ನವದೆಹಲಿ: ‘ನೀಟ್– ಯುಜಿ’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹಾಗೂ ಹಣಕ್ಕಾಗಿ ಪ್ರಶ್ನೆಗಳನ್ನು ಪರಿಹರಿಸಿದ್ದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಸಿಬಿಐ ಶನಿವಾರ ಬಂಧಿಸಿದೆ. ಎನ್‌ಐಟಿ ಜಮ್‌ಷೆಡ್‌ಪುರದ ಬಿ.ಟೆಕ್ ಪದವೀಧರ ಶಶಿಕಾಂತ್ ಪಾಸ್ವಾನ್ ಅಲಿಯಾಸ್ ಶಶಿ ಅಲಿಯಾಸ್ ಪಸು ಪ್ರಮುಖ ಆರೋಪಿಗಳಲ್ಲಿ ಒಬ್ಬ ಎನ್ನಲಾಗಿದೆ. ರಾಜಸ್ಥಾನದ ಭರತ್‌ಪುರದ ವೈದ್ಯಕೀಯ ಕಾಲೇಜಿನ 2ನೇ ವರ್ಷದ ವಿದ್ಯಾರ್ಥಿ ಕುಮಾರ ಮಂಗಳಂ ಬಿಷ್ಣೋಯ್ ಮತ್ತು 1ನೇ ವರ್ಷದ ದೀಪೇಂದರ್ ಶರ್ಮಾ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂಲಕ ಪರೀಕ್ಷಾ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿರುವವರ ಸಂಖ್ಯೆ 21ಕ್ಕೆ ಏರಿದೆ.