ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾಯ ಮಟ್ಟ ಮೀರಿದ ಪಂಚಗಂಗಾ: 2 ಸಾವಿರ ಜನರ ಸ್ಥಳಾಂತರ

Published 26 ಜುಲೈ 2024, 14:37 IST
Last Updated 26 ಜುಲೈ 2024, 14:37 IST
ಅಕ್ಷರ ಗಾತ್ರ

ಕೊಲ್ಹಾಪುರ/ಸಾಂಗ್ಲಿ: ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಪಂಚಗಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ.

ಸಾಂಗ್ಲಿಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟವೂ ಹೆಚ್ಚಾಗಿದೆ. ಸುರಕ್ಷತೆಯ ಕ್ರಮವಾಗಿ ಸಾಂಗ್ಲಿ ಜೈಲಿನಿಂದ 80 ಕೈದಿಗಳನ್ನು ಕೊಲ್ಹಾಪುರಕ್ಕೆ ಜೈಲು ಆಡಳಿತವು ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಚಗಂಗಾ ನದಿಯ ನೀರಿನ ಅಪಾಯದ ಮಟ್ಟ 43 ಅಡಿಗಳನ್ನು ಮೀರಿದ್ದು, ರಾಜಾರಾಮ್ ವೈರ್‌ ಸ್ಥಳದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ನದಿಯ ನೀರಿನ ಹರಿವು 45.2 ಅಡಿಗಳಿಗೆ ಏರಿಕೆಯಾಗಿದೆ ಎಂದು ಕೊಲ್ಹಾಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಜಿಲ್ಲಾಡಳಿತವು ನಗರದ ಸುತರವಾಡ ಮತ್ತು ಕುಂಬಾರವಾಡ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ. ಕರವೀರ ತಾಲ್ಲೂಕಿನ ಚಿಖಳಿ ಮತ್ತು ಅಂಬೇವಾಡಿ ಮತ್ತು ಹತ್ಕಲಂಗಣೆ, ಶಿರೋಳ ಮತ್ತು ಇಚಲಕರಂಜಿ ತಾಲ್ಲೂಕುಗಳ ಕೆಲವು ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೊಲ್ಹಾಪುರ ಜಿಲ್ಲಾಧಿಕಾರಿ ಅಮೋಲ್ ಯೆಡ್ಗೆ ತಿಳಿಸಿದರು. 

ಜಲಾವೃತವಾಗಿರುವುದರಿಂದ ಜಿಲ್ಲೆಯ ಕನಿಷ್ಠ 11 ರಾಜ್ಯ ಹೆದ್ದಾರಿಗಳು ಮತ್ತು 37 ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 96 ಬ್ಯಾರೇಜ್‌ಗಳು ನೀರಿನಲ್ಲಿ ಮುಳುಗಿವೆ ಎಂದು ಅವರು ಮಾಹಿತಿ ನೀಡಿದರು.

ಅಣೆಕಟ್ಟೆಗಳಿಂದ ನೀರು ಹೊರಕ್ಕೆ: ರಾಧಾನಗರಿ ಅಣೆಕಟ್ಟಿನ ಆರು ಗೇಟ್‌ಗಳನ್ನು ತೆರೆದು 10,068 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಕೊಯ್ನಾ ಅಣೆಕಟ್ಟು ಶೇ 77ರಷ್ಟು ಭರ್ತಿಯಾಗಿದ್ದು, 30 ಸಾವಿರ ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ. ವಾರ್ಣಾ ಅಣೆಕಟ್ಟು ಶೇ 89ರಷ್ಟು ಭರ್ತಿಯಾಗಿದ್ದು, 15,000 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಇರ್ವಿನ್ ಸೇತುವೆಯಲ್ಲಿ ಕೃಷ್ಣಾ ನದಿಯ ನೀರಿನ ಮಟ್ಟ 37.5 ಅಡಿಗಳಾಗಿದ್ದು, ಕೊಯ್ನಾದಿಂದ ನೀರು ಬಿಡುತ್ತಿರುವುದರಿಂದ 40 ಅಡಿಗಿಂತ ಹೆಚ್ಚಿನ ಮಟ್ಟಕ್ಕೆ ತಲು‍ಪುವ ಸಂಭವವಿದೆ. ಜನರಿಗೆ ಜಾಗರೂಕವಾಗಿರಲು ಎಚ್ಚರಿಕೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT