ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

NEET ಪರೀಕ್ಷೆ ಗೊಂದಲ: ಕೀ ಉತ್ತರ ಕುರಿತು NTA ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Published 7 ಜೂನ್ 2024, 13:54 IST
Last Updated 7 ಜೂನ್ 2024, 13:54 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಈ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಎರಡು ಕೀ ಉತ್ತರಗಳನ್ನು ನೀಡಿರುವ ಕುರಿತು ವಿದ್ಯಾರ್ಥಿಯೊಬ್ಬರ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಈ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ನಿರ್ದೇಶಿಸಿದೆ.

ರಜಾಕಾಲದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ನೀಟ್ ಪರೀಕ್ಷೆಯಲ್ಲಿ ಯಾರು ಈ ಪ್ರಶ್ನೆಗೆ ಉತ್ತರಿಸಲು ಯತ್ನಿಸಿಲ್ಲವೋ ಅವರಿಗೆ  ಹಾಗೂ ಎರಡು ಉತ್ತರದಲ್ಲಿ ಒಂದನ್ನು ಆಯ್ಕೆ ಮಾಡಿದವರಿಗೆ ಪೂರ್ಣ ಅಂಕ ನೀಡಬೇಕು ಎಂಬ ಕೋರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿ ಡಿ.ಕೆ.ಶರ್ಮಾ ಅವರು ಎನ್‌ಟಿಎ ಪರ ವಕೀಲರಿಗೆ ಹೇಳಿದರು.

‘ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಕ್ಷಪಾತವಿಲ್ಲದೆ ನಡೆಸುವ ಮೂಲಕ, ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಮೌಲ್ಯಮಾಪನ ನಡೆಸಬೇಕಾದ್ದು ಮೂಲತತ್ವ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಯಾವುದಾದರೂ ಒಂದು ಸರಿಯಾದ ಉತ್ತರ ಬರೆಯಿರಿ ಎಂದು ಹೇಳಿದ ನಂತರ, ಎರಡು ಸರಿ ಉತ್ತರಗಳು ಇರಲು ಹೇಗೆ ಸಾಧ್ಯ’ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

‘ಪರೀಕ್ಷೆಯಲ್ಲಿ ತಪ್ಪು ಉತ್ತರಕ್ಕೆ ನಕಾರಾತ್ಮಕ ಅಂಕಗಳು ಇರುವ ಕಾರಣ, 17 ವರ್ಷದ ಅರ್ಜಿದಾರರು ಆ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಲಿಲ್ಲ. ಇದರಿಂದಾಗಿ 720 ಅಂಕಗಳಿಗೆ ಅವರು 633 ಅಂಕಗಳನ್ನು ಪಡೆದಿದ್ದಾರೆ. ಇದರಿಂದಾಗಿ ಆಲ್‌ ಇಂಡಿಯಾ ರ‍್ಯಾಂಕ್‌ನಲ್ಲಿ ಶೇ 98ರಷ್ಟು ಅಂಕ ಹಾಗೂ 44,700 ರ‍್ಯಾಂಕ್‌ ಪಡೆದಿದ್ದಾರೆ. ಒಂದು ಅಂಕ ರ‍್ಯಾಂಕ್‌ ಮೇಲೆ ಭಾರೀ ಪರಿಣಾಮ ಬೀರಿದೆ. ಹೀಗಾಗಿ ಎನ್‌ಟಿಎ ಅಂಕಗಳನ್ನು ಪರಿಷ್ಕರಿಸಲು ಆದೇಶಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದರು.

‘ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಪತ್ರಿಕೆ ಸಂಖ್ಯೆ ಆರ್‌5ರ ಪ್ರಶ್ನೆ 29ಕ್ಕೆ ನೀಡಿರುವ ಆಯ್ಕೆಗಳಲ್ಲಿ ಒಂದು ಸರಿಯಾದ ಉತ್ತರ ಎಂದು ಹೇಳಲಾಗಿದೆ. ಆದರೆ ಜೂನ್ 3ರಂದು ಬಿಡುಗಡೆ ಮಾಡಿದ ಕೀ ಉತ್ತರದಲ್ಲಿ ಎರಡು ಉತ್ತರಗಳನ್ನು ನೀಡಲಾಗಿದೆ’ ಎಂದು ಪೀಠದ ಗಮನಕ್ಕೆ ತಂದರು.

‘ತಪ್ಪು ಉತ್ತರಕ್ಕೆ ಅಂಕ ಕಡಿತ ಇರುವುದಾಗಿ ಹೇಳುವ ಮೂಲಕ ಒಂದೇ ಉತ್ತರವನ್ನು ಆಯ್ಕೆ ಮಾಡುವ ಒತ್ತಡ ಅಭ್ಯರ್ಥಿಗಳ ಮೇಲೆ ಹೇರಲಾಗಿತ್ತು. ಆದರೆ ಪರೀಕ್ಷಾ ಸಮಿತಿಯು ವಿದ್ಯಾರ್ಥಿಗಳು ತಪ್ಪು ಉತ್ತರವನ್ನು ಆಯ್ಕೆ ಮಾಡುವಂತೆ ಸಂಚು ಹೆಣೆಯಲಾಗಿತ್ತು. ಒಂದು ತಪ್ಪು ಉತ್ತರದಿಂದ ನೂರಾರು ರ‍್ಯಾಂಕ್‌ ಕುಸಿಯುವ ಅಪಾಯವಿದೆ. ಆದರೆ ಫಲಿತಾಂಶ ಪ್ರಕಟಿಸುವ ಮೊದಲು ಕೆಲವರಿಗೆ ಹೆಚ್ಚುವರಿ ಅಂಕ ನೀಡಲಾಗಿದೆ. ಫಲಿತಾಂಶ ಪ್ರಕಟಗೊಂಡಿದ್ದು, 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿದ್ದರು’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT