ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಿಬದ್ಧವಲ್ಲದ ಮದುವೆಗೆ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

‘ಹಿಂದೂ ವಿವಾಹವು ಒಂದು ಸಂಸ್ಕಾರ: ಕೇವಲ ಹಾಡು, ನೃತ್ಯಕ್ಕಾಗಿ ಇರುವ ಕಾರ್ಯಕ್ರಮ ಅಲ್ಲ‘
Published 1 ಮೇ 2024, 15:53 IST
Last Updated 1 ಮೇ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ವಿವಾಹ ಎಂಬುದು ಹಾಡು ಮತ್ತು ನೃತ್ಯಕ್ಕಾಗಿ, ಒಳ್ಳೆಯ ಭೋಜನ ಸವಿಯಲು ಅಥವಾ ವಾಣಿಜ್ಯ ವಹಿವಾಟು ನಡೆಸಲು ಇರುವ ಕಾರ್ಯಕ್ರಮ ಅಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಹಿಂದೂ ವಿವಾಹ ಕಾಯ್ದೆಗೆ ಅನುಗುಣವಾಗಿ ವಿವಾಹ ಆಗದೆ ಇದ್ದಲ್ಲಿ ಅದನ್ನು ಮಾನ್ಯ ಮಾಡಲು ಆಗದು ಎಂದು ಸ್ಪಷ್ಟಪಡಿಸಿದೆ.

ಹಿಂದೂ ವಿವಾಹವು ಒಂದು ಸಂಸ್ಕಾರ. ಅದಕ್ಕೆ ಭಾರತೀಯ ಸಮಾಜದಲ್ಲಿ ಬಹಳ ಮೌಲ್ಯಯುತವಾದ ಸಂಪ್ರದಾಯದ ಸ್ಥಾನ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆಗಸ್ಟೀನ್ ಜಾರ್ಜ್ ಮಸೀ ಅವರು ಇದ್ದ ವಿಭಾಗೀಯ ಪೀಠ ಹೇಳಿದೆ.

ಇಬ್ಬರು ವಾಣಿಜ್ಯ ಪೈಲಟ್‌ಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈಚೆಗೆ ನೀಡಿರುವ ತೀರ್ಪಿನಲ್ಲಿ ಪೀಠವು, ‘ಯುವಕ, ಯುವತಿಯರು ಮದುವೆಗೆ ಮೊದಲೇ ಆ ಸಂಪ್ರದಾಯವು ಅದೆಷ್ಟು ಪವಿತ್ರ ಎಂಬ ಬಗ್ಗೆ ಆಳವಾಗಿ ಆಲೋಚನೆ ಮಾಡಬೇಕು’ ಎಂದು ಕಿವಿಮಾತು ಹೇಳಿದೆ. ಹಿಂದೂ ವಿವಾಹ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆ ನಡೆದಿಲ್ಲದಿದ್ದರೂ ಈ ಪೈಲಟ್‌ಗಳು ವಿಚ್ಚೇದನ ಕೋರಿದ್ದರು.

‘ಇದು ಪುರುಷ ಮತ್ತು ಮಹಿಳೆಯ ನಡುವೆ ಸಂಬಂಧವನ್ನು ರೂಪಿಸಲು ಆಚರಿಸುವ ವಿಧ್ಯುಕ್ತ ಕಾರ್ಯಕ್ರಮ. ಆ ಪುರುಷ ಮತ್ತು ಮಹಿಳೆಯು ಮುಂದೆ ವಿಕಾಸಗೊಳ್ಳುವ ಕುಟುಂಬದಲ್ಲಿ ಪತಿ, ಪತ್ನಿಯ ಸ್ಥಾನ ಪಡೆದುಕೊಳ್ಳುತ್ತಾರೆ. ಕುಟುಂಬವು ಭಾರತೀಯ ಸಮಾಜದ ಮೂಲಭೂತ ಘಟಕ’ ಎಂದು ಪೀಠವು ಹೇಳಿದೆ.

ಮದುವೆಯು ಪವಿತ್ರವಾದುದು. ಅದು ಜೀವನಪರ್ಯಂತ ಇರುವಂಥದ್ದು, ಘನತೆಯನ್ನು ಖಚಿತಪಡಿಸುವಂಥದ್ದು, ಸಮಾನವಾದುದು, ಇಬ್ಬರು ವ್ಯಕ್ತಿಗಳ ನಡುವೆ ಒಪ್ಪಿತ ಹಾಗೂ ಆರೋಗ್ಯಕರವಾದ ಸಮಾಗಮಕ್ಕೆ ಅವಕಾಶ ಕಲ್ಪಿಸುವಂಥದ್ದು ಎಂದು ಪೀಠವು ಹೇಳಿದೆ.

‘ಪತಿ, ಪತ್ನಿಯ ಸ್ಥಾನವನ್ನು ಪಡೆಯಲು ಯುವಕ, ಯುವತಿಯರು ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ಮಾನ್ಯವಾದ ವಿವಾಹ ಆಚರಣೆ ಇಲ್ಲದಿದ್ದರೂ, ವಿವಾಹ ಆಗಿದೆ ಎಂಬಂತೆ ತೋರಿಸಿಕೊಳ್ಳುವ ಕ್ರಮವನ್ನು ನಾವು ಒಪ್ಪುವುದಿಲ್ಲ’ ಎಂದು ಪೀಠವು ಹೇಳಿದೆ. ಹಿಂದೂ ವಿವಾಹವು ಸೂಕ್ತವಾದ ಆಚರಣೆಗಳು ಇಲ್ಲದೆಯೇ ಆಗಿದ್ದಲ್ಲಿ, ಅಂತಹ ವಿವಾಹವನ್ನು ‘ಹಿಂದೂ ವಿವಾಹವೆಂದು ಪರಿಗಣಿಸಲಾಗದು’ ಎಂದು ಏಪ್ರಿಲ್‌ 19ರ ಆದೇಶದಲ್ಲಿ ಪೀಠ ಹೇಳಿತ್ತು.

‘ಹಿಂದೂ ವಿವಾಹದಲ್ಲಿ ಸಪ್ತಪದಿ ಅಂದರೆ ಋಗ್ವೇದದ ಪ್ರಕಾರ, ಏಳನೆಯ ಹೆಜ್ಜೆಯನ್ನು ಪೂರ್ಣಗೊಳಿಸಿದ ನಂತರ ವರನು ವಧುವಿಗೆ ‘ಏಳು ಹೆಜ್ಜೆಗಳ ಮೂಲಕ ನಾವು ಸಖರಾಗಿದ್ದೇವೆ. ನಾನು ನಿನ್ನ ಸ್ನೇಹಿತ ಆಗಬಹುದೇ, ನಿನ್ನ ಸ್ನೇಹದಿಂದ ಪ್ರತ್ಯೇಕವಾಗುವ ಸಂದರ್ಭ ಬರದೆ ಇರಲಿ’ ಎಂದು ಹೇಳುತ್ತಾನೆ. ಪತ್ನಿಯು ಪತಿಯ ಅರ್ಧಾಂಗಿ ಎಂದು, ಆಕೆಯನ್ನು ಆಕೆಯದೇ ಆದ ಅಸ್ಮಿತೆಯೊಂದಿಗೆ ಒಪ್ಪಿಕೊಳ್ಳಬೇಕು, ಮದುವೆಯಲ್ಲಿ ಸಮಾನ ಪಾಲುದಾರೆಯಾಗಿ ಪರಿಗಣಿಸಬೇಕು ಎಂದು ಹೇಳಲಾಗಿದೆ’ ಎನ್ನುವ ಮಾತನ್ನು ಪೀಠವು ಹೇಳಿದೆ.

ಈ ಕಾಯ್ದೆಯನ್ನು ಜಾರಿಗೆ ತಂದನಂತರದಲ್ಲಿ, ಪತಿ ಮತ್ತು ಪತ್ನಿಯ ನಡುವೆ ಕಾನೂನಿನ ಮಾನ್ಯತೆ ಇರುವ ಸಂಬಂಧವೆಂದರೆ ಅದು ಏಕಸಾಂಗತ್ಯ ಮಾತ್ರ ಎಂದು ಪೀಠವು ನೆನಪಿಸಿದೆ. ‘ಹಿಂದೂ ವಿವಾಹ ಕಾಯ್ದೆಯು ಬಹುಪತ್ನಿತ್ವವನ್ನು ಒಪ್ಪುವುದಿಲ್ಲ’ ಎಂದು ಹೇಳಿದೆ.

‘ಅಗತ್ಯವಿರುವ ಆಚರಣೆಗಳನ್ನು ಕೈಗೊಳ್ಳದೆ ಇದ್ದಾಗ, ಪ್ರಾಧಿಕಾರವೊಂದು ಮದುವೆಯ ಪ್ರಮಾಣಪತ್ರ ನೀಡಿದೆ ಎಂದಮಾತ್ರಕ್ಕೆ, ಮದುವೆ ಆಗಿದೆ ಎನ್ನಲಾಗದು’ ಎಂದು ಪೀಠವು ಸ್ಪಷ್ಟಪಡಿಸಿದೆ.

ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ, ಸೆಕ್ಷನ್ 5ರಲ್ಲಿ ಹೇಳಿರುವ ನಿಬಂಧನೆಗಳನ್ನು ಪೂರೈಸಬೇಕು, ಸೆಕ್ಷನ್‌ 7ರಲ್ಲಿ ಹೇಳಿರುವಂತೆ ವಿಧಿಬದ್ಧವಾಗಿ ಮದುವೆ ನಡೆದಿರಬೇಕು ಎಂದು ತಿಳಿಸಿದೆ. ಈ ಇಬ್ಬರು ಕಾನೂನಿಗೆ ಅನುಗುಣವಾಗಿ ಮದುವೆ ಆಗಿರಲಿಲ್ಲ ಎಂದು ಹೇಳಿರುವ ಪೀಠವು, ಅವರಿಗೆ ನೀಡಲಾಗಿದ್ದ ವಿವಾಹ ನೋಂದಣಿ ಪ್ರಮಾಣಪತ್ರವು ಅಮಾನ್ಯ ಎಂದು ಸಾರಿದೆ.

ವಿವಾಹದ ನೋಂದಣಿಯು ವಿವಾದ ಉಂಟಾದಲ್ಲಿ ಮದುವೆಗೆ ಸಾಕ್ಷ್ಯವನ್ನು ಒದಗಿಸಿಕೊಡುತ್ತದೆ. ಆದರೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 7ಕ್ಕೆ ಅನುಗುಣವಾಗಿ ವಿವಾಹ ಆಗದೆ ಇದ್ದರೆ ಅಂತಹ ಮದುವೆಗೆ ವಿವಾಹ ನೋಂದಣಿಯು ಕಾನೂನಿನ ಮಾನ್ಯತೆಯನ್ನು ನೀಡುವುದಿಲ್ಲ.
–ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ (ಸೆಕ್ಷನ್‌ 7 ಸಪ್ತಪದಿಯ ಮಹತ್ವವನ್ನು ಹೇಳುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT