ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆನಡಾದ ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆ ಮಾಡಿದ ಭಾರತ

Published 19 ಸೆಪ್ಟೆಂಬರ್ 2023, 6:11 IST
Last Updated 19 ಸೆಪ್ಟೆಂಬರ್ 2023, 6:11 IST
ಅಕ್ಷರ ಗಾತ್ರ

ನವದೆಹಲಿ: ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಮಾಡಿರುವ ಆರೋಪವನ್ನು ಭಾರತ ತಿರಸ್ಕರಿಸಿದ್ದು, ‘ಇದು ಅಸಂಬದ್ಧ ಮತ್ತು ಅರ್ಥಹೀನ’ ಎಂದು ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಯನ್ನು ಕೆನಡಾ ಸೋಮವಾರ ಉಚ್ಚಾಟಿಸಿದ ಬೆನ್ನಲ್ಲೇ, ಇಲ್ಲಿರುವ ಆ ದೇಶದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

ಭಾರತದಲ್ಲಿನ ಕೆನಡಾ ಹೈಕಮಿಷನರ್‌ ಕ್ಯಾಮರಾನ್‌ ಮ್ಯಾಕೆ ಅವರಿಗೆ ಮಂಗಳವಾರ ಬೆಳಿಗ್ಗೆ ಸಮನ್ಸ್‌ ನೀಡಿದ್ದ ಭಾರತ, ಅಲ್ಲಿನ ಹಿರಿಯ ಅಧಿಕಾರಿಯನ್ನು ಉಚ್ಚಾಟಿಸುವ ಕುರಿತು ಮಾಹಿತಿ ನೀಡಿತ್ತು. ‘ನಮ್ಮ ಆಂತರಿಕ ವಿಷಯದಲ್ಲಿ ಆ ದೇಶದ ರಾಜತಾಂತ್ರಿಕ ಅಧಿಕಾರಿಗಳ ಹಸ್ತಕ್ಷೇಪ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಬಗ್ಗೆ ನವದೆಹಲಿಯ ಕಳವಳವನ್ನು ಇದು ಬಿಂಬಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ಟ್ರುಡೊ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತವು, ‘ಇಂತಹ ಆಧಾರರಹಿತ ಆರೋಪಗಳು, ಆ ದೇಶದಲ್ಲಿ ಆಶ್ರಯ ಪಡೆದಿರುವ ಖಾಲಿಸ್ತಾನ ಉಗ್ರರು ಮತ್ತು ಪ್ರತ್ಯೇಕತಾವಾದಿಗಳಿಂದ ಗಮನವನ್ನು ಬೇರೆಡೆಗೆ ಹರಿಸುವಂತೆ ಮಾಡುತ್ತವೆ. ಅಲ್ಲದೆ, ಭಾರತದ ಸಾರ್ವಭೌಮತೆ ಮತ್ತು ಭೂಪ್ರದೇಶದ ಸಮಗ್ರತೆಗೆ ಧಕ್ಕೆ ತರುತ್ತವೆ ಎಂದು ತಿಳಿಸಿದೆ.

ಐದು ದಿನಗಳಲ್ಲಿ ಭಾರತದಿಂದ ಹೊರ ಹೋಗುವಂತೆ ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಪ್ರಕಟಿಸಿರುವ ಸಚಿವಾಲಯವು ಅಧಿಕಾರಿಯ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ. ಆದರೆ, ನಂತರದಲ್ಲಿ ಸಚಿವಾಲಯವು ಈ ಅಧಿಕಾರಿ ನವದೆಹಲಿಯಲ್ಲಿರುವ ಆ ದೇಶದ ಬೇಹುಗಾರಿಕಾ ಸಂಸ್ಥೆಯ ಮುಖ್ಯಸ್ಥ ಅಲಿವೀಯಾ ಸಿಲ್‌ವೆಸ್ಟ್‌ ಎಂದು ಹೇಳಿದೆ.

‘ಖಾಲಿಸ್ತಾನ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡವಿದೆಯೆಂಬ ಆರೋಪವಿದೆ. ಈ ಕಾರಣ ಭಾರತದ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (ರಾ) ಮುಖ್ಯಸ್ಥ ಪವನ್‌ ಕುಮಾರ್‌ ರೈ ಅವರನ್ನು ಅಲ್ಲಿಂದ ಉಚ್ಚಾಟಿಸಲಾಗಿದೆ’ ಎಂದು ಅಲ್ಲಿನ ವಿದೇಶಾಂಗ ಸಚಿವೆ ಮೆಲನಿ ಜೋಲಿ ಪ್ರಕಟಿಸಿದ ಕೆಲ ತಾಸಿನ ಬಳಿಕ ಭಾರತವು ಅಲ್ಲಿನ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸುವ ಕ್ರಮ ಕೈಗೊಂಡಿದೆ. 

ಹರ್ದೀಪ್‌ಸಿಂಗ್‌ನನ್ನು ಜೂನ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ಕೆನಡಾದ ಸರ‍್ರೆಯಲ್ಲಿ ಗುಂಡಿಟ್ಟು ಕೊಂದಿದ್ದರು.  

ಸೋಮವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ಟ್ರುಡೊ ಅವರು, ‘ಇಲ್ಲಿನ ಪ್ರಜೆ ಹರ್ದೀಪ್‌ಸಿಂಗ್‌ ನಿಜ್ಜರ್‌  ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರುಗಳ ಕೈವಾಡವಿರುವ ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದಿದ್ದರು.

‘ನಮ್ಮ ದೇಶದ ಪ್ರಜೆಯ ಹತ್ಯೆಯಲ್ಲಿ ಹೊರದೇಶ ಸರ್ಕಾರದ ಯಾವುದೇ ಪಾಲ್ಗೊಳ್ಳುವಿಕೆಯನ್ನು ಸಹಿಸುವುದಿಲ್ಲ. ತನಿಖೆ ಬಗ್ಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಫ್ರಾನ್ಸ್‌ ಪ್ರಧಾನಿ ಇಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೂ ವಿವರ ನೀಡಲಾಗಿದೆ’ ಎಂದು ಕೂಡ ಹೇಳಿದ್ದರು.

ಹರ್ದೀಪ್‌ ಸಿಂಗ್‌ ಭಾರತದಿಂದ ತಲೆಮರೆಸಿಕೊಂಡಿದ್ದು 1990ರ ದಶಕದ ಉತ್ತರಾರ್ಧದಿಂದ ಕೆನಡಾದಲ್ಲಿ ನೆಲೆಸಿದ್ದ. ಪಂಜಾಬ್‌ನ ಲುಧಿಯಾನಾದಲ್ಲಿ 2007ರಲ್ಲಿನ ಸ್ಫೋಟ ಸೇರಿದಂತೆ ಭಾರತದಲ್ಲಿನ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು 40 ಮಂದಿ ಗಾಯಗೊಂಡಿದ್ದರು. ಪಟಿಯಾಲದಲ್ಲಿ 2009ರಲ್ಲಿ ರಾಷ್ಟ್ರೀಯ ಸಿಖ್‌ ಸಂಘಟ್‌ ಅಧ್ಯಕ್ಷ ರುಲ್ಡ ಸಿಂಗ್‌ ಅವರನ್ನು ಹತ್ಯೆಗೈದ ಪ್ರಕರಣದಲ್ಲಿಯೂ ಈತ ಆರೋಪಿಯಾಗಿದ್ದ.

ಭಾರತ ಸರ್ಕಾರದ ಎನ್‌ಐಎ 2022ರ ಜುಲೈನಲ್ಲಿ ಹರ್ದೀಪ್‌ ಸಿಂಗ್ ತಲೆಗೆ ₹ 10 ಲಕ್ಷ ಬಹುಮಾನ ಘೋಷಿಸಿತ್ತು. ಈತ ನಿಷೇಧಿತ ಖಾಲಿಸ್ತಾನ ಟೈಗರ್‌ ಪಡೆಯ ಕಮಾಂಡರ್‌ ಅಲ್ಲದೆ ಸಿಖ್ಸ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದ. ಜೂನ್‌ 18ರಂದು ಹತ್ಯೆಯಾಗುವವರೆಗೂ ಸರ್‍ರೆಯ ಗುರುನಾನಕ್‌ ಸಿಖ್‌ ಗುರುದ್ವಾರದ ಮುಖ್ಯಸ್ಥನಾಗಿಯೂ  ಕಾರ್ಯ ನಿರ್ವಹಿಸಿದ್ದ.

ಈತನ ಹತ್ಯೆಗೆ ಭಾರತೀಯ ರಾಯಭಾರಿ ಸಂಜಯ್‌ ಕುಮಾರ್‌ ವರ್ಮ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳೇ ಕಾರಣ ಎಂದು ಬಿಂಬಿಸುವಂಥ ಪೋಸ್ಟರ್‌ ಅನ್ನು ಎಸ್‌ಎಫ್‌ಜೆ ಪ್ರದರ್ಶಿಸಿತ್ತು. ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿ ಕೂಡ ಈ ಬಗ್ಗೆ ಪ್ರಚಾರ ಮಾಡಿತ್ತು.

ಬಾಂಧವ್ಯದಲ್ಲಿ ಬಿರುಕು:  ಕೆನಡಾದಲ್ಲಿ ಭಾರತದ ವಿರುದ್ಧ ಖಾಲಿಸ್ತಾನ ಪರ ಸಂಘಟನೆಗಳು ಕೆಲವು ವರ್ಷಗಳಿಂದ ಪ್ರಚಾರ ನಡೆಸುತ್ತಾ ಬಂದಿರುವುದರಿಂದ ನವದೆಹಲಿ ಮತ್ತು ಒಟ್ಟಾವ ನಡುವಣ ಸಂಬಂಧ ಹದಗೆಟ್ಟಿದೆ. ಅಲ್ಲಿ ನೆಲೆ ಕಂಡುಕೊಂಡಿರುವ  ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳದೇ ಇರುವ ಬಗ್ಗೆ ಭಾರತ ಸರ್ಕಾರ ತನ್ನ ಕಳವಳವನ್ನು ಪದೇ ಪದೇ ವ್ಯಕ್ತಪಡಿಸುತ್ತಲೇ ಬಂದಿದೆ.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಜಿ–20 ಶೃಂಗಸಭೆ ವೇಳೆ ನರೇಂದ್ರ ಮೋದಿ ಮತ್ತು ಟುಡ್ರೊ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಪ್ರತ್ಯೇಕತಾವಾದಿಗಳ ಚಟುವಟಿಕೆಗಳ ಬಗ್ಗೆ ಭಾರತದ ತೀವ್ರ ಆತಂಕವನ್ನು ಮೋದಿ ಅವರು ಟುಡ್ರೊ ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ್ದ ಹೇಳಿಕೆ ತಿಳಿಸಿತ್ತು.

‘ಕೊಲೆ, ಮಾನವ ಸಾಗಣೆ ಮತ್ತು ಸಂಘಟಿತ ಅಪರಾಧ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳು ಅಲ್ಲಿ ನಡೆಯುತ್ತಿರುವುದು ಹೊಸ ವಿಷಯವೇನಲ್ಲ. ಆ ನೆಲದಿಂದ ಭಾರತ ವಿರೋಧಿ ಚಟವಟಿಕೆಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವುದಾಗಿ ಸಚಿವಾಲಯ ಹೇಳಿದೆ.

 ಭಾರತದೊಂದಿಗೆ ವ್ಯಾಪಾರ ಒಪ್ಪಂದಗಳು ಹಿಂದಿನಂತೆಯೇ ಮುಂದುವರಿಯಲಿವೆ ಎಂದು ಬ್ರಿಟನ್‌ ಪ್ರಧಾನಿ ಸುನಕ್‌ ಅವರ ವಕ್ತಾರ ತಿಳಿಸಿದ್ದರೆ,  ಇಂತಹ ಆರೋಪಗಳಿಂದ ತೀವ್ರ ಆತಂಕಕ್ಕೆ ಒಳಗಾಗಿರುವುದಾಗಿ ಮತ್ತು ತಮ್ಮ ಕಾಳಜಿಯನ್ನು ಭಾರತದ ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ.

ಓದಿ: ಖಾಲಿಸ್ತಾನಿ ಉಗ್ರನ ಹತ್ಯೆಯ ಹಿಂದೆ ಭಾರತದ ಕೈವಾಡ; ಕೆನಡಾದ ಆರೋಪ ತಳ್ಳಿಹಾಕಿದ ಭಾರತ

ಓದಿ: ಖಾಲಿಸ್ತಾನಿ ಉಗ್ರನ ಹತ್ಯೆ: ಭಾರತದ ರಾಜತಾಂತ್ರಿಕ ಅಧಿಕಾರಿ ಉಚ್ಚಾಟಿಸಿದ ಕೆನಡಾ

ಓದಿ: ಕೆನಡಾ: ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್‌ ಗುಂಡಿಕ್ಕಿ ಹತ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT