ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ವಿಕೋಪಕ್ಕೆ ತಿರುಗಿದ ಪ್ರತಿಭಟನೆ, ಲಾಠಿ ಪ್ರಹಾರ

ಹಲ್ಲೆ ಖಂಡಿಸಿ ಯುವ ಕಾಂಗ್ರೆಸ್‌, ಕೆಎಸ್‌ಯುನಿಂದ ಪ್ರತಿಭಟನೆ
Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ತಿರುವನಂತಪುರ: ಸಂಘಟನೆಗಳ ಕಾರ್ಯಕರ್ತರ ಮೇಲೆ ಇತ್ತೀಚೆಗೆ ನಡೆದ ದಾಳಿಗಳನ್ನು ಖಂಡಿಸಿ ಯುವ ಕಾಂಗ್ರೆಸ್‌ ಹಾಗೂ ಕೇರಳ ವಿದ್ಯಾರ್ಥಿ ಸಂಘಟನೆ (ಕೆಎಸ್‌ಯು) ಕಾರ್ಯಕರ್ತರು ರಾಜ್ಯದಾದ್ಯಂತ ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಆರಂಭಿಸಿರುವ ಜನಸಂಪರ್ಕ ಅಭಿಯಾನ ‘ನವ ಕೇರಳ ಸದಸ್’ ರಾಜಧಾನಿ ತಿರುವನಂತಪುರ ತಲುಪಿದಾಗ, ಪ್ರತಿಭಟನೆಯು ಹಿಂಸಾರೂಪ ಪಡೆಯಿತು.

ಕಣ್ಣೂರು ಜಿಲ್ಲೆಯ ಕಲ್ಲಿಯಶ್ಶೇರಿಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಕಪ್ವು ಬಾವುಟ ತೋರಿಸಿದ್ದ ಕಾಂಗ್ರೆಸ್‌ ಹಾಗೂ ವಿದ್ಯಾರ್ಥಿ ಘಟಕ ಕೆಎಸ್‌ಯು ಕಾರ್ಯಕರ್ಯರ ಮೇಲೆ ದಾಳಿ ನಡೆಸಲಾಗಿತ್ತು.

ಈ ದಾಳಿ ಖಂಡಿಸಿ, ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಾಹುಲ್‌ ಮಂಕೂಟ್ಟತ್ತಿಲ್‌ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ವಿಧಾನಸಭೆ ಬಳಿ ಪ್ರತಿಭಟನೆ ಕೈಗೊಂಡಿದ್ದರು.

ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌, ‘ಕಣ್ಣೂರು ಜಿಲ್ಲೆಯಲ್ಲಿ ಪಕ್ಷದ ಯುವ ಮತ್ತು ವಿದ್ಯಾರ್ಥಿ ಘಟಕದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಯುವ ಕಾಂಗ್ರೆಸ್‌ ಮತ್ತು ಕೆಎಸ್‌ಯು ಸದಸ್ಯರು ಪ್ರತಿ ದಾಳಿ ನಡೆಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಮುಖ್ಯಮಂತ್ರಿಗಳ ಗನ್‌ಮ್ಯಾನ್ ಹಾಗೂ ಭದ್ರತಾ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು’ ಎಂದು ಸತೀಶನ್‌, ಪ್ರತಿಯೊಂದಕ್ಕೂ ಮಿತಿ ಇರುತ್ತದೆ. ಸಂಯಮದಿಂದ ಇರುವಂತೆ ಯುವ ಕಾಂಗ್ರೆಸ್‌ ಮತ್ತು ವಿದ್ಯಾರ್ಥಿ ಘಟಕಕ್ಕೆ ಹೇಳಿದ್ದೇವೆ. ಈಗ ನಮ್ಮ ಈ ನಿಲುವನ್ನು ಬದಲಾಯಿಸಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದರು.

‘ಕಣ್ಣೂರು ಜಿಲ್ಲೆಯ ಕಲ್ಲಿಯಶ್ಶೇರಿಯಿಂದ ಕೊಲ್ಲಂ ವರೆಗೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಹಲ್ಲೆಗಳನ್ನು ಯಾರು ನಡೆಸಿದ್ದಾರೆ ಎಂಬುದು ಗೊತ್ತು. ಕಲ್ಲಿಯಶ್ಶೇರಿಯಿಂದಲೇ ನಾವು ಎದಿರೇಟು ಆರಂಭಿಸುತ್ತೇವೆ’ ಎಂದು ಸತೀಶನ್‌ ಗುಡುಗಿದರು.

ಸತೀಶನ್‌ ಅವರ ಮಾತು ಮುಗಿಯುತ್ತಿದ್ದಂತೆಯೇ, ಹಿಂಸಾಚಾರ ಭುಗಿಲೆದ್ದಿತು.

ಬ್ಯಾರಿಕೇಡ್‌ಗಳನ್ನು ದಾಟಿ, ವಿಧಾನಸಭೆ ಕಾರ್ಯಾಲಯದತ್ತ ನುಗ್ಗಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ಮುಂದಾದರು. ತಮ್ಮನ್ನು ತಡೆಯಲು ಬಂದ ಪೊಲೀಸರತ್ತ ಬಡಿಗೆ ಹಾಗೂ ಕಲ್ಲುಗಳನ್ನು ತೂರಿದರು. ಪ್ರತಿಭಟನಕಾರರನ್ನು ಚದುರಿಸಲು ತಂದಿದ್ದ ಜಲಫಿರಂಗಿ ವಾಹನದತ್ತಲೂ ಕಲ್ಲುಗಳನ್ನು ತೂರಿದರು.

ಆಗ, ಪೊಲೀಸರು ಜಲಫಿರಂಗಿ ಬಳಸಿ ಪ್ರತಿಭಟನಕಾರರನ್ನು ಚದುರಿಸಲು ಮುಂದಾದರು. ಪ್ರತಿಭಟನಕಾರರು ಇದಕ್ಕೆ ಜಗ್ಗದೇ, ಪೊಲೀಸರು ಹಾಗೂ ಪೊಲೀಸ್‌ ವಾಹನಗಳತ್ತ ಕಲ್ಲು, ಬಡಿಗೆಗಳನ್ನು ತೂರುವುದನ್ನು ಮುಂದುವರಿಸಿದರು.

ನಂತರ, ಪೊಲೀಸರು ಲಾಠಿ ಪ್ರಹಾರ ನಡೆಸುವ ಮೂಲಕ ಪ್ರತಿಭಟನಕಾರರನ್ನು ಚದುರಿಸಿದರು. ಈ ವೇಳೆ, ಯುವ ಕಾಂಗ್ರೆಸ್‌ ಮುಖಂಡ ಮಂಕೂಟ್ಟತ್ತಿಲ್‌ ಅವರಿಗೆ ಗಾಯಗಳಾದವು ಎಂದು ಹೇಳಲಾಗಿದೆ.

ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದ ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪೊಲೀಸರು ಈ ರೀತಿಯ ಕ್ರಮ ಕೈಗೊಂಡಿದ್ದನ್ನು ನಾನು ನೋಡಿಲ್ಲ.
-ರಾಹುಲ್‌ ಮಂಕೂಟ್ಟತ್ತಿಲ್ ಯುವ ಕಾಂಗ್ರೆಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT