ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Covaxin ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: BHU ಅಧ್ಯಯನ

Published 16 ಮೇ 2024, 12:27 IST
Last Updated 16 ಮೇ 2024, 12:27 IST
ಅಕ್ಷರ ಗಾತ್ರ

ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಪಡೆದ ಮೂರನೇ ಒಂದು ಭಾಗದಷ್ಟು ಜನರಲ್ಲಿ ವರ್ಷದ ಬಳಿಕ ಅಡ್ಡ ಪರಿಣಾಮ ಕಂಡುಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ(ಬಿಎಚ್‌ಯು) ಸಂಶೋಧಕರ ತಂಡ ನಡೆಸಿದ ಅಧ್ಯಯನದ ವರದಿ ತಿಳಿಸಿದೆ.

ಅಧ್ಯಯನದಲ್ಲಿ ಪಾಲ್ಗೊಂಡಿದ್ದ 926 ಮಂದಿ ಪೈಕಿ ಶೇ 50ರಷ್ಟು ಜನರಲ್ಲಿ ಫಾಲೊ ಅಪ್ ಅವಧಿಯಲ್ಲಿ ಸೋಂಕು ಕಂಡುಬಂದಿದೆ. ಉಸಿರಾಟ ವ್ಯವಸ್ಥೆಯಲ್ಲಿ ಸೋಂಕು ಪತ್ತೆಯಾಗಿದೆ. ಗಂಟಲು ಕೆರೆತ, ಮೂಗು ಸೋರುವಿಕೆ ಕೆಮ್ಮು ಮುಂತಾದ ಲಕ್ಷಣ ಕಂಡುಬಂದಿವೆ ಎಂದು ಅಧ್ಯಯನ ಹೇಳಿದೆ.

ಶೇಕಡ 1ರಷ್ಟು ಪ್ರಕರಣಗಳಲ್ಲಿ ಪಾರ್ಶ್ವವಾಯು, ಗುಲ್ಲೈನ್–ಬರ್ರೆ ಸಿಂಡ್ರೋಮ್(ನರಗಳಿಗೆ ಸಂಬಂಧಿತ ಆರೋಗ್ಯ ಸಮಸ್ಯೆ) ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಅಧ್ಯಯನದ ವರದಿಯು ಸ್ಟ್ರಿಂಜರ್ ನೇಚರ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ತಮ್ಮ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯು ಅತ್ಯಂತ ವಿರಳ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಯಾಗುವಂತಹ ಅಡ್ಡ ಪರಿಣಾಮ ಸೃಷ್ಟಿಸುತ್ತದೆ ಎಂದು ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ, ಭಾರತದಲ್ಲಿ ಹೆಚ್ಚು ಜನರಿಗೆ ನೀಡಲಾದ ಕೋವ್ಯಾಕ್ಸಿನ್ ಲಸಿಕೆಯ ಅಡ್ಡ ಪರಿಣಾಮದ ಕುರಿತಂತೆ ಅಧ್ಯಯನ ಹೊರಬಿದ್ದಿದೆ.

‘ಲಸಿಕೆ ಪಡೆದ ಮೂರನೇ ಒಂದು ಭಾಗಷ್ಟು ಜನರಲ್ಲಿ ಅಡ್ವರ್ಸ್ ಇವೆಂಟ್ಸ್ ಆಫ್ ಸ್ಪೆಷಲ್ ಇಂಟರೆಸ್ಟ್(ಎಇಎಸ್‌ಐ) ಸಮಸ್ಯೆ ಕಂಡುಬಂದಿದೆ. ಚರ್ಮ ಸಂಬಂಧಿತ ಸಮಸ್ಯೆ, ನರಗಳಿಗೆ ಸಂಬಂಧಿತ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆ. ಈ ಮೂರೂ ಅಸ್ವಸ್ಥತೆಗಳು ಶೆ 30ರಷ್ಟು ಜನರಲ್ಲಿ ಕಂಡುಬಂದಿದೆ’ ಎಂದು 2022ರ ಜನವರಿಯಿಂದ 2023ರ ಆಗಸ್ಟ್‌ವರೆಗೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

635 ಹದಿಹರೆಯದ ಮತ್ತು 291 ಮಂದಿ ವಯಸ್ಕರು ಅಧ್ಯಯನದಲ್ಲಿ ಭಾಗಿಯಾಗಿದ್ದರು.

ಅಧ್ಯಯನದ ಅವಧಿಯಲ್ಲಿ ನಾಲ್ವರ ಸಾವು

ಅಧ್ಯಯನದ ಅವಧಿಯಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ. ಮೃತಪಟ್ಟ ಎಲ್ಲರೂ ಮಧುಮೇಹಿಗಳಾಗಿದ್ದರು. ಮೂವರು ಅಧಿಕ ಒತ್ತಡದಂಥ ಸಮಸ್ಯೆಯಿಂದ ಬಳಲುತ್ತಿದ್ದರು. ಮೃತಪಟ್ಟವರಲ್ಲಿ ಇಬ್ಬರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಮತ್ತೊಬ್ಬರು ಕೋವಿಡ್‌– 19 ನಂತರದ ರೈನೋಸೆರಬ್ರಲ್‌ ಮ್ಯುಕೊರ್‌ಮೈಕೊಸಿಸ್‌ನಿಂದ (ಉಸಿರಾಟದ ವ್ಯವಸ್ಥೆಯಲ್ಲಿಯ ಸೋಂಕು) ಬಳಲುತ್ತಿದ್ದರು. ಮೃತಪಟ್ಟ ಮತ್ತೊಬ್ಬ ಮಹಿಳೆಯು ಲಸಿಕೆ ತೆಗೆದುಕೊಂಡ ಬಳಿಕ ಪದೇ ಪದೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು ಎಂದು ಅಧ್ಯಯನ ಹೇಳಿದೆ.

ಬಹುತೇಕ ಅಡ್ಡಪರಿಣಾಮಗಳು ಗಮನಾರ್ಹ ಸಮಯದವರೆಗೆ ಇರಲಿವೆ. ಈ ಲಸಿಕೆಗಳನ್ನು ತೆಗೆದುಕೊಂಡಿರುವವರು ಅಡ್ಡಪರಿಣಾಮಗಳ ಬಗ್ಗೆ ನಿಗಾವಹಿಸಬೇಕು ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಮೂರು ಡೋಸ್‌ ಮತ್ತು ಒಂದು ಡೋಸ್‌ ಲಸಿಕೆಯನ್ನು ಪಡೆದವರಲ್ಲಿ ಅಡ್ಡಪರಿಣಾಮಕ್ಕೆ ಒಳಗಾಗುವ ಅಪಾಯವು ಅನುಕ್ರಮವಾಗಿ ನಾಲ್ಕು ಪಟ್ಟು ಮತ್ತು ಎರಡು ಪಟ್ಟು ಹೆಚ್ಚೇ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT