ಕೀ–ಉತ್ತರ: ಹೈಕೊರ್ಟ್ ಮೊರೆಹೋದ ಅಭ್ಯರ್ಥಿ
ನವದೆಹಲಿ (ಪಿಟಿಐ): ನೀಟ್ ಪರೀಕ್ಷೆಯ ಪ್ರಶ್ನೆಯೊಂದರ ಕೀ–ಉತ್ತರಕ್ಕೆ ತಕರಾರು ವ್ಯಕ್ತಪಡಿಸಿ ಅಭ್ಯರ್ಥಿಯೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮೂರ್ತಿ ಡಿ.ಕೆ.ಶರ್ಮಾ ಅವರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗೆ ಶುಕ್ರವಾರ ತಿಳಿಸಿದರು. ಪರೀಕ್ಷಾ ಬುಕ್‌ಲೆಟ್ ಕೋಡ್ ಆರ್5ರ ಪ್ರಶ್ನೆ ಸಂಖ್ಯೆ 20ಕ್ಕೆ ಆಯ್ಕೆ 2 ಮತ್ತು 4 ಅನ್ನು ಸರಿ ಎಂದು ಎನ್‌ಟಿಎ ಪರಿಗಣಿಸಿದೆ. ಒಂದು ಪ್ರಶ್ನೆಗೆ ಒಂದೇ ಉತ್ತರ ಇರಬೇಕು ಎಂಬ ನಿಯಮಕ್ಕೆ ಇದು ವಿರುದ್ಧವಾಗಿದೆ. ಪ್ರಶ್ನೆಯ ಆಯ್ಕೆಗಳಲ್ಲಿ ಗೊಂದಲ ಉಂಟಾದ್ದರಿಂದ ಮತ್ತು ಋಣಾತ್ಮಕ ಅಂಕವೂ ಇದ್ದ ಕಾರಣ ಅರ್ಜಿದಾರರು ಆ ಪ್ರಶ್ನೆಗೆ ಉತ್ತರಿಸಿಲ್ಲ. ಈಗ ಎರಡು ಆಯ್ಕೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿದ್ದರೆ ಅದನ್ನು ಸರಿ ಎಂದು ಪರಿಗಣಿಸಿದರೆ ಅರ್ಜಿದಾರರಿಗೆ ನಷ್ಟವಾಗುತ್ತದೆ. ಹೀಗಾಗಿ ಈ ಪ್ರಶ್ನೆಗೆ ಉತ್ತರ ಆಯ್ಕೆ ಮಾಡದ ಅಭ್ಯರ್ಥಿಗಳಿಗೂ ಅಂಕಗಳನ್ನು ನೀಡಿ ಪರಿಷ್ಕೃತ ರ್‍ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಎನ್‌ಟಿಎಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಮುಂದಿನ ವಾರ ನಡೆಯಲಿದೆ.