ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ಸೇನೆಗೆ 15 ಸಾವಿರ ಭಾರತೀಯರ ನೇಮಕ: ಮೋದಿ ಸರ್ಕಾರದ ವಿರುದ್ಧ ಖರ್ಗೆ ಕಿಡಿ

Published : 4 ಅಕ್ಟೋಬರ್ 2024, 11:09 IST
Last Updated : 4 ಅಕ್ಟೋಬರ್ 2024, 11:09 IST
ಫಾಲೋ ಮಾಡಿ
Comments

ನವದೆಹಲಿ: ಮೋದಿ ಸರ್ಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಹಕಾರ ಒಪ್ಪಂದವು ಪಶ್ಚಿಮ ಏಷ್ಯಾ ಯುದ್ಧಕ್ಕಾಗಿ ಇಸ್ರೇಲ್‌ ಸೇನೆಗೆ ಸುಮಾರು 15,000 ಭಾರತೀಯರನ್ನು ನೇಮಕ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.

ಈ ಹಿಂದೆ ದೇಶದ ಹಲವು ಯುವಕರು ವಂಚಕ ಏಜೆಂಟರುಗಳ ಮಾತನ್ನು ನಂಬಿ ರಷ್ಯಾ ಪರ ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡು ಪ್ರಾಣ ಕಳೆದುಕೊಂಡರು ಎಂದು ಅವರು ಹೇಳಿದ್ದಾರೆ.

ಇದು ಮೋದಿ ಸರ್ಕಾರದ ಯುವಕರ ವಿರೋಧಿ ನೀತಿಗಳಿಂದ ಸೃಷ್ಟಿಯಾಗಿರುವ ದೇಶದ ನಿರುದ್ಯೋಗವನ್ನು ಬಿಂಬಿಸುತ್ತದೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕೌಶಲ್ಯವಿಲ್ಲದ, ಅರೆ ಕುಶಲ ಮತ್ತು ವಿದ್ಯಾವಂತ ಯುವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುದ್ಧಪೀಡಿತ ದೇಶಗಳಲ್ಲಿ ಹೆಚ್ಚಿನ ಸಂಬಳಕ್ಕಾಗಿ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ ಎನ್ನುತ್ತಿವೆ ವರದಿಗಳು. ಇದರರ್ಥ ಉದ್ಯೋಗ ಸೃಷ್ಟಿ ಕುರಿತಾದ ನಿಮ್ಮ ಹೇಳಿಕೆಗಳು ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸೃಷ್ಟಿಸಿದ ಸುಳ್ಳಲ್ಲದೆ ಬೇರೇನು ಅಲ್ಲ ಎಂಬುದಾಗಿದೆ’ಎಂದು ಕಿಡಿಕಾರಿದ್ದಾರೆ.

ಯುದ್ಧಪೀಡಿತ ದೇಶಗಳಲ್ಲಿ ಬಲವಂತವಾಗಿ ಉದ್ಯೋಗಕ್ಕೆ ಸೇರುವಂತೆ ಹರಿಯಾಣದ ಯುವಕರಿಗೆ ಒತ್ತಡ ಹಾಕಲಾಗಿದೆ. ನಾಳಿನ ಚುನಾವಣೆಯಲ್ಲಿ ಹರಿಯಾಣದ ಜನ ನಿಮಗೆ ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

‘ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಈ ಸಂದರ್ಭದಲ್ಲಿ, ರಾಷ್ಟ್ರೀಯ ಕೌಶಲಾಭಿವೃದ್ಧಿ ಸಹಕಾರದಡಿ ಇಸ್ರೇಲ್ ಸೇನೆಗೆ 15,000 ಭಾರತೀಯರ ನೇಮಕಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ’ಎಂದು ಅವರು ಟೀಕಿಸಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಗೂ ಒಂದು ದಿನ ಮುನ್ನ ಮಲ್ಲಿಕಾರ್ಜುನ ಖರ್ಗೆ ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT