಿದ್ದಾರೆ.

90 ಸದಸ್ಯ ಬಲದ ಹರಿಯಾಣದ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT