ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಭವಿಷ್ಯ ಸುಳ್ಳಾಗಿವೆ. 90 ಸದಸ್ಯ ಬಲದ ವಿಧಾನಸಭೆಯಲ್ಲಿ 42 ಸ್ಥಾನಗಳನ್ನು ಗೆಲ್ಲುವ ಮೂಲಕ, ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಕಣಿವೆ ರಾಜ್ಯದಲ್ಲಿ ಗೆಲುವಿನ ನಗೆ ಬೀರಿದೆ.

29 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿಯು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳಿಗೆ (ಪಿಡಿಪಿ) ಭಾರಿ ಹಿನ್ನಡೆಯಾಗಿದ್ದು, ಕ್ರಮವಾಗಿ ಆರು ಮತ್ತು ಮೂರು ಸ್ಥಾನಗಳಲ್ಲಷ್ಟೇ ಜಯಗಳಿಸಿವೆ.

ನಾಲ್ಕು ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಾರಮುಲ್ಲಾ ಕ್ಷೇತ್ರದಿಂದ ಶೇಖ್ ಅಬ್ದುಲ್ ರಶೀದ್ ವಿರುದ್ಧ ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದ ಒಮರ್ ಅಬ್ದುಲ್ಲಾ ಅವರು ಗಂದೆರ್ಬಲ್ ಮತ್ತು ಬಡ್ಗಾಮ್ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.

ಫಲಿತಾಂಶವು ಪಕ್ಷದ ಪರವಾಗಿ ಬರುತ್ತಿದ್ದಂತೆಯೇ, ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತಮ್ಮ ಮಗ, ಒಮರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ್ದಾರೆ.

ಪಕ್ಷದ ಗೆಲುವನ್ನು ಸಂಭ್ರಮಿಸಿ ಮಾತನಾಡಿರುವ ಒಮರ್ ಅಬ್ದುಲ್ಲಾ, ‘ಒಂದು ಕಾಲದಲ್ಲಿ ಎನ್ಸಿಯನ್ನು ಕಡೆಗಣಿಸಲು ಯತ್ನಿಸಿದವರು, ಈಗ ಅಪ್ರಸ್ತುತರಾಗಿದ್ದಾರೆ’ ಎಂದು ಹೇಳಿದ್ದಾರೆ. ಪಕ್ಷದ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಲು ಮುಂದಿನ ಐದು ವರ್ಷಗಳಲ್ಲಿ ಗಮನ ಹರಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಶ್ಮೀರ, ಡೋಡಾ–ಕಿಶ್ತ್ವಾರ್ (ಚಿನಾಬ್ ಕಣಿವೆ) ಮತ್ತು ಜಮ್ಮುವಿನ ರಜೌರಿ–ಪೂಂಛ್ (ಪಿರ್ ಪಂಜಲಿ) ವ್ಯಾಪ್ತಿಯ ಹೆಚ್ಚಿನ ಕ್ಷೇತ್ರಗಳಲ್ಲಿ ಎನ್ಸಿ ಗೆಲುವು ಸಾಧಿಸಿದೆ. ಆ ಮೂಲಕ, ತನ್ನ ಸಾಂಪ್ರದಾಯಿಕ ಭದ್ರಕೋಟೆಗಳಲ್ಲಿ ಅದು ಮತ್ತೆ ಪ್ರಾಬಲ್ಯ ಸಾಧಿಸಿದೆ.

ಬಿಜೆಪಿಗೆ 2ನೇ ಸ್ಥಾನ: ಬಿಜೆಪಿಯು ಜಮ್ಮು ಪ್ರಾಂತ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಸಂಘಟನೆಯ ಪ್ರಯತ್ನ ಮತ್ತು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದಿದ್ದ ಗುರಿಯಾಧಾರಿತ ಪ್ರಚಾರವು ಬಿಜೆಪಿಯ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. ಜಮ್ಮು ವ್ಯಾಪ್ತಿಯಲ್ಲಿ ಶೇ 45.4ರಷ್ಟು ಮತಗಳನ್ನು ಪಡೆಯುವುದರ ಮೂಲಕ ಅದು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರವೀಂದರ್ ರೈನಾ ಅವರು ನೌಶೆರಾ ಕ್ಷೇತ್ರದಲ್ಲಿ ಎನ್ಸಿಯ ಸುರೀಂದರ್ ಚೌಧರಿ ಅವರ ಎದುರು ಸೋತಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಜಮ್ಮು ಭಾಗದಲ್ಲಿ ಬಹುತೇಕ ಹೇಳ ಹೆಸರಿಲ್ಲದಂತಾಗಿದೆ. ಒಂದು ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದೆ. ಅದು ಗೆದ್ದಿರುವ ಉಳಿದ ಐದು ಕ್ಷೇತ್ರಗಳು ಕಾಶ್ಮೀರ ಕಣಿವೆಗೆ ಸೇರಿದಂಥವು.

ಉಳಿದಂತೆ ಪೀಪಲ್ಸ್ ಕಾನ್ಫರೆನ್ಸ್ನ ಸಾಜದ್ ಲೋನ್ ಅವರು ಹಂದ್ವಾರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ, ಕುಪ್ವಾರದಲ್ಲಿ ಸೋಲು ಅನುಭವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಕರ್ರಾ ಅವರು ಶ್ರೀನಗರದ ಷಲ್ಟೆಂಗ್ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಪಿಡಿಪಿ ಹೀನಾಯ ಪ್ರದರ್ಶನ

ನ್ಯಾಷನಲ್ ಕಾನ್ಫರೆನ್ಸ್ನ ಸಾಂಪ್ರದಾಯಿಕ ಎದುರಾಳಿ ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿಯು ಈ ಬಾರಿ ದಯನೀಯವಾಗಿ ಸೋಲುಕಂಡಿದೆ. ಕೇವಲ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಷ್ಟೇ ಅದು ಶಕ್ತವಾಗಿದೆ. ಮೆಹಬೂಬ ಅವರ ಮಗಳು ಇಲ್ತಿಜಾ ಮುಫ್ತಿ ಅವರು ಚೊಚ್ಚಲ ಚುನಾವಣೆಯಲ್ಲೇ ಸೋಲಿನ ಕಹಿ ಅನುಭವಿಸಿದ್ದಾರೆ. ಮುಫ್ತಿ ಕುಟುಂಬದ ಭದ್ರಕೋಟೆಯಾಗಿರುವ ಅನಂತನಾಗ್ ಜಿಲ್ಲೆಯ ಶ್ರೀಗುಫ್ವಾರಾ–ಬಿಜಬೆಹರಾ ವಿಧಾನಸಭಾ ಕ್ಷೇತ್ರದಲ್ಲಿ ಎನ್ಸಿ ಅಭ್ಯರ್ಥಿ ಬಶೀರ್ ವೀರಿ ವಿರುದ್ಧ ಅವರು ಸೋಲು ಅನುಭವಿಸಿದ್ದಾರೆ.

ಎನ್ಸಿ–ಕಾಂಗ್ರೆಸ್ ಮೈತ್ರಿಯ ಅಭೂತಪೂರ್ವ ಗೆಲುವಿನ ಬಳಿಕ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ ಮುಫ್ತಿ ಹೊಸ ಸರ್ಕಾರದ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಮೂಗುತೂರಿಸದೆ ಜಮ್ಮು ಮತ್ತು ಕಾಶ್ಮೀರ ಜನರ ಇಚ್ಛೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.

ಎನ್ಸಿಗೆ ಅಭಿನಂದನೆ ಸಲ್ಲಿಸಿರುವ ಅವರು 2019ರ ಆಗಸ್ಟ್ 5ರ ಬಳಿಕ ಜಮ್ಮು ಮತ್ತು ಕಾಶ್ಮೀರ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸ್ಥಿರ ಸರ್ಕಾರ ಇರುವುದು ಮುಖ್ಯ ಎಂದಿದ್ದಾರೆ.

ಒಮರ್ ಮುಂದೆ ಸವಾಲು

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಸರ್ಕಾರ ರಚಿಸಲು ನ್ಯಾಷನಲ್ ಕಾನ್ಫರೆನ್ಸ್ ಸಜ್ಜುಗೊಂಡಿರುವಂತೆಯೇ ಪಕ್ಷದ ನಾಯಕರು ಅಭಿವೃದ್ಧಿ ಆಡಳಿತ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಸಂವಿಧಾನದ ಕಲಂ 370ರ ಅಡಿಯಲ್ಲಿ ವಿಶೇಷ ಸ್ಥಾನಮಾನ ಮತ್ತೆ ನೀಡಬೇಕು ಎಂಬ ವಿಚಾರದ ಬಗ್ಗೆ ಗಮನ ಹರಿಸಲು ನಿರ್ಧರಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ನೀರದಲ್ಲಿ ಈಗ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಲೆಫ್ಟಿನೆಂಟ್ ಜನರಲ್ ಅವರ ಒಪ್ಪಿಗೆ ಅಗತ್ಯ. ಹೀಗಿರುವಾಗ ಮುಖ್ಯಮಂತ್ರಿಯಾಗಲು ಸಿದ್ಧತೆ ನಡೆಸಿರುವ ಒಮರ್ ಅಬ್ದುಲ್ಲಾ ಅವರು ಕೇಂದ್ರಾಡಳಿತ ಪ್ರದೇಶದ ಆಡಳಿತ ನಡೆಸುವಾಗ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.